ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Women's World Cup: ಜೆಮಿಮಾ ರೊಡ್ರಿಗಸ್‌ ಭರ್ಜರಿ ಶತಕ, ಆಸ್ಟ್ರೇಲಿಯಾಗೆ ಆಘಾತ ನೀಡಿ ಫೈನಲ್‌ಗೇರಿದ ಭಾರತ!

INDW vs AUSW Semifinal Highlights: ಜೆಮಿಮಾ ರೊಡ್ರಿಗಸ್‌ ಶತಕ ಹಾಗೂ ಹರ್ಮನ್‌ಪ್ರೀತ್‌ ಕೌರ್‌ ಅರ್ಧಶತಕದ ಬಲದಿಂದ ಭಾರತ ಮಹಿಳಾ ತಂಡ, ಸೆಮಿಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 5 ವಿಕೆಟ್‌ ರೋಚಕ ಗೆಲುವು ಸಾಧಿಸಿತು. ಆ ಮೂಲಕ 2025ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಫೈನಲ್‌ಗೆ ಪ್ರವೇಶ ಮಾಡಿದೆ. ನವೆಂಬರ್‌ 2 ರಂದು ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಭಾರತ ತಂಡ ಎದುರಿಸಲಿದೆ.

Women's World Cup: ಆಸೀಸ್‌ಗೆ ಶಾಕ್‌ ನೀಡಿ ಫೈನಲ್‌ಗೇರಿದ ಭಾರತ!

ಜೆಮಿಮಾ ಶತಕದ ಬಲದಿಂದ ಆಸೀಸ್‌ಗೆ ಶಾಕ್‌ ನೀಡಿ ಫೈನಲ್‌ಗೇರಿದ ಭಾರತ. -

Profile Ramesh Kote Oct 30, 2025 10:43 PM

ಮುಂಬೈ: ಜೆಮಿಮಾ ರೊಡ್ರಿಗಸ್‌ (Jemimah Rodrigues) ಭರ್ಜರಿ ಶತಕ ಹಾಗೂ ಹರ್ಮನ್‌ಪ್ರೀತ್‌ ಕೌರ್‌ (Harmanpreet Kaur) ಅವರ ಅರ್ಧಶತಕದ ಬಲದಿಂದ ಭಾರತ ತಂಡ, 2025ರ ಐಸಿಸಿ ಮಹಿಳಾ ಏಕದಿನ (Women's World Cup 2025) ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ 5 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿತು. ಇದರೊಂದಿಗೆ ಭಾರತ, ಮಹಿಳಾ ಏಕದಿನ ವಿಶ್ವಕಪ್‌ ಇತಿಹಾಸದಲ್ಲಿ ಮೂರನೇ ಬಾರಿ ಫೈನಲ್‌ಗೆ ಪ್ರವೇಶ ಮಾಡಿತು. ಅಲ್ಲದೆ ಲೀಗ್‌ ಹಂತದಲ್ಲಿನ ಆಸೀಸ್‌ ವಿರುದ್ಧದ ಸೋಲಿನ ಸೇಡನ್ನು ಭಾರತೀಯ ವನಿತೆಯರು ತೀರಿಸಿಕೊಂಡರು. ಫೋಬೆ ಲಿಚ್‌ಫೀಲ್ಡ್‌ ಶತಕದ ಹೊರತಾಗಿಯೂ ಸೋತ ಆಸೀಸ್‌ನ ಎಂಟನೇ ವಿಶ್ವಕಪ್‌ ಗೆಲ್ಲುವ ಕನಸು ಭಗ್ನವಾಯಿತು.

ಗುರುವಾರ ಇಲ್ಲಿನ ಡಿವೈ ಪಾಟೀಲ್‌ ಕ್ರಿಕೆಟ್‌ ಅಕಾಡೆಮಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ನೀಡಿದ್ದ 339 ರನ್‌ಗಳ ಕಠಿಣ ಗುರಿಯನ್ನು ಹಿಂಬಾಲಿಸಿದ ಭಾರತ ತಂಡ ಆರಂಭಿಕ ಎರಡು ವಿಕೆಟ್‌ಗಳನ್ನು ಕಳೆದುಕೊಂಡು ಆಘಾತಕ್ಕೆ ಸಿಲುಕಿತ್ತು. ಆದರೆ, ಜೆಮಿಮಾ ರೊಡ್ರಿಗಸ್‌ (127*) ಹಾಗೂ ಹರ್ಮನ್‌ಪ್ರೀತ್‌ ಕೌರ್‌ (89 ರನ್‌) ಅವರ 167 ರನ್‌ಗಳ ದೊಡ್ಡ ಜೊತೆಯಾಟದ ಬಲದಿಂದ 48.3 ಓವರ್‌ಗಳಿಗೆ 4 ವಿಕೆಟ್‌ ನಷ್ಟಕ್ಕೆ 341 ರನ್‌ ಗಳಿಸಿ ಗೆಲುವು ಪಡೆಯಿತು. ವಿಶ್ವಕಪ್‌ ಇತಿಹಾಸದಲ್ಲಿಯೇ ಗರಿಷ್ಠ ಮೊತ್ತದ ರನ್‌ ಚೇಸ್‌ ಮಾಡಿದ ತಂಡ ಎಂಬ ವಿಶ್ವದಾಖಲೆಯನ್ನು ಭಾರತ ಬರೆದಿದೆ. ಈ ಗೆಲುವಿನ ಮೂಲಕ ಭಾರತ ಮಹಿಳಾ ತಂಡದ ಚೊಚ್ಚಲ ಮಹಿಳಾ ಏಕದಿನ ವಿಶ್ವಕಪ್‌ ಗೆಲ್ಲುವ ಕನಸು ಜೀವಂತವಾಗಿ ಉಳಿದುಕೊಂಡಿದೆ. ನವೆಂಬರ್‌ 2 ರಂದು ಇದೇ ಅಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ಭಾರತ ಮಹಿಳಾ ತಂಡ ಫೈನಲ್‌ನಲ್ಲಿ ಕಾದಾಟ ನಡೆಸಲಿದೆ.

Women's World Cup: ಲಾರಾ ಭರ್ಜರಿ ಶತಕ, ಇಂಗ್ಲೆಂಡ್‌ ವಿರುದ್ಧ ಗೆದ್ದು ಫೈನಲ್‌ಗೇರಿದ ದಕ್ಷಿಣ ಆಫ್ರಿಕಾ!

ಜೆಮಿಮಾ ರೊಡ್ರಿಗಸ್‌ ಭರ್ಜರಿ ಶತಕ

ಗುರಿ ಹಿಂಬಾಲಿಸಿದ ಭಾರತ ತಂಡ, 13 ರನ್‌ ಇದ್ದಾಗ ಶಫಾಲಿ ವರ್ಮಾ ಹಾಗೂ 59 ರನ್‌ಗೆ ಸ್ಮೃತಿ ಮಂಧಾನಾ ಅವರ ವಿಕೆಟ್‌ಗಳನ್ನು ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತ್ತು. ಆದರೆ, ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದು ಕೊನೆಯವರೆಗೂ ಅಜೇಯರಾಗಿ ಬ್ಯಾಟ್‌ ಮಾಡಿದ ಜೆಮಿಮಾ ರೊಡ್ರಿಗಸ್‌, 134 ಎಸೆತಗಳಲ್ಲಿ 14 ಬೌಂಡರಿಗಳೊಂದಿಗೆ 127* ರನ್‌ ಗಳಿಸಿ ಭಾರತ ತಂಡವನ್ನು ಗೆಲ್ಲಿಸಿದರು. ಅಲ್ಲದೆ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಜೊತೆ 167 ರನ್‌ಗಳ ನಿರ್ಣಾಯಕ ಜೊತೆಯಾಟವನ್ನು ಆಡಿದರು. ಇದರ ನೆರವಿನಿಂದ ಜೆಮಿಮಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ದೀಪ್ತಿ ಶರ್ಮಾ 24 ಹಾಗೂ ರಿಚಾ ಘೋಷ್‌ 26 ಅವರು ಉಪಯುಕ್ತ ಕಾಣಿಕೆ ನೀಡಿದರು.



338 ರನ್‌ ಕಲೆ ಹಾಕಿದ್ದ ಆಸ್ಟ್ರೇಲಿಯಾ

ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದ್ದ ಆಸ್ಟ್ರೇಲಿಯಾ ತಂಡ ದೊಡ್ಡ ಮೊತ್ತವನ್ನು ಕಲೆ ಹಾಕಿತ್ತು. ಫೋಬೆ ಲಿಚ್‌ಫೀಲ್ಡ್‌ (119 ರನ್‌) ಶತಕ ಮತ್ತು ಎಲಿಸ್‌ ಪೆರಿ (77) ಹಾಗೂ ಆಶ್ಲೆ ಗಾರ್ಡ್ನರ್ (63) ಅವರ ಅರ್ಧಶತಕಗಳ ಬಲದಿಂದ ಆಸ್ಟ್ರೇಲಿಯಾ ಮಹಿಳಾ ತಂಡ 49.5 ಓವರ್‌ಗಳಿಗೆ 338 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಭಾರತ ಮಹಿಳಾ ತಂಡಕ್ಕೆ 339 ರನ್‌ಗಳ ಕಠಿಣ ಗುರಿಯನ್ನು ನೀಡಿತ್ತು.



ಫೋಬೆ ಲಿಚ್‌ಫೀಲ್ಡ್‌ ಭರ್ಜರಿ ಶತಕ

ಆಸ್ಟ್ರೇಲಿಯಾ ಮಹಿಳಾ ತಂಡದ ಪರ ಎಲ್ಲರ ಗಮನ ಸೆಳೆದಿದ್ದು ಆರಂಭಿಕ ಬ್ಯಾಟರ್‌ ಫೋಬೆ ಲಿಚ್‌ಫೀಲ್ಡ್‌. ನಾಯಕಿ ಹಾಗೂ ಮತ್ತೊಬ್ಬ ಆರಂಭಿಕ ಆಟಗಾರ್ತಿ ಅಲಿಸಾ ಹೀಲಿ (5) ಅವರು ಬಹುಬೇಗ ವಿಕೆಟ್‌ ಒಪ್ಪಿಸಿದರು. ಆದರೆ, ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡಿದ ಲಿಚ್‌ಫೀಲ್ಡ್‌, ಭಾರತೀಯ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಅವರು ಆಡಿದ 93 ಎಸೆತಗಳಲ್ಲಿ ಮೂರು ಸಿಕ್ಸರ್‌ ಹಾಗೂ 17 ಬೌಂಡರಿಗಳೊಂದಿಗೆ 119 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ವುಮೆನ್ಸ್‌ ವಿಶ್ವಕಪ್‌ ನಾಕ್‌ಔಟ್‌ ಪಂದ್ಯದಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಬ್ಯಾಟ್ಸ್‌ವುಮೆನ್‌ ಎಂಬ ವಿಶ್ವ ದಾಖಲೆಯನ್ನು ಲಿಚ್‌ಫೀಲ್ಟ್‌ ಬರೆದರು. ಅವರು ತಮ್ಮ 22ನೇ ವಯಸ್ಸಿನಲ್ಲಿ ಈ ದಾಖಲೆ ಬರೆದಿದ್ದಾರೆ. ಜೆಮಿಮಾ ಜೊತೆ ಮತ್ತೊಂದು ತುದಿಯಲ್ಲಿ ಬ್ಯಾಟ್‌ ಮಾಡಿದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌, 88 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ 10 ಬೌಂಡರಿಗಳೊಂದಿಗೆ 89 ರನ್‌ ಗಳಿಸಿ ಭಾರತದ ಗೆಲುವಿಗೆ ತನ್ನದೇ ಕೊಡುಗೆಯನ್ನು ನೀಡಿದರು.



ಪೆರಿ-ಲಿಚ್‌ಫೀಲ್ಡ್‌ ಜುಗಲ್‌ಬಂದಿ

ಎರಡನೇ ವಿಕೆಟ್‌ಗೆ ಎಲಿಸ್‌ ಪೆರಿ ಮತ್ತು ಫೋಬೆ ಲಿಚ್‌ಫೀಲ್ಡ್‌ ಅವರು ಅದ್ಭುತ ಜೊತೆಯಾಟವನ್ನು ಆಡಿದರು.ಈ ಜೋಡಿ ದೀರ್ಘಾವಧಿ ಕ್ರೀಸ್‌ನಲ್ಲಿ ನಿಂತು 155 ರನ್‌ಗಳ ಜೊತೆಯಾಟವನ್ನು ಆಡಿತು. ಆ ಮೂಲಕ ತಂಡದ ಮೊತ್ತವನ್ನು 200ರ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರವಹಿಸಿತು. ಒಂದು ತುದಿಯಲ್ಲಿ ಅದ್ಭುತವಾಗಿ ಬ್ಯಾಟ್‌ ಮಾಡಿದ ಎಲಿಸ್‌ ಪೆರಿ 88 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ 6 ಬೌಂಡರಿಗಳೊಂದಿಗೆ 77 ರನ್‌ ಗಳಿಸಿ ರಾಧಾ ಯಾದವ್‌ಗೆ ಕ್ಲೀನ್‌ ಬೌಲ್ಡ್‌ ಆದರು. ಆಶ್ಲೆ ಗಾರ್ಡ್ನರ್‌ ಕೂಡ ಅದ್ಭುತ ಇನಿಂಗ್ಸ್‌ ಆಡಿದರು. ಅವರು ಆಡಿದ 45 ಎಸೆತಗಳಲ್ಲಿ 4 ಸಿಕ್ಸರ್‌ ಹಾಗೂ 4 ಬೌಂಡರಿಗಳೊಂದಿಗೆ 63 ರನ್‌ ಕಲೆ ಹಾಕಿದರು. ಆ ಮೂಲಕ ತಂಡದ ಮೊತ್ತ 330ರ ಗಡಿ ದಾಟಲು ಪ್ರಮುಖ ಪಾತ್ರವನ್ನು ವಹಿಸಿದರು.

ಶ್ರೀಚರಣ ಅದ್ಭುತವಾಗಿ ಬೌಲ್‌ ಮಾಡಿ ಎರಡು ವಿಕೆಟ್‌ ಕಿತ್ತರೆ, ದೀಪ್ತಿ ಶರ್ಮಾ ಸ್ವಲ್ಪ ದುಬಾರಿಯಾದರೂ ಎರಡು ವಿಕೆಟ್‌ ಪಡೆದರು. ಆಸ್ಟ್ರೇಲಿಯಾ ತಂಡದ ಮೂವರು ಬ್ಯಾಟ್ಸ್‌ವುಮೆನ್‌ಗಳು ರನ್‌ಔಟ್‌ ಆಗಿದ್ದು ಅಚ್ಚರಿ ಸಂಗತಿಯಾಗಿದೆ.