ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಗಾಲೆಯಲ್ಲಿ ಭಾರತಕ್ಕೆ ಸ್ಪಿನ್‌ 'ಟೆಸ್ಟ್‌'; ನಾಳೆಯಿಂದ ಲಂಕಾ ವಿರುದ್ಧ ಮೊದಲ ಟೆಸ್ಟ್‌

SL vs IND 1st Test: ಲಂಕಾ ಸ್ಪಿನ್​ ವಿಭಾಗದ ಪ್ರಮುಖ ಬೌಲರ್​ ಪ್ರಭಾತ್​ ಜಯಸೂರ್ಯ ಗಾಲೆಯಲ್ಲಿ ಬಲಿಷ್ಠವಾದ ದಾಖಲೆ ಹೊಂದಿದ್ದು, "ಕಿಂಗ್​ ಆಫ್​ ಗಾಲೆ' ಎಂಬ ಖ್ಯಾತಿಯನ್ನೂ ಪಡೆದಿದ್ದಾರೆ. 2022ರ ಜುಲೈನಲ್ಲಿ ಇದೇ ಮೈದಾನದಲ್ಲಿ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಪ್ರಭಾತ್​, ಇಲ್ಲಿ ಇದುವರೆಗೆ ಆಡಿರುವ 11 ಟೆಸ್ಟ್​ಗಳಲ್ಲಿ 81 ವಿಕೆಟ್​ ಕಬಳಿಸಿ, ಪ್ರವಾಸಿ ತಂಡಗಳನ್ನು ಕಾಡಿದ್ದಾರೆ.

ಶ್ರೀಲಂಕಾ ವಿರುದ್ಧ ಭಾರತಕ್ಕೆ ಸ್ಪಿನ್‌ 'ಟೆಸ್ಟ್‌'; ನಾಳೆ ಮೊದಲ ಪಂದ್ಯ

jaiswal -

Abhilash BC
Abhilash BC Aug 14, 2026 2:07 PM

ಗಾಲೆ, ಆ.14: ಭಾರತ ತಂಡ 9 ವರ್ಷಗಳ ಬಳಿಕ ಶ್ರೀಲಂಕಾದಲ್ಲಿ ಟೆಸ್ಟ್‌ ಸರಣಿ ಆಡಲು ಸಜ್ಜಾಗಿ ನಿಂತಿದೆ. ಶನಿವಾರ(ಆಗಸ್ಟ್‌ 15) ಮೊದಲ ಪಂದ್ಯ ಆರಂಭವಾಗಲಿದೆ. ಪಂದ್ಯಕ್ಕೆ ಗಾಲೆ ಕ್ರೀಡಾಂಗಣ ಅಣಿಯಾಗಿದೆ. ಈ ಪಂದ್ಯ ಭಾರತದ ಪಾಲಿಗೆ ಸ್ಮರಣೀಯವಾಗಿದೆ. ಇದು ಭಾರತದ 600 ನೇ ಟೆಸ್ಟ್ ಪಂದ್ಯವಾಗಿದೆ.

ಲಂಕಾ ವಿರುದ್ಧ ಭಾರತದ ದಾಖಲೆ, ಈಗಿನ ತಂಡದ ಸಾಮರ್ಥ್ಯ ಗಮನಿಸಿದರೆ ಭಾರತಕ್ಕೆ ಸರಣಿ ಗೆಲುವು ಸಾಧ್ಯವಿದೆ. ಆದರೆ ಕಳೆದ 2 ವರ್ಷಗಳಲ್ಲಿ ಎದುರಾಗಿರುವ 3 ಐತಿಹಾಸಿಕ ಸರಣಿ ಸೋಲುಗಳು, ಭಾರತಕ್ಕೆ ಲಂಕಾದಲ್ಲೂ ಸರಣಿ ಗೆಲುವು ಅಷ್ಟು ಸುಲಭವೇನಲ್ಲ ಎಂಬುದನ್ನು ಮರೆಯುವಂತಿಲ್ಲ.

ಇತ್ತೀಚೆಗಷ್ಟೇ ಲಂಕಾದಲ್ಲಿ ಅಲ್ಲಿನ ಕ್ರಿಕೆಟ್‌ ಇಲೆವೆನ್‌ ತಂಡದ ವಿರುದ್ಧ ಅಭ್ಯಾಸ ಪಂದ್ಯವಾಡಿದ್ದ ಭಾರತ ದೊಡ್ಡ ಅಂತರದಲ್ಲಿ ಗೆಲುವೇನೂ ಸಾಧಿಸಿಲ್ಲ. ಬೌಲಿಂಗ್‌ನಲ್ಲಿ ಚಚ್ಚಿಸಿಕೊಂಡಿದ್ದ ತಂಡ, ಕೊನೆ ಕ್ಷಣದ ಮ್ಯಾಜಿಕ್‌ನಿಂದಾಗಿ ರೋಚಕ ಜಯಗಳಿಸಿತ್ತು. ಹೀಗಾಗಿಯೇ ಅದರಲ್ಲೂ ಸ್ಪಿನ್‌ ಟ್ರ್ಯಾಕ್‌ ಗಾಲೆಯಲ್ಲಿ ತಂಡಕ್ಕೆ ಕಠಿಣ ಸವಾಲು ಎದುರಾಗುವ ಸಾಧ್ಯತೆಯಿದೆ.



ಲಂಕಾ ಸ್ಪಿನ್​ ವಿಭಾಗದ ಪ್ರಮುಖ ಬೌಲರ್​ ಪ್ರಭಾತ್​ ಜಯಸೂರ್ಯ ಗಾಲೆಯಲ್ಲಿ ಬಲಿಷ್ಠವಾದ ದಾಖಲೆ ಹೊಂದಿದ್ದು, "ಕಿಂಗ್​ ಆಫ್​ ಗಾಲೆ' ಎಂಬ ಖ್ಯಾತಿಯನ್ನೂ ಪಡೆದಿದ್ದಾರೆ. 2022ರ ಜುಲೈನಲ್ಲಿ ಇದೇ ಮೈದಾನದಲ್ಲಿ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಪ್ರಭಾತ್​, ಇಲ್ಲಿ ಇದುವರೆಗೆ ಆಡಿರುವ 11 ಟೆಸ್ಟ್​ಗಳಲ್ಲಿ 81 ವಿಕೆಟ್​ ಕಬಳಿಸಿ, ಪ್ರವಾಸಿ ತಂಡಗಳನ್ನು ಕಾಡಿದ್ದಾರೆ.

ಮುಖಾಮುಖಿ

ಭಾರತ ಮತ್ತು ಶ್ರೀಲಂಕಾ ತಂಡಗಳು ಈವರೆಗೆ 46 ಟೆಸ್ಟ್ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಭಾರತ 22 ಪಂದ್ಯಗಳಲ್ಲಿ ಗೆದ್ದಿದ್ದರೆ, ಶ್ರೀಲಂಕಾ 7 ಬಾರಿ ಜಯಗಳಿಸಿದೆ. 17 ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿವೆ.

ಪಿಚ್‌ ರಿಪೋರ್ಟ್‌

ಗ್ಯಾಲೆ ಅಂತರರಾಷ್ಟ್ರೀಯ ಕ್ರೀಡಾಂಗಣವು ದೇಶದ ಟೆಸ್ಟ್ ಕ್ರಿಕೆಟ್‌ಗೆ ಅತ್ಯಂತ ಸುಂದರವಾದ ಸ್ಥಳಗಳಲ್ಲಿ ಒಂದಾಗಿರುವುದು ಮಾತ್ರವಲ್ಲದೆ, ತೀವ್ರ ಪೈಪೋಟಿಯ ಸ್ಪರ್ಧೆಗೆ ವೇದಿಕೆ ಕಲ್ಪಿಸುತ್ತದೆ. ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ನೀಡಲಿದೆ ಎಂದು ನಿರೀಕ್ಷಿಸಲಾಗಿದೆ. ಉಭಯ ತಂಡಗಳು ಸ್ಪಿನ್‌ ಬೌಲರ್‌ಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ಸಾಧ್ಯತೆಯಿದೆ. ಮೂರನೇ ದಿನದ ಬಳಿಕ ಬೌಲಿಂಗ್‌ಗೆ ಪಿಚ್ ಉತ್ತಮವಾಗುವ ನಿರೀಕ್ಷೆಯಿರುವುದರಿಂದ ಮೊದಲು ಬ್ಯಾಟಿಂಗ್ ಮಾಡುವುದು ಸೂಕ್ತ ಆಯ್ಕೆಯಾಗಿದೆ.

ಭಾರತ: ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ದೇವದತ್ ಪಡಿಕ್ಕಲ್, ಶುಭಮನ್ ಗಿಲ್ (ನಾಯಕ), ರಿಷಬ್ ಪಂತ್ (ವಿ.ಕೀ.), ರವೀಂದ್ರ ಜಡೇಜಾ, ಸರನ್ಶ್ ಜೈನ್/ಸರ್ಫರಾಜ್ ಖಾನ್, ಮಾನವ್ ಸುತಾರ್, ಗುರ್ನೂರ್ ಬ್ರಾರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್.

ಶ್ರೀಲಂಕಾ: ಲಹಿರು ಉದಾರ, ನಿಶಾನ್ ಮದುಷ್ಕ, ಕಮಿಂದು ಮೆಂಡಿಸ್, ದಿನೇಶ್ ಚಾಂಡಿಮಾಲ್, ಧನಂಜಯ ಡಿ ಸಿಲ್ವಾ (ನಾಯಕ), ನಿರೋಶನ್ ಡಿಕ್ವೆಲ್ಲಾ (ವಿ.ಕೀ.), ರಮೇಶ್ ಮೆಂಡಿಸ್, ಪ್ರಭಾತ್ ಜಯಸೂರ್ಯ, ಮಿಲನ್ ರಥನಾಯಕೆ, ಅಸಿತ ಫೆರ್ನಾಂಡೋ, ದಿಲ್ಶನ್ ಮಧುಶಂಕ

ಪ್ರಸಾರ: ಭಾರತದಲ್ಲಿನ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ಲಭ್ಯವಿರುತ್ತದೆ.

ಡಿಜಿಟಲ್ ಲೈವ್ ಸ್ಟ್ರೀಮಿಂಗ್ SonyLIV ನ ಮೊಬೈಲ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಮೂಲಕ ನೋಡಬಹುದು.

ಪಂದ್ಯ ಆರಂಭ: ಬೆಳಗ್ಗೆ 10 ಗಂಟೆಗೆ.