IPL 2026: ಮತೀಶ ಪತಿರಣ ಸಂಪೂರ್ಣ ಫಿಟ್, ಕೋಲ್ಕತಾ ನೈಟ್ ರೈಡರ್ಸ್‌ಗೆ ಆನೆ ಬಲ!
ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ 2026ರ ಐಪಿಎಲ್ ಟೂರ್ನಿಗೂ ಮುನ್ನ ಆನೆ ಬಲ ಬಂದಂತಾಗಿದೆ. ಶ್ರೀಲಂಕಾ ವೇಗಿ ಮತೀಶ ಪತಿರಣ ಅವರಿಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿಯಿಂದ ಅನುಮತಿ ದೊರೆತಿದ್ದು, ಅವರು ಈಗ ಫ್ರಾಂಚೈಸಿಯೊಂದಿಗೆ ಸೇರಿಕೊಳ್ಳಲು ಸಿದ್ಧರಾಗಿದ್ದಾರೆ. ಟಿ20 ವಿಶ್ವಕಪ್ ವೇಳೆ ಗಾಯಗೊಂಡಿದ್ದ ಅವರು ಮುಂದಿನ ಸೀಸನ್‌ಗೆ ಅನುಮಾನ ಎನ್ನಲಾಗಿತ್ತು. ಆದರೆ ಈಗ ಅವರ ಲಭ್ಯತೆ ದೃಢವಾಗಿರುವುದು ಕೆಕೆಆರ್ ತಂಡಕ್ಕೆ ದೊಡ್ಡ ಬಲ ನೀಡಿದೆ.
ಮತೀಶ್ ಪತಿರಣ ಸಂಪೂರ್ಣ ಫಿಟ್ ಆಗಿದ್ದಾರೆ. -
ನವದೆಹಲಿ: ಮುಂಬರುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ನಿಮಿತ್ತ ಕೋಲ್ಕತಾ ನೈಟ್ ರೈಡರ್ಸ್ (KKR) ತಂಡಕ್ಕೆ ಸಿಹಿ ಸುದ್ದಿ ಸಿಕ್ಕಿದೆ. ಶ್ರೀಲಂಕಾ ತಂಡದ ಮಾರಕ ವೇಗಿ ಮತೀಶ ಪತಿರಣ (Matheesha Patirana) ಅವರು ಸಂಪೂರ್ಣ ಫಿಟ್ ಆಗಿದ್ದಾರೆ ಹಾಗೂ ಐಪಿಎಲ್ ಟೂರ್ನಿಗೆ ಲಭ್ಯರಾಗಿದ್ದಾರೆಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ಹಸಿರು ನಿಶಾನೆ ತೋರಿಸಿದೆ. ಈ ಹಿನ್ನೆಲೆಯಲ್ಲಿ ಕೆಕೆಆರ್ ತಂಡಕ್ಕೆ ಆನೆ ಬಲ ಸಿಕ್ಕಂತ್ತಾಗಿದೆ. ಮಾರ್ಚ್ 28 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವಣ ಪಂದ್ಯದ ಮೂಲಕ 19ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭವಾಗಲಿದೆ.
ಶ್ರೀಲಂಕಾ ಕ್ರಿಕೆಟ್ ಕಾರ್ಯದರ್ಶಿ ಬಾಂಡುಲಾ ದಿಸಾನಾಯಕೆ ಅವರು ಪಿಟಿಐಗೆ ತಿಳಿಸಿದಂತೆ, ಮತೀಶ ಪತಿರಣ ತಮ್ಮ ಪುನಶ್ಚೇತನಕ ಕಾರ್ಯವನ್ನು ಪೂರ್ಣಗೊಳಿಸಿದ್ದು, ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸಲು ಅಗತ್ಯವಾದ ಅನುಮತಿ ಪಡೆದಿದ್ದಾರೆ. ಆದರೆ ಕೋಲ್ಕತಾ ನೈಟ್ ರೈಡರ್ಸ್ ತಂಡ, ಅವರನ್ನು ಅಂತಿಮವಾಗಿ ತಂಡದಲ್ಲಿ ಸೇರಿಸುವ ಮೊದಲು ಅವರ ಫಿಟ್‌ನೆಸ್‌ನ್ನು ಪರಿಶೀಲಿಸಲಿದೆ.
IPL 2026 ಟೂರ್ನಿಯಿಂದ ಸ್ಯಾಮ್ ಕರನ್ ಔಟ್, ರಾಜಸ್ಥಾನ್ ರಾಯಲ್ಸ್‌ಗೆ ಹಿನ್ನಡೆ!
ಪತಿರಣ ಅವರು 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಗುಂಪು ಹಂತದ ಪಂದ್ಯದಲ್ಲಿ ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿದ್ದರು. ಇದರಿಂದಾಗಿ ಅವರು ಟೂರ್ನಿಯ ಇನ್ನುಳಿದ ಭಾಗವನ್ನು ಕಳೆದುಕೊಳ್ಳಬೇಕಾಗಿತ್ತು ಮತ್ತು ಶ್ರೀಲಂಕಾ ತಂಡ ಟೂರ್ನಿಯ ಸೂಪರ್-8ರ ಹಂತದಲ್ಲಿ ಹೊರ ಬಿದ್ದಿತ್ತು.
ಬಾಂಡುಲಾ ದಿಸಾನಾಯಕೆ ಹೇಳಿದ್ದೇನು?
“ನನ್ನ ತಿಳಿವಳಿಕೆಯ ಪ್ರಕಾರ ಮತೀಶ ಪತಿರಣ ಫಿಟ್ ಆಗಿದ್ದಾರೆ. ನಾವು ಅವರಿಗೆ ಐಪಿಎಲ್‌ನಲ್ಲಿ ಭಾಗವಹಿಸಲು ಎನ್‌ಒಸಿ ನೀಡಿದ್ದೇವೆ. ಈಗ ನನಗೆ ತಿಳಿದಿರುವುದು ಅಷ್ಟೇ,” ಎಂದು ಬಾಂಡುಲಾ ದಿಸಾನಾಯಕೆ ಪಿಟಿಐಗೆ ತಿಳಿಸಿದ್ದಾರೆ.
“ಅವರು ಪುನಶ್ಚೇತನ ಕಾರ್ಯವನ್ನು ಮುಗಿಸಿ ಫಿಟ್ ಆಗಿದ್ದಾರೆ. ಆದರೆ ಅವರ ಸಿದ್ಧತೆಯನ್ನು ಅಂತಿಮವಾಗಿ ಫ್ರಾಂಚೈಸಿಯೇ ಪರಿಶೀಲಿಸಬೇಕು. ಅದರ ಬಗ್ಗೆ ನಮಗೆ ಹೆಚ್ಚಿನ ಮಾಹಿತಿ ಇಲ್ಲ. ನಮ್ಮ ಮಾಹಿತಿಯಂತೆ ಅವರು ಫಿಟ್ ಆಗಿ ಐಪಿಎಲ್‌ಗೆ ಸೇರಲು ಸಿದ್ಧರಾಗಿದ್ದಾರೆ,” ಎಂದು ಅವರು ಹೇಳಿದ್ದಾರೆ.
IPL 2026: ರಾಜಸ್ಥಾನ್ ರಾಯಲ್ಸ್ ತೊರೆದ ಸಂಜು ಸ್ಯಾಮ್ಸನ್ ಬಗ್ಗೆ ರಿಯಾನ್ ಪರಾಗ್ ದೊಡ್ಡ ಹೇಳಿಕೆ!
ಕೆಕೆಆರ್‌ಗೆ ಮೊದಲ ಎದುರಾಳಿ ಯಾವುದು?
ಮತೀಶ ಪತಿರಣ ಅವರು ಯಾವಾಗ ಕೆಕೆಆರ್ ತಂಡವನ್ನು ಸೇರಿಕೊಳ್ಳುತ್ತಾರೆ ಎಂಬುದರ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ತಂಡ ಮಾರ್ಚ್ 25ರಂದು ಮುಂಬೈಗೆ ಪ್ರಯಾಣಿಸಲಿದೆ, ಏಕೆಂದರೆ ಮಾರ್ಚ್ 29ರಂದು ಮುಂಬೈ ಇಂಡಿಯನ್ಸ್ ವಿರುದ್ಧ ತಮ್ಮ ಆರಂಭಿಕ ಪಂದ್ಯವನ್ನು ಆಡಲಿದೆ. ಇದಾದ ಬಳಿಕ ಕೆಕೆಆರ್ ಈಡನ್ ಗಾರ್ಡನ್ಸ್‌ನಲ್ಲಿ ಮೂರು ಸತತ ತವರು ಪಂದ್ಯಗಳನ್ನು ಆಡಲಿದೆ — ಏಪ್ರಿಲ್ 2ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ, ಏಪ್ರಿಲ್ 6ರಂದು ಪಂಜಾಬ್ ಕಿಂಗ್ಸ್ ವಿರುದ್ಧ ಮತ್ತು ಏಪ್ರಿಲ್ 9ರಂದು ಲಖನೌ ಸೂಪರ್ ಜಯಂಟ್ಸ್ ವಿರುದ್ಧ ಕಾದಾಟ ನಡೆಸಲಿದೆ.
2025ರ ಟೂರ್ನಿಯ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನಕ್ಕೆ ತೃಪ್ತಿಪಟ್ಟ ನಂತರ, ತಂಡವನ್ನು ಮರು ಬಲಿಷ್ಠಗೊಳಿಸಲು ಕೆಕೆಆರ್ 2026ರ ಹರಾಜಿನಲ್ಲಿ ಪತಿರಣ ಅವರನ್ನು 18 ಕೋಟಿ ರು. ಗಳಿಗೆ ಖರೀದಿಸಿತು. ಈ ಮೂಲಕ ಮೂರು ಬಾರಿ ಚಾಂಪಿಯನ್ ಆಗಿರುವ ಫ್ರಾಂಚೈಸಿ ತನ್ನ ಬೌಲಿಂಗ್ ವಿಭಾಗವನ್ನು ಬಲಪಡಿಸಿದೆ.