Vastu Tips: ಸಸ್ಯಗಳನ್ನು ಸರಿಯಾದ ದಿಕ್ಕಿನಲ್ಲಿ ನೆಡಬೇಕು ಯಾಕೆ ಗೊತ್ತೇ?
ಸಸ್ಯಗಳನ್ನು ಸರಿಯಾದ ದಿಕ್ಕಿನಲ್ಲಿ ನೆಡುವುದು ಮುಖ್ಯ. ಯಾಕೆಂದರೆ ಪ್ರತಿಯೊಂದು ಸಸ್ಯದಲ್ಲೂ ಒಂದೊಂದು ಶಕ್ತಿ ಇರುತ್ತದೆ. ಅದರ ಸಕಾರಾತ್ಮಕ ಶಕ್ತಿಯ ಪ್ರಯೋಜನ ಪಡೆಯಬೇಕಾದರೆ ಸಸ್ಯಗಳನ್ನು ಸರಿಯಾದ ದಿಕ್ಕಿನಲ್ಲಿ ನೆಡಬೇಕು. ಇಲ್ಲವಾದರೆ ಅದು ಅಶುಭ ಪರಿಣಾಮವನ್ನು ಬೀರುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು.
-
ವಿದ್ಯಾ ಇರ್ವತ್ತೂರು
Oct 24, 2025 7:00 AM
ಬೆಂಗಳೂರು: ಮನೆಯ (Vastu for home) ಒಳಾಂಗಣ, ಹೊರಾಂಗಣ ಅಲಂಕಾರಕ್ಕೆ ನಾವು ನೆಡುವ ಸಸ್ಯಗಳನ್ನು (Vastu for plant) ಸರಿಯಾದ ದಿಕ್ಕಿನಲ್ಲಿ ಇರಿಸುವುದು ಬಹಳ ಮುಖ್ಯ. ಯಾಕೆಂದರೆ ಪ್ರತಿಯೊಂದು ಸಸ್ಯದಲ್ಲೂ ಶಕ್ತಿ ಇರುತ್ತದೆ. ಇದು ಸಕಾರಾತ್ಮಕವಾಗಿ ಬದಲಾಗಬೇಕಾದರೆ ಅವುಗಳನ್ನು ಸರಿಯಾದ ದಿಕ್ಕಿನಲ್ಲಿ ನೆಡುವುದು ಕೂಡ ಮುಖ್ಯವಾಗಿರುತ್ತದೆ. ಮನೆಯ (Vastu tips) ಪ್ರತಿಯೊಂದು ದಿಕ್ಕು ಕೂಡ ಸಸ್ಯಗಳನ್ನು ನೆಡಲು ಶುಭವೆಂದು ಪರಿಗಣಿಸಲಾಗುತ್ತದೆ. ಆದರೆ ಯಾವ ದಿಕ್ಕಿನಲ್ಲಿ ಯಾವ ಸಸ್ಯ ನೆಡಬೇಕು ಎಂಬುದನ್ನು ತಿಳಿದುಕೊಳ್ಳಬೇಕು. ಸರಿಯಾದ ದಿಕ್ಕಿನಲ್ಲಿ ಸರಿಯಾದ ಸಸ್ಯಗಳನ್ನು ನೆಡುವುದರಿಂದ ಹಲವು ಸಮಸ್ಯೆಗಳು ದೂರವಾಗುತ್ತವೆ.
ಹಸಿರು ಸಸ್ಯಗಳು ಮನೆಯ ಸೌಂದರ್ಯವನ್ನು ಹೆಚ್ಚಿಸುವುದು ಮಾತ್ರವಲ್ಲ ಮನೆಯ ವಾಸ್ತು ದೋಷಗಳನ್ನೂ ದೂರ ಮಾಡುತ್ತದೆ. ಮನೆಗೆ ಸಕಾರಾತ್ಮಕ ಶಕ್ತಿಯನ್ನೂ ಆಹ್ವಾನಿಸುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಸಸ್ಯಗಳು ಮನೆ ಮತ್ತು ಮನೆ ಮಂದಿಯ ಜೀವನದ ಮೇಲೆ ನೇರ ಪರಿಣಾಮ ಬೀರುತ್ತವೆ. ಹೀಗಾಗಿ ಸಸ್ಯಗಳನ್ನು ನೆಡುವಾಗ ಮನೆಯ ಸರಿಯಾದ ದಿಕ್ಕು ಯಾವುದು ಎಂದು ತಿಳಿದುಕೊಳ್ಳುವುದು ಉತ್ತಮ.
ಸರಿಯಾದ ದಿಕ್ಕಿನಲ್ಲಿ ಸರಿಯಾದ ಸಸ್ಯವನ್ನು ನೆಡುವುದರಿಂದ ಸಂತೋಷ, ಸಮೃದ್ಧಿ, ಆರೋಗ್ಯ ಮತ್ತು ಅದೃಷ್ಟಕ್ಕೆ ಅಹ್ವಾನ ನೀಡಿದಂತಾಗುತ್ತದೆ. ತಪ್ಪು ದಿಕ್ಕಿನಲ್ಲಿ ಸಸ್ಯಗಳನ್ನು ನೆಡುವುದು ಆರ್ಥಿಕ ನಷ್ಟ, ಸಂಬಂಧದಲ್ಲಿ ಒತ್ತಡ ಉಂಟಾಗುವ ಸಾಧ್ಯತೆಗಳಿರುತ್ತವೆ.
ಸಸ್ಯಗಳನ್ನು ನೆಡಲು ಮನೆಯ ಎಲ್ಲ ದಿಕ್ಕುಗಳೂ ಸೂಕ್ತವಾಗಿದ್ದರೂ ವಾಸ್ತು ನಿಯಮಗಳ ಅನುಸಾರ ಸಸ್ಯಗಳನ್ನು ನೆಟ್ಟರೆ ಜೀವನದಲ್ಲಿ ಸಮೃದ್ಧಿ ಉಂಟಾಗುತ್ತದೆ ಎನ್ನುತ್ತಾರೆ ವಾಸ್ತು ತಜ್ಞರಾದ ಡಾ. ಆರತಿ ದಹಿಯಾ.
ಉತ್ತರ ದಿಕ್ಕು
ಸಂಪತ್ತಿನ ದೇವರಾದ ಕುಬೇರ ದಿಕ್ಕು ಎಂದು ಪರಿಗಣಿಸಲಾಗಿರುವ ಉತ್ತರ ದಿಕ್ಕು ಸಂಪತ್ತು, ವೃತ್ತಿ ಮತ್ತು ಸಮೃದ್ಧಿಯೊಂದಿಗೆ ಸಂಬಂಧ ಹೊಂದಿದೆ. ಈ ದಿಕ್ಕಿನಲ್ಲಿ ಮನಿ ಪ್ಲಾಂಟ್, ತುಳಸಿ ಅಥವಾ ಶಂಖ ಹೂವಿನಂತಹ ಸಸ್ಯಗಳನ್ನು ನೆಡುವುದರಿಂದ ಮನೆಯಲ್ಲಿ ನಿರಂತರ ಸಮೃದ್ಧಿ ಉಂಟಾಗುತ್ತದೆ. ಗಾಜಿನ ಬಾಟಲಿ ಅಥವಾ ಹಸಿರು ಪಾತ್ರೆಯಲ್ಲಿ ಮನಿ ಪ್ಲಾಂಟ್ ನೆಟ್ಟು ಉತ್ತರ ದಿಕ್ಕಿನಲ್ಲಿ ಇಡುವುದರಿಂದ ಸಂಪತ್ತು ಹೆಚ್ಚಾಗುತ್ತದೆ ಮತ್ತು ಕಳೆದುಹೋದ ಹಣ ಮರಳಿ ಸಿಗುತ್ತದೆ. ಇನ್ನು ಮನೆಯ ಈಶಾನ್ಯ ಭಾಗದಲ್ಲಿ ತುಳಸಿ, ಜೇಡ ಗಿಡ ನೆಡುವುದರಿಂದ ಸಮೃದ್ಧಿ ಉಂಟಾಗುತ್ತದೆ.
ಪೂರ್ವ ದಿಕ್ಕು
ಜೀವ ಶಕ್ತಿಯ ಪ್ರತೀಕ ಸೂರ್ಯ ದೇವನ ದಿಕ್ಕು ಎಂದು ಪರಿಗಣಿಸಲಾಗಿರುವ ಪೂರ್ವದಲ್ಲಿ ತುಳಸಿ ಗಿಡವನ್ನು ನೆಡುವುದು ಒಳ್ಳೆಯದು. ತುಳಸಿ ಮನೆಯ ವಾತಾವರಣವನ್ನು ಶುದ್ಧೀಕರಿಸುತ್ತದೆ ಮತ್ತು ಅನಾರೋಗ್ಯವನ್ನು ದೂರ ಮಾಡುತ್ತದೆ. ಪೂರ್ವ ದಿಕ್ಕಿನಲ್ಲಿ ಬಿದಿರನ್ನು ಸಹ ನೆಡಬಹುದು. ಇದು ದೀರ್ಘಾಯುಷ್ಯ ಮತ್ತು ಕುಟುಂಬದ ಸಮೃದ್ಧಿಯನ್ನು ಸಂಕೇತಿಸುತ್ತದೆ.
ದಕ್ಷಿಣ ದಿಕ್ಕು
ಯಮನ ದಿಕ್ಕು ಎಂದು ಪರಿಗಣಿಸಲ್ಪಟ್ಟಿರುವ ಮನೆಯ ದಕ್ಷಿಣ ದಿಕ್ಕಿನಲ್ಲಿ ಶಮಿ ಮರವನ್ನು ನೆಟ್ಟರೆ ಅದು ಜೀವನದಲ್ಲಿ ಸಂತೋಷವನ್ನು ತುಂಬುತ್ತದೆ. ಈ ದಿಕ್ಕಿನಲ್ಲಿ ಶಮಿ ಮರವನ್ನು ನೆಡುವುದರಿಂದ ಶನಿ ದೇವರ ಆಶೀರ್ವಾದವು ಸಂಪೂರ್ಣ ಕುಟುಂಬಕ್ಕೆ ದೊರೆಯುತ್ತದೆ. ಪಾಪಾಸುಕಳ್ಳಿ, ಹಾಲುಕಳೆ ಅಥವಾ ಮುಳ್ಳಿನ ಸಸ್ಯಗಳನ್ನು ಈ ದಿಕ್ಕಿನಲ್ಲಿ ಇಡಬಾರದು. ಅವು ಮನೆಯಲ್ಲಿ ಸಂಘರ್ಷ ಮತ್ತು ಅತೃಪ್ತಿಯನ್ನು ಉಂಟು ಮಾಡುತ್ತದೆ. ದಕ್ಷಿಣ ದಿಕ್ಕಿನಲ್ಲಿ ರಬ್ಬರ್ ಗಿಡ ಅಥವಾ ಅಶೋಕ ಮರವನ್ನು ನೆಡುವುದು ಶುಭವೆಂದು ಪರಿಗಣಿಸಲಾಗಿದೆ. ಇದು ನಕಾರಾತ್ಮಕ ಶಕ್ತಿಗಳನ್ನು ಹೋಗಲಾಡಿಸಲು ಮತ್ತು ಶಾಂತಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಪಶ್ಚಿಮ ದಿಕ್ಕು
ಸಂಬಂಧ, ಸಾಮಾಜಿಕ ಜೀವನದೊಂದಿಗೆ ಸಂಬಂಧ ಹೊಂದಿರುವ ಪಶ್ಚಿಮ ದಿಕ್ಕಿನಲ್ಲಿ ಮಲ್ಲಿಗೆ, ಗುಲಾಬಿ ಅಥವಾ ಯಾವುದೇ ಇತರ ಪರಿಮಳಯುಕ್ತ ಹೂವಿನ ಸಸ್ಯಗಳನ್ನು ನೆಡುವುದು ಶುಭ ಎಂದು ಪರಿಗಣಿಸಲಾಗಿದೆ. ಇದು ಮನೆಯಲ್ಲಿ ಪ್ರೀತಿ, ಸಾಮರಸ್ಯ ಮತ್ತು ಸಂತೋಷವನ್ನು ಬೆಳೆಸುತ್ತದೆ. ವೈವಾಹಿಕ ಜೀವನದಲ್ಲಿ ಉದ್ವಿಗ್ನತೆ ಉಂಟಾದರೆ ಈ ದಿಕ್ಕಿನಲ್ಲಿ ಮನಿ ಪ್ಲಾಂಟ್ ಅಥವಾ ಓಚರ್ ಬಣ್ಣದ ಸಸ್ಯವನ್ನು ನೆಡುವುದು ಒಳ್ಳೆಯದು.
ಇದನ್ನೂ ಓದಿ: Vastu Tips: ಚಪಾತಿ ತಯಾರಿಸುವಾಗ ಲೆಕ್ಕ ಮಾಡಬಾರದು ಯಾಕೆ ಗೊತ್ತೇ?
ಮನೆಯ ನಾಲ್ಕು ದಿಕ್ಕುಗಳಲ್ಲಿ ಸರಿಯಾದ ಸಸ್ಯಗಳನ್ನು ನೆಡುವುದು ಜೀವನದ ಎದುರಾಗುವ ಸಮಸ್ಯೆಗಳನ್ನು ದೂರ ಮಾಡಲು ಸಹಾಯ ಮಾಡುತ್ತದೆ. ಮನೆಯ ಮುಖ್ಯ ದ್ವಾರದಲ್ಲಿ ಕ್ರಾಸ್ಸುಲಾವನ್ನು ಇಡುವುದು ಸಂಪತ್ತನ್ನು ಆಕರ್ಷಿಸಲು ಸಹಾಯ ಮಾಡುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು. .