ಐತಿಹಾಸಿಕ ಲಾರ್ಡ್ಸ್ ಟೆಸ್ಟ್ ವೇಳೆ ಮಿಥಾಲಿ ರಾಜ್ ಒಳಗೊಂಡ ಎಲೈಟ್ ಲಿಸ್ಟ್‌ಗೆ ಸೇರಿದ ಸ್ಮೃತಿ ಮಂಧಾನಾ!
ಲಂಡನ್‌ನ ಐತಿಹಾಸಿಕ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಬಾರತ ಹಾಗೂ ಇಂಗ್ಲೆಂಡ್ ನಡುವಣ ಮಹಿಳಾ ಟೆಸ್ಟ್ ಪಂದ್ಯದಲ್ಲಿ ಕಣಕ್ಕೆ ಇಳಿಯುವ ಮೂಲಕ ಸ್ಮೃತಿ ಮಂಧಾನಾ ಅವರು ಮಿಥಾಲಿ ರಾಜ್ ಹಾಗೂ ಹರ್ಮನ್‌ಪ್ರೀತ್ ಕೌರ್ ಒಳಗೊಂಡ ಎಲೈಟ್ ಲಿಸ್ಟ್‌ಗೆ ಸೇರ್ಪಡೆಯಾಗಿದ್ದಾರೆ. ಅಂದಹಾಗೆ ಲಾರ್ಡ್ಸ್‌ನಲ್ಲಿ ಇದು ಮೊಟ್ಟ ಮೊದಲ ಮಹಿಳಾ ಟೆಸ್ಟ್ ಪಂದ್ಯವಾಗಿದೆ.
ಮಹಿಳಾ ಕ್ರಿಕೆಟ್‌ನಲ್ಲಿ ನೂತನ ದಾಖಲೆ ಬರೆದ ಸ್ಮೃತಿ ಮಂಧಾನಾ. -
ಲಂಡನ್: ಇಲ್ಲಿನ ಐತಿಹಾಸಿಕ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ ಏಕೈಕ ಮಹಿಳಾ ಟೆಸ್ಟ್ ಪಂದ್ಯದಲ್ಲಿ ಭಾರತ ಹಾಗೂ ಇಂಗ್ಲೆಂಡ್ (INDW vs ENGW) ತಂಡಗಳು ಕಾದಾಟ ನಡೆಸುತ್ತಿವೆ. ಅಂದ ಹಾಗೆ ಈ ಅಂಗಣದಲ್ಲಿ ನಡೆಯುತ್ತಿರುವ ಮೊದಲ ಮಹಿಳಾ ಟೆಸ್ಟ್ ಪಂದ್ಯ ಇದಾಗಿದೆ. ಸ್ಮೃತಿ ಮಂಧಾನಾ (Smriti Mandhana) ಅವರ ಪಾಲಿಗೆ ಇದು 9ನೇ ಟೆಸ್ಟ್ ಪಂದ್ಯವಾಗಿದೆ. ಇದರ ಮೂಲಕ ಭಾರತ ತಂಡದ ಆಟಗಾರ್ತಿ ಮಂಧಾನಾ, ಮಿಥಾಲಿ ರಾಜ್ ಹಾಗೂ ಹರ್ಮನ್‌ಪ್ರೀತ್ ಕೌರ್ ಅವರನ್ನು ಒಳಗೊಂಡ ಎಲೈಟ್ ಲಿಸ್ಟ್‌ಗೆ ಸೇರ್ಪಡೆಯಾಗಿದ್ದಾರೆ.
ಸ್ಮೃತಿ ಮಂಧಾನಾ ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 300 ಪಂದ್ಯಗಳನ್ನು ಆಡಿದ ಭಾರತದ ಮೂರನೇ ಆಟಗಾರ್ತಿ ಎನಿಸಿಕೊಂಡಿದ್ದಾರೆ. 2013 ರಲ್ಲಿ ಬಾಂಗ್ಲಾದೇಶ ಎದುರು ಏಕದಿನ ಪಂದ್ಯದಲ್ಲಿ ಆಡುವ ಮೂಲಕ ಸ್ಮೃತಿ ಮಂಧಾನಾ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಇದಾದ ಐದು ದಿನಗಳ ಬಳಿಕ ಹಿಳಾ ಟಿ20ಐ ಕ್ರಿಕೆಟ್‌ಗೂ ಪದಾರ್ಪಣೆ ಮಾಡಿದ್ದರು. 2014ರಲ್ಲಿ ಅವರು ಇಂಗ್ಲೆಂಡ್ ಎದುರು ಟೆಸ್ಟ್ ಕ್ರಿಕೆಟ್‌ಗೂ ಪದಾರ್ಪಣೆಯನ್ನು ಮಾಡಿದ್ದರು.
ಮಹಿಳಾ ಒಡಿಐ ಕ್ರಿಕೆಟ್‌ನಲ್ಲಿ ಅವರು 5411 ರನ್‌ಗಳು ಹಾಗೂ ಟೆಸ್ಟ್ ಪಂದ್ಯಗಳಿಂದ 635 ರನ್‌ಗಳನ್ನು ಕಲೆ ಹಾಕಿದ್ದಾರೆ. ಇನ್ನು ಮಹಿಳಾ ಟಿ20ಐ ಕ್ರಿಕೆಟ್‌ನಲ್ಲಿ 4538 ರನ್‌ಗಳನ್ನು ದಾಖಲಿಸಿದ್ದಾರೆ. ಇವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇನ್ನಷ್ಟು ವರ್ಷಗಳ ಮುಂದುವರಿಯಲಿದ್ದು, ಅವರು ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರ್ತಿ ಎನಿಸಿಕೊಳ್ಳುವ ಸಾಧ್ಯತೆ ಇದೆ.
IND vs ENG: ಭಾರತ ತಂಡದ ಹೀನಾಯ ಸೋಲಿಗೆ ಕಾರಣ ತಿಳಿಸಿದ ದಿನೇಶ್ ಕಾರ್ತಿಕ್!
ಮಂಧಾನಾ ಪ್ರಸ್ತುತ ಭಾರತ ಮಹಿಳಾ ತಂಡದ ಮೂರು ಸ್ವರೂಪಗಳಲ್ಲಿ ಉಪನಾಯಕಿಯಾಗಿದ್ದಾರೆ. 2025ರ ಏಕದಿನ ವಿಶ್ವಕಪ್ ಗೆದ್ದ ಭಾರತ ತಂಡದ ಭಾಗವಾಗಿದ್ದ ಅವರು, ಫೈನಲ್ ಪಂದ್ಯದಲ್ಲಿ 58 ಎಸೆತಗಳಲ್ಲಿ 45 ರನ್‌ಗಳ ಮಹತ್ವದ ಇನಿಂಗ್ಸ್ ಆಡಿದ್ದರು. ಒಟ್ಟು 434 ರನ್‌ಗಳೊಂದಿಗೆ ಮಂಧಾನಾ ಆ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯರ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದರು.
ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಮಹಿಳಾ ಕ್ರಿಕೆಟಿಗರು
ಈ ಪ್ರತಿಷ್ಠಿತ ಪಟ್ಟಿಯಲ್ಲಿ ಹರ್ಮನ್‌ಪ್ರೀತ್ ಕೌರ್ ಅಗ್ರಸ್ಥಾನದಲ್ಲಿದ್ದಾರೆ. ಅವರು ತಮ್ಮ 374ನೇ ಅಂತಾರಾಷ್ಟ್ರೀಯ ಪಂದ್ಯವನ್ನು ಆಡುತ್ತಿದ್ದಾರೆ. ಅವರ ನಂತರ ನ್ಯೂಜಿಲೆಂಡ್‌ನ ಸೂಜಿ ಬೇಟ್ಸ್ 370 ಪಂದ್ಯಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ, ಸೂಜಿ ಬೇಟ್ಸ್ ಎಂದಿಗೂ ಟೆಸ್ಟ್ ಕ್ರಿಕೆಟ್ ಆಡಿಲ್ಲ. ಏಕೆಂದರೆ ನ್ಯೂಜಿಲೆಂಡ್ ತಂಡ 2004ರಲ್ಲಿ ತನ್ನ ಕೊನೆಯ ರೆಡ್-ಬಾಲ್ ಪಂದ್ಯವನ್ನು ಆಡಿತ್ತು. ಬೇಟ್ಸ್ 2006ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.
3️⃣0️⃣0️⃣ international matches of class & elegance 💙
— BCCI Women (@BCCIWomen) July 10, 2026
Congratulations to #TeamIndia vice-captain Smriti Mandhana on a special & monumental milestone 👏#ENGvIND pic.twitter.com/r9HnNZZYe0
ಭಾರತದ ದಿಗ್ಗಜ ಆಟಗಾರ್ತಿ ಮಿಥಾಲಿ ರಾಜ್ ತಮ್ಮ ವೃತ್ತಿಜೀವನವನ್ನು ಒಟ್ಟು 333 ಪಂದ್ಯಗಳೊಂದಿಗೆ ಮುಗಿಸಿದ್ದಾರೆ. 2022ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಮೊದಲು ಅವರು 12 ಟೆಸ್ಟ್, 232 ಏಕದಿನ ಹಾಗೂ 89 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದರು. ಈ ವಿಶೇಷ ಪಟ್ಟಿಯಲ್ಲಿ ಮಿಥಾಲಿ ರಾಜ್ ಅವರ ನಂತರ ಸೋಫಿ ಡಿವೈನ್ (317), ಸ್ಟೆಫನಿ ಟೇಲರ್ (315), ಡ್ಯಾನಿ ವ್ಯಾಟ್-ಹಾಡ್ಜ್ (311), ಡೀಂದ್ರಾ ಡಾಟಿನ್ (309) ಹಾಗೂ ಚಾರ್ಲೆಟ್ ಎಡ್ವರ್ಡ್ಸ್ (300) ಕ್ರಮವಾಗಿ ಸ್ಥಾನ ಪಡೆದಿದ್ದಾರೆ.
IND vs ENG: ಭಾರತ ತಂಡದಲ್ಲಿ ತಿಲಕ್ ವರ್ಮಾ ಬದಲು ಸಂಜು ಸ್ಯಾಮ್ಸನ್ ಆಡಬೇಕೆಂದ ಕೆ ಶ್ರೀಕಾಂತ್!
ಶತಕದಂಚಿನಲ್ಲಿ ವಿಕೆಟ್ ಒಪ್ಪಿಸಿದ ಮಂಧಾನಾ
ಇನ್ನು ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾದ ಭಾರತ ತಂಡದ ಪರ ಇನಿಂಗ್ಸ್ ಆರಂಭಿಸಿದ ಸ್ಮೃತಿ ಮಂಧಾನಾ, ತಮ್ಮ 300ನೇ ಪಂದ್ಯದಲ್ಲಿ ಸೊಗಸಾದ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ಅವರು ಆಡಿದ 108 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ11 ಬೌಂಡರಿಗಳೊಂದಿಗೆ 83 ರನ್ ಗಳಿಸಿ ಶತಕದಂಚಿನಲ್ಲಿ ಇಸಿ ವಾಂಗ್‌ಗೆ ವಿಕೆಟ್ ಒಪ್ಪಿಸಿದರು. 51.2 ಓವರ್‌ಗಳ ಹೊತ್ತಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡು 202 ರನ್‌ಗಳನ್ನು ಕಲೆ ಹಾಕಿದೆ.