2026ರ ಟಿ20 ವಿಶ್ವಕಪ್ ಭಾರತ ತಂಡದಲ್ಲಿ ಈ ಆಟಗಾರನಿಗೆ ಸ್ಥಾನ ನೀಡಬೇಕಿತ್ತೆಂದ ಆಕಾಶ್ ಚೋಪ್ರಾ!
Aakash Chopra backs Yashasvi Jaiswal: 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್‌ಗೂ ಸ್ಥಾನ ನೀಡಬೇಕಿತ್ತು ಎಂದು ಟೆಸ್ಟ್ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಆಕಾಶ್ ಚೋಪ್ರಾ ತಿಳಿಸಿದ್ದಾರೆ. ಅಂದ ಹಾಗೆ ಜೈಸ್ವಾಲ್ ಹಾಗೂ ಶುಭಮನ್ ಗಿಲ್ ಅವರನ್ನು ಈ ತಂಡಕ್ಕೆ ಆಯ್ಕೆ ಮಾಡಲಾಗಿಲ್ಲ ಹಾಗೂ ಇವರ ಬದಲು ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಆರಂಭಿಕರಾಗಿ ಸ್ಥಾನ ಪಡೆದಿದ್ದಾರೆ.
ಯಶಸ್ವಿ ಜೈಸ್ವಾಲ್ ಪರ ಬ್ಯಾಟ್ ಬೀಸಿದ ಆಕಾಶ್ ಚೋಪ್ರಾ. -
ನವದೆಹಲಿ: ಕಳೆದ 2023ರಿಂದ ಇಲ್ಲಿಯವರೆಗೂ ಮೂರೂ ಸ್ವರೂಪದಲ್ಲಿ ಸ್ಥಿರ ಪ್ರದರ್ಶನವನ್ನು ತೋರುತ್ತಾ ಬಂದಿರುವ ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ (Yashasvijaiswal) ಅವರಿಗೆ 2026ರ ಐಸಿಸಿ ಟಿ20 ವಿಶ್ವಕಪ್ (ICC T20 World Cup 2026) ಟೂರ್ನಿಯ ಭಾರತ ತಂಡದಲ್ಲಿ ಸ್ಥಾನ ನೀಡದ ಬಗ್ಗೆ ಟೆಸ್ಟ್ ಮಾಜಿ ಬ್ಯಾಟ್ಸ್‌ಮನ್ ಆಕಾಶ್ ಚೋಪ್ರಾ (Aakash Chopra) ಪ್ರಶ್ನೆ ಮಾಡಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಟಿ20ಐ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಎಡಗೈ ಬ್ಯಾಟ್ಸ್‌ಮನ್ ಜೈಸ್ವಾಲ್‌ಗೆ ಚುಟುಕು ತಂಡದಲ್ಲಿ ಇನಿಂಗ್ಸ್ ಆರಂಭಿಸಲು ಅವಕಾಶ ನೀಡಬಹುದೆಂದು ಆಕಾಶ್ ಚೋಪ್ರಾ ಭಾವಿಸಿದ್ದರು. ಭಾರತ ತಂಡದ ಆಯ್ಕೆಯಲ್ಲಿ ಉಂಟಾಗಿರುವ ಸವಾಲುಗಳನ್ನು ಇವರು ಇಲ್ಲಿ ಉಲ್ಲೇಖಿಸಿದ್ದಾರೆ.
ಯಶಸ್ವಿ ಜೈಸ್ವಾಲ್ ಅವರು 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನು ಗೆದ್ದಿದ್ದ ಭಾರತ ತಂಡದಲ್ಲಿಯೂ ಇದ್ದರು. ಆದರೆ, ಅವರಿಗೆ ಆಡಲು ಒಂದೇ ಒಂದು ಪಂದ್ಯದಲ್ಲಿಯೂ ಅವಕಾಶ ಸಿಕ್ಕಿರಲಿಲ್ಲ. 2024ರ ಟಿ20 ವಿಶ್ವಕಪ್‌ಗೂ ಮುನ್ನ ಯಶಸ್ವಿ ಜೈಸ್ವಾಲ್ ಟಿ20ಐ ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ್ದರು. ಆ ಮೂಲಕ ಭಾರತದ ಪರ ಎಲ್ಲಾ ಸ್ವರೂಪದಲ್ಲಿ ಶತಕ ಸಿಡಿಸಿದ್ದ ಬ್ಯಾಟ್ಸ್‌ಮನ್‌ಗಳ ಸಾಲಿಗೆ ಸೇರಿದ್ದರು. ಇಲ್ಲಿಯವರೆಗೂ ಯಶಸ್ವಿ ಜೈಸ್ವಾಲ್ ಅವರು 23 ಟಿ20ಐ ಪಂದ್ಯಗಳಿಂದ 36.15ರ ಸರಾಸರಿ ಹಾಗೂ 164.31ರ ಸ್ಟ್ರೈಕ್ ರೇಟ್‌ನಲ್ಲಿ 723 ರನ್‌ಗಳನ್ನು ಕಲೆ ಹಾಕಿದ್ದಾರೆ.
K Gowtham: ಕನ್ನಡಿಗ ಕೃಷ್ಣಪ್ಪ ಗೌತಮ್ ಎಲ್ಲಾ ಸ್ವರೂಪದ ಕ್ರಿಕೆಟ್‌ಗೆ ಗುಡ್‌ಬೈ!
ಯಶಸ್ವಿ ಜೈಸ್ವಾಲ್ ಬಗ್ಗೆ ಆಕಾಶ್ ಚೋಪ್ರಾ ಹೇಳಿದ್ದೇನು?
"ಯಶಸ್ವಿ ಜೈಸ್ವಾಲ್ ಅವರು ಆಡುವ ಹಾದಿಯನ್ನು ನೋಡಿದಾಗ, ಅವರು ಮೊದಲು ತಂಡದಲ್ಲಿ ಇರಬೇಕು ಹಾಗೂ ಆಡಬೇಕು. 2024ರ ಐಸಿಸಿ ಟಿ20 ವಿಶ್ವಕಪ್ ಭಾರತ ತಂಡದಲ್ಲಿಯೂ ಅವರು ಇದ್ದರು. ಆದರೆ, ಅವರಿಗೆ ಆಡಲು ಅವಕಾಶ ಸಿಕ್ಕಿರಲಿಲ್ಲ ಏಕೆಂದರೆ ತಂಡದಲ್ಲಿ ಸ್ಥಾನ ಇರಲಿಲ್ಲ. ಈ ಟೂರ್ನಿಗೂ ಮುನ್ನ ಅವರು ಶತಕವನ್ನು ಕೂಡ ಬಾರಿಸಿದ್ದರು. ಆ ಮೂಲಕ ಎಲ್ಲಾ ಸ್ವರೂಪದಲ್ಲಿ ಆಡಿದ ಆರು ಮಂದಿ ಭಾರತೀಯ ಬ್ಯಾಟ್ಸ್‌ಮನ್‌ಗಳಲ್ಲಿ ಇವರು ಕೂಡ ಒಬ್ಬರಾಗಿದ್ದಾರೆ," ಎಂದು ಆಕಾಶ್ ಚೋಪ್ರಾ ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ತಿಳಿಸಿದ್ದಾರೆ.
"ಆದಾಗ್ಯೂ, ಅದರ ನಂತರ ಬಹಳಷ್ಟು ಟೆಸ್ಟ್ ಪಂದ್ಯಗಳು ನಡೆದಿದ್ದವು ಮತ್ತು ಅವರನ್ನು ಟಿ20ಐ ಪಂದ್ಯಗಳಿಗೆ ಆಯ್ಕೆ ಮಾಡಲಾಗಿಲ್ಲ. ಯಶಸ್ವಿ ಜೈಸ್ವಾಲ್ ತಂಡದ ಕ್ರಮಾಂಕದಲ್ಲಿ ಮುಂದಿದ್ದರು ಎಂದು ನಂಬಲಾಗಿತ್ತು. ಮಧ್ಯಂತರದಲ್ಲಿ, ಅಭಿಷೇಕ್ ಮತ್ತು ಸಂಜು ಆರಂಭಿಕರಾಗಿ ಉತ್ತಮ ಪ್ರದರ್ಶನ ನೀಡಿದರು ಮತ್ತು ಇದ್ದಕ್ಕಿದ್ದಂತೆ ನಿಮಗೆ ಸ್ಥಾನವಿಲ್ಲ ಎಂದು ಅರಿವಾಗುತ್ತದೆ. ಅದರ ನಂತರ, ಆರಂಭಿಕ ಆಟಗಾರ ಬಂದಾಗ, ಭಾರತ ಶುಭಮನ್ ಗಿಲ್ ಅವರೊಂದಿಗೆ ಆಡುತ್ತದೆ," ಎಂದು ಅವರು ಹೇಳಿದ್ದಾರೆ.
ಟಿ20 ವಿಶ್ವಕಪ್ ಭಾರತ ತಂಡದಿಂದ ಶುಭಮನ್ ಗಿಲ್‌ರನ್ನು ಕೈ ಬಿಡಲು ನೈಜ ಕಾರಣ ತಿಳಿಸಿದ ಆಕಾಶ ಚೋಪ್ರಾ!
"ಟೀಮ್ ಮ್ಯಾನೇಜ್‌ಮೆಂಟ್ ಅವರೊಂದಿಗೆ (ಶುಭಮನ್ ಗಿಲ್) ಹೋಗಿದ್ದಲ್ಲದೆ, ಅವರನ್ನು ಉಪನಾಯಕರನ್ನಾಗಿಯೂ ಮಾಡಿತ್ತು. ಹಾಗಾಗಿ ಅವರನ್ನು ಪ್ಲೇಯಿಂಗ್ XIನಿಂದ ಕೈಬಿಡಲು ಸಾಧ್ಯವಿಲ್ಲ. ನಾನು ಆಯ್ಕೆ ಮಾಡಿದ ಏಷ್ಯಾ ಕಪ್ ತಂಡದಲ್ಲಿ ಯಶಸ್ವಿ ಅವರನ್ನು ಆಯ್ಕೆ ಮಾಡಿದ್ದೆ. ಆದಾಗ್ಯೂ, ಶುಭಮನ್ ಉಪನಾಯಕರಾದರು ಮತ್ತು ಉಳಿದವರು ಹೇಳುವಂತೆ ಇದು ಇತಿಹಾಸವಾಯಿತು. ಆದ್ದರಿಂದ ವಾಸ್ತವವಾಗಿ ಮುಂಚೂಣಿಯಲ್ಲಿದ್ದ ಯಶಸ್ವಿ ಜೈಸ್ವಾಲ್ ಅವರನ್ನು ಮರೆತುಬಿಡಲಾಯಿತು," ಎಂದು ಚೋಪ್ರಾ ತಿಳಿಸಿದ್ದಾರೆ.
"ಅವರು ಶುಭಮನ್ ಗಿಲ್ ಅವರನ್ನು ಕೈ ಬಿಟ್ಟಾಗ, ಯಶಸ್ವಿ ಜೈಸ್ವಾಲ್ ಇರಬಹುದೇ? ಇಲ್ಲವೇ ಇಲ್ಲ, ಏಕೆಂದರೆ, ಸಂಜು ಸ್ಯಾಮ್ಸನ್ ಕೂಡ ಓಪನಿಂಗ್ ಬ್ಯಾಟ್ಸ್‌ಮನ್. ನಂತರ ವಿಕೆಟ್ ಕೀಪರ್-ಆರಂಭಿಕ ಬ್ಯಾಟ್ಸ್‌ಮನ್ ಅನ್ನು ಬ್ಯಾಕ್ ಅಪ್ ಆಗಿ ಉಳಿಸಿಕೊಳ್ಳಲಾಗಿದೆ. ಈ ರೀತಿ ಮಾಡಿಲ್ಲವಾದರೆ, ಸಂಜುಗೆ ಹೊಟ್ಟೆ ನೋವು ಅಥವಾ ಬೇರೆ ಏನಾದರೂ ಸಮಸ್ಯೆ ಉಂಟಾದರೆ, ವಿಕೆಟ್ ಕೀಪರ್ ಮಾಡುವುದು ಯಾರು?" ಎಂದು ಆಕಾಶ್ ಚೋಪ್ರಾ ಪ್ರಶ್ನೆ ಮಾಡಿದ್ದಾರೆ.