IND vs SL: ಅರ್ಧಶತಕದ ಮೂಲಕ ಎಂಎಸ್ ಧೋನಿ ದಾಖಲೆ ಮುರಿದ ರಿಷಭ್ ಪಂತ್!
ಭಾರತದ ವಿಕೆಟ್‌ಕೀಪರ್-ಬ್ಯಾಟರ್ ರಿಷಭ್ ಪಂತ್ ಹೊಸ ದಾಖಲೆ ನಿರ್ಮಿಸಿದ್ದಾರೆ. ವಿದೇಶಿ ಅಥವಾ ತಟಸ್ಥ ಸ್ಥಳಗಳಲ್ಲಿನ ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತದ ವಿಕೆಟ್‌ಕೀಪರ್ ದಆಖಲೆಯನ್ನು ಪಂತ್ ಬರೆದಿದ್ದಾರೆ. ಆ ಮೂಲಕ ಪಂತ್, ಭಾರತದ ಮಾಜಿ ನಾಯಕ ಹಾಗೂ ವಿಕೆಟ್‌ಕೀಪರ್ ಬ್ಯಾಟರ್ ಎಂಎಸ್ ಧೋನಿ ಅವರ ದಾಖಲೆಯನ್ನು ಮುರಿದಿದ್ದಾರೆ.
ಎಂಎಸ್ ಧೋನಿ ದಾಖಲೆ ಮುರಿದ ರಿಷಭ್ ಪಂತ್. -
ಕೊಲಂಬೊ: ಇಲ್ಲಿನ ಸಿಂಹಳೀಸ್ ಕ್ರಿಕೆಟ್ ಕ್ಲಬ್‌ನ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ (IND vs SL) ಎರಡನೇ ದಿನವಾದ ಸೋಮವಾರ ಭಾರತದ ಸ್ಟಾರ್ ವಿಕೆಟ್‌ಕೀಪರ್ ಬ್ಯಾಟರ್ ರಿಷಭ್ ಪಂತ್ (Rishabh Pant) ಹೊಸ ದಾಖಲೆ ಬರೆದಿದ್ದಾರೆ. ವಿದೇಶಿ ಅಥವಾ ತಟಸ್ಥ ಮೈದಾನಗಳಲ್ಲಿ ವಿಕೆಟ್‌ಕೀಪರ್ ಆಗಿ ಭಾರತದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಂತ್ ಪಾತ್ರರಾಗಿದ್ದಾರೆ. ಆ ಮೂಲಕ ಮಾಜಿ ನಾಯಕ ಹಾಗೂ ದಿಗ್ಗಜ ವಿಕೆಟ್‌ಕೀಪರ್ ಬ್ಯಾಟರ್ ಎಂಎಸ್ ಧೋನಿ ಅವರ ದಾಖಲೆಯನ್ನು ಪಂತ್ ಮುರಿದಿದ್ದಾರೆ.
ಪಂತ್ ವಿದೇಶಿ ಅಥವಾ ತಟಸ್ಥ ಟೆಸ್ಟ್ ಪಂದ್ಯಗಳಲ್ಲಿ 2,500ಕ್ಕೂ ಹೆಚ್ಚು ರನ್ ಗಳಿಸಿದ್ದು, 41.68ರ ಅತ್ಯುತ್ತಮ ಸರಾಸರಿಯನ್ನು ಹೊಂದಿದ್ದಾರೆ. ಈ ವೇಳೆ ಅವರು ಧೋನಿ ಗಳಿಸಿದ್ದ 2,496 ರನ್‌ಗಳ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಈ ಪಟ್ಟಿಯಲ್ಲಿ ಕಿರಣ್ ಮೋರೆ 901 ರನ್, ಸೈಯದ್ ಕಿರ್ಮಾನಿ 1,109 ರನ್ ಹಾಗೂ ಫರೂಕ್ ಎಂಜಿನಿಯರ್ 1,209 ರನ್‌ಗಳೊಂದಿಗೆ ಅಗ್ರ ಐದು ಆಟಗಾರರ ಪಟ್ಟಿಯಲ್ಲಿದ್ದಾರೆ.
ಕೊಲಂಬೊ ಟೆಸ್ಟ್‌ನ ಮೊದಲ ದಿನವಾದ ಭಾನುವಾರ ಪಂತ್ ಅವರ ಎಡಗೈಗೆ ಚೆಂಡು ಬಡಿದಿತ್ತು. ಗಾಯದ ನೋವಿನಿಂದಾಗಿ ಅವರು ‘ರಿಟೈರ್ಡ್ ಹರ್ಟ್’ ಆಗಿ ಮೈದಾನದಿಂದ ಹೊರನಡೆದಿದ್ದರು. ಮೂರನೇ ಸೆಷನ್‌ನಲ್ಲಿ ಶ್ರೀಲಂಕಾದ ವೇಗಿ ಲಹಿರು ಕುಮಾರ, ಪಂತ್‌ಗೆ ಶಾರ್ಟ್ ಬಾಲ್ ಎಸೆದರು. ಚೆಂಡನ್ನು ಸ್ಕ್ವೇರ್ ಹಿಂದೆ ಪುಲ್ ಮಾಡಲು ಪಂತ್ ಪ್ರಯತ್ನಿಸಿದರೂ ವಿಫಲರಾದರು. ಈ ವೇಳೆ ಚೆಂಡು ಅವರ ಎಡಗೈಗೆ ಬಡಿದು ಗಾಯವನ್ನು ಮತ್ತಷ್ಟು ಉಲ್ಬಣಗೊಳಿಸಿತ್ತು. ಆದರೂ ಪಂತ್ ಗಾಯದ ನಡುವೆಯೇ ಮೈದಾನಕ್ಕಿಳಿದು ತಮ್ಮ ಹೋರಾಟ ಮುಂದುವರಿಸಿದರು.
IND vs SL: ಭರ್ಜರಿ ಸಿಕ್ಸರ್‌ನಿಂದ ಸೋಲಾರ್ ಪ್ಯಾನೆಲ್ ಒಡೆದು ಹಾಕಿದ ರಿಷಭ್ ಪಂತ್! ವಿಡಿಯೊ
ಚೆಂಡು ಬಿದ್ದ ಬಳಿಕ ಪಂತ್ ಸಾಕಷ್ಟು ನೋವಿನಿಂದ ಬಳಲುತ್ತಿರುವುದು ಸ್ಪಷ್ಟವಾಗಿತ್ತು. ಕೂಡಲೇ ಭಾರತ ತಂಡದ ಫಿಸಿಯೊಥೆರಪಿಸ್ಟ್ ಮೈದಾನಕ್ಕೆ ಆಗಮಿಸಿ ಪಂತ್‌ಗೆ ಚಿಕಿತ್ಸೆ ನೀಡಿದರು. ಮೊದಲು ಪಂತ್ ಅವರ ಕೈಗೆ ಐಸ್ ಪ್ಯಾಕ್ ಇಡಲಾಗಿತ್ತು. ಬಳಿಕ ಕೈಗೆ ಟೇಪ್ ಹಾಕಲಾಯಿತು. ಆದರೂ ಅವರು ನೋವು ಅನುಭವಿಸುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಟೇಪ್ ಅನ್ನು ತೆಗೆದುಹಾಕಲಾಯಿತು.
21st Test FIFTY for Rishabh Pant! 🙌
— BCCI (@BCCI) August 24, 2026
A gritty half-century from the #TeamIndia wicketkeeper-batter 👏👏
Updates ▶️ https://t.co/r9FgXSdsMf#SLvIND pic.twitter.com/TGBinfsrHG
ಗಾಯದ ನಡುವೆಯೂ ರಿಷಭ್ ಪಂತ್ ಅರ್ಧಶತಕ
ಭಾರತದ ಇನಿಂಗ್ಸ್‌ನ 58ನೇ ಓವರ್‌ನಲ್ಲಿ 15 ಎಸೆತಗಳಲ್ಲಿ 3 ರನ್ ಗಳಿಸಿದ್ದ ರಿಷಭ್ ಪಂತ್ ಫಿಸಿಯೋಥೆರಪಿಸ್ಟ್ ಜೊತೆಗೂಡಿ ಮೈದಾನದಿಂದ ಹೊರನಡೆದಿದ್ದರು. ಆದರೆ ಎರಡನೇ ದಿನ ಅಸಿತ ಫೆರ್ನಾಂಡೊ, ಸಾರಾಂಶ್ ಜೈನ್ ಅವರನ್ನು 6 ರನ್‌ಗೆ ಔಟ್ ಮಾಡಿ ಶ್ರೀಲಂಕಾಗೆ 6ನೇ ವಿಕೆಟ್ ತಂದುಕೊಟ್ಟ ಬಳಿಕ ಪಂತ್ ಮತ್ತೆ ಬ್ಯಾಟಿಂಗ್‌ಗೆ ಮರಳಿದರು.
ರಿಷಭ್ ಪಂತ್ ಗಾಯದ ಬಗ್ಗೆ ಅಪ್‌ಡೇಟ್ ನೀಡಿದ ಬ್ಯಾಟಿಂಗ್ ಕೋಚ್
ಭಾರತದ ಇನಿಂಗ್ಸ್‌ಗೆ ಸ್ಥಿರತೆ ತಂದು ಸ್ಪರ್ಧಾತ್ಮಕ ಮೊತ್ತದತ್ತ ತಂಡವನ್ನು ಮುನ್ನಡೆಸುವ ಉದ್ದೇಶದಿಂದ ಪಂತ್, ಧ್ರುವ್ ಜುರೆಲ್ ಜೊತೆಗೂಡಿ ಕ್ರೀಸ್‌ಗಿಳಿದರು. ಡ್ರಿಂಕ್ಸ್ ಬ್ರೇಕ್‌ಗೂ ಮುನ್ನ ಶ್ರೀಲಂಕಾದ ವೇಗಿಗಳು ಎಸೆದ ಕೆಲ ಶಾರ್ಟ್ ಪಿಚ್ ಎಸೆತಗಳು ಪಂತ್ ಅವರನ್ನು ಮತ್ತೆ ಕಾಡಿದವು. ಆದರೂ ಪಂತ್ ಎದೆಗುಂದದೆ ಉತ್ತಮ ಹೋರಾಟ ಮುಂದುವರಿಸಿದರು. ಜುರೆಲ್ ಕೂಡ ಅವರಿಗೆ ಉತ್ತಮ ಸಾಥ್ ನೀಡಿದರು.
ಇಬ್ಬರೂ ಸೇರಿ ಮಹತ್ವದ ಜೊತೆಯಾಟ ನಿರ್ಮಿಸುವ ಮೂಲಕ ಭಾರತದ ಇನಿಂಗ್ಸ್‌ಗೆ ಸ್ಥಿರತೆ ತಂದರು. ಊಟದ ವಿರಾಮದ ವೇಳೆಗೆ ಪಂತ್ ಮತ್ತು ಜುರೆಲ್ ಶತಕದ ಜೊತೆಯಾಟ ಪೂರ್ಣಗೊಳಿಸುವುದರ ಜೊತೆಗೆ ತಮ್ಮ ಅರ್ಧಶತಕಗಳನ್ನೂ ದಾಖಲಿಸಿದರು. ಆದರೆ ಊಟದ ವಿರಾಮದ ಬಳಿಕದ ಮೊದಲ ಎಸೆತದಲ್ಲೇ ಕೇಶರ ನುವಾಂತ, ಪಂತ್ ಅವರ ಹೋರಾಟಕ್ಕೆ ತೆರೆ ಎಳೆದರು. ಪಂತ್ 89 ಎಸೆತಗಳಲ್ಲಿ 63 ರನ್ ಗಳಿಸಿ ಔಟಾದರು.