ವೈಭವ್ ಸೂರ್ಯವಂಶಿಯಿಂದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೆ ಒತ್ತಡ: ಗ್ರೇಮ್ ಸ್ವಾನ್!
ಅಫ್ಘಾನಿಸ್ತಾನ ಹಾಗೂ ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಗಳ ಭಾರತ ತಂಡಕ್ಕೆ ವೈಭವ್ ಸೂರ್ಯವಂಶಿ ಆಯ್ಕೆಯಾಗುವ ಮೂಲಕ ಮಾಜಿ ನಾಯಕರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಮೇಲೆ ಒತ್ತಡವನ್ನು ಹೇರಿದ್ದಾರೆಂದು ಇಂಗ್ಲೆಂಡ್ ಮಾಜಿ ಸ್ಪಿನ್ನರ್ ಗ್ರೇಮ್ ಸ್ವಾನ್ ಎಚ್ಚರಿಕೆಯನ್ನು ನೀಡಿದ್ದಾರೆ.
ವೈಭವ್ ಸೂರ್ಯವಂಶಿಯಿಂದ ಕೊಹ್ಲಿ, ರೋಹಿತ್‌ಗೆ ಒತ್ತಡ. -
ನವದೆಹಲಿ: ಅಫ್ಘಾನಿಸ್ತಾನ ಹಾಗೂ ಇಂಗ್ಲೆಂಡ್ ಪ್ರವಾಸದ ಟಿ20ಐ ಸರಣಿಗಳ ಭಾರತ ತಂಡಕ್ಕೆ ಆಯ್ಕೆಯಾಗುವ ಮೂಲಕ ಯುವ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ(Vaibhav Sooryavanshi), 50 ಓವರ್‌ಗಳ ಸ್ವರೂಪದಲ್ಲಿ ಸಕ್ರಿಯರಾಗಿರುವ ವಿರಾಟ್ ಕೊಹ್ಲಿ (Virat Kohli) ಹಾಗೂ ರೋಹಿತ್ ಶರ್ಮಾ (Rohit Sharma) ಅವರ ಮೇಲೆ ಒತ್ತಡವನ್ನು ಹಾಕಿದ್ದಾರೆಂದು ಇಂಗ್ಲೆಂಡ್ ಮಾಜಿ ಸ್ಪಿನ್ನರ್ ಗ್ರೇಮ್ ಸ್ವಾನ್ ಎಚ್ಚರಿಕೆಯನ್ನು ನೀಡಿದ್ದಾರೆ. ತಮ್ಮ ವೃತ್ತಿ ಜೀವನದ ಕೊನೆಯ ಅವಧಿಯಲ್ಲಿ ಇರುವ ಆಟಗಾರರಿಗೆ ಭಾರತ ತಂಡಕ್ಕೆ ಆಗಮಿಸಿ ಭಯಮುಕ್ತ ಬ್ಯಾಟಿಂಗ್ ಪ್ರದರ್ಶನವನ್ನು ತೋರುತ್ತಿರುವ ಯುವ ಬ್ಯಾಟ್ಸ್‌ಮನ್, ಏಕದಿನ ತಂಡಕ್ಕೆ ಪ್ರವೇಶಿಸಿದರೂ ಅಚ್ಚರಿ ಇಲ್ಲ ಎಂಬುದು ಆಂಗ್ಲರ ಮಾಜಿ ಸ್ಪಿನ್ ಅಭಿಪ್ರಾಯವಾಗಿದೆ.
"ಖಂಡಿತವಾಗಿಯೂ ಯಾವುದೇ ಆಟಗಾರ ವೃತ್ತಿಜೀವನದ ಕೊನೆಯ ಹಂತಕ್ಕೆ ಅಥವಾ ಎರಡನೇ ಅರ್ಧಕ್ಕೆ ಬಂದಾಗ ಇದು ಅನಿವಾರ್ಯ. ನೀವು ಎಷ್ಟು ಉತ್ತಮ ಪ್ರದರ್ಶನ ನೀಡುತ್ತಿದ್ದರೂ, ಜನರು ಸಹಜವಾಗಿಯೇ ನಿಮ್ಮ ಉತ್ತರಾಧಿಕಾರಿ ಯಾರು ಎಂಬುದನ್ನು ಹುಡುಕಲು ಆರಂಭಿಸುತ್ತಾರೆ. ನೀವು ಇನ್ನೂ ನಿಮ್ಮ ಆಟದ ಶಿಖರದಲ್ಲಿದ್ದರೂ, 'ಮುಂದಿನ ವಿರಾಟ್ ಯಾರು?', 'ರೋಹಿತ್ ನಿವೃತ್ತಿಯಾದ ಬಳಿಕ ಅವರ ಸ್ಥಾನವನ್ನು ಯಾರು ತುಂಬುತ್ತಾರೆ?' ಎಂಬ ಪ್ರಶ್ನೆಗಳು ಕೇಳಿಬರುತ್ತಲೇ ಇರುತ್ತವೆ. ಇದು ಅತ್ಯಂತ ಸಹಜವಾದ ಬೆಳವಣಿಗೆ," ಎಂದು ಗ್ರೇಮ್ ಸ್ವಾನ್ ಹೇಳಿದ್ದಾರೆ.
"ಇದರ ಜೊತೆಗೆ, ಒಂದೆರಡು ಪಂದ್ಯಗಳಲ್ಲಿ ಕಡಿಮೆ ಮೊತ್ತಕ್ಕೆ ಔಟಾದರೆ, ಎಲ್ಲರ ಗಮನ ತಕ್ಷಣ ನಿಮ್ಮ ಹಿಂದೆ ನಿಂತಿರುವ ಮುಂದಿನ ಆಟಗಾರರ ಕಡೆಗೆ ತಿರುಗುತ್ತದೆ. ಈಗ ಸೂರ್ಯವಂಶಿ ಸೇರಿದಂತೆ ಹಲವು ಯುವ ಪ್ರತಿಭೆಗಳು ಹೊರಹೊಮ್ಮುತ್ತಿರುವುದರಿಂದ, ಭಾರತ ತಂಡದ ಪ್ರಮುಖವಾಗಿ ಆರಂಭಿಕ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಆಟಗಾರರ ಮೇಲೆ ಇನ್ನಷ್ಟು ಜವಾಬ್ದಾರಿ ಮತ್ತು ಒತ್ತಡ ಹೆಚ್ಚಾಗಿದೆ," ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
2027ರ ಏಕದಿನ ವಿಶ್ವಕಪ್ ಟೂರ್ನಿಯು ಸಮೀಪಿಸುತ್ತಿರುವ ಸಂದರ್ಭದಲ್ಲಿ ಭಾರತ ತಂಡ, ಅನುಭವಿಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಅನುಭವವನ್ನು ವೈಭವ್ ಸೂರ್ಯವಂಶಿಯಂತಹ ಉದಯೋನ್ಮುಖ ಯುವ ಪ್ರತಿಭೆಗಳ ಭರವಸೆಯೊಂದಿಗೆ ಸಮತೋಲನಗೊಳಿಸುವ ಅಗತ್ಯವಿದೆ. ಈ ಸಮತೋಲನವನ್ನು ಪರೀಕ್ಷಿಸುವ ಪ್ರಮುಖ ವೇದಿಕೆಯಾಗಿಯೇ ಇಂಗ್ಲೆಂಡ್ ವಿರುದ್ಧದ ಸರಣಿ ಪರಿಣಮಿಸಲಿದೆ ಎಂದು ಸ್ವಾನ್ ಅಭಿಪ್ರಾಯಪಟ್ಟಿದ್ದಾರೆ.
ಸಚಿನ್, ಕೊಹ್ಲಿಗಿಂತ ಹೆಚ್ಚಿನ ಸಾಮರ್ಥ್ಯವನ್ನು ವೈಭವ್ ಸೂರ್ಯವಂಶಿ ಹೊಂದಿದ್ದಾರೆ: ಡೇಲ್ ಸ್ಟೇನ್!
ಆದರೆ, ಅನುಭವಿ ಆಟಗಾರರಿಗೆ ಇದು ಅಂತಿಮ ಆಯ್ಕೆ ಪರೀಕ್ಷೆಯಾಗಿದೆ ಎಂದು ಅವರು ಪರಿಗಣಿಸುವುದಿಲ್ಲ.ಇದೇ ವೇಳೆ, ಇಂಗ್ಲೆಂಡ್‌ನ ವೈಟ್‌ಬಾಲ್ ಕ್ರಿಕೆಟ್ ಋತುವಿನಲ್ಲಿ ಸಾಮಾನ್ಯವಾಗಿ ಬ್ಯಾಟಿಂಗ್‌ಗೆ ಅನುಕೂಲಕರ ಪಿಚ್‌ಗಳು ಮತ್ತು ಪರಿಸ್ಥಿತಿಗಳು ಇರುತ್ತವೆ ಎಂದು ಸ್ವಾನ್ ಉಲ್ಲೇಖಿಸಿದರು. ಇಂತಹ ಪರಿಸ್ಥಿತಿಗಳು ಅನುಭವಿ ಬ್ಯಾಟರ್‌ಗಳ ಜೊತೆಗೆ ಹೊಸ ತಲೆಮಾರಿನ ಯುವ ಆಟಗಾರರಿಗೂ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಉತ್ತಮ ಅವಕಾಶ ಒದಗಿಸಬಹುದು ಎಂದು ಅವರು ಹೇಳಿದ್ದಾರೆ.
ವೈಭವ್ ಸೂರ್ಯವಂಶಿಗೆ ಗಾಯದ ಭೀತಿ
ಪ್ರಸ್ತುತ ಭಾರತ ಎ ತಂಡದೊಂದಿಗೆ ಶ್ರೀಲಂಕಾ ಪ್ರವಾಸದಲ್ಲಿರುವ ವೈಭವ್ ಸೂರ್ಯವಂಶಿ, ಅಭ್ಯಾಸದ ವೇಳೆ ಅಸ್ವಸ್ಥತೆಯನ್ನು ಅನುಭವಿಸಿದ್ದು, ಶ್ರೀಲಂಕಾ ಎ ವಿರುದ್ಧದ ಮುಂಬರುವ ತ್ರಿಕೋನ ಸರಣಿಯ ಪಂದ್ಯವನ್ನು ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ. ಈ ಸಣ್ಣ ಪ್ರಮಾಣದ ಗಾಯ ಅಥವಾ ದೈಹಿಕ ತೊಂದರೆ, ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ನಿರೀಕ್ಷಿಸಲಾಗುತ್ತಿರುವ ಅವರ ಹಿರಿಯ ತಂಡದ ಪದಾರ್ಪಣೆಗೆ ಅಡ್ಡಿಯಾಗಬಹುದೇ ಎಂಬ ಆತಂಕವನ್ನು ಹುಟ್ಟುಹಾಕಿದೆ.
IND-A vs AFG-A: 200ರ ಸ್ಟ್ರೈಕ್ ರೇಟ್‌ನಲ್ಲಿ ಆಡಿದರೂ ಸಿಕ್ಸರ್ ಬಾರಿಸಿದ ವೈಭವ್ ಸೂರ್ಯವಂಶಿ!
ಐಪಿಎಲ್ ಟೂರ್ನಿಯಲ್ಲಿ ದಾಖಲೆಯ ಪ್ರದರ್ಶನದ ಮೂಲಕ ಎಲ್ಲರ ಗಮನ ಸೆಳೆದಿದ್ದ ಸೂರ್ಯವಂಶಿ, ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲೂ ಅದೇ ಯಶಸ್ಸನ್ನು ಮುಂದುವರಿಸುತ್ತಾರೆಯೇ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ. ಆದ್ದರಿಂದ ಅವರ ಫಿಟ್ನೆಸ್ ಕುರಿತು ಹೊರಬಂದಿರುವ ಸುದ್ದಿ ಅಭಿಮಾನಿಗಳ ಗಮನ ಸೆಳೆದಿದ್ದು, ಅವರು ಶೀಘ್ರದಲ್ಲೇ ಸಂಪೂರ್ಣ ಚೇತರಿಸಿಕೊಂಡು ಮೈದಾನಕ್ಕೆ ಮರಳಲಿ ಎಂಬ ಆಶಯ ವ್ಯಕ್ತವಾಗುತ್ತಿದೆ.