NZ vs SA: ಫಿನ್ ಆಲೆನ್ ದಾಖಲೆಯ ಶತಕ, ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು ಟಿ20 ವಿಶ್ವಕಪ್ ಫೈನಲ್‌ಗೇರಿದ ನ್ಯೂಜಿಲೆಂಡ್!
NZ vs SA Match Highlights: ಕೋಲ್ ಮೆಕಾಂಜಿ ಮಾರಕ ಬೌಲಿಂಗ್ ಹಾಗೂ ಫಿನ್ ಆಲೆನ್ ಅವರ ಸ್ಪೋಟಕ ಶತಕದ ಬಲದಿಂದ ನ್ಯೂಜಿಲೆಂಡ್ ತಂಡ, 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 9 ವಿಕೆಟ್‌ಗಳಿಂದ ಮಣಿಸಿತು. ಆ ಮೂಲಕ ಕಿವೀಸ್ ಫೈನಲ್‌ಗೆ ಪ್ರವೇಶ ಮಾಡಿತು.
ದಕ್ಷಿಣ ಆಫ್ರಿಕಾ ವಿರುದ್ಧ ಶತಕ ಸಿಡಿಸಿದ ಫಿನ್ ಆಲೆನ್. -
ಕೋಲ್ಕತಾ: ಬೌಲರ್‌ಗಳ ಪರಿಣಾಮಕಾರಿ ಬೌಲಿಂಗ್ ಹಾಗೂ ಫಿನ್ ಆಲೆನ್ (Finn Allen) ಸ್ಟೋಟಕ ಶತಕದ ಬಲದಿಂದ ನ್ಯೂಜಿಲೆಂಡ್ ತಂಡ, 2026ರ ಐಸಿಸಿ ಟಿ20 ವಿಶ್ವಕಪ್ (T20 World Cup 2026) ಟೂರ್ನಿಯ ಮೊದಲನೇ ಸೆಮಿಫೈನಲ್ ಪಂದ್ಯದಲ್ಲಿ (NZ vs SA) ದಕ್ಷಿಣ ಆಫ್ರಿಕಾ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಗೆಲುವು ಪಡೆದಿದೆ. ಆ ಮೂಲಕ ಮಿಚೆಲ್ ಸ್ಯಾಂಟ್ನರ್ ನಾಯಕತ್ವದ ಕಿವೀಸ್ ತಂಡ ಫೈನಲ್‌ಗೆ ಪ್ರವೇಶ ಮಾಡಿದೆ. ಇನ್ನು 2024ರಲ್ಲಿ ಕಪ್ ಗೆಲ್ಲುವ ಅವಕಾಶ ಕಳೆದುಕೊಂಡಿದ್ದ ಹರಿಣ ಪಡೆಯ ಚೊಚ್ಚಲ ಚುಟಕು ವಿಶ್ವಕಪ್ ಗೆಲ್ಲುವ ಕನಸು ಭಗ್ನವಾಯಿತು. ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ಶತಕ ಸಿಡಿಸಿದ ಆರಂಭಿಕ ಫಿನ್ ಆಲೆನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಬುಧವಾರ ಇಲ್ಲಿನ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ನೀಡಿದ 170 ರನ್‌ಗಳ ಗುರಿಯನ್ನು ಹಿಂಬಾಲಿಸಿದ ನ್ಯೂಜಿಲೆಂಡ್ ತಂಡ, ಫಿನ್ ಆಲೆನ್ ಶತಕ ಹಾಗೂ ಟಿಮ್ ಸೈಫರ್ಟ್ ಅರ್ಧಶತಕದ ಬಲದಿಂದ, 12.5 ಓವರ್‌ಗಳಿಗೆ ಒಂದು ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿ ಗೆದ್ದು ಬೀಗಿತು. ಆ ಮೂಲಕ ತಮ್ಮ ಚೊಚ್ಚಲ ಟಿ20 ವಿಶ್ವಕಪ್ ಗೆಲ್ಲುವ ಆಸೆಯನ್ನು ಜೀವಂತವಾಗಿರಿಸಿಕೊಂಡಿತು. ಇನ್ನು ದಕ್ಷಿಣ ಆಫ್ರಿಕಾ ತಂಡದ ಪರ ಕಗಿಸೊ ರಬಾಡ ಒಂದು ವಿಕೆಟ್ ಕಿತ್ತಿದ್ದು ಬಿಟ್ಟರೆ ಇನ್ನುಳಿದ ಬೌಲರ್‌ಗಳು ವಿಪಲರಾದರು.
T20 World Cup: ಪಾಕಿಸ್ತಾನ ಹೆಡ್ ಕೋಚ್ ಮೈಕ್ ಹೇಸನ್ ವಿರುದ್ಧ ಪಿಸಿಬಿಗೆ ದೂರು ನೀಡಿದ ಆಟಗಾರರು!
ಫಿನ್ ಆಲೆನ್ ಸ್ಪೋಟಕ ಶತಕ
ಕಿವೀಸ್ ಪರ ಇನಿಂಗ್ಸ್ ಆರಂಭಿಸಿದ ಫಿನ್ ಆಲೆನ್ ಹಾಗೂ ಟಿಮ್ ಸೈಫರ್ಟ್ ಜೋಡಿ ಮುರಿಯದ ಮೊದಲನೇ ವಿಕೆಟ್‌ಗೆ 117 ರನ್‌ಗಳ ಜೊತೆಯಾಟವನ್ನು ಆಡಿತು. ಆ ಮೂಲಕ ತಂಡಕ್ಕೆ ಭರ್ಜರಿ ಅಡಿಪಾಯವನ್ನು ಹಾಕಿತು. ಸ್ಪೋಟಕ ಬ್ಯಾಟ್ ಮಾಡಿದ ಸೈಫರ್ಟ್, ಕೇವಲ 33 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 7 ಬೌಂಡರಿಗಳೊಂದಿಗೆ 58 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಆದರೆ, ಒಂದು ತುದಿಯಲ್ಲಿ ನಿಂತು ಕೊನೆಯವರೆಗೂ ಬ್ಯಾಟ್ ಮಾಡಿದ ಫಿನ್ ಆಲೆನ್ ಅವರು, ಕೇವಲ 33 ಎಸೆತಗಳಲ್ಲಿ 8 ಸಿಕ್ಸರ್ ಹಾಗೂ 10 ಬೌಂಡರಿಗಳೊಂದಿಗೆ ಅಜೇಯ 100 ರನ್ ಸಿಡಿಸಿದರು. ಕೊನೆಯಲ್ಲಿ ಗೆಲ್ಲಲು ಒಂದು ರನ್ ಹಾಗೂ ಆಲೆನ್ ಶತಕವನ್ನು ಪೂರ್ಣಗೊಳಿಸಲು 4 ರನ್ ಅಗತ್ಯವಿತ್ತು. ಈ ವೇಳೆ ಇವರು ಬೌಂಡರಿ ಬಾರಿಸಿ ಶತಕವನ್ನು ಪೂರ್ಣಗೊಳಿಸಿದರು. ಇದು ಪುರುಷರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ದಾಖಲಾದ ಅತ್ಯಂತ ವೇಗದ ಶತಕವಾಗಿದೆ.
A Finn Allen special to seal a spot in the ICC Men's #T20WorldCup final! 🚀
— Star Sports (@StarSportsIndia) March 4, 2026
Remarkable team. Remarkable performance. 👏
Watch them next 👉 ICC Men's #T20WorldCup | FINAL | SUNDAY, 8th MARCH pic.twitter.com/4FLcwM2pDB
169 ರನ್ ಕಲೆ ಹಾಕಿದ ದಕ್ಷಿಣ ಆಫ್ರಿಕಾ
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾದ ದಕ್ಷಿಣ ಆಫ್ರಿಕಾ ತಂಡ, ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ಹೊರತಾಗಿಯೂ ಮಾರ್ಕೊ ಯೆನ್ಸನ್ ಅವರ ನಿರ್ಣಾಯಕ ಅರ್ಧಶತಕದ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 8 ವಿಕೆಟ್‌ಗಳ ನಷ್ಟಕ್ಕೆ 169 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ನ್ಯೂಜಿಲೆಂಡ್ ತಂಡಕ್ಕೆ 170 ರನ್‌ಗಳ ಸ್ಪರ್ಧಾತ್ಮಕ ಗುರಿಯನ್ನು ನೀಡಿತ್ತು.
A record-breaking knock from Finn Allen took New Zealand into the #T20WorldCup final🙌
— ICC (@ICC) March 4, 2026
He wins the @aramco POTM🏅
📝: https://t.co/nv2bu4uGh7 pic.twitter.com/SnTAU9mWX4
ಆರಂಭಿಕ ಆಘಾತ ಅನುಭವಿಸಿದ್ದ ಹರಿಣ ಪಡೆ
ದಕ್ಷಿಣ ಆಫ್ರಿಕಾ ತಂಡಕ್ಕೆ ಕೋಲ್ ಮೆಕಾಂಜಿ ಆರಂಭಿಕ ಆಘಾತ ನೀಡಿದರು. ಅವರು ಕೀ ಬ್ಯಾಟ್ಸ್‌ಮನ್‌ಗಳಾದ ಕ್ವಿಂಟನ್ ಡಿ ಕಾಕ್ ಹಾಗೂ ರಯಾನ್ ರಿಕೆಲ್ಟನ್ ಅವರನ್ನು ತಂಡದ ಮೊತ್ತ 12 ರನ್ ಇರುವಾಗಲೇ ಔಟ್ ಮಾಡಿದರು. ನಂತರ ರಚಿನ್ ರವೀಂದ್ರ ತಮ್ಮ ಸ್ಪಿನ್ ಮೋಡಿಯಿಂದ ಏಡೆನ್ ಮಾರ್ಕ್ರಮ್ ಮತ್ತು ಡೇವಿಡ್ ಮಿಲ್ಲರ್ ಅವರಿಗೆ ಪೆವಿಲಿಯನ್ ಹಾದಿ ತೋರಿಸಿದರು. ಆ ಮೂಲಕ ಹರಿಣ ಪಡೆ ಕೇವಲ 77 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕಂಡು ಸಂಕಷ್ಟಕ್ಕೆ ಸಿಲುಕಿತ್ತು.
Marco Jansen leads South Africa's fightback with a fifty against New Zealand 💪
— ICC (@ICC) March 4, 2026
It is one of the @marriottbonvoy Milestones of the #T20WorldCup 2026.
📝: https://t.co/nv2bu4uGh7 pic.twitter.com/xo8rGt5Gt2
ಮಾರ್ಕೊ ಯೆನ್ಸನ್ ನಿರ್ಣಾಯಕ ಅರ್ಧಶತಕ
ಡೆವಾಲ್ಡ್ ಬ್ರೆವಿಸ್ (34 ರನ್) ಹಾಗೂ ಟ್ರಿಸ್ಟನ್ ಸ್ಟಬ್ಸ್ (29) ಅವರು ಕೆಲ ಕಾಲ ಕ್ರೀಸ್‌ನಲ್ಲಿ ಉಳಿದು ಪ್ರತಿರೋಧ ತೋರಿದರು. ಆ ಮೂಲಕ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದ್ದರು. ಆದರೆ,ಕೊನೆಯಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದ ಮಾರ್ಕೊ ಯೆನ್ಸನ್ ಅವರು, 30 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 2 ಬೌಂಡರಿಗಳೊಂದಿಗೆ ಅರ್ಧಶತಕವನ್ನು ಸಿಡಿಸಿದರು. ಅಲ್ಲದೆ, ಟ್ರಿಸ್ಟನ್ ಸ್ಟಬ್ಸ್ ಜೊತೆ 73 ರನ್‌ಗಳ ನಿರ್ಣಾಯಕ ಜೊತೆಯಾಟವನ್ನು ಆಡಿದ್ದರು. ಇವರ ಸಹಾಯದಿಂದ ದಕ್ಷಿಣ ಆಫ್ರಿಕಾ ಸ್ಪರ್ಧಾತ್ಮಕ ಮೊತ್ತವನ್ನು ಕಲೆ ಹಾಕಲು ಸಾಧ್ಯವಾಗಿತ್ತು.
ನ್ಯೂಜಿಲೆಂಡ್ ತಂಡದ ಪರ ಕೋಲ್ ಮೆಕಾಂಜಿ, ರಚಿನ್ ರವೀಂದ್ರ ಹಾಗೂ ಮ್ಯಾಟ್ ಹೆನ್ರಿ ತಲಾ ಎರಡೆರಡು ವಿಕೆಟ್‌ಗಳನ್ನು ಕಬಳಿಸಿದರು.