ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಏಷ್ಯಾ ಕಪ್‌ ಟೂರ್ನಿಗೂ ಮುನ್ನ 42 ಎಸೆತಗಳಲ್ಲಿ ಶತಕ ಬಾರಿಸಿದ ಸಂಜು ಸ್ಯಾಮ್ಸನ್‌!

ಮುಂಬರುವ ಏಷ್ಯಾ ಕಪ್‌ ಟೂರ್ನಿಗೂ ಮುನ್ನ ಭಾರತ ತಂಡದ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಸಂಜು ಸ್ಯಾಮ್ಸನ್‌ ಭರ್ಜರಿ ಫಾರ್ಮ್‌ಗೆ ಮರಳಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಕೇರಳ ಕ್ರಿಕೆಟ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ಕೇವಲ 42 ಎಸೆತಗಳಲ್ಲಿ ಶತಕವನ್ನು ಬಾರಿಸಿದ್ದಾರೆ. ಆ ಮೂಲಕ ಭಾರತ ತಂಡದ ಆರಂಭಿಕ ಸ್ಥಾನಕ್ಕೆ ಬಲವಾದ ಆಕಾಂಕ್ಷಿ ಎಂಬುದನ್ನು ಬಲವಾಗಿ ಹೇಳಿದ್ದಾರೆ.

42 ಎಸೆತಗಳಲ್ಲಿ ಸೆಂಚುರಿ ಬಾರಿಸಿದ ಸಂಜು ಸ್ಯಾಮ್ಸನ್‌!

ಕೇರಳ ಕ್ರಿಕೆಟ್‌ ಲೀಗ್‌ನಲ್ಲಿ ಶತಕ ಬಾರಿಸಿದ ಸಂಜು ಸ್ಯಾಮ್ಸನ್‌.

Profile Ramesh Kote Aug 25, 2025 6:59 PM

ನವದೆಹಲಿ: ಪ್ರಸ್ರುತ ನಡೆಯುತ್ತಿರುವ ಕೇರಳ ಕ್ರಿಕೆಟ್‌ ಲೀಗ್‌ (KCL 2025) ಟೂರ್ನಿಯಲ್ಲಿ ಭಾರತ ತಂಡದ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಸಂಜು ಸ್ಯಾಮ್ಸನ್‌ (Sanju Samson) ಮಿಂಚುತ್ತಿದ್ದಾರೆ. ಅವರು ಕೊಲ್ಲಮ್‌ ಸೈಲರ್ಸ್‌ ವಿರುದ್ಧದ ಪಂದ್ಯದಲ್ಲಿ ಕೊಚ್ಚಿ ಬ್ಲೂ ಟೈಗರ್ಸ್‌ ತಂಡದ ಭರ್ಜರಿ ಶತಕವನ್ನು ಬಾರಿಸಿದ್ದಾರೆ. ಕೊಚ್ಚಿ ತಂಡದ ಪರ ಇನಿಂಗ್ಸ್‌ ಆರಂಭಿಸಿದ ಸಂಜು ಸ್ಯಾಮ್ಸನ್‌ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿ 42 ಎಸೆತಗಳಲ್ಲಿ ಭರ್ಜರಿ ಶತಕವನ್ನು ಬಾರಿಸಿದರು. ಆ ಮೂಲಕ 2025ರ ಏಷ್ಯಾ ಕಪ್‌ (Asia Cup 2025) ಟೂರ್ನಿಗೂ ಮುನ್ನ ಭರ್ಜರಿ ಫಾರ್ಮ್‌ಗೆ ಮರಳಿದ್ದಾರೆ.

ಕಳೆದ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಿದ್ದ ಸಂಜು ಸ್ಯಾಮ್ಸನ್‌, 3 ಎಸೆತಗಳಲ್ಲಿ 6 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಕೊಲ್ಲಮ್‌ ಸೈಲರ್ಸ್‌ ತಂಡದ ವಿರುದ್ಧದ ಪಂದ್ಯದಲ್ಲಿ ತಮ್ಮ ನೆಚ್ಚಿನ ಅಗ್ರ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಸಂಜು ಸ್ಯಾಮ್ಸನ್‌, ಸಿಡಿಲಬ್ಬರದ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರು. ಕೇವಲ 42 ಎಸೆತಗಳಲ್ಲಿ ಶತಕವನ್ನು ಬಾರಿಸಿದ ಸಂಜು ಸ್ಯಾಮ್ಸನ್‌, ಅಂತಿಮವಾಗಿ 51 ಎಸೆತಗಳಲ್ಲಿ 14 ಬೌಂಡರಿಗಳು ಹಾಗೂ ಏಳು ಸಿಕ್ಸರ್‌ಗಳ ಮೂಲಕ 121 ರನ್‌ಗಳನ್ನು ದಾಖಲಿಸಿದರು. ಆ ಮೂಲಕ ಕೊಚ್ಚಿ ಟೈಗರ್ಸ್‌ ತಂಡ 237 ರನ್‌ಗಳನ್ನು ಚೇಸ್‌ ಮಾಡಲು ನೆರವು ನೀಡಿದರು. ಇದರ ಫಲವಾಗಿ ಸಂಜು ಸ್ಯಾಮ್ಸನ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Asia Cup 2025: ಏಷ್ಯಾಕಪ್‌ಗೆ ಪ್ರಕಟಗೊಂಡ ತಂಡಗಳ ಪಟ್ಟಿ ಹೀಗಿದೆ

ತಮ್ಮ ಶತಕದ ಇನಿಂಗ್ಸ್‌ ಜೊತೆಗೆ ಸಂಜು ಸ್ಯಾಮ್ಸನ್‌, ಮುಹಮ್ಮದ್‌ ಶಾನು (39 ರನ್‌) ಅವರ ಜೊತೆಗೆ ಎರಡನೇ ವಿಕೆಟ್‌ಗೆ 89 ರನ್‌ಗಳ ಜೊತೆಯಾಟವನ್ನು ಆಡಿದರು. ಕೊಚ್ಚಿ ಪರ ಮುಹಮ್ಮದ್‌ ಆಶಿಕ್‌ ಅವರು ಕೇವಲ 18 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ ಐದು ಸಿಕ್ಸರ್‌ಗಳ ಮೂಲಕ 45* ರನ್‌ಗಳ ಉಪಯುಕ್ತ ಕಾಣಿಕೆ ನೀಡಿದರು. ಕೊನೆಯ ಎಸೆತಗಳಲ್ಲಿ 6 ರನ್‌ ಅಗತ್ಯವಿದ್ದ ವೇಳೆ ಮುಹಮ್ಮದ್‌ ಆಶಿಕ್‌ ಲಾಂಗ್‌ ಆನ್‌ ಮೇಲೆ ಸಿಕ್ಸರ್‌ ಬಾರಿಸಿ ಕೊಚ್ಚಿ ತಂಡವನ್ನು ಗೆಲ್ಲಿಸಿದರು.

ಏಷ್ಯಾ ಕಪ್‌ ಟೂರ್ನಿಯಲ್ಲಿ ಸಂಜು ಸ್ಯಾಮ್ಸನ್‌ ಅವರು ಮಧ್ಯಮ ಕ್ರಮಾಂಕದಲ್ಲಿ ಆಡಬಹುದೆಂಬ ಚರ್ಚೆಗಳು ನಡೆಯುತ್ತಿರುವಾಗಲೇ ಸಂಜು ಸ್ಯಾಮ್ಸನ್‌ ಆರಂಭಿಕ ಸ್ಥಾನದಲ್ಲಿ ಶತಕ ಸಿಡಿಸಿದ ಭಾರತ ತಂಡದ ಕೋಚ್‌ ಗೌತಮ್‌ ಗಂಭೀರ್‌ಗೆ ಒತ್ತಡ ಹಾಕಿದ್ದಾರೆ. ಭಾರತ ಟೆಸ್ಟ್‌ ತಂಡದ ನಾಯಕ ಶುಭಮನ್‌ ಗಿಲ್‌ ಭಾರತ ಟಿ20 ತಂಡಕ್ಕೆ ಮರಳಿದ್ದು, ಅವರು ಇನಿಂಗ್ಸ್‌ ಆರಂಭಿಸಬಹುದು. ಹಾಗಾಗಿ ಸಂಜು ಸ್ಯಾಮ್ಸನ್‌ ವಿಕೆಟ್‌ ಕೀಪರ್‌ ಆಗಿ ಮಧ್ಯಮ ಕ್ರಮಾಂಕದಲ್ಲಿ ಆಡಬಹುದು.

Asia Cup 2025: ʻಜಸ್‌ಪ್ರೀತ್‌ ಬುಮ್ರಾ ಎಲ್ಲಾ ಪಂದ್ಯಗಳನ್ನು ಆಡಲ್ಲʼ-ಎಬಿಡಿ ಅಚ್ಚರಿ ಹೇಳಿಕೆ!

2024ರ ಅಕ್ಟೋಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಅವರಿಂದ ಆರಂಭಿಕ ಆಟಗಾರನಾಗಿ ಬಡ್ತಿ ಪಡೆದ ನಂತರ ಸ್ಯಾಮ್ಸನ್, ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅಂದಿನಿಂದ ಈ ಬಲಗೈ ಬ್ಯಾಟ್ಸ್‌ಮನ್ 12 ಇನಿಂಗ್ಸ್‌ಗಳಿಂದ ಮೂರು ಶತಕಗಳನ್ನು ಬಾರಿಸಿದ್ದಾರೆ, 37.90ರ ಸರಾಸರಿಯಲ್ಲಿ 417 ರನ್ ಗಳಿಸಿದ್ದಾರೆ.

ಶುಭಮನ್‌ ಗಿಲ್‌ ಅವರ ಮರಳುವಿಕೆಯಿಂದ ಸಂಜು ಸ್ಯಾಮ್ಸನ್‌ ತಮ್ಮ ಆರಂಭಿಕ ಸ್ಥಾನವನ್ನು ತ್ಯಾಗ ಮಾಡಲಿದ್ದಾರೆಯೇ? ಎಂದು ಕಾದು ನೋಡಬೇಕಾಗಿದೆ. ಈ ನಿಟ್ಟಿಯಲ್ಲಿ ಗೌತಮ್‌ ಗಂಭೀರ್‌ ಒಳಗೊಂಡ ಟೀಮ್‌ ಮ್ಯಾನೇಜ್‌ಮೆಂಟ್‌ ಯಾವ ನಿರ್ಧಾರವನ್ನು ತೆಗೆದುಕೊಳ್ಳಲಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.