ʻನಿಮ್ಮ ಕೊಡುಗೆಗಾಗಿ ಅಭಿನಂದನೆಗಳುʼ: ನಿಕೋಲಸ್ ಪೂರನ್ಗೆ ವಿಶೇಷ ಸಂದೇಶ ರವಾನಿಸಿದ ರಿಷಭ್ ಪಂತ್!
Rishabh Pant paid tribute to Pooran: ವೆಸ್ಟ್ ಇಂಡೀಸ್ನ ಸ್ಟಾರ್ ಬ್ಯಾಟ್ಸ್ಮನ್ ನಿಕೋಲಸ್ ಪೂರನ್ ಜೂನ್ 10 (ಮಂಗಳವಾರ) ರಂದು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಲಖನೌ ಸೂಪರ್ ಜಯಂಟ್ಸ್ ತಂಡದ ನಾಯಕ ರಿಷಭ್ ಪಂತ್ ತಮ್ಮ ತಂಡದ ಸಹ ಆಟಗಾರನಿಗೆ ವಿಶೇಷ ಸಂದೇಶ ಕಳುಹಿಸುವ ಮೂಲಕ ಶುಭ ಕೋರಿದ್ದಾರೆ.

ನಿಕೋಲಸ್ ಪೂರನ್ಗೆ ವಿಶೇಷ ಸಂದೇಶ ಕಳುಹಿಸಿದ ರಿಷಭ್ ಪಂತ್.

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಿಸಿರುವ ವೆಸ್ಟ್ ಇಂಡೀಸ್ನ ಸ್ಟಾರ್ ಆಟಗಾರ ನಿಕೋಲಸ್ ಪೂರನ್ (Nicholas Pooran) ಅವರಿಗೆ ಟೀಮ್ ಇಂಡಿಯಾದ ಆಟಗಾರ ಹಾಗೂ ಲಖನೌ ಸೂಪರ್ ಜಯಂಟ್ಸ್ ತಂಡದ ನಾಯಕ ರಿಷಭ್ ಪಂತ್ (Rishabh Pant) ವಿಶೇಷ ಸಂದೇಶದ ಮೂಲಕ ಅವರ ಮುಂದಿನ ಪಯಣಕ್ಕೆ ಶುಭ ಕೋರಿದ್ದಾರೆ. ಜೂನ್ 10 (ಮಂಗಳವಾರ) ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿರುವ ಪೂರನ್ ವಿಶ್ವದೆಲ್ಲೆಡೆ ನಡೆಯುವ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಸೇರಿದಂತೆ ಬಹುತೇಕ ಎಲ್ಲಾ ಫ್ರಾಂಚೈಸಿ ಲೀಗ್ಗಳಲ್ಲಿ ಮುಂದುವರಿಯುವುದಾಗಿ ತಿಳಿಸಿದ್ದಾರೆ.
2025ರ ಐಪಿಎಲ್ ಟೂರ್ನಿಯಲ್ಲಿ ಲಖನೌ ಸೂಪರ್ ಜಯಂಟ್ಸ್ ತಂಡದಲ್ಲಿ ರಿಷಭ್ ಪಂತ್ ಹಾಗೂ ನಿಕೋಲಸ್ ಪೂರನ್ ಅವರು ಒಟ್ಟಿಗೆ ಆಡಿದ್ದಾರೆ. ಅಲ್ಲದೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಆದ್ದರಿಂದ ನಿಕೋಲಸ್ ಪೂರನ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ ಬೆನ್ನಲ್ಲೇ ಪಂತ್ ಅವರು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಹಾಕುವ ಮೂಲಕ ಪೂರನ್ ಅವರನ್ನು ಶ್ಲಾಘಿಸಿದ್ದಾರೆ.
Nicholas Pooran: 29 ವರ್ಷಕ್ಕೆ ದಿಢೀರ್ ಕ್ರಿಕೆಟ್ ನಿವೃತ್ತಿ ಘೋಷಿಸಿದ ವಿಂಡೀಸ್ನ ಮಾಜಿ ನಾಯಕ ಪೂರನ್
ನಿಮ್ಮ ಬಗ್ಗೆ ಹೆಮ್ಮೆ ಇದೆ: ರಿಷಭ್ ಪಂತ್
"ಕ್ರಿಕೆಟ್ ಲೋಕದಲ್ಲಿ ನೀವು ನಿಮ್ಮದೇ ಆದ ಛಾಪನ್ನು ಮೂಡಿಸಿದ್ದೀರಿ. ಒಬ್ಬ ಅಪ್ಪಟ ಸಹೋದರ, ಗೆಳೆಯ ಹಾಗೂ ಸಿಡಿಲಬ್ಬರದ ಆಟಗಾರನಾಗಿದ್ದೀರಿ. ಮೈದಾನದಲ್ಲಿ ನಿಮ್ಮೊಂದಿಗೆ ಕ್ರೀಸ್ ಹಂಚಿಕೊಂಡಿದ್ದಕ್ಕೆ ಹೆಮ್ಮೆಯ ಭಾವನೆ ಮೂಡಿದೆ. ವೆಸ್ಟ್ ಇಂಡೀಸ್ ತಂಡದಲ್ಲಿ ನೀವು ಸಾಧಿಸಿರುವ ಸಾಧನೆಗೆ ನನ್ನ ತುಂಬು ಹೃದಯದ ಅಭಿನಂದನೆಗಳು. ನೀವು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಎಲ್ಲವನ್ನೂ ಸಾಧಿಸಿದ್ದೀರಿ, ನಿಮ್ಮ ಮೇಲೆ ನನಗೆ ಸದಾ ಗೌರವವಿದೆ," ಎಂದು ರಿಷಭ್ ಪಂತ್ ಹೇಳಿದ್ದಾರೆ.

2025ರ ಐಪಿಎಲ್ ಟೂರ್ನಿಯಲ್ಲಿ ಪೂರನ್ ಅಬ್ಬರ
2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಲಖನೌ ಸೂಪರ್ ಜಯಂಟ್ಸ್ ತಂಡದ ಲೀಡಿಂಗ್ ಸ್ಕೋರರ್ ಆಗಿರುವ ನಿಕೋಲಸ್ ಪೂರನ್, ಫ್ರಾಂಚೈಸಿ ಪರ 14 ಪಂದ್ಯಗಳಿಂದ 514 ರನ್ ಗಳಿಸಿದ್ದರು. ಇದರಲ್ಲಿ ಸಿಡಿಲಬ್ಬರದ ಆಟಗಾರ 40 ಸಿಕ್ಸರ್ ಸಿಡಿಸಿದ್ದರು. ಆದರೆ 2025ರ ಐಪಿಎಲ್ ಟೂರ್ನಿಯಲ್ಲಿ ದೊಡ್ಡ ಮೊತ್ತ ಗಳಿಸುವಲ್ಲಿ ಎಡವಿದ್ದ ಎಲ್ಎಸ್ಜಿ ನಾಯಕ ಪಂತ್, ತಮ್ಮ ಕೊನೆಯ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಅಜೇಯ ಶತಕ (118* ರನ್) ಶತಕ ಸಿಡಿಸಿದ್ದರು.
ಪೂರನ್ ಅಂತಾರಾಷ್ಟ್ರೀಯ ದಾಖಲೆಗಳು
ವೆಸ್ಟ್ ಇಂಡೀಸ್ ತಂಡದ ಪರ ಟೆಸ್ಟ್ ಕ್ರಿಕೆಟ್ ಆಡದ ನಿಕೋಲಸ್ ಪೂರನ್ ವೈಟ್ ಬಾಲ್ ಸ್ಪೆಷಲಿಸ್ಟ್ ಆಗಿದ್ದು, 61 ಏಕದಿನ ಪಂದ್ಯಗಳಿಂದ 1983 ರನ್ ಹಾಗೂ 106 ಟಿ20ಐ ಪಂದ್ಯಗಳಲ್ಲಿ 2275 ರನ್ ಗಳಿಸಿದ್ದಾರೆ. 2022ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಮುನ್ನಡೆಸಿದ್ದ ನಿಕೋಲಸ್ ಪೂರನ್, ಟೂರ್ನಿಯಲ್ಲಿ ತಂಡ ಕಳಪೆ ಪ್ರದರ್ಶನ ತೋರಿದ ನಂತರ ನಾಯಕತ್ವ ತ್ಯಜಿಸಿದ್ದರು. ಆದರೆ ಮುಂಬರುವ ಮೇಜರ್ ಕ್ರಿಕೆಟ್ ಲೀಗ್ನಲ್ಲಿ ಮುಂಬೈ ನ್ಯೂಯಾರ್ಕ್ ತಂಡವನ್ನು ಪೂರನ್ ಮುನ್ನಡೆಸಲಿದ್ದಾರೆ.