RCB vs LSG: ಶತಕ ಸಿಡಿಸಿ ಪಲ್ಟಿ ಹೊಡೆದು ವಿಚಿತ್ರವಾಗಿ ಸಂಭ್ರಮಿಸಿದ ರಿಷಭ್ ಪಂತ್!
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಕೊನೆಯ ಲೀಗ್ ಪಂದ್ಯದಲ್ಲಿ ಲಖನೌ ಸೂಪರ್ ಜಯಂಟ್ಸ್ ತಂಡದ ನಾಯಕ ರಿಷಭ್ ಪಂತ್ ಭರ್ಜರಿ ಶತಕ ಸಿಡಿಸಿದರು. ತಮ್ಮ ಎರಡನೇ ಐಪಿಎಲ್ ಶತಕ ಸಿಡಿಸಿದ ಬಳಿಕ ಪಂತ್ ಬ್ಯಾಕ್ ಫ್ಲಿಪ್ ಹೊಡೆಯುವ ಮೂಲಕ ವಿಚಿತ್ರವಾಗಿ ಸಂಭ್ರಮಿಸಿದರು.

ಶತಕ ಸಿಡಿಸಿ ವಿಚಿತ್ರವಾಗಿ ಸಂಭ್ರಮಿಸಿದ ರಿಷಭ್ ಪಂತ್.

ಲಖನೌ: ಹದಿನೆಂಟನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ( IPL 2025) ಟೂರ್ನಿಯಲ್ಲಿ ಲಖನೌ ಸೂಪರ್ ಜಯಂಟ್ಸ್ (LSG) ನಾಯಕ ರಿಷಭ್ ಪಂತ್ (Rishabh Pant) ಶತಕ ಸಿಡಿಸಿದ್ದಾರೆ. ಈ ಋತುವಿನ ಮೊದಲ 13 ಪಂದ್ಯಗಳಲ್ಲಿ ಕೇವಲ 151 ರನ್ ಗಳಿಸಿದ್ದ ಪಂತ್, ಇದೀಗ ಮೂರಂಕಿ ವೈಯಕ್ತಿಕ ಮೊತ್ತವನ್ನು ಕಲೆ ಹಾಕಿದ್ದಾರೆ ಹಾಗೂ ತನ್ನ ಕೊನೆಯ ಪಂದ್ಯದಲ್ಲಿ ಫಾರ್ಮ್‌ಗೆ ಮರಳಿದ್ದಾರೆ. ಲಖನೌದ ಏಕಾನಾ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಪಂತ್ 54 ಎಸೆತಗಳಲ್ಲಿ ಶತಕ ಪೂರೈಸಿದರು. ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಅವರು ಒತ್ತಡದಲ್ಲಿ ಇರುವಂತೆ ಕಾಣಲಿಲ್ಲ. 2016 ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದ ನಂತರ ಪಂತ್ ಐಪಿಎಲ್‌ನಲ್ಲಿ ಗಳಿಸಿದ ಎರಡನೇ ಶತಕ ಇದಾಗಿದೆ.
ಭುವನೇಶ್ವರ್ ಕುಮಾರ್ ಎಸೆದ 18ನೇ ಓವರ್‌ನಲ್ಲಿ ಬೌಂಡರಿ ಬಾರಿಸುವ ಮೂಲಕ ರಿಷಭ್ ಪಂತ್ ಶತಕವನ್ನು ಪೂರ್ಣಗೊಳಿಸಿದರು. ಶತಕ ಗಳಿಸಿದ ನಂತರ ಅವರು ತಮ್ಮ ಬ್ಯಾಟ್ ಅನ್ನು ಪಕ್ಕಕ್ಕೆ ಇಟ್ಟರು. ನಂತರ ಪಂತ್ ತನ್ನ ಕೈಗವಸುಗಳು ಮತ್ತು ಹೆಲ್ಮೆಟ್ ಅನ್ನು ಸಹ ತೆಗೆದರು. ಇದಾದ ನಂತರ ಅವರು ವಿಶೇಷ ಬ್ಯಾಕ್‌ಫ್ಲಿಪ್ ಹೊಡೆದರು. ಆ ಮೂಲಕ ವಿಚಿತ್ರವಾಗಿ ತಮ್ಮ ಶತಕವನ್ನು ಸಂಭ್ರಮಿಸಿದರು. ಈ ಸೀಸನ್‌ನಲ್ಲಿ ಪಂತ್, ಫಿಟ್ನೆಸ್ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಟ್ರೋಲ್ ಆಗಿದ್ದಾರೆ. ಆದರೆ ಶತಕ ಗಳಿಸಿದ ನಂತರವೂ, ಅವರು ಪಲ್ಟಿ ಹೊಡೆಯುವ ಮೂಲಕ ತಮ್ಮ ಫಿಟ್ನೆಸ್ ಅನ್ನು ಸಾಬೀತುಪಡಿಸಿದ್ದಾರೆ.
IPL 2025: ಮುಂಬೈ ಅಲ್ಲ! ಈ 2 ತಂಡಗಳು ಫೈನಲ್ ಆಡುವುದು ಪಕ್ಕಾ ಎಂದ ರಾಬಿನ್ ಉತ್ತಪ್ಪ!
ಅಜೇಯ 118 ರನ್ ಗಳಿಸಿದ ರಿಷಭ್ ಪಂತ್
ಕೊನೆಯವರೆಗೂ ಯಾವುದೇ ಆರ್‌ಸಿಬಿ ಬೌಲರ್ ರಿಷಭ್ ಪಂತ್ ಅವರನ್ನು ಔಟ್ ಮಾಡಲು ಸಾಧ್ಯವಾಗಲಿಲ್ಲ. ಅವರ ಬ್ಯಾಟ್‌ನಿಂದ ಅಜೇಯ 118 ರನ್‌ಗಳ ವಿಶೇಷ ಇನಿಂಗ್ಸ್ ಮೂಡಿ ಬಂದಿದೆ. ಭಾರತೀಯ ಟೆಸ್ಟ್ ತಂಡದ ಹೊಸ ಉಪನಾಯಕ ಪಂತ್ 61 ಎಸೆತಗಳ ಇನಿಂಗ್ಸ್‌ನಲ್ಲಿ 11 ಬೌಂಡರಿ ಮತ್ತು 8 ಸಿಕ್ಸರ್‌ಗಳನ್ನು ಬಾರಿಸಿದರು. 2025ರ ಐಪಿಎಲ್ ರಿಷಭ್ ಪಂತ್‌ಗೆ ಸಾಕಷ್ಟು ನಿರಾಶಾದಾಯಕವಾಗಿತ್ತು. ಈ ಋತುವಿನ ಮೊದಲ 13 ಪಂದ್ಯಗಳಲ್ಲಿ ಅವರು ಗಳಿಸಿದ್ದು ಕೇವಲ 151 ರನ್‌ಗಳು. ಆದರೆ ಈಗ ಅವರು ಶತಕದೊಂದಿಗೆ ಋತುವನ್ನು ಕೊನೆಗೊಳಿಸಿದ್ದಾರೆ.
What a comeback — not just a return, but a somersault of confidence. 💥🔥 #RishabhPant
— Sanjay Kishore (@saintkishore) May 27, 2025
pic.twitter.com/aKc7o84JGA
ಟೀಮ್ ಇಂಡಿಯಾಗೆ ಸಿಹಿ ಸುದ್ದಿ
ರಿಷಭ್ ಪಂತ್ ಶತಕ ಸಿಡಿಸಿ ಫಾರ್ಮ್‌ಗೆ ಮರಳಿರುವುದು ಇಂಗ್ಲೆಂಡ್ ಟೆಸ್ಟ್ ಸರಣಿಯ ನಿಮಿತ್ತ ಭಾರತ ತಂಡಕ್ಕೆ ಸಿಹಿ ಸುದ್ದಿಯಾಗಿದೆ. ಭಾರತ ತಂಡ ಮುಂದಿನ ತಿಂಗಳು ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಎರಡೂ ತಂಡಗಳ ನಡುವೆ ಐದು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಪಂತ್ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪ್ರಮುಖ ಬ್ಯಾಟ್ಸ್‌ಮನ್. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಿವೃತ್ತಿಯ ನಂತರ ಅವರ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ. ಈ ಸಮಯದಲ್ಲಿ ಪಂತ್ ಬ್ಯಾಟಿಂಗ್‌ನಲ್ಲಿ ವಿಶ್ವಾಸವನ್ನು ಹೆಚ್ಚಿಸಿಕೊಂಡಿರುವುದು ಭಾರತಕ್ಕೆ ಪ್ಲಸ್ ಪಾಯಿಂಟ್ ಆಗಿದೆ.
RCB vs LSG: ಎರಡನೇ ಐಪಿಎಲ್ ಶತಕ ಸಿಡಿಸಿ ಫಾರ್ಮ್‌ಗೆ ಮರಳಿದ ರಿಷಭ್ ಪಂತ್!
227 ರನ್‌ಗಳನ್ನು ಕಲೆ ಹಾಕಿದ್ದ ಲಖನೌ
ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಲಖನೌ ಸೂಪರ್ ಜಯಂಟ್ಸ್ ತಂಡ, ರಿಷಭ್ ಪಂತ್ ಶತಕ ಹಾಗೂ ಮಿಚೆಲ್ ಮಾರ್ಷ್ (67) ಅರ್ಧಶತಕದ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 3 ವಿಕೆಟ್ ನಷ್ಟಕ್ಕೆ 227 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಆರ್‌ಸಿಬಿಗೆ 228 ರನ್‌ಗಳ ಗುರಿಯನ್ನು ನೀಡಿದೆ.