ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮುಂಬೈ ರಣಜಿ ತಂಡದಿಂದಲೂ ಸೂರ್ಯಕುಮಾರ್‌ ಯಾದವ್‌ಗೆ ಕೊಕ್‌, ಆಯುಷ್‌ ಮ್ಹಾತ್ರೆಗೆ ಉಪ ನಾಯಕತ್ವ!

2026-27ರ ರಣಜಿ ಟ್ರೋಫಿ ಟೂರ್ನಿಯ ಮೊದಲ ಪಂದ್ಯಕ್ಕೆ ಮುಂಬೈ ತಂಡವನ್ನು ಪ್ರಕಟಿಸಲಾಗಿದ್ದು, ಭಾರತ ಟಿ20 ತಂಡದ ಮಾಜಿ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ಇದೇ ವೇಳೆ ಭಾರತದ ಅಂಡರ್-19 ವಿಶ್ವಕಪ್ ವಿಜೇತ ನಾಯಕ ಆಯುಷ್ ಮ್ಹಾತ್ರೆ ಅವರನ್ನು ಮುಂಬೈ ತಂಡದ ಉಪನಾಯಕನನ್ನಾಗಿ ನೇಮಕ ಮಾಡಲಾಗಿದೆ.

ಮುಂಬೈ ರಣಜಿ ತಂಡದಿಂದಲೂ ಸೂರ್ಯಕುಮಾರ್‌ ಯಾದವ್‌ಗೆ ಕೊಕ್‌!

ಮುಂಬೈ ತಂಡದಲ್ಲಿ ಸ್ಥಾನ ಕಳೆದುಕೊಂಡ ಸೂರ್ಯಕುಮಾರ್‌ ಯಾದವ್‌. -

Profile
Ramesh Kote Oct 6, 2026 6:02 PM

ನವದೆಹಲಿ: ರಣಜಿ ಟ್ರೋಫಿ 2026-27ರ (Ranji Trophy 2026-27) ಸಾಲಿನ ನಿಮಿತ್ತ ಮುಂಬೈ ತಂಡದ ಆಯ್ಕೆ ಸಮಿತಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಭಾರತದ ಟಿ20 ಮಾಜಿ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಅವರನ್ನು ತಂಡದ ಮೊದಲ ಪಂದ್ಯದಿಂದ ಹೊರಗಿಡಲಾಗಿದ್ದು, ಭಾರತ ಅಂಡರ್-19 ತಂಡಕ್ಕೆ ವಿಶ್ವಕಪ್ ಗೆದ್ದುಕೊಟ್ಟ ನಾಯಕ ಆಯುಷ್ ಮ್ಹಾತ್ರೆ (Ayush Mhatre) ಅವರನ್ನು ಉಪನಾಯಕನ ಜವಾಬ್ದಾರಿಯನ್ನು ನೀಡಲಾಗಿದೆ.

ಮುಂಬೈ ತಂಡ ಅಕ್ಟೋಬರ್ 11ರಿಂದ ವಾಂಖೆಡೆ ಸ್ಟೇಡಿಯಂನಲ್ಲಿ ಚಂಡೀಗಢ ವಿರುದ್ಧ ನಾಲ್ಕು ದಿನಗಳ ಪಂದ್ಯದ ಮೂಲಕ ರಣಜಿ ಟ್ರೋಫಿ ಟೂರಿಯ ಅಭಿಯಾನವನ್ನು ಆರಂಭಿಸಲಿದೆ. ಈ ಪಂದ್ಯಕ್ಕಾಗಿ 16 ಸದಸ್ಯರ ತಂಡವನ್ನು ಪ್ರಕಟಿಸಲಾಗಿದ್ದು, ಸಿದ್ಧೇಶ್ ಲಾಡ್ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಯಶಸ್ವಿ ಜೈಸ್ವಾಲ್ ಮತ್ತು ಸರ್ಫರಾಝ್‌ ಖಾನ್ ಅವರಂತಹ ಅಂತಾರಾಷ್ಟ್ರೀಯ ಅನುಭವ ಹೊಂದಿರುವ ಆಟಗಾರರೂ ಮುಂಬೈ ತಂಡದಲ್ಲಿದ್ದಾರೆ.

IPL 2027: ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ನೂತನ ಹೆಡ್‌ ಕೋಚ್‌ ಆಗಿ ಸೌರವ್‌ ಗಂಗೂಲಿ ನೇಮಕ!

ಸೂರ್ಯಕುಮಾರ್‌ಗೆ ಸ್ಥಾನ ಏಕೆ ಇಲ್ಲ?

ರಣಜಿ ಟ್ರೋಫಿ ಟೂರ್ನಿಯಲ್ಲಿ ಆಡಲು ಸೂರ್ಯಕುಮಾರ್ ಯಾದವ್ ತಮ್ಮ ಲಭ್ಯತೆಯನ್ನು ತಿಳಿಸಿದ್ದರು. ಆದರೂ ಆಯ್ಕೆ ಸಮಿತಿ ಅವರನ್ನು ಮೊದಲ ಪಂದ್ಯಕ್ಕೆ ಪರಿಗಣಿಸಿಲ್ಲ. ಮುಖ್ಯ ಆಯ್ಕೆಗಾರ ರಾಜೇಶ್ ಪವಾರ್ ಅವರು ಸೂರ್ಯಕುಮಾರ್ ಕಳೆದ ಒಂದೂವರೆ ವರ್ಷದಿಂದ ರೆಡ್-ಬಾಲ್ ಕ್ರಿಕೆಟ್ ಆಡಿಲ್ಲ ಎಂಬ ಕಾರಣವನ್ನು ನೀಡಿದ್ದಾರೆ. “ಅವರು ದೊಡ್ಡ ಆಟಗಾರ. ಆದರೆ ಕಳೆದ ಒಂದೂವರೆ ವರ್ಷದಿಂದ ರೆಡ್-ಬಾಲ್ ಕ್ರಿಕೆಟ್ ಆಡಿಲ್ಲ. ಅವರು ಕೆಲವು ರೆಡ್-ಬಾಲ್ ಪಂದ್ಯಗಳನ್ನು ಆಡಿದರೆ, ಖಂಡಿತವಾಗಿಯೂ ಮತ್ತೆ ತಂಡಕ್ಕೆ ಬರಬಹುದು,” ಎಂದು ರಾಜೇಶ್‌ ಪವಾರ್ ತಿಳಿಸಿದ್ದಾರೆ.

ವರದಿಗಳ ಪ್ರಕಾರ, ಸೂರ್ಯಕುಮಾರ್ ಯಾದವ್‌ ರಣಜಿ ಟ್ರೋಫಿಯಲ್ಲಿ ಆಡಲು ಸಿದ್ಧರಾಗಿರುವುದಾಗಿ ಆಯ್ಕೆ ಸಮಿತಿಗೆ ತಿಳಿಸಿದ್ದರು. ಆದರೆ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಅಧಿಕಾರಿಗಳು ನಂತರ ಅವರನ್ನು ಸಂಪರ್ಕಿಸಲು ಹಲವು ಬಾರಿ ಪ್ರಯತ್ನಿಸಿದರೂ ಪ್ರತಿಕ್ರಿಯೆ ಸಿಗಲಿಲ್ಲ ಎಂದು ಕೆಲವು ವರದಿಗಳು ಹೇಳಿವೆ. ಇದೇ ವೇಳೆ, ಸೂರ್ಯಕುಮಾರ್ ಮುಂಬೈ ತಂಡದ ಪೂರ್ವಸಿದ್ಧತಾ ಶಿಬಿರದಲ್ಲಿ ಭಾಗವಹಿಸಿರಲಿಲ್ಲ ಎಂಬ ಅಂಶವೂ ಆಯ್ಕೆಯಲ್ಲಿ ಪ್ರಭಾವ ಬೀರಿದೆ ಎಂದು ವರದಿಯಾಗಿದೆ.

ʻಯುವ ಆಟಗಾರರನ್ನು ಹಾಳು ಮಾಡುತ್ತಿದ್ದೀರಿʼ: ಗಂಭೀರ್‌, ಗಿಲ್‌ ವಿರುದ್ಧ ಮೊಹಮ್ಮದ್‌ ಕೈಫ್‌ ಆಕ್ರೋಶ!

ಆಯುಷ್ ಮ್ಹಾತ್ರೆಗೆ ಪ್ರಮುಖ ಜವಾಬ್ದಾರಿ

19ರ ವಯಸ್ಸಿನ ಆಯುಷ್ ಮ್ಹಾತ್ರೆಗೆ ಉಪನಾಯಕತ್ವ ನೀಡಿರುವುದು ಮುಂಬೈ ಕ್ರಿಕೆಟ್‌ನ ಭವಿಷ್ಯದ ಯೋಜನೆಯ ಪ್ರಮುಖ ಭಾಗವೆಂದು ವರದಿಯಾಗಿದೆ. ಈ ವರ್ಷದ ಅಂಡರ್-19 ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿ ಪ್ರಶಸ್ತಿ ಗೆದ್ದುಕೊಟ್ಟಿರುವ ಮ್ಹಾತ್ರೆ, ಮುಂಬೈ ಪರ ಈಗಾಗಲೇ ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದಾರೆ. ಮುಂಬೈ ಆಯ್ಕೆ ಸಮಿತಿ ಅವರನ್ನು ಭವಿಷ್ಯದ ನಾಯಕತ್ವದ ಆಯ್ಕೆಯಾಗಿ ಬೆಳೆಸಲು ಬಯಸುತ್ತಿದೆ ಎಂಬ ಮಾಹಿತಿಯೂ ಹೊರಬಿದ್ದಿದೆ. ಕೇವಲ 19ರ ಹರೆಯದಲ್ಲೇ ಉಪನಾಯಕನ ಜವಾಬ್ದಾರಿ ನೀಡಿರುವುದು ಅವರ ಮೇಲಿನ ನಂಬಿಕೆಯನ್ನು ತೋರಿಸುತ್ತದೆ.

ಯಶಸ್ವಿ ಜೈಸ್ವಾಲ್‌ಗೆ ಅವಕಾಶ

ಭಾರತದ ಟೆಸ್ಟ್ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಕೂಡ ರಣಜಿ ಟ್ರೋಫಿಗೆ ಲಭ್ಯವಿರುವುದಾಗಿ ತಿಳಿಸಿದ್ದರು. ಅವರನ್ನು ಚಂಡೀಗಢ ವಿರುದ್ಧದ ಮೊದಲ ಪಂದ್ಯಕ್ಕಾಗಿ ತಂಡದಲ್ಲಿ ಸೇರಿಸಲಾಗಿದೆ. ಮುಂಬರುವ ನ್ಯೂಜಿಲೆಂಡ್ ಪ್ರವಾಸದ ಹಿನ್ನೆಲೆಯಲ್ಲಿ ಜೈಸ್ವಾಲ್‌ಗೆ ರೆಡ್-ಬಾಲ್ ಪಂದ್ಯದಲ್ಲಿ ಅಭ್ಯಾಸ ಪಡೆಯಲು ಈ ಪಂದ್ಯ ಮಹತ್ವದ್ದಾಗಿದೆ.

ಮುಂಬೈ ತಂಡ ಸದ್ಯ ಮೊದಲ ಪಂದ್ಯಕ್ಕಷ್ಟೇ ತಂಡವನ್ನು ಪ್ರಕಟಿಸಿದೆ. ಜೈಸ್ವಾಲ್ ಅವರ ಮುಂದಿನ ಅಂತಾರಾಷ್ಟ್ರೀಯ ಅಥವಾ ಭಾರತ ‘ಎ’ ತಂಡದ ಆಯ್ಕೆಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಪಂದ್ಯಗಳಿಗೆ ತಂಡದಲ್ಲಿ ಬದಲಾವಣೆಗಳಾಗುವ ಸಾಧ್ಯತೆಯಿದೆ ಎಂದು ಮುಖ್ಯ ಆಯ್ಕೆಗಾರ ರಾಜೇಶ್ ಪವಾರ್ ತಿಳಿಸಿದ್ದಾರೆ.

ಮುಂಬೈಗಾಗಿ ರಣಜಿ ಟ್ರೋಫಿ ಆಡಲು ಸೂರ್ಯಕುಮಾರ್ ಯಾದವ್ ಸಜ್ಜು

ಸೂರ್ಯಕುಮಾರ್ ಯಾದವ್ ಅವರನ್ನು ಸಂಪೂರ್ಣವಾಗಿ ರಣಜಿ ಯೋಜನೆಯಿಂದ ಕೈಬಿಡಲಾಗಿಲ್ಲ. ಅವರು ಕೆಲವು ರೆಡ್-ಬಾಲ್ ಪಂದ್ಯಗಳನ್ನು ಆಡಿದ ನಂತರ ಮುಂದಿನ ಹಂತದಲ್ಲಿ ತಂಡಕ್ಕೆ ಮರಳುವ ಅವಕಾಶವಿದೆ ಎಂದು ಮುಂಬೈ ಆಯ್ಕೆ ಸಮಿತಿ ಸ್ಪಷ್ಟಪಡಿಸಿದೆ. ಇನ್ನು ಮಾಜಿ ನಾಯಕ ಶಾರ್ದೂಲ್ ಠಾಕೂರ್ ಕೂಡ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಬಲಗೈ ಮಧ್ಯದ ಬೆರಳಿನ ಗಾಯದಿಂದ ಅವರು ಚೇತರಿಸಿಕೊಳ್ಳುತ್ತಿದ್ದು, ಆರಂಭಿಕ ಪಂದ್ಯಗಳನ್ನು ತಪ್ಪಿಸಿಕೊಳ್ಳುವ ಸಾಧ್ಯತೆಯಿದೆ.

ಮುಂಬೈ ತಂಡ: ಸಿದ್ಧೇಶ್ ಲಾಡ್ (ನಾಯಕ), ಯಶಸ್ವಿ ಜೈಸ್ವಾಲ್, ಆಯುಷ್ ಮ್ಹಾತ್ರೆ (ಉಪನಾಯಕ), ದಿವ್ಯಾಂಶ್ ಸಕ್ಸೇನಾ, ಮುಶೀರ್ ಖಾನ್, ಸರ್ಫರಾಝ್‌ ಖಾನ್, ಸುವೇದ್ ಪಾರ್ಕರ್, ಆಕಾಶ್ ಆನಂದ್ (ವಿಕೆಟ್ ಕೀಪರ್), ಹಾರ್ದಿಕ್ ತಮೋರೆ (ವಿಕೆಟ್ ಕೀಪರ್), ಶ್ಯಾಮ್ಸ್ ಮುಲಾನಿ, ತನುಷ್ ಕೋಟಿಯನ್, ಅಥರ್ವ ಅಂಕೋಲೆಕರ್, ತುಷಾರ್ ದೇಶಪಾಂಡೆ, ಮೋಹಿತ್ ಅವಸ್ಥಿ, ಸಿಲ್ವೆಸ್ಟರ್ ಡಿಸೋಜಾ, ಓಂಕಾರ್ ತರ್ಮಲೆ.