ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

GT vs MI: ತಿಲಕ್‌ ಚೊಚ್ಚಲ ಶತಕ; ಗೆಲುವಿನ ಹಳಿಗೆ ಮರಳಿದ ಮುಂಬೈ ಇಂಡಿಯನ್ಸ್‌

IPL 2026: ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್‌ಗೆ ಒತ್ತುಕೊಟ್ಟ ತಿಲಕ್‌, ಮೈದಾನದ ಮೂಲೆ ಮೂಲೆಗೂ ಸಿಕ್ಸರ್‌ ಹಾಗೂ ಬೌಂಡರಿ ಸಿಡಿಸಿ ನೆರದಿದ್ದ ಪ್ರೇಕ್ಷಕರಿಗೆ ಟಿ20 ಕ್ರಿಕೆಟ್‌ನ ಬರಪೂರ ರಂಜನೆ ಒದಗಿಸಿದರು. 45 ಎಸೆತಗಳಿಂದ 7 ಸಿಕ್ಸರ್‌ ಮತ್ತು 8 ಬೌಂಡರಿ ಬಾರಿಸಿ ಅಜೇಯ 101 ರನ್‌ ಗಳಿಸಿದರು. ನಮನ್ ಧೀರ್ 45 ರನ್‌ ಕೊಡುಗೆ ನೀಡಿದರು.

ಮುಂಬೈ ಇಂಡಿಯನ್ಸ್‌ಗೆ ಎರಡನೇ ಗೆಲುವಿನ 'ತಿಲಕ'

Tilak Varma -

Abhilash BC
Abhilash BC Apr 20, 2026 11:21 PM

ಅಹಮದಾಬಾದ್‌, ಎ.20: ತಂಡದ ಸಂಕಷ್ಟದ ಸಮಯದಲ್ಲಿ ತಿಲಕ್‌ ವರ್ಮಾ(101*) ಬಾರಿಸಿದ ಚೊಚ್ಚಲ ಶತಕ ಹಾಗೂ ಬೌಲರ್‌ ಅಶ್ವನಿ ಕುಮಾರ್‌ ಅವರ 4 ವಿಕೆಟ್‌ ಸಾಧನೆಯ ನೆರವು ಪಡೆದ ಮುಂಬೈ ಇಂಡಿಯನ್ಸ್‌ ತಂಡ ಗುಜರಾತ್‌ ಟೈಟಾನ್ಸ್‌(GT vs MI) ವಿರುದ್ಧ 99 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಸತತ 4 ಪಂದ್ಯಗಳ ಸೋಲಿನ ಬಳಿಕ ಮತ್ತೆ ಗೆಲುವಿನ ಹಳಿಗೆ ಮರಳಿದೆ. ಒಟ್ಟಾರೆಯಾಗಿ 2 ಗೆಲುವು ಸಾಧಿಸಿರುವ ಹಾರ್ದಿಕ್‌ ಪಾಂಡ್ಯ ಪಡೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಿಂದ 7ನೇ ಸ್ಥಾನಕ್ಕೆ ಜಿಗಿಯಿತು.

ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಮುಂಬೈ ತಿಲಕ್‌ ವರ್ಮ ಅವರ ಶತಕದ ನೆರವಿನಿಂದ 5 ವಿಕೆಟ್‌ಗೆ 199 ರನ್‌ ಬಾರಿಸಿತು. ದೊಡ್ಡ ಗುರಿ ಬೆನ್ನತ್ತಿದ ಗುಜರಾತ್‌ 15.5 ಓವರ್‌ಗಳಲ್ಲಿ 100 ರನ್‌ಗೆ ಸರ್ವಪತನ ಕಂಡಿತು.

ಚೇಸಿಂಗ್‌ ವೇಳೆ ಗುಜರಾತ್‌ ತಂಡಕ್ಕೆ ಯಾರೂ ಆಸರೆಯಾಗಲಿಲ್ಲ. ಆರಂಭಿಕ ಸಾಯಿ ಸುದರ್ಶನ್‌ ಗೋಲ್ಡನ್‌ ಡಕ್‌ ಆದರೆ, ನಾಯಕ ಶುಭಮನ್‌ ಗಿಲ್‌ 15, ಆ ಬಳಿಕ ಬಂದ ಜಾಸ್‌ ಬಟ್ಲರ್‌(5), ಗ್ಲೆನ್‌ ಫಿಲಿಫ್ಸ್‌(6) ಮತ್ತು ರಾಹುಲ್‌ ತೆವಾಟಿಯ(8) ಹೆಚ್ಚು ಹೊತ್ತು ಕ್ರೀಸ್‌ ಆಕ್ರಮಿಸಿಕೊಳ್ಳಲು ವಿಫಲರಾದರು. ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್‌ ಪರೇಡ್‌ ನಡೆಸಿದರು. ಜಸ್‌ಪ್ರೀತ್‌ ಬುಮ್ರಾ ಈ ಪಂದ್ಯದಲ್ಲಿ ಒಂದು ವಿಕೆಟ್‌ ಪಡೆಯುವ ಮೂಲಕ ಹಾಲಿ ಆವೃತ್ತಿಯಲ್ಲಿ ವಿಕೆಟ್‌ ಖಾತೆ ತೆರೆದರು. 26 ರನ್‌ ಗಳಿಸಿದ ವಾಷಿಂಗ್ಟನ್‌ ಸುಂದರ್‌ ಗುಜರಾತ್‌ ಪರ ಅತ್ಯಧಿಕ ಸ್ಕೋರರ್‌ ಎನಿಸಿಕೊಂಡರು. ಒಟ್ಟಾರೆಯಾಗಿ ಎರಡಂಕಿ ಕಲೆಹಾಕಿದ್ದು ಮೂರು ಮಂದಿ ಮಾತ್ರ.

ದೆಹಲಿ ಆಸ್ಪತ್ರೆಯಲ್ಲಿ ಅಫ್ಘಾನಿಸ್ತಾನದ ಮಾಜಿ ವೇಗಿ ಶಪೂರ್ ಜದ್ರಾನ್ ಜೀವನ್ಮರಣ ಹೋರಾಟ

ಮುಂಬೈ ಪರ ಉತ್ತಮ ಬೌಲಿಂಗ್‌ ದಾಳಿ ನಡೆಸಿದ ಅಶ್ವನಿ ಕುಮಾರ್ 24 ರನ್‌ ವೆಚ್ಚದಲ್ಲಿ ಪ್ರಮುಖ ನಾಲ್ಕು ವಿಕೆಟ್‌ ಕಿತ್ತು ಗುಜರಾತ್‌ ಪತನಕ್ಕೆ ಕಾರಣರಾದರು. ಉಳಿದಂತೆ ಆಫ್ಘಾನ್‌ ಸಿನ್ನರ್‌ ಎ.ಎಂ. ಗಜನ್‌ಫರ್ ಮತ್ತು ಮಿಚೆಲ್‌ ಸ್ಯಾಂಟ್ನರ್‌ ತಲಾ ಎರಡು ವಿಕೆಟ್‌ ಪಡೆದರು. ಪದಾರ್ಪಣ ಪಂದ್ಯವಾಡಿದ ವೇಗಿ ಕ್ರಿಶ್‌ ಭಗತ್‌ ವಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಲಿಲ್ಲ.

ತಿಲಕ್‌ ಚೊಚ್ಚಲ ಶತಕ ಸಂಭ್ರಮ

ಕಳೆದ ಐದು ಪಂದ್ಯಗಳಲ್ಲಿ ತೀರಾ ಕಳಪೆ ಬ್ಯಾಟಿಂಗ್‌ ನಡೆಸಿ ಭಾರೀ ಟೀಕೆ ಎದುರಿಸಿದ್ದ ಎಡಗೈ ಬ್ಯಾಟರ್‌ ತಿಲಕ್‌ ವರ್ಮ ಈ ಪಂದ್ಯದಲ್ಲಿ ಪ್ರಚಂಡ ಬ್ಯಾಟಿಂಗ್‌ ನಡೆಸಿ ಸೊಗಸಾದ ಶತಕ ಬಾರಿಸಿ ಮಿಂಚಿದರು. ಇದು ಅವರ ಚೊಚ್ಚಲ ಐಪಿಎಲ್‌ ಶತಕ. ಶತಕ ಪೂರ್ತಿಗೊಳ್ಳುತ್ತಿದ್ದಂತೆ ಅವರು ಕಿವಿಗೆ ಬೆರಳಿಟ್ಟು ಸಂಭ್ರಮಿಸುವ ಮೂಲಕ ತಮ್ಮದೇ ಆದ ಶೈಲಿಯಲ್ಲಿ ಟೀಕೆಗಳಿಗೆ ಉತ್ತರಿಸಿದರು.

ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್‌ಗೆ ಒತ್ತುಕೊಟ್ಟ ತಿಲಕ್‌, ಮೈದಾನದ ಮೂಲೆ ಮೂಲೆಗೂ ಸಿಕ್ಸರ್‌ ಹಾಗೂ ಬೌಂಡರಿ ಸಿಡಿಸಿ ನೆರದಿದ್ದ ಪ್ರೇಕ್ಷಕರಿಗೆ ಟಿ20 ಕ್ರಿಕೆಟ್‌ನ ಬರಪೂರ ರಂಜನೆ ಒದಗಿಸಿದರು. 45 ಎಸೆತಗಳಿಂದ 7 ಸಿಕ್ಸರ್‌ ಮತ್ತು 8 ಬೌಂಡರಿ ಬಾರಿಸಿ ಅಜೇಯ 101 ರನ್‌ ಗಳಿಸಿದರು. ನಮನ್ ಧೀರ್ 45 ರನ್‌ ಕೊಡುಗೆ ನೀಡಿದರು.



ಕಳೆದ ಪಂದ್ಯದ ಶತಕ ವೀರ ಕ್ವಿಂಟನ್‌ ಡಿ ಕಾಕ್‌(13), ಚೊಚ್ಚಲ ಪಂದ್ಯವನ್ನಾಡಿದ ದಾನಿಶ್ ಮಾಲೆವಾರ್(2), ಸೂರ್ಯಕುಮಾರ್‌ ಯಾದವ್‌(15) ಅಗ್ಗಕ್ಕೆ ಔಟಾದರು. ಗುಜರಾತ್‌ ಪರ ಬೌಲಿಂಗ್‌ನಲ್ಲಿ ವೇಗಿ ಕಗಿಸೊ ರಬಾಡ 3 ವಿಕೆಟ್‌ ಕಿತ್ತರು. ಆದರೆ ಪಂದ್ಯ ಸೋತ ಕಾರಣ ಇವರ ಶ್ರಮ ವ್ಯರ್ಥವಾಯಿತು. ಉತ್ತಮ ಲಯದಲ್ಲಿದ್ದ ಕನ್ನಡಿಗ ಪ್ರಸಿದ್ಧ್‌ ಕೃಷ್ಣ ಈ ಪಂದ್ಯದಲ್ಲಿ ದುಬಾರಿಯಾದರು. 54 ರನ್‌ ಬಿಟ್ಟುಕೊಟ್ಟರು. ಅನುಭವಿ ರಶೀದ್‌ ಖಾನ್‌ ಕೂಡ 33 ರನ್‌ ಹೊಡೆಸಿಕೊಂಡ ವಿಕೆಟ್‌ ಲೆಸ್‌ ಎನಿಸಿಕೊಂಡರು.

ಸಂಕ್ಷಿಪ್ತ ಸ್ಕೋರ್‌

ಮುಂಬೈ ಇಂಡಿಯನ್ಸ್‌: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 199(ತಿಲಕ್‌ ವರ್ಮಾ ಅಜೇಯ 101, ನಮನ್ ಧೀರ್ 45, ಕಗಿಸೊ ರಬಾಡ 33ಕ್ಕೆ3, ಮೊಹಮ್ಮದ್‌ ಸಿರಾಜ್‌ 25ಕ್ಕೆ 1)

ಗುಜರಾತ್‌ ಟೈಟಾನ್ಸ್‌: 15.5 ಓವರ್‌ಗಳಲ್ಲಿ 100ರನ್‌ಗೆ ಆಲೌಟ್‌(ವಾಷಿಂಗ್ಟನ್‌ ಸುಂದರ್‌ 26, ಶಾರೂಖ್‌ ಖಾನ್ 17, ಅಶ್ವನಿ ಕುಮಾರ್ 24ಕ್ಕೆ 4, ಸ್ಯಾಂಟರ್‌ 16ಕ್ಕೆ 2, ಗಜನ್‌ಫರ್ 17ಕ್ಕೆ 2).