ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನ್ಯೂಜಿಲೆಂಡ್‌ ಟಿ20ಐ ಸರಣಿಯಲ್ಲಿನ ವೈಫಲ್ಯದ ಹೊರತಾಗಿಯೂ ಭುವನೇಶ್ವರ್‌ ಕುಮಾರ್‌ಗೆ ಮೊಹಮ್ಮದ್‌ ಕೈಫ್‌ ಬೆಂಬಲ!

ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿರುವ ಭಾರತದ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಅವರ ಬೆಂಬಲಕ್ಕೆ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ನಿಂತಿದ್ದಾರೆ. ಭುವನೇಶ್ವರ್ ಅವರ ಕಳಪೆ ಪ್ರದರ್ಶನದ ಆಧಾರದ ಮೇಲೆ ಅವರನ್ನು ತಂಡದಿಂದ ಕೈಬಿಡುವ ನಿರ್ಧಾರಕ್ಕೆ ಆಯ್ಕೆ ಸಮಿತಿ ಆತುರಪಡಬಾರದು ಎಂದು ಕೈಫ್ ಅಭಿಪ್ರಾಯಪಟ್ಟಿದ್ದಾರೆ.

ವೈಫಲ್ಯದ ಹೊರತಾಗಿಯೂ ಭುವನೇಶ್ವರ್‌ ಕುಮಾರ್‌ಗೆ ಕೈಫ್‌ ಬೆಂಬಲ!

ಭುವನೇಶ್ವರ್‌ ಕುಮಾರ್‌ಗೆ ಬೆಂಬಲ ವ್ಯಕ್ತಪಡಿಸಿದ ಮೊಹಮ್ಮದ್‌ ಕೈಫ್‌. -

Profile
Ramesh Kote Nov 4, 2026 6:57 PM

ನವದೆಹಲಿ: ಟೀಮ್‌ ಇಂಡಿಯಾದ ಅನುಭವಿ ವೇಗದ ಬೌಲರ್ ಭುವನೇಶ್ವರ್ ಕುಮಾರ್ (Bhuvneshwar Kumar) ನ್ಯೂಜಿಲೆಂಡ್ ವಿರುದ್ಧದ ಟಿ20ಐ ಸರಣಿಯಲ್ಲಿ (IND vs NZ) ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ನಾಲ್ಕು ಪಂದ್ಯಗಳಲ್ಲಿ ಕೇವಲ ಒಂದು ವಿಕೆಟ್ ಪಡೆದಿರುವ ಅವರ ಭವಿಷ್ಯದ ಬಗ್ಗೆ ಇದೀಗ ಚರ್ಚೆಗಳು ಆರಂಭವಾಗಿವೆ. ಇದರ ನಡುವೆ ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್, (Mohammad Kaif) ಭುವನೇಶ್ವರ್ ಕುಮಾರ್‌ ಅವರ ಬೆಂಬಲಕ್ಕೆ ನಿಂತಿದ್ದಾರೆ.

ಭುವನೇಶ್ವರ್ ಅವರನ್ನು ತಂಡದಿಂದ ಕೈಬಿಡುವ ಮುನ್ನ ಇನ್ನೂ ಒಂದು ಅಥವಾ ಎರಡು ಸರಣಿಗಳಲ್ಲಿ ಅವಕಾಶ ನೀಡಬೇಕು. ಬಳಿಕವಷ್ಟೇ ಆಯ್ಕೆ ಸಮಿತಿ ಅವರ ಭವಿಷ್ಯದ ಬಗ್ಗೆ ನಿರ್ಧಾರ ಕೈಗೊಳ್ಳಬೇಕು ಎಂದು ಕೈಫ್ ಅಭಿಪ್ರಾಯಪಟ್ಟಿದ್ದಾರೆ. ಸುಮಾರು ನಾಲ್ಕು ವರ್ಷಗಳ ಬಳಿಕ ಭಾರತ ತಂಡಕ್ಕೆ ಮರಳಿದ್ದ ಭುವನೇಶ್ವರ್ ಕುಮಾರ್ ಅವರಿಗೆ ನ್ಯೂಜಿಲೆಂಡ್ ವಿರುದ್ಧದ ಸರಣಿ ನಿರೀಕ್ಷಿತ ರೀತಿಯಲ್ಲಿ ಸಾಗಲಿಲ್ಲ. ಐದು ಪಂದ್ಯಗಳ ಟಿ20 ಸರಣಿಯಲ್ಲಿ ನಾಲ್ಕು ಪಂದ್ಯಗಳನ್ನು ಆಡಿದ ಅವರು ಕೇವಲ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ನಾಲ್ಕನೇ ಟಿ20ಐ ಪಂದ್ಯದಿಂದ ಕೈಬಿಡಲಾಗಿದ್ದ ಭುವನೇಶ್ವರ್ ಅವರನ್ನು ಅಂತಿಮ ಪಂದ್ಯಕ್ಕೆ ಮತ್ತೆ ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಆದರೆ ಆ ಪಂದ್ಯದಲ್ಲೂ ದುಬಾರಿಯಾಗಿದ್ದರು.

IND vs NZ 1st ODI: ಅರ್ಷದೀಪ್‌ ಸಿಂಗ್‌ ಮಾರಕ ವೇಗಕ್ಕೆ 185ಕ್ಕೆ ನ್ಯೂಜಿಲೆಂಡ್‌ ಆಲ್‌ಔಟ್‌!

ಭುವನೇಶ್ವರ್ ಪರ ಮೊಹಮ್ಮದ್ ಕೈಫ್ ಬ್ಯಾಟಿಂಗ್

ಭುವನೇಶ್ವರ್ ಅವರ ಕಳಪೆ ಪ್ರದರ್ಶನದ ನಡುವೆಯೂ ಮೊಹಮ್ಮದ್ ಕೈಫ್ ಅವರಿಗೆ ಮತ್ತಷ್ಟು ಅವಕಾಶ ನೀಡಬೇಕೆಂದು ಹೇಳಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಕೈಫ್, ನಾಲ್ಕು ವರ್ಷಗಳ ಬಳಿಕ ಭಾರತ ತಂಡಕ್ಕೆ ಮರಳಿರುವ ಆಟಗಾರನ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

"ನನ್ನನ್ನು ಕೇಳಿದರೆ, ಭುವನೇಶ್ವರ್ ಕುಮಾರ್ ಬಗ್ಗೆ ನನಗೆ ಸ್ವಲ್ಪ ಅನುಕಂಪವಿದೆ. ಏಕೆಂದರೆ ಅವರು ನಾಲ್ಕು ವರ್ಷಗಳ ನಂತರ ಭಾರತ ತಂಡಕ್ಕೆ ಮರಳಿದ್ದಾರೆ. ಬಹಳ ದೀರ್ಘ ಸಮಯದ ಬಳಿಕ ಮತ್ತೆ ಭಾರತದ ಜೆರ್ಸಿ ಧರಿಸಿ ಮೈದಾನಕ್ಕೆ ಇಳಿದಿದ್ದಾರೆ. ಅವರು ಒತ್ತಡ ಮತ್ತು ಆತಂಕಕ್ಕೆ ಒಳಗಾಗಿದ್ದಿರಬಹುದು. ಅದನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ" ಎಂದು ಕೈಫ್ ಹೇಳಿದ್ದಾರೆ.

"ಭುವನೇಶ್ವರ್ ಕುಮಾರ್ ಮಾತ್ರ ದುಬಾರಿ ಬೌಲಿಂಗ್ ಮಾಡಿಲ್ಲ. ಪ್ರತಿಯೊಬ್ಬ ಬೌಲರ್ ಕೂಡ ರನ್ ಬಿಟ್ಟುಕೊಡುತ್ತಿದ್ದಾರೆ. ನನ್ನ ಪ್ರಕಾರ, ಭುವನೇಶ್ವರ್ ಅವರನ್ನು ಇನ್ನೂ ಒಂದು ಅಥವಾ ಎರಡು ಸರಣಿಗಳವರೆಗೆ ಗಮನಿಸಬೇಕು. ನಂತರ ಅವರ ಬಗ್ಗೆ ನಿರ್ಧಾರ ಕೈಗೊಂಡು ಮುಂದಿನ ಹೆಜ್ಜೆ ಇಡಬೇಕು" ಎಂದು ಮೊಹಮ್ಮದ್ ಕೈಫ್ ಅಭಿಪ್ರಾಯಪಟ್ಟಿದ್ದಾರೆ.

IND vs NZ: 4 ವಿಕೆಟ್‌ನೊಂದಿಗೆ ಜಾವಗಲ್‌ ಶ್ರೀನಾಥ್‌ ಒಳಗೊಂಡ ಎಲೈಟ್‌ ಲಿಸ್ಟ್‌ ಸೇರಿದ ಅರ್ಷದೀಪ್‌ ಸಿಂಗ್‌!

ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಆಡಲಿರುವ ಭುವನೇಶ್ವರ್

ಭಾರತ ತಂಡದ ಮುಂದಿನ ಟಿ20 ಸರಣಿ ಡಿಸೆಂಬರ್‌ನಲ್ಲಿ ಶ್ರೀಲಂಕಾ ವಿರುದ್ಧ ನಡೆಯಲಿದೆ. ಅದಕ್ಕೂ ಮೊದಲು ಭುವನೇಶ್ವರ್ ಕುಮಾರ್ ದೇಶಿ ಕ್ರಿಕೆಟ್‌ನಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಅವಕಾಶ ಹೊಂದಿದ್ದಾರೆ. ನವೆಂಬರ್ 16ರಿಂದ ಆರಂಭವಾಗಲಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಉತ್ತರ ಪ್ರದೇಶ ತಂಡದ ಪರ ಭುವನೇಶ್ವರ್ ಕಣಕ್ಕಿಳಿಯಲಿದ್ದಾರೆ. ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಮತ್ತೆ ಲಯ ಕಂಡುಕೊಳ್ಳುವುದು ಅವರ ಮುಂದಿರುವ ಪ್ರಮುಖ ಗುರಿಯಾಗಿದೆ.

ಭಾರತ 3-2 ಅಂತರದಲ್ಲಿ ಸರಣಿ ಗೆಲುವು

ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ಮೊದಲ ಮೂರು ಪಂದ್ಯಗಳನ್ನು ಸತತವಾಗಿ ಗೆದ್ದು ಸರಣಿಯನ್ನು ಮುಂಚಿತವಾಗಿಯೇ ವಶಪಡಿಸಿಕೊಂಡಿತ್ತು. ಆದರೆ ಕೊನೆಯ ಎರಡು ಪಂದ್ಯಗಳಲ್ಲಿ ನ್ಯೂಜಿಲೆಂಡ್ ಗೆಲುವು ಸಾಧಿಸಿತು. ಶ್ರೇಯಸ್ ಅಯ್ಯರ್ ನಾಯಕತ್ವದ ಭಾರತ ತಂಡ ಸರಣಿಯನ್ನು 3-2 ಅಂತರದಲ್ಲಿ ಗೆದ್ದುಕೊಂಡಿತು. ಇಶಾನ್ ಕಿಶನ್ ಅನುಪಸ್ಥಿತಿಯಲ್ಲಿ ವೈಭವ್ ಸೂರ್ಯವಂಶಿ ಎರಡು ಪಂದ್ಯಗಳಲ್ಲಿ ಮಾತ್ರ ಆಡುವ ಅವಕಾಶ ಪಡೆದಿದ್ದರು.