T20 World Cup: ʻಬಾಂಗ್ಲಾದೇಶದವರು ನಮ್ಮ ಸಹೋದರರುʼ: ಪಾಕ್ ನಾಯಕ ಸಲ್ಮಾನ್ ಆಘಾ!
ಭಾರತ ಹಾಗೂ ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ನಡೆಯುತ್ತಿರುವ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ತಂಡದ ಅನುಪಸ್ಥಿತಿ ಬಗ್ಗೆ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಆಘಾ ಬೇಸರ ವ್ಯಕ್ತಪಡಿಸಿದ್ದಾರೆ. ಬಾಂಗ್ಲಾದವರು ನಮ್ಮ ಸಹೋದರರು ಎಂದು ಅವರು ಹೇಳಿದ್ದಾರೆ.
ಬಾಂಗ್ಲಾ ಆಟಗಾರರನ್ನು ಸಹೋದರರು ಎಂದ ಸಲ್ಮಾನ್ ಆಘಾ. -
ನವದೆಹಲಿ: ಐಸಿಸಿ ಪುರುಷರ ಟಿ20 ವಿಶ್ವಕಪ್ (ICC T20 World Cup 2026) ಟೂರ್ನಿಯಲ್ಲಿ ಬಾಂಗ್ಲಾದೇಶ ತಂಡ ಹೊರಗುಳಿದಿರುವುದಕ್ಕೆ ಪಾಕಿಸ್ತಾನ (Pakistan) ನಾಯಕ ಸಲ್ಮಾನ್ ಅಲಿ ಆಘಾ (Salman Ali Agha) ನಿರಾಶೆ ವ್ಯಕ್ತಪಡಿಸಿದ್ದಾರೆ. ಟೂರ್ನಿ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ತಮ್ಮ ತಂಡದ ಫಾರ್ಮ್ ಮತ್ತು ಸಿದ್ಧತೆಗಳ ಬಗ್ಗೆ ಅವರು ಆತ್ಮವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ. ನಿಗದಿತ ಪಂದ್ಯಗಳನ್ನು ಆಡಲು ಭಾರತಕ್ಕೆ ಪ್ರಯಾಣಿಸಲು ನಿರಾಕರಿಸಿದ ಕಾರಣ ಬಾಂಗ್ಲಾದೇಶವನ್ನು ಟೂರ್ನಿಯಿಂದ ಕೈಬಿಡಲಾಗಿದ್ದು, ಅವರ ಸ್ಥಾನಕ್ಕೆ ಸ್ಕಾಟ್ಲೆಂಡ್ ತಂಡವನ್ನು ಸೇರಿಸಲಾಗಿದೆ.
ಇತ್ತೀಚೆಗಿನ ಬೆಳವಣಿಗೆಗಳ ಬಗ್ಗೆ ಮಾತನಾಡಿದ ಸಲ್ಮಾನ್ ಆಘಾ, "ಅವರು (ಬಾಂಗ್ಲಾದೇಶ) ನಮ್ಮ ಸಹೋದರರು. ನಮಗೆ ಬೆಂಬಲ ನೀಡಿದ್ದಕ್ಕಾಗಿ ಅವರಿಗೆ ನಾನು ಧನ್ಯವಾದ ಹೇಳುತ್ತೇನೆ. ಟೂರ್ನಿಯಲ್ಲಿಯೂ ಅವರು ನಮಗೆ ಬೆಂಬಲ ನೀಡಬಹುದು. ಆದರೆ ಅವರು ವಿಶ್ವಕಪ್ ಟೂರ್ನಿಯಲ್ಲಿ ಆಡುತ್ತಿಲ್ಲ ಎನ್ನುವುದು ನಿಜಕ್ಕೂ ದುಃಖಕರ,” ಎಂದು ಅವರು ಹೇಳಿದರು.
ಜನವರಿ 5 ರಂದು ಕೊಲಂಬೊದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಸಲ್ಮಾನ್ ಅಲಿ ಆಘಾ, "ಭಾರತ ವಿರುದ್ಧದ ಪಂದ್ಯ ನಮ್ಮ ನಿಯಂತ್ರಣದಲ್ಲಿಲ್ಲ. ಅದು ಸರ್ಕಾರದ ನಿರ್ಧಾರ. ಸೆಮಿಫೈನಲ್ ಅಥವಾ ಫೈನಲ್ನಲ್ಲಿ ಅವರ ವಿರುದ್ಧ ಆಡಬೇಕಾದ ಪರಿಸ್ಥಿತಿ ಬಂದರೆ, ನಾವು ಮತ್ತೆ ಸರ್ಕಾರವನ್ನು ಸಂಪರ್ಕಿಸಿ ಅವರ ಸಲಹೆಯಂತೆ ನಡೆದುಕೊಳ್ಳುತ್ತೇವೆ,” ಎಂದು ಸ್ಪಷ್ಟಪಡಿಸಿದರು.
ಭಾರತದ ಪಂದ್ಯವನ್ನು ಬಾಯ್ಕಟ್ ಮಾಡಿರುವ ಪಾಕ್ ನಿಲುವಿನ ಬಗ್ಗೆ ಸೂರ್ಯಕುಮಾರ್ ಪ್ರತಿಕ್ರಿಯೆ!
ಪಾಕ್ ತಂಡದ ಬಾಯ್ಕಟ್ ನಿಲುವಿನ ಬಗ್ಗೆ ಸೂರ್ಯ ಪ್ರತಿಕ್ರಿಯೆ
ಭಾರತ ವಿರುದ್ಧದ ಪಂದ್ಯವನ್ನು ಬಾಯ್ಕಟ್ ಮಾಡಿದ ಪಾಕಿಸ್ತಾನ ತಂಡದ ನಿಲುವಿನ ಬಗ್ಗೆ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಪ್ರತಿಕ್ರಿಯಿಸಿದ್ದಾರೆ.
“ಇದು ಸುಲಭವಾದ ಕೆಲಸವಲ್ಲ ಎಂದು ನನಗೆ ಅನಿಸುತ್ತದೆ. ಸಂದೇಶ ಕಳುಹಿಸುವುದು ನನ್ನ ಕೆಲಸವೂ ಅಲ್ಲ. ಅವರು ಯಾವುದಾದರೂ ಪರಿಹಾರ ಮಾರ್ಗವನ್ನು ಹುಡುಕುತ್ತಿರುತ್ತಾರೆ ಎಂಬ ನಂಬಿಕೆ ನನಗಿದೆ. ಆದರೆ ಇದು ಮತ್ತೊಂದು ದೇಶ ಅಥವಾ ಸರ್ಕಾರದಿಂದ ಬಂದ ವಿಚಾರವಾಗಿದ್ದರೆ, ಅವರು ಹೇಗೆ ಸಹಾಯ ಮಾಡಬಹುದು ಎಂಬುದೂ ಮುಖ್ಯ. ಇದು ಕಠಿಣ ಪರಿಸ್ಥಿತಿ ಎಂದು ನನಗೆ ತಿಳಿದಿದೆ. ನಾನು ಹೇಳಿದಂತೆ, ನಮಗೆ ಸೂಚನೆ ನೀಡಿದರೆ ಮತ್ತು ಪಂದ್ಯಗಳ ವೇಳಾಪಟ್ಟಿ ಸಿದ್ಧವಾಗಿದ್ದರೆ, ನಾವು ಖಂಡಿತವಾಗಿಯೂ ಮುಂದುವರಿಯುತ್ತೇವೆ,” ಎಂದು ಅವರು ತಿಳಿಸಿದ್ದಾರೆ.
T20 World Cup: ಬಾಂಗ್ಲಾದೇಶ, ಪಾಕಿಸ್ತಾನ ತಂಡಗಳ ಬಾಯ್ಕಟ್ ನಿಲುವನ್ನು ಸಮರ್ಥಿಸಿಕೊಂಡ ನಾಸರ್ ಹುಸೇನ್!
“ಅವರ (ಪಾಕಿಸ್ತಾನ) ನಿರ್ಧಾರ ನನ್ನ ನಿಯಂತ್ರಣದಲ್ಲಿಲ್ಲ. ಆ ನಿರ್ಧಾರವನ್ನು ನಾನು ತೆಗೆದುಕೊಳ್ಳಲು ಸಾಧ್ಯವಾಗಿದ್ದರೆ ಚೆನ್ನಾಗಿರುತ್ತಿತ್ತು, ಆದರೆ ಅದು ಅವರ ಕರೆ. ನಮಗೆ ಫೆಬ್ರವರಿ 15ರಂದು ಒಂದು ಪಂದ್ಯ ಆಡಬೇಕೆಂದು ತಿಳಿಸಲಾಗಿದೆ. ನಾವು ಏಷ್ಯಾ ಕಪ್ ಟೂರ್ನಿಯಲ್ಲಿ ತಟಸ್ಥ ವೇದಿಕೆಯಲ್ಲಿ ಅವರ ವಿರುದ್ಧ ಮೂರು ಬಾರಿ ಆಡಿದ್ದೇವೆ. ಅದೇ ರೀತಿಯಲ್ಲಿ, ಕೊಲಂಬೊದಲ್ಲಿ ಮತ್ತೆ ಅವಕಾಶ ದೊರೆತರೆ, ನಾವು ಮತ್ತೆ ಅವರ ವಿರುದ್ಧ ಆಡುತ್ತೇವೆ,” ಎಂದು ಅವರು ಹೇಳಿದ್ದಾರೆ.
2026ರ ಟಿ20 ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನ ತಂಡ
ಸಲ್ಮಾನ್ ಆಘಾ (ನಾಯಕ), ಅಬ್ರಾರ್ ಅಹ್ಮದ್, ಬಾಬರ್ ಆಝಮ್, ಫಹೀಮ್ ಅಶ್ರಫ್, ಫಖಾರ್ ಝಮಾನ್, ಖವಾಜ ನಫೇ, ಮೊಹಮ್ಮದ್ ನವಾಝ್, ಸಲ್ಮಾನ್ ಮಿರ್ಝಾ, ನಸೀಮ್ ಶಾ, ಸಹಿಬ್ದಾಝ್ ಫರ್ಹಾನ್, ಸೈಮ್ ಆಯುಬ್, ಶಹೀಮ್ ಅಫ್ರಿದಿ, ಶದಾಬ್ ಖಾನ್, ಉಸ್ಮಾನ್ ಖಾನ್, ಉಸ್ಮಾನ್ ತಾರಿಖ್