ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಶೂನ್ಯ ಸುತ್ತಿ ಅನಪೇಕ್ಷಿತ ಟೆಸ್ಟ್ ದಾಖಲೆ ಬರೆದ ಯಶಸ್ವಿ ಜೈಸ್ವಾಲ್

Yashasvi Jaiswal: ಭಾರತದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಆರಂಭಿಕ ಬ್ಯಾಟರ್ ಆಗಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ (ಡಕ್) ಔಟ್ ಆದ ದಾಖಲೆಯು ವೀರೇಂದ್ರ ಸೆಹ್ವಾಗ್ ಅವರ ಹೆಸರಿನಲ್ಲಿದೆ. ಸೆಹ್ವಾಗ್ ಭಾರತಕ್ಕಾಗಿ 98 ಪಂದ್ಯಗಳಲ್ಲಿ 168 ಬಾರಿ ಇನ್ನಿಂಗ್ಸ್ ಆರಂಭಿಸಿದ್ದು, ಅದರಲ್ಲಿ 15 ಸಂದರ್ಭಗಳಲ್ಲಿ ಖಾತೆ ತೆರೆಯಲು ವಿಫಲರಾಗಿದ್ದರು.

ಶೂನ್ಯ ಸುತ್ತಿ ಅನಪೇಕ್ಷಿತ ಟೆಸ್ಟ್ ದಾಖಲೆ ಬರೆದ ಯಶಸ್ವಿ ಜೈಸ್ವಾಲ್

Yashasvi Jaiswal -

Abhilash BC
Abhilash BC Nov 28, 2026 12:15 PM

ಕ್ರೈಸ್ಟ್‌ಚರ್ಚ್‌, ನ.28: ಇಲ್ಲಿನ ಹ್ಯಾಗ್ಲಿ ಓವಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ, ಕೆ.ಎಲ್. ರಾಹುಲ್ ಅವರೊಂದಿಗೆ ಭಾರತದ ಪರ ಯಶಸ್ವಿ ಜೈಸ್ವಾಲ್ ಇನ್ನಿಂಗ್ಸ್ ಆರಂಭಿಸಿದರು. ಆದರೆ, ಅವರು ತಮ್ಮ ಖಾತೆಯನ್ನು ತೆರೆಯಲು ವಿಫಲರಾದರು. ಇದು ನ್ಯೂಜಿಲೆಂಡ್‌ನಲ್ಲಿ ಶೂನ್ಯಕ್ಕೆ ಔಟಾದ ಅವರ ಮೊದಲ ನಿದರ್ಶನವಾಗಿದೆ. ಒಟ್ಟಾರೆಯಾಗಿ ಎಂಟನೇ ಬಾರಿಯಾಗಿದೆ.

ಜೈಸ್ವಾಲ್ ಶೂನ್ಯಕ್ಕೆ (ಡಕ್) ಔಟ್ ಆಗುವ ಮೂಲಕ ಅನಪೇಕ್ಷಿತ ದಾಖಲೆ ಪಟ್ಟಿಗೆ ಸೇರ್ಪಡೆಗೊಂಡರು. 24 ವರ್ಷದ ಈ ಕ್ರಿಕೆಟಿಗ, SENA (ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ) ರಾಷ್ಟ್ರಗಳೆಲ್ಲದರಲ್ಲೂ ಶೂನ್ಯಕ್ಕೆ ಔಟ್ ಆದ ಮೊದಲ ಭಾರತೀಯ ಟೆಸ್ಟ್ ಆರಂಭಿಕ ಆಟಗಾರ ಎನಿಸಿಕೊಂಡಿದ್ದಾರೆ.

ಜೈಸ್ವಾಲ್ ದಕ್ಷಿಣ ಆಫ್ರಿಕಾದಲ್ಲಿ ಎರಡು ಟೆಸ್ಟ್ ಪಂದ್ಯಗಳನ್ನು ಆಡಿದ್ದು, ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಒಮ್ಮೆ ಸೊನ್ನೆ ಸುತ್ತಿದ್ದಾರೆ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನಲ್ಲಿ ತಲಾ ಐದು ಪಂದ್ಯಗಳನ್ನು ಆಡಿರುವ ಅವರು, ಎರಡರಲ್ಲೂ ತಲಾ ಎರಡು ಬಾರಿ ಸೊನ್ನೆ ಸುತ್ತಿದ್ದಾರೆ. ಹಾಗೆಯೇ ನ್ಯೂಜಿಲೆಂಡ್‌ನಲ್ಲಿ ಎರಡು ಇನ್ನಿಂಗ್ಸ್‌ಗಳಲ್ಲಿ ಒಮ್ಮೆ ಸೊನ್ನೆ ಸುತ್ತಿದ್ದಾರೆ.

ನ್ಯೂಜಿಲೆಂಡ್‌ ವಿರುದ್ಧದ 2ನೇ ಟೆಸ್ಟ್‌; ಇನಿಂಗ್ಸ್‌ ಹಿನ್ನಡೆ ಭೀತಿಯಲ್ಲಿ ಭಾರತ

ನ್ಯೂಜಿಲೆಂಡ್‌ನಲ್ಲಿ ಟೆಸ್ಟ್ ಪಂದ್ಯವೊಂದರಲ್ಲಿ ಸೊನ್ನೆಗೆ ಔಟಾದ ಇತರ ಭಾರತೀಯ ಆರಂಭಿಕ ಆಟಗಾರರೆಂದರೆ ಡಬ್ಲ್ಯೂ. ವಿ. ರಾಮನ್, ನವಜೋತ್ ಸಿಂಗ್ ಸಿಧು, ಪಾರ್ಥಿವ್ ಪಟೇಲ್ ಮತ್ತು ಶಿಖರ್ ಧವನ್. ನ್ಯೂಜಿಲೆಂಡ್‌ನಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಟೆಸ್ಟ್ ಪಂದ್ಯಗಳಲ್ಲಿ ಸೊನ್ನೆಗೆ ಔಟಾದ ಏಕೈಕ ಭಾರತೀಯ ಆರಂಭಿಕ ಆಟಗಾರ ರಾಮನ್ ಆಗಿದ್ದಾರೆ.

ಭಾರತದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಆರಂಭಿಕ ಬ್ಯಾಟರ್ ಆಗಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ (ಡಕ್) ಔಟ್ ಆದ ದಾಖಲೆಯು ವೀರೇಂದ್ರ ಸೆಹ್ವಾಗ್ ಅವರ ಹೆಸರಿನಲ್ಲಿದೆ. ಸೆಹ್ವಾಗ್ ಭಾರತಕ್ಕಾಗಿ 98 ಪಂದ್ಯಗಳಲ್ಲಿ 168 ಬಾರಿ ಇನ್ನಿಂಗ್ಸ್ ಆರಂಭಿಸಿದ್ದು, ಅದರಲ್ಲಿ 15 ಸಂದರ್ಭಗಳಲ್ಲಿ ಖಾತೆ ತೆರೆಯಲು ವಿಫಲರಾಗಿದ್ದರು. ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟ್ ಆದ ಭಾರತೀಯ ಆರಂಭಿಕ ಆಟಗಾರರ ಪಟ್ಟಿಯಲ್ಲಿ, ಸೆಹ್ವಾಗ್ ನಂತರದ ಸ್ಥಾನಗಳಲ್ಲಿ ಪಂಕಜ್ ರಾಯ್ (14), ಸುನಿಲ್ ಗವಾಸ್ಕರ್ (11), ನವಜೋತ್‌ ಸಿಂಗ್‌ ಸಿಧು (9) ಇದ್ದಾರೆ.

ಜೈಸ್ವಾಲ್ ಅವರು 33 ಟೆಸ್ಟ್ ಪಂದ್ಯಗಳ 59 ಇನ್ನಿಂಗ್ಸ್‌ಗಳಲ್ಲಿ ಆರಂಭಿಕ ಆಟಗಾರನಾಗಿ ಎಂಟು ಬಾರಿ ಸೊನ್ನೆಗೆ ಔಟ್ ಆಗಿದ್ದಾರೆ. ಇತ್ತ ಮುರಳಿ ವಿಜಯ್ ಕೂಡ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 57 ಟೆಸ್ಟ್ ಪಂದ್ಯಗಳ 100 ಇನ್ನಿಂಗ್ಸ್‌ಗಳಲ್ಲಿ 8 ಬಾರಿ ಸೊನ್ನೆಗೆ ಔಟ್ ಆಗಿದ್ದರು.