SRH vs KKR: ಗೆಲುವಿನೊಂದಿಗೆ ಮುಳುಗಿದ 'ಸನ್‌ರೈಸರ್ಸ್' ಹೈದರಾಬಾದ್
17 ಎಸೆತಗಳಲ್ಲಿ ಅರ್ಧಶತಕ ಪೂರ್ತಿಗೊಳಿಸಿದ ಹೆನ್ರಿಚ್ ಕ್ಲಾಸೆನ್ ಆ ಬಳಿಕವೂ ಬ್ಯಾಟಿಂಗ್ ಪ್ರತಾಪ ಮುಂದುವರಿಸಿ 37 ಎಸೆತಗಳಲ್ಲಿ ಶತಕ ಬಾರಿಸಿ ಮಿಂಚಿದರು. ಇದೇ ವೇಳೆ ಯೂಸುಪ್ ಪಠಾಣ್(37 ಎಸೆತ) ದಾಖಲೆ ಸರಿಗಟ್ಟಿದರು. ಅಂತಿಮವಾಗಿ ಕ್ಲಾಸೆನ್ 105 ರನ್ ಬಾರಿಸಿ ಅಜೇಯರಾಗಿ ಉಳಿದರು.


ನವದೆಹಲಿ: ಆರಂಭಿಕ ಪಂದ್ಯದಲ್ಲಿ 250 ಪ್ಲಸ್ ಮೊತ್ತ ಪೇರಿಸಿ ಭರ್ಜರಿ ಗೆಲುವು ಸಾಧಿಸಿದ್ದ ಸನ್‌ರೈಸರ್ಸ್ ಹೈದರಾಬಾದ್(Sunrisers Hyderabad) ತಂಡ ತನ್ನ ಕೊನೆಯ ಲೀಗ್ ಪಂದ್ಯದಲ್ಲಿಯೂ 250 ಪ್ಲಸ್ ಮೊತ್ತ ಬಾರಿಸಿ ಗೆಲುವಿನೊಂದಿಗೆ ಅಭಿಯಾನ ಮುಗಿಸಿದೆ. ಭಾನುವಾರದ ದ್ವಿತೀಯ ಐಪಿಎಲ್(IPL 2025) ಪಂದ್ಯದಲ್ಲಿ ಕೋಲ್ಕತಾ ನೈಟ್‌ರೈಡರ್ಸ್(SRK vs KKR) ವಿರುದ್ಧ 110 ರನ್ ಅಂತರದಿಂದ ಗೆದ್ದು ಬೀಗಿತು.
ಇಲ್ಲಿನ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಸನ್‌ರೈಸರ್ಸ್ ತನ್ನ ಆಯ್ಕೆಯನ್ನು ಸಮರ್ಥಿಸಿಕೊಂಡಿತು. 3 ವಿಕೆಟ್ ನಷ್ಟಕ್ಕೆ 278 ರನ್ ಪೇರಿಸಿ ಬೃಹತ್ ಮೊತ್ತ ಪೇರಿಸಿತ್ತು. ಇದು ಹೈದರಾಬಾದ್ ತಂಡದ ಮೂರನೇ ಗರಿಷ್ಠ ಮೊತ್ತವಾಗಿದೆ. ಗುರಿ ಬೆನ್ನಟ್ಟಿದ ಕೆಕೆಆರ್ ಆರಂಭದಲ್ಲೇ ಸತತ ವಿಕೆಟ್ ಕಳೆದುಕೊಂಡು 18.4 ಓವರ್‌ಗಳಲ್ಲಿ 168 ರನ್‌ಗೆ ಸರ್ವಪತನ ಕಂಡಿತು.
ಚೇಸಿಂಗ್ ವೇಳೆ ಕೆಕೆಆರ್ 100 ರನ್ ಗಳಿಸುವ ಮುನ್ನವೇ ಪ್ರಮುಖ 6 ವಿಕೆಟ್ ಕಳೆದುಕೊಂಡು ಅದಾಗಲೇ ಸೋಲಿನತ್ತ ಮುಖ ಮಾಡಿತು. ಕ್ವಿಂಟನ್ ಡಿ ಕಾಕ್(9), ನಾಯಕ ಅಜಿಂಕ್ಯ ರಹಾನೆ(15), ರಿಂಕು ಸಿಂಗ್(9), ರೆಸೆಲ್(0) ಹೀಗೆ ಒಬ್ಬರ ಹಿಂದೆ ಬಬ್ಬರಂತೆ ಪೆವಿಲಿಯನ್ ಪರೇಡ್ ನಡೆಸಿದ್ದು ಕಂಡು ಬಂತು. ಆರಂಭಿಕರಾ ಸುನೀಲ್ ನರೈನ್ 31 ರನ್ ಬಾರಿಸಿದರೆ, ಕೊನೆಯ ಹಂತದಲ್ಲಿ ಕನ್ನಡಿಗ ಮನೀಷ್ ಪಾಂಡೆ(37) ಮತ್ತು ವೇಗಿ ಹರ್ಷಿತ್ ರಾಣ ಸಣ್ಣ ಬ್ಯಾಟಿಂಗ್ ಹೋರಾಟವೊಂದನ್ನು ನಡೆಸಿ ತಂಡದ ಸೋಲಿನ ಅಂತರವನ್ನು ಕೊಂಚ ಕಡಿಮೆ ಮಾಡಿದರು.
ಹೈದರಾಬಾದ್ ಪರ ಘಾತಕ ಬೌಲಿಂಗ್ ದಾಳಿ ನಡೆದಿದ ಅನುಭವಿ ಜೈದೇವ್ ಉನಾದ್ಕತ್ 24ಕ್ಕೆ 3, ಯುವ ಆಲ್‌ರೌಂಡರ್ ಹರ್ಷ್ ದುಬೆ 34 ಕ್ಕೆ 3, ಈಶಾನ್ ಮಾಲಿಂಗ 31 ಕ್ಕೆ 3 ವಿಕೆಟ್ ಕಿತ್ತು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಹೆಡ್-ಕ್ಲಾಸೆನ್ ಬ್ಯಾಟಿಂಗ್ ಆರ್ಭಟ
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಹೈದರಾಬಾದ್ ತಂಡದ ಬ್ಯಾಟರ್‌ಗಳು ಸಿಕ್ಸರ್ ಮತ್ತು ಬೌಂಡರಿಗಳ ಸುರಿಮಳೆಗೈದು ನೆರೆದಿದ್ದ ಅಭಿಮಾನಿಗಳನ್ನು ಬರಪೂರ ರಂಜಿಸಿದರು. ಬ್ಯಾಟಿಂಗ್ ನಡೆಸಲು ಬಂದ ಎಲ್ಲರೂ ಜಿದ್ದಿಗೆ ಬಿದ್ದವರಂತೆ ಬ್ಯಾಟ್ ಬೀಸಿದರು. ಒಟ್ಟು 19 ಸಿಕ್ಸರ್‌ಗಳನ್ನು ಸಿಡಿಸಿದರು. 17 ಎಸೆತಗಳಲ್ಲಿ ಅರ್ಧಶತಕ ಪೂರ್ತಿಗೊಳಿಸಿದ ಹೆನ್ರಿಚ್ ಕ್ಲಾಸೆನ್ ಆ ಬಳಿಕವೂ ಬ್ಯಾಟಿಂಗ್ ಪ್ರತಾಪ ಮುಂದುವರಿಸಿ 37 ಎಸೆತಗಳಲ್ಲಿ ಶತಕ ಬಾರಿಸಿ ಮಿಂಚಿದರು. ಇದೇ ವೇಳೆ ಯೂಸುಪ್ ಪಠಾಣ್(37 ಎಸೆತ) ದಾಖಲೆ ಸರಿಗಟ್ಟಿದರು. ಅತಿ ವೇಗದ ಶತಕ ಕ್ರಿಸ್ ಗೇಲ್(30 ಎಸೆತ) ಹೆಸರಿನಲ್ಲಿದೆ. ಇದು ಕ್ಲಾಸೆನ್ ಅವರ ಎರಡನೇ ಐಪಿಎಲ್ ಶತಕ. ಅವರ ಈ ಶತಕದ ಇನಿಂಗ್ಸ್‌ನಲ್ಲಿ ಬರೋಬ್ಬರಿ 9 ಸಿಕ್ಸರ್ ಮತ್ತು 7 ಬೌಂಡರಿ ಸಿಡಿಯಿತು.
ಇನಿಂಗ್ಸ್ ಆರಂಭಿಸಿದ ಅಭಿಷೇಕ್ ಶರ್ಮ ಮತ್ತು ಟ್ರಾವಿಸ್ ಹೆಡ್ ಮೊದಲ ವಿಕೆಟ್‌ಗೆ 91 ರನ್ ಒಟ್ಟುಗೂಡಿಸಿ ತಂಡದ ಭದ್ರ ಬುನಾದಿ ಹಾಕಿಕೊಟ್ಟರು. ಬಿರುಸಿನ ಬ್ಯಾಟಿಂಗ್ ನಡೆಸಿದ ಅಭಿಷೇಕ್ ಕೇಲವ 16 ಎಸೆತಗಳಿಂದ 32(2 ಸಿಕ್ಸರ್ 4 ಬೌಂಡರಿ) ರನ್ ಬಾರಿಸಿದರು. ಇವರ ವಿಕೆಟ್ ಪತನದ ಬಳಿಕ ಜತೆಯಾದ ಕ್ಲಾಸೆನ್ ಮತ್ತು ಹೆಡ್ ಕೆಕೆಆರ್ ಬೌಲರ್‌ಗಳ ಬೆವರಿಳಿಸಿದರು. ಈ ಜೋಡಿ ದ್ವಿತೀಯ ವಿಕೆಟ್‌ಗೆ 83 ರನ್‌ಗಳ ಜತೆಯಾಟ ನಡೆಸಿತು. ಹೆಡ್ ತಲಾ 6 ಸಿಕ್ಸರ್ ಮತ್ತು ಬೌಂಡರಿ ನೆರವಿನಿಂದ 76 ರನ್ ಬಾರಿಸಿದರು.
Clean. Clinical. Carnage. 🧡pic.twitter.com/ikgOvb6W5w
— SunRisers Hyderabad (@SunRisers) May 25, 2025
ಹೆಡ್ ವಿಕೆಟ್ ಪತನಗೊಂಡರೂ ಕೂಡ ಹೈದರಾಬಾದ್ ತಂಡದ ರನ್ ವೇಗಕ್ಕೆ ಯಾವುದೇ ಅಡ್ಡಿಯಾಗಲಿಲ್ಲ. ಬಳಿಕ ಇಶಾನ್ ಕಿಶನ್(29) ಕೂಡ ಹೆನ್ರಿಚ್ ಕ್ಲಾಸೆನ್‌ಗೆ ಉತ್ತಮ ಸಾಥ್ ನೀಡಿದರು. ಅಂತಿಮವಾಗಿ ಕ್ಲಾಸೆನ್ 105 ರನ್ ಬಾರಿಸಿ ಅಜೇಯರಾಗಿ ಉಳಿದರು. ಕೆಕೆಆರ್ ಪರ ನರೈನ್ 2 ವಿಕೆಟ್ ಕಿತ್ತರೂ 42 ರನ್ ಬಿಟ್ಟುಕೊಟ್ಟರು.