KAR vs MAH: ಮಹಾರಾಷ್ಟ್ರ ಎದುರು ಡ್ರಾಗೆ ತೃಪ್ತಿಪಟ್ಟರೂ ಅಗ್ರ ಸ್ಥಾನಕ್ಕೇರಿದ ಕರ್ನಾಟಕ!
KAR vs MAH Match Highlights: ಕರ್ನಾಟಕ ಹಾಗೂ ಮಹಾರಾಷ್ಟ್ರ ತಂಡಗಳ ನಡುವಣ ರಣಜಿ ಟ್ರೋಫಿ ಟೂರ್ನಿಯ ಎಲೈಟ್ ಬಿ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದೆ. ಇದರ ಹೊರತಾಗಿಯೂ ಪ್ರಥಮ ಇನಿಂಗ್ಸ್‌ನಲ್ಲಿನ ಮುನ್ನಡೆ ಫಲವಾಗಿ ಮೂರು ಅಂಕಗಳನ್ನು ಕಲೆ ಹಾಕಿದ ಕರ್ನಾಟಕ ತಂಡ, ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದೆ.
ಮಹಾರಾಷ್ಟ್ರ ವಿರುದ್ಧ ದ್ವಿತೀಯ ಇನಿಂಗ್ಸ್‌ನಲ್ಲಿ ಮಯಾಂಕ್ ಅಗರ್ವಾಲ್ ಶತಕ ಬಾರಿಸಿದ್ದಾರೆ. -
ನಾಸಿಕ್: ಕರ್ನಾಟಕ ಹಾಗೂ ಮಹಾರಾಷ್ಟ್ರ (KAR vs MAH) ನಡುವಣ 2025-26ರ ರಣಜಿ ಟ್ರೋಫಿ (Ranji Trophy 2025-26) ಎಲೈಟ್ ಬಿ ಪಂದ್ಯ ಡ್ರಾನಲ್ಲಿ ಅಂತ್ಯವಾಯಿತು. ಆದರೆ, ಪ್ರಥಮ ಇನಿಂಗ್ಸ್‌ನಲ್ಲಿನ ಅಲ್ಪ ಮುನ್ನಡೆಯ ಫಲವಾಗಿ ಮಯಾಂಕ್ ಅಗರ್ವಾಲ್ ನಾಯಕತ್ವದ ಕರ್ನಾಟಕ ತಂಡ (Karnataka), ಮೂರು ಅಂಕಗಳನ್ನು ಪಡೆದಿದ್ದು, ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದೆ. ಇನ್ನು ಹಿನ್ನಡೆ ಅನುಭವಿಸಿದ ಎದುರಾಳಿ ಮಹಾರಾಷ್ಟ್ರ ತಂಡ ಕೇವಲ ಒಂದು ಅಂಕ ಪಡೆಯುವ ಮೂಲಕ ಅಂಕಪಟ್ಟಿಯಲ್ಲಿ ಒಟ್ಟು 13 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ಇಳಿಕೆ ಕಂಡಿದೆ.
ಇಲ್ಲಿನ ಗಾಲ್ಫ್ ಕ್ಲಬ್ ಗ್ರೌಂಡ್‌ನಲ್ಲಿ ನಡೆದಿದ್ದ ಈ ಪಂದ್ಯದ ನಾಲ್ಕನೇ ದಿನವಾದ ಮಂಗಳವಾರ ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ (103 ರನ್) ಹಾಗೂ ಅಭಿನವ್ ಮನೋಹರ್ (96 ರನ್) ಅವರು ತಮ್ಮ ಬ್ಯಾಟಿಂಗ್ ಮೂಲಕ ಗಮನ ಸೆಳೆದರು. ಆ ಮೂಲಕ ಕರ್ನಾಟಕ ತಂಡ ದ್ವಿತೀಯ ಇನಿಂಗ್ಸ್‌ನಲ್ಲಿ 110 ಓವರ್‌ಗಳಿಗೆ 8 ವಿಕೆಟ್‌ಗಳ ನಷ್ಟಕ್ಕೆ 309 ರನ್‌ಗಳನ್ನು ಕಲೆ ಹಾಕಿತು. ಈ ವೇಳೆ ಎರಡೂ ತಂಡಗಳ ನಾಯಕರು ಒಮ್ಮತದ ಮೇಲೆ ಈ ಪಂದ್ಯವನ್ನು ಡ್ರಾ ಮಾಡಿಕೊಳ್ಳಲಾಯಿತು.
Ranji Trophy 2025-26: ಮೊಹ್ಸಿನ್ ಖಾನ್ ಸ್ಪಿನ್ ಮೋಡಿಗೆ ಕೇರಳ ತತ್ತರ, ಕರ್ನಾಟಕ ತಂಡಕ್ಕೆ ಇನಿಂಗ್ಸ್ ಜಯ!
ಮಯಾಂಕ್ ಅಗರ್ವಾಲ್ ಶತಕ
ಪಂದ್ಯದ ಮೂರನೇ ದಿನದಾಟದ ಅಂತ್ಯಕ್ಕೆ ಅಜೇಯ 64 ರನ್ ಗಳಿಸಿದ್ದ ಮಯಾಂಕ್ ಅಗರ್ವಾಲ್, ನಾಲ್ಕನೇ ದಿನದಾಟದ ಮೊದಲನೇ ಸೆಷನ್‌ನಲ್ಲಿ ತಮ್ಮ ಶತಕವನ್ನು ಪೂರ್ಣಗೊಳಿಸಿದರು. ಅದ್ಭುತ ಬ್ಯಾಟ್ ಮಾಡಿದ ಮಯಾಂಕ್ ಅಗರ್ವಾಲ್ ಅವರು, ಸಿದ್ದೇಶ್ ವೀರ್‌ಗೆ ಬೌಲ್ಡ್ ಆಗುವುದಕ್ಕೂ ಮುನ್ನ 249 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 8 ಬೌಂಡರಿಗಳೊಂದಿಗೆ 103 ರನ್ ಗಳಿಸಿದರು ಹಾಗೂ ಅಭಿನವ್ ಮನೋಹರ್ ಅವರ ಜೊತೆ 92 ರನ್‌ಗಳ ನಿರ್ಣಾಯಕ ಜೊತೆಯಟವನ್ನು ಆಡಿದರು. ಆ ಮೂಲಕ ಅಲ್ಪ ಮೊತ್ತಕ್ಕೆ ಕುಸಿಯುತ್ತಿದ್ದ ಕರ್ನಾಟಕ ತಂಡವನ್ನು ಮೇಲೆತ್ತಿದರು.
ಅಭಿನವ್ ಮನೋಹರ್
ಮತ್ತೊಂದು ಕಡೆ ಸೊಗಸಾಗಿ ಬ್ಯಾಟ್ ಮಾಡಿದ ಅಭಿನವ್ ಮನೋಹರ್, ಮಹಾರಾಷ್ಟ್ರ ಬೌಲರ್‌ಗಳನ್ನು ಕೆಲಕಾಲ ದಂಡಿಸಿದ್ದರು. ಅವರು ಆಡಿದ 161 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ 11 ಬೌಂಡರಿಗಳೊಂದಿಗೆ 96 ರನ್‌ಗಳನ್ನು ಗಳಿಸಿದರು. ಆ ಮೂಲಕ ಶತಕ ಸಿಡಿಸುವ ಸನಿಹದಲ್ಲಿದ್ದರು. ಆದರೆ, ಅವರು ವಿಕ್ಕಿ ಓತ್ಸ್ಟಾಲ್‌ಗೆ ವಿಕೆಟ್ ಒಪ್ಪಿಸಿದರು. ಆ ಮೂಲಕ ಕೇವಲ 4 ರನ್‌ಗಳ ಅಂತರದಲ್ಲಿ ಶತಕ ವಂಚಿತರಾದರು.
Maharashtra #RanjiTrophy match ends in draw. Karnataka take first innings lead. Shreyas Gopal wins POTM for his all-round effort: 71, 24* & 4-wkt haul.💛 pic.twitter.com/Btm4elXLDX
— Soaib Akhtar (@SSA_807) November 11, 2025
ಪ್ರಥಮ ಇನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದ್ದ ಕರ್ನಾಟಕ
ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ್ದ ಕರ್ನಾಟಕ ತಂಡ, ಮಯಾಂಕ್ ಅಗರ್ವಾಲ್, ಆರ್ ಸ್ಮರಣ್ ಹಾಗೂ ಶ್ರೇಯಸ್ ಗೋಪಾಲ್ ಅವರ ಅರ್ಧಶತಕಗಳ ಬಲದಿಂದ, ಪ್ರಥಮ ಇನಿಂಗ್ಸ್‌ನಲ್ಲಿ 313 ರನ್‌ಗಳನ್ನು ಕಲೆ ಹಾಕಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಬ್ಯಾಟ್ ಮಾಡಿದ್ದ ಮಹಾರಾಷ್ಟ್ರ ತಂಡ, ಪೃಥ್ವಿ ಶಾ ಹಾಗೂ ಜಲಜ್ ಸೆಕ್ಸೇನ ಅವರ ಅರ್ಧಶತಕಗಳ ಹೊರತಾಗಿಯೂ 300 ರನ್‌ಗಳನ್ನು ಕಲೆ ಹಾಕಿತ್ತು. ಆದರೆ, ಕೇವಲ 13 ರನ್‌ಗಳ ಹಿನ್ನಡೆಯನ್ನು ಅನುಭವಿಸಿತ್ತು. ಇದರ ಫಲವಾಗಿ ಕರ್ನಾಟಕ ತಂಡ ಈ ಪಂದ್ಯ ಡ್ರಾನಲ್ಲಿ ಮುಗಿದರೂ ಮೂರು ಅಂಕಗಳನ್ನು ಕಲೆ ಹಾಕಿತು.
Brilliant knock from Mayank Agarwal in the Ranji Trophy match against Maharashtra 💥
— CricketTimes.com (@CricketTimesHQ) November 11, 2025
1st innings: 80
2nd innings: 103#MayankAgarwal #RanjiTrophy #CricketTwitter pic.twitter.com/K0Uqx5DPBO
ಶ್ರೇಯಸ್ ಗೋಪಾಲ್‌ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ
ಈ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಗಮನ ಸೆಳೆದಿದ್ದ ಶ್ರೇಯಸ್ ಗೋಪಾಲ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಅವರು ಪ್ರಥಮ ಇನಿಂಗ್ಸ್‌ನಲ್ಲಿ 71 ರನ್ ಹಾಗೂ ದ್ವಿತೀಯ ಇನಿಂಗ್ಸ್‌ನಲ್ಲಿ ಅಜೇಯ 24 ರನ್ ಗಳಿಸಿದ್ದರು. ಇನ್ನು ಬೌಲಿಂಗ್‌ನಲ್ಲಿ 4 ವಿಕೆಟ್ ಕಿತ್ತಿದ್ದರು. ಇದರ ಫಲವಾಗಿ ಶ್ರೇಯಸ್ ಗೋಪಾಲ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.