ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IPL 2027: ಮಿನಿ ಹರಾಜಿಗೂ ಮುನ್ನ ಸಿಎಸ್‌ಕೆ ತಂಡದ ದೊಡ್ಡ ವೀಕ್ನೆಸ್‌ ತಿಳಿಸಿದ ಅಭಿನವ್‌ ಮುಕುಂದ್‌!

2027ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಮಿನಿ ಹರಾಜಿಗೂ ಮುನ್ನ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಆಟಗಾರರ ಆಯ್ಕೆ ಕುರಿತು ಮಾಜಿ ಕ್ರಿಕೆಟಿಗ ಅಭಿನವ್ ಮುಕುಂದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಶಾಂತ್ ವೀರ್ ಮೇಲಿನ ಹೂಡಿಕೆ ಫಲ ನೀಡಿಲ್ಲ. ತಂಡದಲ್ಲಿ ಭಾರತೀಯ ಬ್ಯಾಟರ್‌ಗಳು ಹೆಚ್ಚಾಗಿದ್ದು, ಬೌಲಿಂಗ್ ವಿಭಾಗವನ್ನು ಬಲಪಡಿಸುವುದು ಪ್ರಮುಖ ಸವಾಲಾಗಿದೆ ಎಂದಿದ್ದಾರೆ.

ಚೆನ್ನೈ ಸೂಪರ್‌ ಕಿಂಗ್ಸ್‌ನ ದೊಡ್ಡ ವೀಕ್ನೆಸ್‌ ತಿಳಿಸಿದ ಅಭಿನವ್‌ ಮುಕುಂದ್‌!

ಸಿಎಸ್‌ಕೆ ತಂಡದ ವೀಕ್‌ನೆಸ್‌ ತಿಳಿಸಿದ ಅಭಿನವ್‌ ಮುಕುಂದ್‌. -

Profile
Ramesh Kote Nov 25, 2026 5:50 PM

ನವದೆಹಲಿ: ಮುಂಬರುವ 2027ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2027) ಟೂರ್ನಿಯ ಮಿನಿ ಹರಾಜಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ 19 ಆಟಗಾರರನ್ನು ಉಳಿಸಿಕೊಂಡು 11 ಆಟಗಾರರನ್ನು ಬಿಡುಗಡೆ ಮಾಡಿದೆ. ಡಿಸೆಂಬರ್ 16ರಂದು ಗೋವಾದಲ್ಲಿ ನಡೆಯಲಿರುವ ಹರಾಜಿನಲ್ಲಿ ಐದು ಬಾರಿ ಚಾಂಪಿಯನ್ ಸಿಎಸ್‌ಕೆ 28.05 ಕೋಟಿ ರು. ಮೊತ್ತದೊಂದಿಗೆ ಕಣಕ್ಕಿಳಿಯಲಿದೆ. ತಂಡದಲ್ಲಿ ಆರು ಆಟಗಾರರ ಸ್ಥಾನಗಳು ಖಾಲಿಯಿದ್ದು, ಇದರಲ್ಲಿ ಇಬ್ಬರು ವಿದೇಶಿ ಆಟಗಾರರಿಗೆ ಅವಕಾಶವಿದೆ. ಆದರೆ ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಗಮನಿಸಿದರೆ ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಸಾಕಷ್ಟು ಆಯ್ಕೆಗಳಿದ್ದರೂ, ಬೌಲಿಂಗ್ ವಿಭಾಗದಲ್ಲಿ ಕೆಲವು ಸಮಸ್ಯೆಗಳು ಎದುರಾಗುವ ಸಾಧ್ಯತೆಯಿದೆ.

ಭಾರತದ ಮಾಜಿ ಬ್ಯಾಟರ್ ಅಭಿನವ್ ಮುಕುಂದ್, ಯುವ ಆಟಗಾರರ ಮೇಲೆ ಸಿಎಸ್‌ಕೆ ಹೂಡಿಕೆ ಮಾಡಿರುವ ನಿರ್ಧಾರ ಮಿಶ್ರ ಫಲಿತಾಂಶ ನೀಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕಾರ್ತಿಕ್ ಶರ್ಮಾ ಫ್ರಾಂಚೈಸಿ ತಮ್ಮ ಮೇಲೆ ಇಟ್ಟಿದ್ದ ನಂಬಿಕೆಯನ್ನು ಉಳಿಸಿಕೊಂಡಿದ್ದರೆ, ಪ್ರಶಾಂತ್ ವೀರ್ 2026ರ ಐಪಿಎಲ್ ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. ಅಲ್ಲದೆ, ಸಿಎಸ್‌ಕೆ ತಂಡದಲ್ಲಿ ಭಾರತೀಯ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಹೆಚ್ಚಾಗಿರುವುದು ಹರಾಜಿನಲ್ಲಿನ ತಂಡದ ಯೋಜನೆ ಮೇಲೆ ಪರಿಣಾಮ ಬೀರಬಹುದು ಎಂದು ಅವರು ಹೇಳಿದ್ದಾರೆ.

IPL 2027 ಮಿನಿ ಹರಾಜಿಗೆ 1,220 ಆಟಗಾರರ ನೋಂದಣಿ: ಸ್ಟೋಕ್ಸ್, ವಾರ್ನರ್ ಸೇರಿ ಹಲವು ಸ್ಟಾರ್ಸ್‌ ಕಣಕ್ಕೆ!

"ಯುವ ಆಟಗಾರರ ಮೇಲೆ ಸಿಎಸ್‌ಕೆ ಇಟ್ಟಿದ್ದ ನಿರೀಕ್ಷೆ ನಿರೀಕ್ಷಿತ ಫಲಿತಾಂಶ ನೀಡಿಲ್ಲ. ಪ್ರಶಾಂತ್ ವೀರ್ ಅವರನ್ನು 14.2 ಕೋಟಿ ರು.ಗೆ ಖರೀದಿಸಲಾಗಿತ್ತು. ಆದರೆ ಅವರು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಆದರೂ ಅವರನ್ನು ಹೆಚ್ಚು ಬೌಲ್‌ ಮಾಡಲು ಬಳಸಿಕೊಳ್ಳದ ಕಾರಣ ಅವರನ್ನೇ ಸಂಪೂರ್ಣವಾಗಿ ದೂಷಿಸಲು ಸಾಧ್ಯವಿಲ್ಲ. ಇದೀಗ ಅವರನ್ನು ತಂಡದಿಂದ ಬಿಡುಗಡೆ ಮಾಡಲಾಗಿದ್ದು, ಆ ಮೊತ್ತ ಸಿಎಸ್‌ಕೆ ಖಾತೆಗೆ ಮರಳಿದೆ."

"ಇನ್ನೊಂದೆಡೆ, 14 ಕೋಟಿ ರು. ನೀಡಿ ಖರೀದಿಸಿದ್ದ ಮತ್ತೊಬ್ಬ ಆಟಗಾರ ಕಾರ್ತಿಕ್ ಶರ್ಮಾ ಕೆಲವು ಪಂದ್ಯಗಳಲ್ಲಿ ಗೆಲುವು ತಂದುಕೊಡುವಂತಹ ಇನಿಂಗ್ಸ್‌ಗಳನ್ನು ಆಡಿದ್ದಾರೆ. ಹೀಗಾಗಿ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ಆದರೆ ಸಿಎಸ್‌ಕೆ ತಂಡದಲ್ಲಿ ಭಾರತೀಯ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಈಗಾಗಲೇ ಹೆಚ್ಚಾಗಿದ್ದಾರೆ," ಎಂದು ಜಿಯೋಸ್ಟಾರ್‌ನ 'ಟಾಟಾ 2027 ಐಪಿಎಲ್ ರಿಟೆನ್ಷನ್ ಸ್ಪೆಷಲ್' ಕಾರ್ಯಕ್ರಮದಲ್ಲಿ ಅಭಿನವ್ ಮುಕುಂದ್ ಹೇಳಿದ್ದಾರೆ.

14 ಕೋಟಿ ರು ಮೊತ್ತಕ್ಕೆ ತಂಡದಲ್ಲಿ ಉಳಿಸಿಕೊಳ್ಳಲಾಗಿರುವ ಕಾರ್ತಿಕ್ ಶರ್ಮಾ, 2026ರ ಐಪಿಎಲ್‌ ಟೂರ್ನಿಯಲ್ಲಿ 11 ಪಂದ್ಯಗಳನ್ನಾಡಿ 295 ರನ್ ಗಳಿಸಿದ್ದರು. ತಮ್ಮ ನಿರ್ಣಾಯಕ ಇನಿಂಗ್ಸ್‌ಗಳ ಮೂಲಕ ಸಿಎಸ್‌ಕೆ ತನ್ನ ಮೇಲಿಟ್ಟಿದ್ದ ನಂಬಿಕೆಯನ್ನು ಸಮರ್ಥಿಸಿಕೊಂಡಿದ್ದರು. ಮತ್ತೊಂದೆಡೆ, ಪ್ರಶಾಂತ್ ವೀರ್‌ಗೆ ಹೆಚ್ಚಿನ ಅವಕಾಶಗಳು ಸಿಗದ ಕಾರಣ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಸಾಧ್ಯವಾಗಿರಲಿಲ್ಲ. ಅವರನ್ನು ಬಿಡುಗಡೆ ಮಾಡುವ ಮೂಲಕ ಸಿಎಸ್‌ಕೆ ಹರಾಜಿಗಾಗಿ 14.2 ಕೋಟಿ ಮೊತ್ತವನ್ನು ಉಳಿಸಿಕೊಂಡಿದೆ. ಈ ಹಣವನ್ನು ತಂಡದ ಪ್ರಮುಖ ಸಮಸ್ಯೆಯಾಗಿರುವ ಬೌಲಿಂಗ್ ವಿಭಾಗವನ್ನು ಬಲಪಡಿಸಲು ಬಳಸಿಕೊಳ್ಳಬಹುದು.

IPL 2027: ಲಖನೌ ಸೂಪರ್‌ ಜಯಂಟ್ಸ್‌ನ ಮುಂದಿನ ನಾಯಕನ ಬಗ್ಗೆ ಸುಳಿವು ನೀಡಿದ ದಿಗ್ವೇಶ್‌ ರಾಠಿ!

ವಿದೇಶಿ ಬ್ಯಾಟರ್‌ಗಳ ಆಯ್ಕೆಯೂ ಸಿಎಸ್‌ಕೆ ತಂಡದ ಪ್ಲೇಯಿಂಗ್ ಇಲೆವೆನ್ ರಚನೆಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ. ಲಿಯಾಮ್ ಲಿವಿಂಗ್‌ಸ್ಟೋನ್ ತಂಡಕ್ಕೆ ಸೇರ್ಪಡೆಯಾಗಿರುವುದು ಹಾಗೂ ಡೆವಾಲ್ಡ್ ಬ್ರೆವಿಸ್ ಮತ್ತು ನೂರ್ ಅಹ್ಮದ್ ಅವರನ್ನು ಉಳಿಸಿಕೊಂಡಿರುವುದು ಮೂವರೂ ಖಚಿತವಾಗಿ ಆಡುವ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯನ್ನು ಹೆಚ್ಚಿಸಿದೆ. ಕೊನೆಯ ವಿದೇಶಿ ಆಟಗಾರನ ಸ್ಥಾನಕ್ಕೆ ಜೇಮಿ ಓವರ್ಟನ್ ಆಯ್ಕೆಯಾಗುವ ನಿರೀಕ್ಷೆಯಿದೆ. ಇದರಿಂದಾಗಿ ನೂರ್ ಅಹ್ಮದ್ ಜೊತೆ ಅಕೀಲ್ ಹುಸೇನ್ ಅವರನ್ನು ಆಡಿಸುವುದು ಕಷ್ಟವಾಗಬಹುದು.

"ಋತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಆಯುಷ್ ಮ್ಹಾತ್ರೆ, ಡೆವಾಲ್ಡ್ ಬ್ರೆವಿಸ್, ಕಾರ್ತಿಕ್ ಶರ್ಮಾ, ಊರ್ವಿಲ್ ಪಟೇಲ್ ಮತ್ತು ಸರ್ಫರಾಜ್ ಖಾನ್ ಈ ಎಲ್ಲ ಆಟಗಾರರನ್ನು ಒಂದೇ ಪ್ಲೇಯಿಂಗ್ ಇಲೆವೆನ್‌ನಲ್ಲಿ ಆಡಿಸಲು ಸಾಧ್ಯವಿಲ್ಲ. ಸಿಎಸ್‌ಕೆ ತಂಡದ ಪ್ರಮುಖ ಸಮಸ್ಯೆ ಬೌಲಿಂಗ್ ವಿಭಾಗದಲ್ಲಿದೆ. ಲಿಯಾಮ್ ಲಿವಿಂಗ್‌ಸ್ಟೋನ್ ತಂಡಕ್ಕೆ ಬಂದಿರುವುದರಿಂದ ಅವರ ಜೊತೆಗೆ ಬ್ರೆವಿಸ್ ಮತ್ತು ನೂರ್ ಅಹ್ಮದ್ ಆಡುವುದು ಬಹುತೇಕ ಖಚಿತ. ಉಳಿದ ಒಂದು ವಿದೇಶಿ ಆಟಗಾರನ ಸ್ಥಾನಕ್ಕೆ ಜೇಮಿ ಓವರ್ಟನ್ ಬರುವ ಸಾಧ್ಯತೆಯಿದೆ. ಹೀಗಾಗಿ ಅಕೀಲ್ ಹೊಸೇನ್ ಮತ್ತು ನೂರ್ ಅಹ್ಮದ್ ಇಬ್ಬರನ್ನೂ ಒಟ್ಟಿಗೆ ಆಡಿಸುವುದು ಕಷ್ಟವಾಗಲಿದೆ," ಎಂದು ಅಭಿನವ್ ಮುಕುಂದ್ ಹೇಳಿದ್ದಾರೆ.