ICC Test Rankings: ಜೀವನಶ್ರೇಷ್ಠ 15ನೇ ಸ್ಥಾನಕ್ಕೆ ಜಿಗಿದ ಸಿರಾಜ್, ಜೈಸ್ವಾಲ್ ಕೂಡ ಪ್ರಗತಿ
ಇಂಗ್ಲೆಂಡ್ ವಿರುದ್ಧ ಅಂತಿಮ ಟೆಸ್ಟ್ ಪಂದ್ಯ ಆಡದಿದ್ದರೂ ವೇಗಿ ಜಸ್‌ಪ್ರೀತ್ ಬುಮ್ರಾ(889) ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ದಕ್ಷಿಣ ಆಫ್ರಿಕಾದ ಕಾಗಿಸೊ ರಬಾಡ(851), ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್( 838) ಮತ್ತು ನ್ಯೂಜಿಲ್ಯಾಂಡ್‌ನ ಮ್ಯಾಟ್ ಹೆನ್ರಿ(817) ಕ್ರಮವಾಗಿ ಎರಡು, ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ.


ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬುಧವಾರ ಬಿಡುಗಡೆ ಮಾಡಿರುವ ನೂತನ ಟೆಸ್ಟ್ ರ್‍ಯಾಂಕಿಂಗ್(ICC Test Rankings) ಪಟ್ಟಿಯಲ್ಲಿ ಮೊಹಮ್ಮದ್ ಸಿರಾಜ್ ಮತ್ತು ಯಶಸ್ವಿ ಜೈಸ್ವಾಲ್ ಭಾರೀ ಪ್ರಗತಿ ಸಾಧಿಸಿದಾರೆ. ಆಂಡರ್ಸನ್-ತೆಂಡೂಲ್ಕರ್ ಟ್ರೋಫಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದ ಮೊಹಮ್ಮದ್ ಸಿರಾಜ್ ಬೌಲಿಂಗ್ ಶ್ರೇಯಾಂಕದಲ್ಲಿ 12 ಸ್ಥಾನಗಳ ಏರಿಕೆ ಕಂಡು ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಅಗ್ರ 15 ರಲ್ಲಿ ಸ್ಥಾನ ಪಡೆದಿದ್ದಾರೆ. ಅವರ ಹಿಂದಿನ ಅತ್ಯುತ್ತಮ ಶ್ರೇಯಾಂಕವು ಜನವರಿ 2024 ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದ ಸಮಯದಲ್ಲಿ ಸಾಧಿಸಿದ 16 ನೇ ಸ್ಥಾನವಾಗಿತ್ತು. ಬ್ಯಾಟಿಂಗ್ ಶ್ರೇಯಾಂಕದಲ್ಲಿ ಜೈಸ್ವಾಲ್ 3 ಸ್ಥಾನ ಜಿಗಿತ ಕಂಡಿದ್ದಾರೆ.
ಸಿರಾಜ್ ಓವಲ್‌ನಲ್ಲಿ ನಡೆದಿದ್ದ 5ನೇ ಹಾಗೂ ಅಂತಿಮ ಪಂದ್ಯದಲ್ಲಿ 9 ವಿಕೆಟ್ ಕಿತ್ತು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಒಟ್ಟಾರೆಯಾಗಿ ಅವರು ಆಡಿದ ಐದು ಟೆಸ್ಟ್ ಪಂದ್ಯಗಳಲ್ಲಿ ಗರಿಷ್ಠ 23 ವಿಕೆಟ್ ಉರುಳಿಸಿದ್ದರು. ಇದೇ ಪಂದ್ಯದಲ್ಲಿ ಜೈಸ್ವಾಲ್ ಶತಕ ಬಾರಿಸಿ ಮಿಂಚಿದ್ದರು. ಹೀಗಾಗಿ ಜೈಸ್ವಾಲ್ ಮತ್ತೊಮ್ಮೆ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರ ಐದರಲ್ಲಿ ಸ್ಥಾನ ಪಡೆದಿದ್ದಾರೆ. ಎರಡನೇ ಇನ್ನಿಂಗ್ಸ್‌ನಲ್ಲಿ ಜೈಸ್ವಾಲ್ 14 ಬೌಂಡರಿ ಮತ್ತು ಎರಡು ಸಿಕ್ಸರ್‌ಗಳೊಂದಿಗೆ 118 ರನ್ ಗಳಿಸಿದ್ದರು. ಸದ್ಯ ಅವರು 792 ರೇಟಿಂಗ್ ಅಂಕೊಂದಿಗೆ 5ನೇ ಸ್ಥಾನದಲ್ಲಿದ್ದಾರೆ.
ನಾಯಕ ಶುಭಮನ್ ಗಿಲ್ ಮೂರು ಸ್ಥಾನ ನಷ್ಟದೊಂದಿಗೆ 13ನೇ ಸ್ಥಾನಕ್ಕೆ ಕುಸಿದಿದ್ದಾರೆ. ಇಂಗ್ಲೆಂಡ್‌ನ ಹ್ಯಾರಿ ಬ್ಯೂಕ್(868) ಅವರು ನ್ಯೂಜಿಲ್ಯಾಂಡ್‌ನ ಕೇನ್ ವಿಲಿಯಮ್ಸನ್(858) ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದ್ದಾರೆ. ಏತನ್ಮಧ್ಯೆ, ಕಾಲ್ಬೆರಳು ಮುರಿತದಿಂದಾಗಿ ಓವಲ್ ಟೆಸ್ಟ್‌ನಿಂದ ಹೊರಗುಳಿದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಕೂಡ ಒಂದು ಸ್ಥಾನ ಕುಸಿತ ಕಂಡಿದ್ದಾರೆ. ಅವರು ಈಗ 768 ರೇಟಿಂಗ್‌ಗಳೊಂದಿಗೆ ಎಂಟನೇ ಸ್ಥಾನದಲ್ಲಿದ್ದಾರೆ. ಜೋ ರೂಟ್ ಅಗ್ರಸ್ಥಾನ ಉಳಿಸಿಕೊಂಡಿದ್ದಾರೆ.
ಇದನ್ನೂ ಓದಿ IND vs ENG: ಮೊಹಮ್ಮದ್ ಸಿರಾಜ್‌ಗೆ ಆಗುತ್ತಿರುವ ಅನ್ಯಾಯವನ್ನು ರಿವೀಲ್ ಮಾಡಿದ ಆರ್ ಅಶ್ವಿನ್!
ಇಂಗ್ಲೆಂಡ್ ವಿರುದ್ಧ ಅಂತಿಮ ಟೆಸ್ಟ್ ಪಂದ್ಯ ಆಡದಿದ್ದರೂ ವೇಗಿ ಜಸ್‌ಪ್ರೀತ್ ಬುಮ್ರಾ(889) ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ದಕ್ಷಿಣ ಆಫ್ರಿಕಾದ ಕಾಗಿಸೊ ರಬಾಡ(851), ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್( 838) ಮತ್ತು ನ್ಯೂಜಿಲ್ಯಾಂಡ್‌ನ ಮ್ಯಾಟ್ ಹೆನ್ರಿ(817) ಕ್ರಮವಾಗಿ ಎರಡು, ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ.
ಟಾಪ್-5 ಬ್ಯಾಟರ್
ಜೋ ರೂಟ್ (ENG) - 908
ಹ್ಯಾರಿ ಬ್ರೂಕ್ (EMG) – 868
ಕೇನ್ ವಿಲಿಯಮ್ಸನ್ (NZ) - 858
ಸ್ವೀವನ್ ಸ್ಮಿತ್ (AUS) - 816
ಯಶಸ್ವಿ ಜೈಸ್ವಾಲ್ (IND) - 792
ಟಾಪ್-5 ಬೌಲರ್
ಜಸ್‌ಪ್ರೀತ್ ಬುಮ್ರಾ (IND) - 889
ಕಗಿಸೊ ರಬಾಡ (SA) – 851
ಪ್ಯಾಟ್ ಕಮ್ಮಿನ್ಸ್ (AUS) - 838
ಮ್ಯಾಟ್ ಹೆನ್ರಿ (NZ) - 817
ಜೋಶ್ ಹ್ಯಾಜಲ್‌ವುಡ್ (AUS) - 815