2027ರ ಏಕದಿನ ವಿಶ್ವಕಪ್ ಟೂರ್ನಿಗೆ ರೋಹಿತ್ ಶರ್ಮಾರ ಮಹತ್ವವನ್ನು ತಿಳಿಸಿದ ಜಾಂಟಿ ರೋಡ್ಸ್!
2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ರೋಹಿತ್ ಶರ್ಮಾ ಅವರ ಭವಿಷ್ಯದ ಬಗ್ಗೆ ಚರ್ಚೆ ನಡೆಯುತ್ತಿರುವ ವೇಳೆಯೇ ದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್, ಟೀಮ್ ಇಂಡಿಯಾ ಮಾಜಿ ನಾಯಕನ ಮಹತ್ವವನ್ನು ಒತ್ತಿ ಹೇಳಿದ್ದಾರೆ. ಏಕದಿನವ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾರ ಅನುಭವ ತುಂಬಾ ಮೌಲ್ಯವನ್ನು ತಂದುಕೊಡಲಿದೆ ಎಂದಿದ್ದಾರೆ.
ರೋಹಿತ್ ಶರ್ಮಾರ ಭವಿಷ್ಯದ ಜಾಂಟಿ ರೋಡ್ಸ್ ಹೇಳಿಕೆ. -
ನವದೆಹಲಿ: ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಹಾಗೂ ನಮೀಬಿಯಾ ಜಂಟಿ ಆತಿಥ್ಯದಲ್ಲಿ 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ (ICC ODI World Cup 2027) ಇನ್ನೂ ಒಂದು ವರ್ಷ ಕೂಡ ಸಮಯವಿಲ್ಲ. ಹಾಗಾಗಿ ಎಲ್ಲಾ ತಂಡಗಳು ಈಗಾಗಲೇ ತಯಾರಿಯನ್ನು ಆರಂಭಿಸಿವೆ. ಈ ಪ್ರತಿಷ್ಠಿತ ಟೂರ್ನಿಯಲ್ಲಿ ಭಾರತವನ್ನು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎಂದು ಪರಿಗಣಿಸಲಾಗಿದೆ. ಆದರೆ ವಿಶ್ವಕಪ್ ಟೂರ್ನಿಗೂ ಮುನ್ನ ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ (Virat Kohli)ಭಾರತ ತಂಡದಲ್ಲಿ ಉಳಿಯಲಿದ್ದಾರೆಯೇ ಎಂಬ ಪ್ರಶ್ನೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಟೆಸ್ಟ್ ಹಾಗೂ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಈಗಾಗಲೇ ವಿದಾಯ ಹೇಳಿರುವ ಈ ಇಬ್ಬರು ದಿಗ್ಗಜರ ಏಕದಿನ ಭವಿಷ್ಯದ ಬಗ್ಗೆ ಅನಿಶ್ಚಿತತೆ ಮುಂದುವರಿದಿದೆ.
ಈ ಕುರಿತು ಮಾತನಾಡಿದ ದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್, ರೋಹಿತ್ ಶರ್ಮಾ ವಿಶ್ವಕಪ್ ತಂಡದಲ್ಲಿ ಇರಲೇಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. “ವಿಶ್ವಕಪ್ ಟೂರ್ನಿಯಲ್ಲಿ ಅನುಭವ ಎನ್ನುವುದು ಅತ್ಯಂತ ದೊಡ್ಡ ಅಂಶ. ನಾವು ಸಾಮಾನ್ಯವಾಗಿ ಆಟಗಾರರ ಪ್ರತಿಭೆ, ಸಾಮರ್ಥ್ಯ ಮತ್ತು ಇತ್ತೀಚಿನ ಪ್ರದರ್ಶನವನ್ನು ನೋಡುತ್ತೇವೆ. ಆದರೆ ಒತ್ತಡದ ಕ್ಷಣಗಳಲ್ಲಿ ವಿಶ್ವಕಪ್ ಅನುಭವವೇ ಪಂದ್ಯವನ್ನು ಗೆಲ್ಲಿಸುತ್ತದೆ,” ಎಂದು ಜಿಯೋಹಾಟ್‌ಸ್ಟಾರ್‌ಗೆ ರೋಡ್ಸ್ ಹೇಳಿದರು.
ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಹೇಳಿ ಎಂದ ಬಿಸಿಸಿಐ ಸೆಲೆಕ್ಟರ್‌ಗಳ ವಿರುದ್ಧ ರೋಹಿತ್ ಶರ್ಮಾ ಗರಂ!
ಶುಭಮನ್ ಗಿಲ್ ನಾಯಕತ್ವಕ್ಕೂ ಮೆಚ್ಚುಗೆ
ಜಾಂಟಿ ರೋಡ್ಸ್ ಭಾರತ ತಂಡದ ನಾಯಕ ಶುಭಮನ್ ಗಿಲ್ ಅವರ ನಾಯಕತ್ವದ ಬಗ್ಗೆಯೂ ಪ್ರಶಂಸೆ ವ್ಯಕ್ತಪಡಿಸಿದರು. 2027ರ ವಿಶ್ವಕಪ್ ಟೂರ್ನಿಯಲ್ಲಿ ಗಿಲ್ ಭಾರತವನ್ನು ಮುನ್ನಡೆಸುವ ನಿರೀಕ್ಷೆ ಇದ್ದು, ಹಿರಿಯ ಆಟಗಾರರೊಂದಿಗೆ ಅವರು ಉತ್ತಮ ಸಮತೋಲನ ಸಾಧಿಸುತ್ತಿದ್ದಾರೆ ಎಂದರು.
“ರೋಹಿತ್ ಮತ್ತು ವಿರಾಟ್‌ರಂತಹ ಹಿರಿಯರು ತಂಡದಲ್ಲಿರುವುದು ದೊಡ್ಡ ಬಲ. ಗಿಲ್ ತನ್ನ ಶಕ್ತಿ, ನಾಯಕತ್ವ ಮತ್ತು ವ್ಯಕ್ತಿತ್ವದಲ್ಲಿ ನಿರಂತರತೆ ಕಾಪಾಡಿಕೊಂಡಿದ್ದಾರೆ. ಯಾರನ್ನೂ ಅನುಕರಿಸಲು ಪ್ರಯತ್ನಿಸದೇ ತನ್ನದೇ ಶೈಲಿಯಲ್ಲಿ ನಾಯಕತ್ವ ವಹಿಸುತ್ತಿರುವುದು ಅವರ ದೊಡ್ಡ ಗುಣ,” ಎಂದು ಜಾಂಟಿ ರೋಡ್ಸ್ ಗುಣಗಾನ ಮಾಡಿದ್ದಾರೆ.
ಏಷ್ಯನ್ ಕ್ರೀಡಾಕೂಟ; ಟೀಮ್ ಇಂಡಿಯಾಗೆ ವಿವಿಎಸ್ ಲಕ್ಷ್ಮಣ್ ಮುಖ್ಯ ಕೋಚ್
ಕೊಹ್ಲಿ-ಜಡೇಜಾ ಸ್ಥಾನಗಳು ಸುರಕ್ಷಿತ
ಇನ್ನು ರೋಹಿತ್ ಶರ್ಮಾ ಅವರ ಭವಿಷ್ಯದ ಬಗ್ಗೆ ಒತ್ತಡ ಹೆಚ್ಚಾಗಿರುವ ಸಾಧ್ಯತೆಯಿದ್ದರೂ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಅವರ ಸ್ಥಾನ ತುಸು ಸುರಕ್ಷಿತವಾಗಿದೆ ಎಂದು ವರದಿಯಾಗಿದೆ. ಆದಾಗ್ಯೂ, ಮುಂಬರುವ ಬಿಸಿಸಿಐ ಸಭೆಯಲ್ಲಿ ಜಡೇಜಾ ಮತ್ತು ಕೊಹ್ಲಿ ಅವರ ಭವಿಷ್ಯದ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ವರದಿ ತಿಳಿಸಿದೆ.
ಭಾರತ ತಂಡದ ಕ್ರಿಕೆಟ್ ಇತಿಹಾಸದ ಅತ್ಯಂತ ಪ್ರಮುಖ ಆಟಗಾರರಲ್ಲಿ ಮೂವರಾದ ರೋಹಿತ್, ಕೊಹ್ಲಿ ಮತ್ತು ಜಡೇಜಾ ಅವರ ಮುಂದಿನ ಭವಿಷ್ಯದ ಬಗ್ಗೆ ಬಿಸಿಸಿಐ ಸಭೆ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ. 2027ರ ಏಕದಿನ ವಿಶ್ವಕಪ್ ಟೂರ್ನಿಯು ಆಫ್ರಿಕಾದಲ್ಲಿ ನಡೆಯಲಿದ್ದು, ಮೂರನೇ ವಿಶ್ವಕಪ್ ಪ್ರಶಸ್ತಿ ಗೆಲ್ಲುವ ಗುರಿ ಹೊಂದಿರುವ ಭಾರತ ತಂಡ ಅತ್ಯುತ್ತಮ ಪ್ರದರ್ಶನ ನೀಡಲು ಎದುರು ನೋಡುತ್ತಿದೆ.