ʻ7 ಕೆ.ಜಿ ತೂಕ ಕಳೆದುಕೊಂಡೆʼ: ಗಾಯದಿಂದ ಕಮ್‌ಬ್ಯಾಕ್ ಮಾಡಿದ ಪಯಣವನ್ನು ನೆನೆದ ಶ್ರೇಯಸ್ ಅಯ್ಯರ್!
Shreyas Iyer on his Comeback: 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಆರಂಭಕ್ಕೂ ಮುನ್ನ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರು ತಮ್ಮ ಗಾಯದಿಂದ ಕಮ್‌ಬ್ಯಾಕ್ ಮಾಡಿದ ಪಯಣವನ್ನು ಸ್ಮರಿಸಿಕೊಂಡಿದ್ದಾರೆ. ಅಲ್ಲದೆ ಗಾಯದ ಬಳಿಕ 7 ಕೆ.ಜಿ ತೂಕವನ್ನು ಕಳೆದುಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ.
ಗಾಯದಿಂದ ಕಮ್‌ಬ್ಯಾಕ್ ಮಾಡಿದ ಪಯಣವನ್ನು ರಿವೀಲ್ ಮಾಡಿದ ಶ್ರೇಯಸ್ ಅಯ್ಯರ್. -
ನವದೆಹಲಿ: ಗಾಯದಿಂದ ಗುಣಮುಖರಾಗಿ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಗೆ ಮರಳಿದ ಕಠಿಣ ಪಯಣದ ಕುರಿತು ಪಂಜಾಬ್ ಕಿಂಗ್ಸ್ (Punjab Kings) ತಂಡದ ನಾಯಕ ಶ್ರೇಯಸ್ ಅಯ್ಯರ್ (Shreyas Iyer) ಪ್ರತಿಕ್ರಿಯಿಸಿದ್ದಾರೆ. 19ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಮಾರ್ಚ್ 28 ರಂದು ಆರಂಭವಾಗಲಿದೆ. ಕಳೆದ ಸೀಸನ್‌ನಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಪಂಜಾಬ್ ಕಿಂಗ್ಸ್ ರನ್ನರ್ ಅಪ್ ಆಗಿತ್ತು. ಈ ಬಾರಿ ಅವರು ತಮ್ಮ ನಾಯಕತ್ವದಲ್ಲಿ ಪಂಜಾಬ್ ಕಿಂಗ್ಸ್‌ಗೆ ಚೊಚ್ಚಲ ಕಪ್ ಗೆದ್ದುಕೊಡಲು ಎದುರು ನೋಡುತ್ತಿದ್ದಾರೆ.
ಹತ್ತೊಂಬತ್ತನೇ ಐಪಿಎಲ್ ಆವೃತ್ತಿಯ ನಿಮಿತ್ತ ಚಂಡೀಗಢದಲ್ಲಿ ನಡೆದಿದ್ದ ಪಂಜಾಬ್ ಕಿಂಗ್ಸ್ ತಂಡದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ರೇಯಸ್ ಅಯ್ಯರ್, ಗಾಯದಿಂದ ಸಂಪೂರ್ಣ ಫಿಟ್ನೆಸ್‌ಗೆ ಮರಳುವುದು ತನ್ನ ವೃತ್ತಿಜೀವನದ ಅತ್ಯಂತ ಕಠಿಣ ಹಂತಗಳಲ್ಲಿ ಒಂದಾಗಿದೆ ಎಂದು ಹೇಳಿದರು.
“ಗಾಯದ ನಂತರ ಮರಳುವುದು ಯಾವಾಗಲೂ ಸವಾಲಿನ ಕೆಲಸ. ನಾನು ಸುಮಾರು ಏಳು ಕೆ.ಜಿ ತೂಕ ಕಳೆದುಕೊಂಡಿದ್ದೆ, ಅದನ್ನು ಮತ್ತೆ ಹೆಚ್ಚಿಸಲು ಬಹಳಷ್ಟು ಶ್ರಮಪಟ್ಟಿದ್ದೇನೆ. ಆದರೆ, ನನಗೆ ಸವಾಲುಗಳು ಇಷ್ಟ. ಜೀವನದ ಆ ಹಂತವನ್ನು ಜಯಿಸಿರುವುದಕ್ಕೆ ಸಂತೋಷವಾಗಿದೆ, ಈಗ ನಾನು ಹೆಮ್ಮೆಯಿಂದ ತಂಡವನ್ನು ಪ್ರತಿನಿಧಿಸುತ್ತಿದ್ದೇನೆ,” ಎಂದು ಶ್ರೇಯಸ್ ಅಯ್ಯರ್ ತಿಳಿಸಿದ್ದಾರೆ.
IPL 2026: ಆರ್‌ಸಿಬಿಗೆ ಪಂದ್ಯ ಗೆದ್ದುಕೊಡಬಲ್ಲ ಐವರು ಸ್ಟಾರ್ ಆಟಗಾರರು!
ಶ್ರೇಯಸ್ ಅಯ್ಯರ್ ಹೇಗೆ ಗಾಯಕ್ಕೆ ತುತ್ತಾದರು?
2025ರ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಶ್ರೇಯಸ್ ಅಯ್ಯರ್ ಫೀಲ್ಡಿಂಗ್ ವೇಳೆ ಪಕ್ಕೆಲುಬಿನ ಗಾಯಕ್ಕೆ ತುತ್ತಾಗಿದ್ದರು ಹಾಗೂ ಇದರಿಂದ ಅವರು ಸುಮಾರು ಎರಡು ತಿಂಗಳು ಕ್ರಿಕೆಟ್‌ನಿಂದ ದೂರ ಉಳಿಯಬೇಕಾಯಿತು. ಈ ಗಾಯದ ಪರಿಣಾಮವಾಗಿ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿ ಹಾಗೂ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯನ್ನು ಕಳೆದುಕೊಂಡಿದ್ದರು.
ಅಯ್ಯರ್ ಅವರು ಬೆಂಗಳೂರಿನ ಬಿಸಿಸಿಐ ಸೆಂಟರ್ ಆಪ್ ಎಕ್ಸಲೆನ್ಸ್‌ನಲ್ಲಿ ತಮ್ಮ ಪುನಶ್ಚೇತನ ಕಾರ್ಯವನ್ನು ಪೂರ್ಣಗೊಳಿಸಿದ್ದರು. 2026ರ ಆರಂಭದಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ ಅವರು, ವಿಜಯ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಮುಂಬೈ ಪರ 53 ಬಾಲ್‌ಗಳಲ್ಲಿ 82 ರನ್ ಗಳಿಸಿ ಭರ್ಜರಿಯಾಗಿ ಕಂಬ್ಯಾಕ್ ಮಾಡಿದ್ದರು. ಆರಂಭದಲ್ಲಿ ಅವರ ಪ್ರದರ್ಶನದಲ್ಲಿ ಏಳು-ಬೀಳು ಕಂಡರೂ, ನಿಧಾನವಾಗಿ ಅವರು ತಮ್ಮ ಫಾರ್ಮ್ ಮತ್ತು ಫಿಟ್ನೆಸ್ ಮರುಪಡೆಯಲು ಯಶಸ್ವಿಯಾದರು.
IPL 2026: ಕೈಕೊಟ್ಟ ಸ್ಟಾರ್ ಪ್ಲೇಯರ್ಸ್, ಲಭ್ಯವಿಲ್ಲದ ಆಟಗಾರರ ಸಂಪೂರ್ಣ ಪಟ್ಟಿ ಇಲ್ಲಿದೆ
2026ರ ಐಪಿಎಲ್ ಕಡೆಗೆ ಗಮನ
ಈಗ ಶ್ರೇಯಸ್ ಅಯ್ಯರ್ ಅವರ ಸಂಪೂರ್ಣ ಗಮನ 2026ರ ಐಪಿಎಲ್ ಟೂರ್ನಿಯ ಮೇಲೆ ನೆಟ್ಟಿದ್ದು, ಅವರು ಪಂಜಾಬ್ ಕಿಂಗ್ಸ್ ತಂಡದ ನಾಯಕತ್ವ ವಹಿಸಲಿದ್ದಾರೆ. ಕಳೆದ ವರ್ಷ ಪಂಜಾಬ್ ಕಿಂಗ್ಸ್ ಫೈನಲ್‌ಗೆ ತಲುಪಿದ್ದರೂ, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋಲು ಕಂಡಿತ್ತು. ಈ ಬಾರಿಯೂ ಪಂಜಾಬ್ ಕಿಂಗ್ಸ್ ಚೊಚ್ಚಲ ಐಪಿಎಲ್ ಗೆಲ್ಲುವ ಗುರಿಯೊಂದಿಗೆ ಕಣಕ್ಕೆ ಇಳಿಯಲಿದೆ. ತಮ್ಮ ನಾಯಕತ್ವದಲ್ಲಿ 2024ರ ಐಪಿಎಲ್ ಟೂರ್ನಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಚಾಂಪಿಯನ್ ಮಾಡಿದ್ದ ಶ್ರೇಯಸ್ ಅಯ್ಯರ್, ಇದೀಗ ಪಂಜಾಬ್ ಕಿಂಗ್ಸ್‌ಗೆ ಮೊದಲ ಐಪಿಎಲ್ ಟ್ರೋಫಿ ತಂದುಕೊಡುವ ಗುರಿ ಹೊಂದಿದ್ದಾರೆ.