IND vs NAM: 8 ಎಸೆತಗಳಲ್ಲಿ 22 ರನ್ ಸಿಡಿಸಿದರೂ ಗೋಲ್ಡನ್ ಚಾನ್ಸ್ ಕಳೆದುಕೊಂಡು ಸಂಜು ಸ್ಯಾಮ್ಸನ್!
ಅಭಿಷೇಕ್ ಶರ್ಮಾ ಅವರ ಅನುಪಸ್ಥಿತಿಯಲ್ಲಿ ನಮೀಬಿಯಾ ವಿರುದ್ಧ ಭಾರತ ತಂಡದ ಪರ ಇನಿಂಗ್ಸ್ ಆರಂಭಿಸಲು ಸಿಕ್ಕ ಅದ್ಭುತ ಅವಕಾಶವನ್ನು ಸಂಜು ಸ್ಯಾಮ್ಸನ್ ಕಳೆದುಕೊಂಡರು. ಅವರು 8 ಎಸೆತಗಳಲ್ಲಿ 22 ರನ್ ಗಳಿಸಿ ಸ್ಪೋಟಕ ಆರಂಭ ಪಡೆದರೂ ನಂತರ ವಿಕೆಟ್ ಒಪ್ಪಿಸಿದರು. ಆ ಮೂಲಕ ಫ್ಯಾನ್ಸ್‌ಗೆ ಮತ್ತೊಮ್ಮೆ ನಿರಾಶೆ ಮೂಡಿಸಿದರು.
8 ಎಸೆತಗಳಲ್ಲಿ 22 ರನ್ ಗಳಿಸಿ ವಿಕೆಟ್ ಒಪ್ಪಿಸಿದ ಸಂಜು. -
ನವದೆಹಲಿ: ಆರಂಭಿಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ಅನುಪಸ್ಥಿತಿಯಲ್ಲಿ ನಮೀಬಿಯಾ ವಿರುದ್ಧದ 2026ರ ಐಸಿಸಿ ಟಿ20 ವಿಶ್ವಕಪ್ (IND vs NAM) ಟೂರ್ನಿಯ ಪಂದ್ಯದಲ್ಲಿ ಸಿಕ್ಕ ಅವಕಾಶವನ್ನು ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ (Sanju Samnson) ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾದರು. ಇಶಾನ್ ಕಿಶನ್ (Ishan Kishan) ಜೊತೆ ಇನಿಂಗ್ಸ್ ಆರಂಭಿಸಿದ ಸಂಜು, ಆರಂಭಿಕ 8 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ ಒಂದು ಬೌಂಡರಿಯೊಂದಿಗೆ 22 ರನ್‌ಗಳನ್ನು ಚಚ್ಚಿದ್ದರು. ಆ ಮೂಲಕ ದೊಡ್ಡ ಇನಿಂಗ್ಸ್ ಆಡುವ ಭರವಸೆಯನ್ನು ನೀಡಿದರು. ಆದರೆ, ತಮ್ಮ ಎಂಟನೇ ಎಸೆತದಲ್ಲಿ ದೊಡ್ಡ ಸಿಕ್ಸರ್ ಹೊಡೆಯಲು ಪ್ರಯತ್ನಿಸಿ ಲಾಂಗ್ ಆನ್‌ನಲ್ಲಿ ಕ್ಯಾಚ್ ಕೊಟ್ಟರು.
ಗುರುವಾರ ಇಲ್ಲಿನ ಅರುಣ್ ಜೆಟ್ಲಿ ಕ್ರೀಡಾಂಗಣದಲ್ಲಿ ʻಎʼ ಗುಂಪಿನ ಪಂದ್ಯದಲ್ಲಿ ಟಾಸ್ ಸೋತ ಭಾರತ ತಂಡ ಮೊದಲು ಬ್ಯಾಟ್ ಮಾಡುವಂತಹ ಪರಿಸ್ಥಿತಿಗೆ ಒಳಗಾಯಿತು. ಅಭಿಷೇಕ್ ಶರ್ಮಾ ಅಸ್ವಸ್ಥತೆಯಿಂದ ಗೈರಾಗಿದ್ದ ಹಿನ್ನೆಲೆಯಲ್ಲಿ ಸಂಜು ಸ್ಯಾಮ್ಸನ್ ಅವರಿಗೆ ಇಶಾನ್ ಕಿಶನ್ ಜೊತೆ ಆರಂಭಿಕ ಜೋಡಿಯಾಗಿ ಅವಕಾಶ ದೊರಕಿತ್ತು. ಆಕ್ರಮಣಕಾರಿ ಮನೋಭಾವದೊಂದಿಗೆ ಬ್ಯಾಟಿಂಗ್ ಆರಂಭಿಸಿದ ಸಂಜು, ಕೆಲವು ಅದ್ಭುತ ಬೌಂಡರಿಗಳು ಮತ್ತು ಗಗನಕ್ಕೇರಿದ ಸಿಕ್ಸರ್‌ಗಳ ಮೂಲಕ ರನ್‌ಗತಿ ಹೆಚ್ಚಿಸಿದರು. ಅವರ ಟೈಮಿಂಗ್ ಮತ್ತು ಶಾಟ್‌ಗಳ ಆಯ್ಕೆ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
IND vs NAM: 4 ಎಸೆತಗಳಲ್ಲಿ 4 ಸಿಕ್ಸರ್, 20 ಎಸೆತಗಳಲ್ಲಿಅರ್ಧಶತಕ ಬಾರಿಸಿದ ಇಶಾನ್ ಕಿಶನ್!
ಆದರೆ ಉತ್ತಮ ಆರಂಭದ ನಂತರ ದೊಡ್ಡ ಮೊತ್ತ ಕಲೆಹಾಕುವ ಹೊಣೆಗಾರಿಕೆಯನ್ನು ನಿರ್ವಹಿಸುವಲ್ಲಿ ಅವರು ವಿಫಲರಾದರು. ಒತ್ತಡರಹಿತ ಪರಿಸ್ಥಿತಿಯಲ್ಲಿ ದೀರ್ಘ ಇನಿಂಗ್ಸ್ ಕಟ್ಟಬಹುದಾಗಿದ್ದರೂ, ತಪ್ಪಾದ ಶಾಟ್ ಆಯ್ಕೆ ಕಾರಣವಾಗಿ ವಿಕೆಟ್ ಕಳೆದುಕೊಂಡರು. ಅವರ ವಿಕೆಟ್ ಬೀಳುತ್ತಿದ್ದಂತೆ ಭಾರತ ಶಿಬಿರದಲ್ಲಿ ಕ್ಷಣಿಕ ನಿಶ್ಶಬ್ದ ಆವರಿಸಿತು. ಸಂಜುಗೆ ಇದು ಮಹತ್ವದ ಅವಕಾಶವಾಗಿತ್ತು. ಪಾಕಿಸ್ತಾನ ವಿರುದ್ಧದ ಪ್ರಮುಖ ಪಂದ್ಯಕ್ಕೂ ಮುನ್ನ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಲು ಈ ಇನಿಂಗ್ಸ್ ನೆರವಾಗಬಹುದಿತ್ತು. ಆದರೆ ಅಲ್ಪ ಪ್ರದರ್ಶನಕ್ಕೆ ಸೀಮಿತವಾದುದರಿಂದ, ಮುಂದಿನ ಪಂದ್ಯಗಳಲ್ಲಿ ಅವರು ಇನ್ನಷ್ಟು ಸ್ಥಿರತೆ ತೋರಬೇಕಿರುವ ಅಗತ್ಯ ಸ್ಪಷ್ಟವಾಗಿದೆ.
People are so busy trolling Sanju Samson. But what about the innings played by Tilak Varma, Shivam Dube, Rinku Singh. Sanju innings has done much Positive for India than rest of the three pic.twitter.com/n3nPU5xMBy
— 𝖇 𝖗 𝖚 𝖙 𝖚 (@Brutu24) February 12, 2026
ಭಾರತ ತಂಡದ ದೃಷ್ಟಿಯಲ್ಲಿ ಅಗ್ರ ಬ್ಯಾಟಿಂಗ್ ಕ್ರಮಾಂಕದ ಸ್ಥಿರ ಪ್ರದರ್ಶನ ಅತ್ಯಂತ ಮುಖ್ಯ. ಸಂಜು ಸ್ಯಾಮ್ಸನ್ ಅವರ ಪ್ರತಿಭೆ ಕುರಿತು ಯಾವುದೇ ಅನುಮಾನವಿಲ್ಲದಿದ್ದರೂ, ಅದನ್ನು ದೀರ್ಘ ಇನಿಂಗ್ಸ್‌ಗಳ ಮೂಲಕ ಸಾಬೀತುಪಡಿಸುವುದು ಈಗ ಅವಶ್ಯಕವಾಗಿದೆ. ಕಳೆದ ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿಯೂ ಅವರು ಸತತ ವೈಫಲ್ಯ ಅನುಭವಿಸಿದ್ದರು. ಅಲ್ಲಿ ಆಡಿದ್ದ ನಾಲ್ಕು ಇನಿಂಗ್ಸ್‌ಗಳಿಂದ ಒಂದೇ ಒಂದು ಅರ್ಧಶತಕವನ್ನು ಸಿಡಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಇನ್‌ಫಾರ್ಮ್ ಬ್ಯಾಟರ್ ಇಶಾನ್ ಕಿಶನ್ ಅವರು, ಟಿ20 ವಿಶ್ವಕಪ್ ಟೂರ್ನಿಯ ಭಾರತ ತಂಡದಲ್ಲಿ ವಿಕೆಟ್ ಕೀಪರ್ ಮೊದಲ ಪ್ರಾಶಸ್ತ್ಯ ನೀಡಲಾಯಿತು. ಇದರ ಹೊರತಾಗಿಯೂ ಅಭಿಷೇಕ್ ಅನಾರೋಗ್ಯದ ಕಾರಣ ಸಂಜುಗೆ ಅದೃಷ್ಟ ಒಲಿದು ಬಂತಾದರೂ ಅದನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾದರು.
IND vs NAM: ನಮೀಬಿಯಾ ಎದುರು ಟಾಸ್ ಸೋತ ಭಾರತ ತಂಡ ಮೊದಲ ಬ್ಯಾಟಿಂಗ್!
209 ರನ್ ಕಲೆ ಹಾಕಿದ ಟೀಮ್ ಇಂಡಿಯಾ
ಸಂಜು ಸ್ಯಾಮ್ಸನ್ ಬೇಗ ಮಿಂಚಿ ಮರೆಯಾದರೂ ಮತ್ತೊಬ್ಬ ಆರಂಭಿಕ ಇಶಾನ್ ಕಿಶನ್ ಕೆಲಕಾಲ ಅಬ್ಬರಿಸಿದರು. ಅವರು ಆರಂಭಿಕ 5 ಓವರ್‌ಗಳಲ್ಲಿ ನಿಧಾನಗತಿಯಲ್ಲಿ ಆಡಿದರೂ ಆರನೇ ಓವರ್‌ನಲ್ಲಿ ತಮ್ಮ ನೈಜ ಸ್ವರೂಪವನ್ನು ಬ್ಯಾಟಿಂಗ್‌ನಲ್ಲಿ ತೋರಿದರು. ಆ ಮೂಲಕ ಕೇವಲ 20 ಎಸೆತಗಳಲ್ಲಿ ಅರ್ಧಶತಕವನ್ನು ಬಾರಿಸಿ ತಂಡಕ್ಕೆ ಭರ್ಜರಿ ಆರಂಭ ಒದಗಿಸಿದರು. ಅವರು 24 ಎಸೆತಗಳಲ್ಲಿ 61 ರನ್ ಗಳಿಸಿ ಔಟ್ ಆದರು. ಮಧ್ಯಮ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ 28 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 4 ಬೌಂಡರಿಗಳೊಂದಿಗೆ 52 ರನ್ ಗಳಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಅಂತಿಮವಾಗಿ ಭಾರತ ತನ್ನ ಪಾಲಿನ 20 ಓವರ್‌ಗಳಿಗೆ 9 ವಿಕೆಟ್‌ಗಳ ನಷ್ಟಕ್ಕೆ 209 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ನಮೀಬಿಯಾಗೆ 210 ರನ್‌ಗಳ ಗುರಿಯನ್ನು ನೀಡಿತು.