ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಐಪಿಎಲ್‌ನಲ್ಲಿ ನೂತನ ದಾಖಲೆ ಬರೆದ ಪ್ಯಾಟ್‌ ಕಮಿನ್ಸ್‌

ಕಮಿನ್ಸ್‌ ವಿಕೆಟ್‌ ಬೇಟೆಯಾಡಿದರೂ ಪಂದ್ಯ ಮಳೆಯಿಂದ ರದ್ದುಗೊಂಡ ಕಾರಣ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಇನ್ನೂ ಮೂರು ಪಂದ್ಯಗಳು ಬಾಕಿ ಇರುವಂತೆಯೇ ಐಪಿಎಲ್‌ 18ನೇ ಆವೃತ್ತಿಯಿಂದ ಹೊರಬಿದ್ದಿತು. ಜತೆಗೆ ಕಮಿನ್ಸ್‌ ಬೌಲಿಂಗ್‌ ಶ್ರಮ ಕೂಡ ವ್ಯರ್ಥವಾಯಿತು.

ಐಪಿಎಲ್‌ನಲ್ಲಿ ನೂತನ ದಾಖಲೆ ಬರೆದ ಪ್ಯಾಟ್‌ ಕಮಿನ್ಸ್‌

Profile Abhilash BC May 6, 2025 7:51 AM

ಹೈದರಾಬಾದ್‌: ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ನಾಯಕ ಪ್ಯಾಟ್‌ ಕಮಿನ್ಸ್‌(Pat Cummins) ಅವರು ಡೆಲ್ಲಿ ಕ್ಯಾಪಿಟಲ್ಸ್‌(DC vs SRH) ಎದುರಿನ ಸೋಮವಾರದ ಐಪಿಎಲ್‌ ಪಂದ್ಯದಲ್ಲಿ ಮಾರಕ ಬೌಲಿಂಗ್‌ ದಾಳಿ ನಡೆಸುವ ಮೂಲಕ ನೂತನ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಐಪಿಎಲ್‌(IPL 2025) ಇತಿಹಾಸದಲ್ಲಿ ಪಂದ್ಯವೊಂದರಲ್ಲಿ ಎಸೆದ ಮೂರು ಓವರ್‌ಗಳ ಎಲ್ಲಾ ಮೊದಲ ಎಸೆತದಲ್ಲಿ ವಿಕೆಟ್‌ ಕಿತ್ತ ಮೊದಲ ಬೌಲರ್‌ ಎನಿಸಿಕೊಂಡರು. ಜತೆಗೆ ಐಪಿಎಲ್‌ನಲ್ಲಿ ಪವರ್‌ಪ್ಲೇಯ ಒಂದು ಇನಿಂಗ್ಸ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಇದಕ್ಕೂ ಮುನ್ನ ಈ ದಾಖಲೆ ಅಕ್ಷರ್‌ ಪಟೇಲ್‌ ಹೆಸರಿನಲ್ಲಿತ್ತು. ಹಾಲಿ ಆವೃತ್ತಿಯ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಅಕ್ಷರ್‌ 10 ರನ್‌ಗೆ 2 ವಿಕೆಟ್‌ ಕಿತ್ತಿದ್ದರು.

ಕಮಿನ್ಸ್‌ ವಿಕೆಟ್‌ ಬೇಟೆಯಾಡಿದರೂ ಪಂದ್ಯ ಮಳೆಯಿಂದ ರದ್ದುಗೊಂಡ ಕಾರಣ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಇನ್ನೂ ಮೂರು ಪಂದ್ಯಗಳು ಬಾಕಿ ಇರುವಂತೆಯೇ ಐಪಿಎಲ್‌ 18ನೇ ಆವೃತ್ತಿಯಿಂದ ಹೊರಬಿದ್ದಿತು. ಜತೆಗೆ ಕಮಿನ್ಸ್‌ ಬೌಲಿಂಗ್‌ ಶ್ರಮ ಕೂಡ ವ್ಯರ್ಥವಾಯಿತು.



ಇನಿಂಗ್ಸ್‌ನ ಮೊದಲ ಎಸೆತದಲ್ಲೇ ಕರುಣ್‌ ನಾಯರ್‌ ವಿಕೆಟ್‌ ಪಡೆದ ಕಮಿನ್ಸ್‌ ಪಂದ್ಯದ ಮೊದಲ ಎಸೆತದಲ್ಲೇ ವಿಕೆಟ್‌ ಕಿತ್ತ ಸನ್‌ರೈಸರ್ಸ್‌ನ 4ನೇ ಬೌಲರ್‌ ಎನಿಸಿದರು. ಜೆ. ಸುಚಿತ್‌, ಭವನೇಶ್ವರ್‌ ಕುಮಾರ್‌ ಮತ್ತು ಮೊಹಮ್ಮದ್‌ ಶಮಿ ಈ ಹಿಂದಿನ ಸಾಧಕರು.

ಇದನ್ನೂ ಓದಿ IPL 2025: ಗಾಯಾಳು ವಂಶ್ ಬೇಡಿ ಚೆನ್ನೈ ತಂಡ ಸೇರಿದ ಸ್ಫೋಟಕ ಟಿ20 ಬ್ಯಾಟರ್

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಡೆಲ್ಲಿ ತಂಡ ನಾಯಕ ಪ್ಯಾಟ್ ಕಮ್ಮಿನ್ಸ್ (16ಕ್ಕೆ 3) ಸಹಿತ ಹೈದರಾಬಾದ್‌ ಬೌಲರ್‌ಗಳ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 137 ರನ್‌ಗಳಿಸಿತು. ಚೇಸಿಂಗ್‌ ನಡೆಸಲು ಹೈದರಾಬಾದ್‌ ಸಜ್ಜಾಗಿದ್ದ ವೇಳೆ ಮಳೆ ಅಡ್ಡಿಪಡಿಸಿತು. ಇದರಿಂದ ಪಂದ್ಯ ರದ್ದುಗೊಂಡು ಉಭಯ ತಂಡಗಳು ತಲಾ ಒಂದು ಅಂಕ ಹಂಚಿಕೊಂಡವು.