'ಧೈರ್ಯದಿಂದ ಆಟವಾಡಿ'; ಸನ್‌ರೈಸರ್ಸ್ ಪಂದ್ಯಕ್ಕೂ ಮುನ್ನ ಆರ್‌ಸಿಬಿ ಶುಭ ಹಾರೈಸಿದ ವಿಜಯ್ ಮಲ್ಯ
vijay mallya: ಪಾಟೀದಾರ್ ನಾಯಕತ್ವದ ಆರ್‌ಸಿಬಿ ಹೆಚ್ಚೂ ಕಡಿಮೆ ಕಳೆದ ಬಾರಿಯ ತಂಡವನ್ನೇ ಉಳಿಸಿಕೊಂಡಿದ್ದು, ಬಲಿಷ್ಠವಾಗಿ ತೋರುತ್ತಿದೆ. ಆದರೆ ಗಾಯಾಳು ಜೋಶ್ ಹೇಜಲ್‌ವುಡ್ ಅನುಪಸ್ಥಿತಿ ತಂಡವನ್ನು ಕಾಡಬಹುದು. ಮಾಜಿ ನಾಯಕ ವಿರಾಟ್ ಕೊಹ್ಲಿ ಈ ಬಾರಿಯೂ ಅಬ್ಬರದ ಆಟವಾಡುವ ವಿಶ್ವಾಸದಲ್ಲಿದ್ದು, ಫಿಲ್ ಸಾಲ್ಟ್ ಜೊತೆ ಆರಂಭಿಕನಾಗಿ ಆಡಲು ಸಜ್ಜಾಗಿದ್ದಾರೆ.
vijay mallya -
ಲಂಡನ್, ಮಾ.28: ಐಪಿಎಲ್ 2026ರ ಉದ್ಘಾಟನ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್(RCB vs SRH) ವಿರುದ್ಧದ ಹಾಲಿ ಚಾಂಪಿಯನ್ ಬೆಂಗಳೂರು ತಂಡ ಇಂದು ಚಿನ್ನಸ್ವಾಮಿಯಲ್ಲಿ ಕಾದಾಟ ನಡೆಸಲಿದೆ. ಈ ಪಂದ್ಯಕ್ಕೆ ಗಂಟೆಗಳ ಮೊದಲು, ಆರ್‌ಸಿಬಿ(RCB)ಯ ಮಾಜಿ ಮಾಲೀಕ ವಿಜಯ್ ಮಲ್ಯ(Vijay Mallya) ಫ್ರಾಂಚೈಸಿಗೆ ಹೃತ್ಪೂರ್ವಕ ಸಂದೇಶವನ್ನು ತಿಳಿಸಿದ್ದಾರೆ.
ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಮಲ್ಯ, "ನಮ್ಮ ಬೆಂಗಳೂರಿನ ಸಿಂಹಗಳಿಗೆ ದಿನ ಬಂದಿದೆ...ನಮ್ಮ ಸಿಂಹಗಳು...ಐಪಿಎಲ್ ಚಾಂಪಿಯನ್ಸ್. ಶುಭವಾಗಲಿ ಮತ್ತು ಧೈರ್ಯದಿಂದ ಆಟವಾಡಿ" ಎಂದು ಮಲ್ಯ ಶನಿವಾರ ಬೆಳಿಗ್ಗೆ ಟ್ವೀಟ್ ಮಾಡಿದ್ದಾರೆ.
ಕೇವಲ ಎರಡು ದಿನಗಳ ಹಿಂದೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೊಸ ಮಾಲೀಕತ್ವಕ್ಕೆ ಪರಿವರ್ತನೆಯಾದ ನಂತರ ಮಲ್ಯ ಒಂದು ಹಳೆಯ ಸಂದೇಶವನ್ನು ಹಂಚಿಕೊಂಡಿದ್ದರು. "ಆರ್‌ಸಿಬಿಯ ಹೊಸ ಮಾಲೀಕರನ್ನು ನಾನು ಹೃತ್ಪೂರ್ವಕವಾಗಿ ಅಭಿನಂದಿಸಲು ಬಯಸುತ್ತೇನೆ. ಅವರಿಗೆ ಶುಭ ಹಾರೈಸುತ್ತೇನೆ ಮತ್ತು ಅತ್ಯಂತ ಅಮೂಲ್ಯವಾದ ಐಪಿಎಲ್ ಫ್ರಾಂಚೈಸಿಯೊಂದಿಗೆ ದೇವರ ಆಶೀರ್ವಾದ ಬಯಸುತ್ತೇನೆ" ಎಂದು ಮಲ್ಯ ಟ್ವೀಟ್ ಮಾಡಿದ್ದರು.
ಭಾರತದ ಆದಿತ್ಯಾ ಬಿರ್ಲಾ ಸಮೂಹ, ಟೈಮ್ಸ್ ಆಫ್ ಇಂಡಿಯಾ(ಟಿಒಐ) ಸಮೂಹ, ಅಮೆರಿಕದ ಬೋಲ್ಟ್ ವೆಂಚರ್ಸ್ ಹಾಗೂ ಬ್ಲ್ಯಾಕ್‌ಸ್ಟೋನ್ ಸಂಸ್ಥೆಗಳು 1.78 ಬಿಲಿಯನ್ ಅಮೆರಿಕನ್ ಡಾಲರ್ (ಅಂದಾಜು ₹16706 ಕೋಟಿ)ಗೆ ಆರ್‌ಸಿಬಿ ಫ್ರಾಂಚೈಸಿಯನ್ನು ಖರೀದಿಸಿವೆ. ಬ್ರಿಟನ್‌ನ ಮದ್ಯ ಮಾರಾಟ ಸಂಸ್ಥೆಯಾದ ಡಿಯಾಜಿಯೋದ ಅಂಗಸಂಸ್ಥೆಯಾದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (ಯುಎಸ್‌ಎಲ್) ಜೊತೆಗೆ ಬಿರ್ಲಾ ಹಾಗೂ ಟಿಒಐ ನೇತೃತ್ವದ ತಂಡ ಒಪ್ಪಂದಕ್ಕೆ ಸಹಿ ಹಾಕಿದೆ.
ಮುಂಬೈ ಇಂಡಿಯನ್ಸ್ ಸೇರಿದ ಜಸ್‌ಪ್ರೀತ್ ಬುಮ್ರಾ; ಕೆಕೆಆರ್ ಪಂದ್ಯದಲ್ಲಿ ಕಣಕ್ಕೆ
ಆರ್‌ಸಿಬಿಯ ಪುರುಷ ಹಾಗೂ ಮಹಿಳಾ ತಂಡಗಳೆರಡೂ ಈಗ ಸಂಪೂರ್ಣವಾಗಿ ಹೊಸ ಮಾಲಿಕರ ಪಾಲಾಗಿವೆ. ಆದರೆ, ಮೇಲ್ಕಂಡ ನಾಲ್ಕು ಸಂಸ್ಥೆಗಳು ಫ್ರಾಂಚೈಸಿಯಲ್ಲಿ ಎಷ್ಟೆಷ್ಟು ಹೂಡಿಕೆ ಮಾಡಿವೆ, ಎಷ್ಟೆಷ್ಟು ಪಾಲು ಹೊಂದಿವೆ ಎನ್ನುವುದರ ವಿವರ ಬಹಿರಂಗಗೊಂಡಿಲ್ಲ.
The Day has arrived for our Lions of Bengaluru…namma sinhagulu…IPL Champions. Good Luck and Play Bold…Dhairyadinda ațavadi.
— Vijay Mallya (@TheVijayMallya) March 28, 2026
ಆರ್‌ಸಿಬಿ ತನ್ನ ಆಡುವ 11ರ ಬಳಗವನ್ನು ಬಹುತೇಕ ಖಚಿತಪಡಿಸಿಕೊಂಡಿದ್ದರೂ, ವಿದೇಶಿ ಆಟಗಾರರ ವಿಚಾರದಲ್ಲಿ ತಂಡಕ್ಕೆ ಗೊಂದಲ ಎದುರಾಗಬಹುದು. ಸಾಲ್ಟ್ ಆರಂಭಿಕನಾಗಿ ಆಡಿದರೆ, ಡೇವಿಡ್, ಶೆಫರ್ಡ್ ಆಲ್ರೌಂಡರ್‌ಗಳಾಗಿ ಸ್ಥಾನ ಪಡೆಯುತ್ತಾರೆ. ಹೇಜಲ್‌ವುಡ್ ಅನುಪಸ್ಥಿತಿಯಲ್ಲಿ ಜೇಕಬ್ ಡಫಿ ಅವರನ್ನು ಆಡಿಸಿಸಬಹುದು. ಮತ್ತೊಂದೆಡೆ ಸನ್‌ರೈಸರ್ಸ್ ಆಕ್ರಮಣಕಾರಿ ಆಟಕ್ಕೆ ಹೆಸರುವಾಸಿ. 2024ರಲ್ಲಿ ಆರ್‌ಸಿಬಿ ವಿರುದ್ಧ ಬೆಂಗಳೂರಿನಲ್ಲೇ ಸನ್‌ರೈಸರ್ಸ್ ತಂಡ 3 ವಿಕೆಟ್‌ಗೆ 287 ರನ್ ಗಳಿಸಿತ್ತು. ಈ ಬಾರಿಯೂ ಬೃಹತ್ ಮೊತ್ತ ದಾಖಲಾಗುವ ನಿರೀಕ್ಷೆಯಿದೆ. ತಂಡದಲ್ಲಿ ಅಭಿಷೇಕ್, ಹೆಡ್, ಕ್ಲಾಸೆನ್, ಲಿವಿಂಗ್‌ಸ್ಟೋನ್, ನಿತೀಶ್ ಕುಮಾರ್ ಸೇರಿ ಪ್ರಮುಖರಿದ್ದಾರೆ.
ಸಂಭವನೀಯ ಆಟಗಾರರು
ಆರ್‌ಸಿಬಿ: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ವೆಂಕಟೇಶ್ ಅಯ್ಯರ್, ರಜತ್ ಪಾಟೀದಾರ್(ನಾಯಕ), ಜಿತೇಶ್ ಶಮಾ, ಕೃನಾಲ್ ಪಾಂಡ್ಯ, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಸುಯಶ್ ಶರ್ಮಾ, ಭುವನೇಶ್ವರ್ ಕುಮಾರ್, ಜೇಕಬ್ ಡಫಿ, ಮಂಗೇಶ್ ಯಾದವ್.
ಸನ್‌ರೈಸರ್ಸ್: ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಇಶಾನ್ ಕಿಶನ್(ನಾಯಕ), ನಿತೇಶ್ ಕುಮಾರ್, ಹೆನ್ರಿಚ್ ಕ್ಲಾಸೆನ್, ಲಿವಿಂಗ್‌ಸ್ಟೋನ್, ಸಲೀಲ್, ಹರ್ಷ್ ದುಬೆ, ಶಿವಾಂಗ್, ಕಾರ್ಸ್, ಹರ್ಷಲ್, ಉನಾದ್ಕಟ್.