T20 World Cup: ಶಿವಂ ದುಬೆಗೆ ಬೌಲ್ ಮಾಡುವುದು ತಂಬಾ ಕಠಿಣ ಎಂದ ಸುನೀಲ್ ಗವಾಸ್ಕರ್!
ಪ್ರಸ್ತುತ ನಡೆಯುತ್ತಿರುವ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಉತ್ತಮ ಪ್ರದರ್ಶನವನ್ನು ತೋರುತ್ತಿದೆ. ಎ ಗ್ರೂಪ್‌ನಲ್ಲಿ ಆಡಿದ ನಾಲ್ಕೂ ಪಂದ್ಯಗಳನ್ನು ಗೆದ್ದು ಟೂರ್ನಿಯ ಸೂಪರ್-8ಕ್ಕೆ ಪ್ರವೇಶ ಮಾಡಿದೆ. ಅಂದ ಹಾಗೆ ಭಾರತ ತಂಡದಲ್ಲಿ ಶಿವಂ ದುಬೆಗೆ ಬೌಲ್ ಮಾಡುವುದು ತುಂಬಾ ಕಷ್ಟ ಎಂದು ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಭಿಷೇಕ್ ಶರ್ಮಾಗೆ ಸಲಹೆ ನೀಡಿದ ಸುನೀಲ್ ಗವಾಸ್ಕರ್. -
ನವದೆಹಲಿ: ಭಾರತ ತಂಡ ಪ್ರಸ್ತುತ ನಡೆಯುತ್ತಿರುವ 2026ರ ಐಸಿಸಿ ಟಿ20 ವಿಶ್ವಕಪ್ (ICC T20 World Cup 2026) ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನವನ್ನು ತೋರುತ್ತಿದೆ. ಎ ಗುಂಪಿನ ನಾಲ್ಕೂ ಪಂದ್ಯಗಳನ್ನು ಗೆಲ್ಲುವ ಮೂಲಕ ಟೀಮ್ ಇಂಡಿಯಾ ಸೂಪರ್-8ರ ಹಂತಕ್ಕೆ ಪ್ರವೇಶ ಮಾಡಿದೆ. ಭಾರತ ತಂಡದ ಪರ ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಹಾಗೂ ಶಿವಂ ದುಬೆ ಬ್ಯಾಟಿಂಗ್‌ನಲ್ಲಿ ಮಿಂಚುತ್ತಿದ್ದಾರೆ. ಆದರೆ, ಭಾರತ ತಂಡದಲ್ಲಿ ಸೀಮ್ ಬೌಲಿಂಗ್ ಆಲ್‌ರೌಂಡರ್ ಶಿವಂ ದುಬೆಗೆ (Shivam Dube) ಬೌಲ್ ಮಾಡುವುದು ತುಂಬಾನೆ ಕಷ್ಟ ಎಂದು ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ (Sunil Gasvaskar) ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನೆದರ್ಲೆಂಡ್ಸ್ ವಿರುದ್ದದ ಕೊನೆಯ ಪಂದ್ಯದಲ್ಲಿ ಶಿವಂ ದುಬೆ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದರು. ಅವರು 66 ರನ್‌ಗಳನ್ನು ಸಿಡಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜಿಯೊ ಹಾಟ್‌ಸ್ಟಾರ್ ಜೊತೆ ಮಾತನಾಡಿದ ಸುನೀಲ್ ಗವಾಸ್ಕರ್, ಶಿವಂ ದುಬೆ ಅವರನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಎಡಗೈ ಬ್ಯಾಟ್ಸ್‌ಮನ್‌ಗೆ ಬೌಲ್ ಮಾಡುವುದು ತುಂಬಾ ಕಠಿಣ ಎಂದಿದ್ದಾರೆ.
SL vs ZIM: ಅರ್ಧಶತಕ ಸಿಡಿಸಿ ವಿರಾಟ್ ಕೊಹ್ಲಿ ಒಳಗೊಂಡ ಎಲೈಟ್ ಲಿಸ್ಟ್‌ಗೆ ಸೇರಿದ ಪಥುಮ್ ನಿಸಾಂಕ!
ಶಿವಂ ದುಬೆಗೆ ಬೌಲ್ ಮಾಡುವುದು ಕಠಿಣ
“ಶಿವಂ ದುಬೆ ಅವರಿಗೆ ಬೌಲ್ ಮಾಡುವುದು ತುಂಬಾ ಕಷ್ಟ, ಏಕೆಂದರೆ ಅವರ ಬಳಿ ವಿಭಿನ್ನ ರೀತಿಯ ಶಾಟ್‌ಗಳ ಸಂಗ್ರಹವಿದೆ. ಆಫ್ ಸ್ಟಂಪ್ ಹೊರಗೆ ಚೆಂಡು ಹಾಕಿದರೂ, ಅವರು ಲಾಂಗ್-ಆನ್ ಮೇಲೆ ಬಲವಾಗಿ ಸಿಕ್ಸರ್ ಹೊಡೆಯುವ ಸಾಮರ್ಥ್ಯ ಹೊಂದಿದ್ದಾರೆ. ಅವರು ಕೇವಲ ಮಿಡ್‌ವಿಕೆಟ್ ಮತ್ತು ಸ್ಕ್ವೇರ್-ಲೆಗ್ ದಿಕ್ಕಿನಲ್ಲಿ ಮಾತ್ರ ಹೊಡೆಯಲು ನೋಡುತ್ತಿರುವುದಿಲ್ಲ. ಲಾಂಗ್-ಆಫ್ ಮೇಲೆಯೂ ಚೆಂಡನ್ನು ಕ್ಲಿಯರ್ ಮಾಡಲು ಅವರಿಗೆ ಸಾಮರ್ಥ್ಯವಿದೆ," ಎಂದು ಸುನೀಲ್ ಗವಾಸ್ಕರ್ ಹೇಳಿದ್ದಾರೆ.
"ಹೆಚ್ಚುವರಿ ಕವರ್ಸ್ ಮೇಲೆ ಇನ್‌ಸೈಡ್-ಔಟ್ ಶಾಟ್ ಹೊಡೆಯುವುದನ್ನು ಕಲಿಯಲು ಅವರು ಶ್ರಮಿಸಿದರೆ, ಅವರು ಭಯಾನಕ ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮುತ್ತಾರೆ. ಆಗ ಮೈದಾನದ ಯಾವುದೇ ಭಾಗಕ್ಕೂ ಚೆಂಡನ್ನು ಹೊಡೆಯಲು ಸಾಧ್ಯವಾಗುತ್ತದೆ. ಪ್ರತಿಯೊಂದು ಇನಿಂಗ್ಸ್‌ನೊಂದಿಗೆ ಶಿವಂ ದುಬೆ ಪರಿಪಕ್ವತೆಯತ್ತ ಸಾಗುತ್ತಿರುವ ರೀತಿ ಭಾರತ ತಂಡಕ್ಕೆ ಅತ್ಯಂತ ಶುಭ ಸುದ್ದಿ,” ಎಂದು ಅವರು ಗುಣಗಾನ ಮಾಡಿದ್ದಾರೆ.
SL vs ZIM: ಸಿಕಂದರ್ ರಾಝಾ ಅಬ್ಬರ, ಶ್ರೀಲಂಕಾಗೆ ಆಘಾತ ನೀಡಿದ ಜಿಂಬಾಬ್ವೆ!
ಅಭಿಷೇಕ್ ಶರ್ಮಾಗೆ ಗವಾಸ್ಕರ್ ಸಲಹೆ
ಈ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡಿದ ಮೂರೂ ಪಂದ್ಯಗಳಲ್ಲಿ ಡಕ್‌ಔಟ್ ಆಗಿರುವ ಆರಂಭಿಕ ಅಭಿಷೇಕ್ ಶರ್ಮಾಗೂ ಸುನೀಲ್ ಗವಾಸ್ಕರ್ ಮಹತ್ವದ ಸಲಹೆಯನ್ನು ನೀಡಿದ್ದಾರೆ. ಮೊದಲ ಎಸೆತದಲ್ಲಿಯೇ ಫೋರ್, ಸಿಕ್ಸರ್ ಹೊಡೆಯುವ ಬದಲು ಕ್ರೀಸ್‌ನಲ್ಲಿ ಸ್ವಲ್ಪ ಸಮಯ ಕಳೆಯಬೇಕು ಎಂದಿದ್ದಾರೆ.
"ಅಭಿಷೇಕ್ ಶರ್ಮಾ ಒಳ್ಳೆಯ ಹುಡುಗ. ಆದರೆ ನಿರೀಕ್ಷೆಗಳ ಒತ್ತಡ ಅವರ ಮೇಲೆ ಕಾಣಿಸುತ್ತಿದೆ. ಅಮೆರಿಕ ವಿರುದ್ಧದ ಪಂದ್ಯದಲ್ಲಿ ಉತ್ತಮ ಆರಂಭ ಸಿಕ್ಕಿದ್ದರೆ ಪರಿಸ್ಥಿತಿ ಬೇರೆಯಾಗಿರುತ್ತಿತ್ತು. ಈಗ ದೊಡ್ಡ ಸಿಕ್ಸರ್ ಹೊಡೆಯುವ ಆಟಗಾರ ಮತ್ತು ಪ್ರಮುಖ ಬ್ಯಾಟರ್ ಎಂಬ ಒತ್ತಡ ಸ್ಪಷ್ಟವಾಗಿ ಗೋಚರಿಸುತ್ತಿದೆ. ಅವರ ಬಳಿ ವಿಭಿನ್ನ ಶಾಟ್‌ಗಳ ಸಾಮರ್ಥ್ಯ ಇರುವುದರಿಂದ ಅವರು ಕ್ರೀಸ್‌ನಲ್ಲಿ ಹೆಚ್ಚು ಸಮಯ ಕಳೆಯಬೇಕು. ಇನಿಂಗ್ಸ್‌ನ ಮೊದಲ ಚೆಂಡಿನಲ್ಲೇ ಬೌಂಡರಿ ಅಥವಾ ಸಿಕ್ಸರ್ ಹೊಡೆಯಲು ಯತ್ನಿಸಬಾರದು. ದೊಡ್ಡ ಶಾಟ್‌ಗಳು ಸಹಜವಾಗಿ ಬಂದರೆ ಅದು ಒಳ್ಳೆಯದೇ,” ಎಂದು ಗವಾಸ್ಕರ್ ಹೇಳಿದ್ದಾರೆ.