ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಆರ್‌ಸಿಬಿ-ಚೆನ್ನೈ ಪಂದ್ಯದ ಟಿಕೆಟ್‌ ಒಂದೇ ನಿಮಿಷದಲ್ಲಿ ಸೋಲ್ಡೌಟ್‌

RCB vs CSK: ಸಾರ್ವಜನಿಕರಿಗೆ ಎಷ್ಟು ಟಿಕೆಟ್‌ಗಳನ್ನು ಲಭ್ಯ ಇರಿಸಲಾಗಿತ್ತು ಎನ್ನುವ ಮಾಹಿತಿಯನ್ನು ಆರ್‌ಸಿಬಿ ಹಂಚಿಕೊಂಡಿಲ್ಲ. ಟಿಕೆಟ್‌ನ ಆರಂಭಿಕ ಬೆಲೆ ₹3750 ಇತ್ತು. ಗರಿಷ್ಠ ಬೆಲೆ ₹47000. ಆದರೆ ಕೆಲವೇ ಸ್ಟ್ಯಾಂಡ್‌ಗಳ ಟಿಕೆಟ್‌ಗಳನ್ನಷ್ಟೇ ಆರ್‌ಸಿಬಿ ಆನ್‌ಲೈನ್‌ನಲ್ಲಿ ಮಾರಾಟ ಮಾಡಿತು.

ಆರ್‌ಸಿಬಿ-ಚೆನ್ನೈ ಪಂದ್ಯದ ಟಿಕೆಟ್‌ ಒಂದೇ ನಿಮಿಷದಲ್ಲಿ ಸೋಲ್ಡೌಟ್‌

rajat patidar and ruturaj gaikwad -

Abhilash BC
Abhilash BC Apr 3, 2026 10:51 AM

ಬೆಂಗಳೂರು, ಎ.3: ಐಪಿಎಲ್‌(IPL 2026)ನ ಬದ್ಧ ಎದುರಾಳಿಗಳಾದ ಆರ್‌ಸಿಬಿ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌(RCB vs CSK) ನಡುವಿನ ಪಂದ್ಯ ಭಾನುವಾರ(ಎ. 5) ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗಣ(m chinnaswamy stadium)ದಲ್ಲಿ ನಡೆಯಲಿದೆ. ಪಂದ್ಯದ ಕ್ರೇಜ್‌ ಎಷ್ಟಿದೆ ಎಂದರೆ ಟಿಕೆಟ್‌(RCB vs CSK Tickets) ಮಾರಾಟಕ್ಕಿಟ್ಟ ಕೇವಲ ಒಂದೇ ನಿಮಿಷದಲ್ಲಿ ಸೋಲ್ಡ್‌ಔಟ್‌ ಆಗಿದೆ.

ಮೊದಲ ಪಂದ್ಯದಂತೆಯೇ ಈ ಪಂದ್ಯದ ಟಿಕೆಟ್‌ ಖರೀದಿ ವೇಳೆಯೂ ಅನೇಕರು ಸಮಸ್ಯೆ ಎದುರಿಸಿದರು. ಆದರೂ ಕೇವಲ ಒಂದೇ ನಿಮಿಷದಲ್ಲಿ ಟಿಕೆಟ್‌ಗಳು ಖಾಲಿಯಾದವು. ಸಾರ್ವಜನಿಕರಿಗೆ ಎಷ್ಟು ಟಿಕೆಟ್‌ಗಳನ್ನು ಲಭ್ಯ ಇರಿಸಲಾಗಿತ್ತು ಎನ್ನುವ ಮಾಹಿತಿಯನ್ನು ಆರ್‌ಸಿಬಿ ಹಂಚಿಕೊಂಡಿಲ್ಲ. ಟಿಕೆಟ್‌ನ ಆರಂಭಿಕ ಬೆಲೆ ₹3750 ಇತ್ತು. ಗರಿಷ್ಠ ಬೆಲೆ ₹47000. ಆದರೆ ಕೆಲವೇ ಸ್ಟ್ಯಾಂಡ್‌ಗಳ ಟಿಕೆಟ್‌ಗಳನ್ನಷ್ಟೇ ಆರ್‌ಸಿಬಿ ಆನ್‌ಲೈನ್‌ನಲ್ಲಿ ಮಾರಾಟ ಮಾಡಿತು. ಐಪಿಎಲ್‌ನ ಉದ್ಘಾಟನಾ ಪಂದ್ಯದ ಟಿಕೆಟ್‌ ಕೇವಲ ಹತ್ತೇ ನಿಮಿಷದಲ್ಲಿ ಸೋಲ್ಡೌಟ್‌ ಆಗಿತ್ತು.

ಅಭಿಮಾನಿಗಳ ಆಕ್ರೋಶ

ಟಿಕೆಟ್‌ ಖರೀದಿಸಲು ಆಗದೆ ಅಭಿಮಾನಿಗಳು ಆರ್‌ಸಿಬಿ ಟಿಕೆಟ್‌ ಖರೀದಿ ವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಸಾಮಾಜಿಕ ತಾಣಗಳಲ್ಲಿ ಫ್ರಾಂಚೈಸಿಯನ್ನು ಟೀಕಿಸಿದ್ದಾರೆ. ಒಬ್ಬರು ಟಿಕೆಟ್‌ ಖರೀದಿಸಿ ಅದನ್ನು ಮತ್ತೊಬ್ಬರಿಗೆ ಹೆಚ್ಚಿನ ದರಕ್ಕೆ ಮಾರಾಟ ಮಾಡುವುದನ್ನು ತಡೆಯಲು ಈ ಬಾರಿ ಹೊಸ ವ್ಯವಸ್ಥೆ ಮಾಡಲಾಗಿದೆ. ಪಂದ್ಯ ಆರಂಭಕ್ಕೆ 5 ಗಂಟೆಗಳ ಮುಂಚೆ ಟಿಕೆಟ್‌ ಖರೀದಿಸಿದವರ ಮೊಬೈಲ್‌ಗೆ ಕ್ಯುಆರ್‌ ಕೋಡ್‌ ಬರಲಿದೆ. ಕ್ರೀಡಾಂಗಣವನ್ನು ಪ್ರವೇಶಿಲು ಕ್ಯುಆರ್‌ ಕೋಡ್‌ ಸ್ಕ್ಯಾನ್‌ ಮಾಡಬೇಕು. ಒಂದು ಮೊಬೈಲ್‌ಗೆ ಬಂದ ಕೋಡ್‌ ಅನ್ನು ಮತ್ತೊಂದ ಮೊಬೈಲ್‌ ಸಂಖ್ಯೆಗೆ ಹಂಚಿಕೊಳ್ಳಲು ಸಾಧ್ಯವಿಲ್ಲ.

ಆರ್‌ಸಿಬಿ ಪಂದ್ಯಕ್ಕೂ ಮೊದಲೇ ಕಮ್‌ಬ್ಯಾಕ್‌ಗೆ ಸಜ್ಜಾದ ಎಂಎಸ್‌ ಧೋನಿ!

ಧೋನಿ ಆಡುವ ಸಾಧ್ಯತೆ

ಸಿಎಸ್‌ಕೆ ಸ್ಟಾರ್ ಆಟಗಾರ ಎಂ.ಎಸ್.ಧೋನಿ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಮೈದಾನಕ್ಕೆ ಇಳಿಯುತ್ತಾರೆಯೇ ಎಂಬ ಕುತೂಹಲ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಲ್ಲಿ ಮೂಡಿದೆ. ಸ್ನಾಯುಸೆಳೆತದಿಂದಾಗಿ ಧೋನಿ ಎರಡು ವಾರಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳಲಿದ್ದಾರೆ ಎಂದು ಫ್ರಾಂಚೈಸಿ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯಕ್ಕೆ ಮುನ್ನ ಪ್ರಕಟಿಸಿತ್ತು.

ಈ ಕಾರಣದಿಂದ ಗುವಾಹತಿಗೆ ತಂಡದ ಜತೆ ಧೋನಿ ಪ್ರಯಾಣಿಸಿರಲಿಲ್ಲ. ಸೀಸನ್ ನ ಆರಂಭಿಕ ಪಂದ್ಯದಲ್ಲಿ ಧೋನಿ ಆಡಿರಲಿಲ್ಲ. ಆದಾಗ್ಯೂ ಸಿಎಸ್‌ಕೆ ಅಧಿಕೃತ ಜಾಲತಾಣ ಹ್ಯಾಂಡಲ್ ನಿಂದ ಹಂಚಿಕೊಂಡ ವಿಡಿಯೊ ತುಣುಕಿನಲ್ಲಿ, ಧೋನಿ ತಮ್ಮ ಕಿಟ್ ನೊಂದಿಗೆ ಅಭ್ಯಾಸ ಮಾಡುತ್ತಿರುವುದು ಕಂಡುಬಂದಿದೆ. ಇದು ಅವರ ಫಿಟ್ನೆಸ್ ಮತ್ತು ಲಭ್ಯತೆ ಬಗ್ಗೆ ಹಲವು ವದಂತಿಗಳಿಗೆ ಕಾರಣವಾಗಿದೆ. ಸದ್ಯ ಅವರ ಪುನರಾಗಮನ ಬಗ್ಗೆ ಅಧಿಕೃತ ದೃಢೀಕರಣ ಇದುವರೆಗೆ ಬಂದಿಲ್ಲವಾದರೂ, ತರಬೇತಿಯಲ್ಲಿ ಅವರ ಉಪಸ್ಥಿತಿಯು ಅಭಿಮಾನಿಗಳ ಆಶಾವಾದಕ್ಕೆ ಕಾರಣವಾಗಿದೆ.