Prithvi Shaw: ಸಹವಾಸ ದೋಷದಿಂದಾಗಿ ಕ್ರಿಕೆಟ್ ವೃತ್ತಿ ಬದುಕು ಹಾಳು ಮಾಡಿಕೊಂಡೆ; ಪೃಥ್ವಿ ಶಾ
Prithvi Shaw: ಅಂಡರ್ 19 ವಿಶ್ವಕಪ್ ವಿಜೇತ ನಾಯಕ ಶಾ, 2018ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. ಆದರೆ ತನ್ನ ಅಶಿಸ್ತಿನ ಕಾರಣದಿಂದ ಅಷ್ಟೇ ಬೇಗ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವಾದರು. ಶಾ ಭಾರತ ಪರ ಕೇವಲ ಐದು ಟೆಸ್ಟ್, ಆರು ಏಕದಿನ ಮತ್ತು ಒಂದು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ್ದಾರೆ.


ಮುಂಬಯಿ: ಒಂದು ಕಾಲದಲ್ಲಿ ಮುಂದಿನ ಸಚಿನ್ ತೆಂಡೂಲ್ಕರ್ ಎಂದೇ ಕರೆಯಲ್ಪಡುತ್ತಿದ್ದ ಮುಂಬೈನ ಬ್ಯಾಟರ್ ಪೃಥ್ವಿ ಶಾ (Prithvi Shaw) ಕ್ರಿಕೆಟ್ ಭವಿಷ್ಯ ಇದೀಗ ಮತ್ತಷ್ಟು ಡೋಲಾಯಮಾನವಾಗಿದೆ. ಪ್ರತಿಭೆ ಇದ್ದರೂ ಇತರ ಕಾರಣಗಳಿಂದ ಟೀಂ ಇಂಡಿಯಾದಿಂದ, ದೇಶೀಯ ಟೂರ್ನಿಯಿಂದಲೈ ಹೊರಬಿದ್ದಿರುವ ಶಾ, ಸಹವಾಸ ದೋಷದಿಂದಾಗಿ ತನ್ನ ಕ್ರಿಕೆಟ್ ವೃತ್ತಿ ಬದುಕಿಗೆ ತೊಂದರೆಯಾಯಿತು ಎಂದಿದ್ದಾರೆ.
ಇತ್ತೀಚೆಗಷ್ಟೇ ಮುಂಬೈ ಕ್ರಿಕೆಟ್ ಅಸೋಸಿಯೇಷನ್ (MCA) ನಿಂದ ನಿರಾಕ್ಷೇಪಣಾ ಪ್ರಮಾಣಪತ್ರ ಕೇಳಿರುವ ಪೃಥ್ವಿ ಶಾ ಮುಂಬೈ ತಂಡ ತೊರೆಯಲು ನಿರ್ಧರಿಸಿದ್ದಾರೆ. ಇದರ ಬೆನ್ನಲ್ಲೇ News24 ಸ್ಪೋರ್ಟ್ಸ್ ಜತೆಗಿನ ಸಂವಾದದಲ್ಲಿ ಮನಬಿಚ್ಚಿ ಮಾತನಾಡಿದ ಪೃಥ್ವಿ ಶಾ ತಮ್ಮ ಕ್ರಿಕೆಟ್ ವೃತ್ತಿ ಬದುಕಿನಲ್ಲಿ ಸಂಭವಿಸಿದ ಘಟನೆಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಮೈದಾನದಲ್ಲಿ 8 ಗಂಟೆ ಅಭ್ಯಾಸ ಮಾಡಬೇಕಾಗಿದ್ದ ನಾನು ಕೆಟ್ಟ ಸಹವಾಸ ದೋಷದಿಂದಾಗಿ 4 ಗಂಟೆ ಮಾತ್ರ ಇರುವಂತಾಯಿತು. ಇದು ನನ್ನ ಕ್ರಿಕೆಟ್‌ಗೆ ಮುಳುವಾಯಿತು ಎಂದರು.
"ನನ್ನ ಜೀವನದಲ್ಲಿ ತುಂಬಾ ಘಟನೆಗಳು ನಡೆದವು. ಜನರು ಇಂದು ನನ್ನ ಬಗ್ಗೆ ಬೇರೆ ದೃಷ್ಟಿಕೋನಗಳಲ್ಲಿ ಮಾತನಾಡುತ್ತಾರೆ. ಆದರೆ ನಿಜವಾಗಿ ಏನು ನಡೆಯಿತು ಎಂಬುದು ನನಗೆ ಮಾತ್ರ ಅರ್ಥಮಾಡಿಕೊಳ್ಳಲು ಸಾಧ್ಯ. ನಾನು ಜೀವನದಲ್ಲಿ ಬಹಳಷ್ಟು ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಿದ್ದೇನೆ. ಕ್ರಿಕೆಟ್‌ಗೆ ಕಡಿಮೆ ಸಮಯ ನೀಡಿದ್ದೇನೆ. ಮೊದಲು 4-5 ಗಂಟೆಗಳ ಕಾಲ ಅಭ್ಯಾಸ ಮಾಡುತ್ತಿದ್ದೆ. ಬ್ಯಾಟಿಂಗ್ ಮಾಡಲು ಎಂದಿಗೂ ಬೇಸರವಾಗುತ್ತಿರಲಿಲ್ಲ. ಅರ್ಧ ದಿನವನ್ನು ಮೈದಾನದಲ್ಲಿ ಕಳೆಯುತ್ತಿದ್ದೆ. ಇದು 2023ರ ವರೆಗೆ ನಡೆಯಿತು. ನಂತರ ನಾನು ಅನಗತ್ಯ ವಿಷಯಗಳನ್ನು ಮುಖ್ಯವೆಂದು ಪರಿಗಣಿಸಲು ಪ್ರಾರಂಭಿಸಿದೆ" ಎಂದರು.
Players who supported in Tough times:
— Johns. (@CricCrazyJohns) June 26, 2025
Prithvi Shaw said "Rishabh Pant, apart from that no big cricketer called me". [News24] pic.twitter.com/wyw3pQJr68
"ನಾನು ತಪ್ಪು ಸ್ನೇಹಿತರನ್ನು ಆಯ್ಕೆ ಮಾಡಿಕೊಂಡೆ. ಅವರ ಸಹವಾಸ ದೋಷದಿಂದಾಗಿ ದಾರಿ ತಪ್ಪಿದೆ. ಈ ಮೂಲಕ ನನ್ನ ಕ್ರಿಕೆಟ್ ಬದುಕಿಗೆ ನಾನೇ ಕೊಳ್ಳಿ ಇಟ್ಟುಕೊಂಡೆ. ಸದ್ಯ ನಾನು ಮನೆಯಿಂದಲೂ ಹೊರಗೆ ಹೋಗುವುದಿಲ್ಲ. ಮತ್ತೆ ಕ್ರಿಕೆಟ್‌ಗೆ ಮರಳಬೇಕೆಂದರೂ ಸಾಧ್ಯವಾಗುತ್ತಿಲ್ಲ. ಈ ಕಷ್ಟದ ಸಮಯದಲ್ಲಿ ತಂದೆ ಬೆಂಬಲವಾಗಿ ನಿಂತಿದ್ದಕ್ಕೆ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ" ಎಂದು ತಮ್ಮ ತಪ್ಪಿಗೆ ಪಶ್ಚಾತ್ತಾಪಪಟ್ಟರು.
ಇದನ್ನೂ ಓದಿ IND vs ENG 2nd Test: ದ್ವಿತೀಯ ಟೆಸ್ಟ್‌ಗೆ ಭಾರತ ತಂಡದಲ್ಲಿ ಮಹತ್ವದ ಬದಲಾವಣೆ
ತನ್ನ ಪ್ರತಿಭೆಯಿಂದಲೇ ಸದ್ದು ಮಾಡಿದ್ದ ಅಂಡರ್ 19 ವಿಶ್ವಕಪ್ ವಿಜೇತ ನಾಯಕ ಶಾ, 2018ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. ಆದರೆ ತನ್ನ ಅಶಿಸ್ತಿನ ಕಾರಣದಿಂದ ಅಷ್ಟೇ ಬೇಗ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವಾದರು. ಶಾ ಭಾರತ ಪರ ಕೇವಲ ಐದು ಟೆಸ್ಟ್, ಆರು ಏಕದಿನ ಮತ್ತು ಒಂದು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ್ದಾರೆ. ಕಳೆದ ವರ್ಷ ಫಿಟ್ನೆಸ್ ಕಾರಣದಿಂದ ಅವರನ್ನು ಮುಂಬೈ ರಣಜಿ ತಂಡದಿಂದಲೂ ಕೈ ಬಿಡಲಾಯಿತು.