Tri-series 2026: ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಇತಿಹಾಸ ನಿರ್ಮಿಸಿದ ನಮೀಬಿಯಾ!
ನಮೀಬಿಯಾ, ಜಿಂಬಾಬ್ವೆ ಹಾಗೂ ದಕ್ಷಿಣ ಆಫ್ರಿಕಾ ನಡುವಣ ತ್ರಿಕೋನ ಸರಣಿಯಲ್ಲಿ ಅಚ್ಚರಿಯ ಫಲಿತಾಂಶ ಮೂಡಿಬಂದಿದೆ. ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದ ನಮೀಬಿಯಾ ಇತಿಹಾಸವನ್ನು ಬರೆದಿದೆ. ಹರಿಣ ಪಡೆಯ ಎದುರು ನಮೀಬಿಯಾ ತಂಡಕ್ಕೆ ಇದು ಎರಡನೇ ಜಯವಾಗಿದೆ. ಇದಕ್ಕೂ ಮುನ್ನ ಹರಿಣ ಪಡೆಯನ್ನು 2025ರಲ್ಲಿ ನಮೀಬಿಯಾ ಟಿ20ಐ ಪಂದ್ಯದಲ್ಲಿ ಸೋಲಿಸಿತ್ತು.
ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದ ನಮೀಬಿಯಾ. -
ನವದೆಹಲಿ: ನಮೀಬಿಯಾ, ಜಿಂಬಾಬ್ವೆ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಇದೇ ಮೊದಲ ಬಾರಿ ತ್ರಿಕೋನ ಸರಣಿಯಲ್ಲಿ (Tri Series 2026) ಕಾದಾಟ ನಡೆಸುತ್ತಿವೆ. ಆದರೆ, ಮೊದಲನೇ ಪಂದ್ಯದಲ್ಲಿ (SA vs NAM) ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸುವ ಮೂಲಕ ನಮೀಬಿಯಾ ತಂಡ ಐತಿಹಾಸಿಕ ದಾಖಲೆಯನ್ನು ಬರೆದಿದೆ. ನಮೀಬಿಯಾ ತಂಡ 18 ರನ್‌ಗಳಿಂದ ಹರಿಣ ಪಡೆಯನ್ನು ಮಣಿಸಿ ತ್ರಿಕೋನ ಸರಣಿಯಲ್ಲಿ ಶುಭಾರಂಭ ಮಾಡಿದೆ.
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ನಮೀಬಿಯಾ ತಂಡ ಸೋಲಿಸಿರುವುದು ಇದು ಎರಡನೇ ಬಾರಿ. ಮೊದಲನೇ ಬಾರಿ 2025ರಲ್ಲಿ ನಡೆದಿದ್ದ ತ್ರಿಕೋನ ಸರಣಿಯಲ್ಲಿ ಹರಿಣ ಪಡೆಯನ್ನು ನಮೀಬಿಯಾ ಕೇವಲ 4 ರನ್‌ಗಳಿಂದ ರೋಚಕ ಗೆಲುವು ಸಾಧಿಸಿತ್ತು. ಆ ಮೂಲಕ ದಕ್ಷಿಣ ಆಫ್ರಿಕಾ ತಂಡವನ್ನು ಎರಡು ಬಾರಿ ಮಣಿಸಿದ ಮೊದಲ ಅಸೋಸಿಯೇಟ್ ತಂಡ ಎಂಬ ಖ್ಯಾತಿಗೆ ನಮೀಬಿಯಾ ಭಾಜನವಾಗಿದೆ.
ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿದ ಮತ್ತೊಂದು ಅಸೋಸಿಯೇಟ್ ತಂಡ ಎಂದರೆ ಅದು ನೆದರ್ಲೆಂಡ್ಸ್. 2022ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹರಿಣ ಪಡೆಯನ್ನು ಡಚ್ಚರು ಮಣಿಸಿದ್ದರು. ಆ ಮೂಲಕ ಐತಿಹಾಸಿಕ ದಾಖಲೆಯನ್ನು ಬರೆದಿತ್ತು.
ಮಹಿಳಾ ಟಿ20 ಏಷ್ಯಾ ಕಪ್; ಥಾಯ್ಲೆಂಡ್ ಸವಾಲಿಗೆ ಭಾರತ ಸಿದ್ದ
ಇನ್ನು ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟ್ ಮಾಡಿದ ನಮೀಬಿಯಾ ಉತ್ತಮ ಆರಂಭ ಪಡೆಯಿತು. ಆರಂಭಿಕರಾದ ಜಾನ್ ಫ್ರೈಲಿಂಕ್ ಮತ್ತು ಲೌರೆನ್ ಸ್ಟೀನ್‌ಕ್ಯಾಂಪ್ ಮೊದಲ ವಿಕೆಟ್‌ಗೆ 84 ರನ್‌ಗಳ ಜೊತೆಯಾಟ ನೀಡಿದರು. ಸ್ಟೀನ್‌ಕ್ಯಾಂಪ್ 29 ಎಸೆತಗಳಲ್ಲಿ 41 ರನ್ ಗಳಿಸಿ ಔಟಾದರೆ, ಫ್ರೈಲಿಂಕ್ ತಮ್ಮ ಆಕ್ರಮಣಕಾರಿ ಆಟ ಮುಂದುವರಿಸಿ 38 ಎಸೆತಗಳಲ್ಲಿ 60 ರನ್ ಸಿಡಿಸಿದರು. ಅವರ ಇನಿಂಗ್ಸ್‌ನಲ್ಲಿ ಆರು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳು ಸೇರಿದ್ದವು.
ಮಧ್ಯಮ ಓವರ್‌ಗಳಲ್ಲಿ ದಕ್ಷಿಣ ಆಫ್ರಿಕಾ ತಿರುಗೇಟು ನೀಡಿತು. ಪ್ರೆನೆಲನ್ ಸುಬ್ರಾಯೆನ್ ಮೂರು ವಿಕೆಟ್ ಕಬಳಿಸಿದರೆ, ಬಿಯೋರ್ನ್ ಫಾರ್ಟ್ಯೂನ್ ಎರಡು ವಿಕೆಟ್ ಪಡೆದರು. ಆದರೂ ನಮೀಬಿಯಾ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 163 ರನ್ ಗಳಿಸಿ, ದಕ್ಷಿಣ ಆಫ್ರಿಕಾಗೆ 164 ರನ್‌ಗಳ ಗುರಿ ನೀಡಿತು.
ನ್ಯೂಜಿಲೆಂಡ್ ಪ್ರವಾಸಕ್ಕೆ ಮುಂದಾಗುತ್ತಿದ್ದಂತೆ ಔಕಿಬ್ ನಬಿಗೆ ಕೌಂಟಿ ಆಡಲು ಬಿಸಿಸಿಐ ಸೂಚನೆ
ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾಗೆ ನಮೀಬಿಯಾ ಬೌಲರ್‌ಗಳು ಆರಂಭದಲ್ಲೇ ಆಘಾತ ನೀಡಿದರು. ತಂಡದ ಪ್ರಮುಖ ಬ್ಯಾಟರ್‌ಗಳನ್ನು ಬೇಗನೆ ಪೆವಿಲಿಯನ್‌ಗೆ ಕಳುಹಿಸಿದರು. ಬಳಿಕ ಡೆವಾಲ್ಡ್ ಬ್ರೆವಿಸ್ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿ 50 ಎಸೆತಗಳಲ್ಲಿ 75 ರನ್ ಗಳಿಸಿದರು. ಅವರ ಇನಿಂಗ್ಸ್‌ನಲ್ಲಿ ನಾಲ್ಕು ಬೌಂಡರಿ ಮತ್ತು ಐದು ಸಿಕ್ಸರ್‌ಗಳಿದ್ದವು. ಇದರಿಂದ ದಕ್ಷಿಣ ಆಫ್ರಿಕಾದ ಗೆಲುವಿನ ಆಸೆ ಜೀವಂತವಾಗಿತ್ತು.
ಆದರೆ 18ನೇ ಓವರ್‌ನಲ್ಲಿ ಬ್ರೆವಿಸ್ ಔಟಾಗುತ್ತಿದ್ದಂತೆ ದಕ್ಷಿಣ ಆಫ್ರಿಕಾದ ಗೆಲುವಿನ ನಿರೀಕ್ಷೆ ಬಹುತೇಕ ಅಂತ್ಯಗೊಂಡಿತು. ಡುವಾನ್ ಯಾನ್ಸೆನ್ 17 ಎಸೆತಗಳಲ್ಲಿ ಅಜೇಯ 25 ರನ್ ಗಳಿಸಿದರೂ, ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 145 ರನ್‌ಗಳಿಗೆ ಸೀಮಿತವಾಯಿತು. ಹೀಗಾಗಿ ನಮೀಬಿಯಾ 18 ರನ್‌ಗಳ ಭರ್ಜರಿ ಜಯ ದಾಖಲಿಸಿತು. ಬೌಲಿಂಗ್‌ನಲ್ಲಿ ರೂಬೆನ್ ಟ್ರಂಪೆಲ್‌ಮನ್ ಮಿಂಚಿದರು. ಅವರು ನಾಲ್ಕು ಓವರ್‌ಗಳಲ್ಲಿ 24 ರನ್ ನೀಡಿ ಮೂರು ವಿಕೆಟ್ ಪಡೆದರು. ಜೆಜೆ ಸ್ಮಿತ್ ಕೂಡ ನಾಲ್ಕು ಓವರ್‌ಗಳಲ್ಲಿ 31 ರನ್ ನೀಡಿ ಮೂರು ವಿಕೆಟ್ ಕಬಳಿಸಿದರು.