ಟಿಎಂಸಿ ಬಂಡಾಯದ ನಡುವೆ ಟ್ಯಾಂಗಿ, ಮಸಲೇದಾರ್, ಕುರುಕಲು...; ಬಂಗಾಳದ ಜಲ್ಮುರಿ ಬಗ್ಗೆ ಅಮಿತ್ ಶಾ ಹೇಳಿದ್ದೇಕೆ?
ಒಂದು ಕಡೆ ತೃಣ ಮೂಲ ಕಾಂಗ್ರೆಸ್ ನಲ್ಲಿ ಬಂಡಾಯದ ಬಿರುಗಾಳಿ ಎದ್ದಿದ್ದು, ಈ ಮಧ್ಯೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪಶ್ಚಿಮ ಬಂಗಾಳದಲ್ಲಿ ತಾವು ಸವಿದಿರುವ ಜಲ್ಮುರಿ ಬಗ್ಗೆ ಹೇಳಿಕೊಂಡಿದ್ದಾರೆ. ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಅವರು, ಬಂಗಾಳದ ಜಲ್ಮುರಿ ಟ್ಯಾಂಗಿ, ಮಸಲೇದಾರ್, ಕುರುಕಲು ಎಂದು ನಿಗೂಢ ಪದಗಳಲ್ಲಿ ಉಲ್ಲೇಖಿಸಿರುವುದು ಯಾರಿಗೆ ಎನ್ನುವ ಚರ್ಚೆ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಸಂಗ್ರಹ ಚಿತ್ರ -
ನವದೆಹಲಿ: ತೃಣಮೂಲ ಕಾಂಗ್ರೆಸ್ (Trinamool Congress)ನಲ್ಲಿ ಉಂಟಾಗಿರುವ ಬಂಡಾಯದ ನಡುವೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Home Minister Amit Shah) ಅವರು ಜಲ್ಮುರಿ (Bengals Jalmuri) ಬಗ್ಗೆ ಮಾತನಾಡಿದ್ದಾರೆ. ಅವರು ತಮ್ಮ ನಿಗೂಢವಾದ ಮಾತುಗಳಲ್ಲಿ ಹೇಳಿರುವುದು ಏನು ಎನ್ನುವ ಕುರಿತು ಚರ್ಚೆಗಳು ಪ್ರಾರಂಭವಾಗಿದೆ. ತಮ್ಮ ಸಾಮಾಜಿಕ ಮಾಧ್ಯಮದ ಎಕ್ಸ್ ಖಾತೆಯಲ್ಲಿ ಅಮಿತ್ ಶಾ ಅವರು ಪಕ್ಷ ಅಥವಾ ಟಿಎಂಸಿಯಲ್ಲಿ ನಡೆಯುತ್ತಿರುವ ಬಂಡಾಯದ ಬಗ್ಗೆ ಹೇಳದೇ ಪಶ್ಚಿಮ ಬಂಗಾಳದ ಸಾಂಪ್ರದಾಯಿಕ ಬೀದಿ ಆಹಾರದ ಕುರಿತು ಉಲ್ಲೇಖಿಸಿದ್ದಾರೆ. ಇದು ಈಗ ಸಾಕಾತು ಕುತೂಹಲಕ್ಕೆ ಕಾರಣವಾಗಿದೆ.
ನವದೆಹಲಿಯಲ್ಲಿ ನಡೆದ ಉನ್ನತ ಮಟ್ಟದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಸಭೆಯ ಬಳಿಕ ತಮ್ಮ ಸಾಮಾಜಿಕ ಮಾಧ್ಯಮ ಖಾತೆ ಎಕ್ಸ್ ನಲ್ಲಿ ಅಮಿತ್ ಶಾ ಅವರು ಬಂಗಾಳಿ ಬೀದಿ ಆಹಾರದ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಎನ್‌ಡಿಎ ಸಭೆಯಲ್ಲಿ ಟ್ಯಾಂಗಿ, ಮಸಲೇದಾರ್ ಮತ್ತು ಕುರುಕಲು ಜಲ್ಮುರಿಯನ್ನು ಸವಿದಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಅಭಿಷೇಕ್ ಬ್ಯಾನರ್ಜಿಗೆ ಮತ್ತೊಂದು ಸಂಕಷ್ಟ: ಬಿಜೆಪಿ ಮುಖಂಡನ ಕೊಲೆಗೆ ಯತ್ನಿಸಿದ ಟಿಎಂಸಿ ನಾಯಕ?
ದೇಶಾದ್ಯಂತ ತೃಣಮೂಲ ಕಾಂಗ್ರೆಸ್ ವಿಭಜನೆಯ ಸುದ್ದಿ ಚರ್ಚೆಯಲ್ಲಿರುವಾಗ ಅಮಿತ್ ಶಾ ಅವರ ಈ ನಿಗೂಢ ಸಂದೇಶ ತೀವ್ರ ರಾಜಕೀಯ ಊಹಾಪೋಹಗಳಿಗೆ ನಾಂದಿ ಹಾಡಿದೆ.ಅವರು ತಮ್ಮ ಪೋಸ್ಟ್ ನಲ್ಲಿ ಮೇಲ್ನೋಟಕ್ಕೆ ಜಲ್ಮುರಿಯ ರುಚಿಯ ಬಗ್ಗೆ ಹೇಳಿಕೊಂಡಿದ್ದರೂ ಇದು ತೃಣಮೂಲ ಕಾಂಗ್ರೆಸ್ ಕುರಿತು ಅವರ ವ್ಯಂಗ್ಯದ ಮಾತುಗಳು ಎಂದು ನೋಡಲಾಗುತ್ತಿದೆ.
Relished Tangy, Masaledar and Crunchy Jhalmuri at the NDA meeting. pic.twitter.com/ojuNkFDlOv
— Amit Shah (@AmitShah) June 10, 2026
ಅನುಭವಿ ರಾಜಕಾರಣಿ ಆಗಿರುವ ಅಮಿತ್ ಶಾ ಅವರ ಪದಪ್ರಯೋಗದಲ್ಲಿ "T"angy, "M"asaledar ಮತ್ತು "C"runchy ಎಂಬ ಪದಗಳು "TMC"ಯನ್ನು ಉಲ್ಲೇಖಿಸಿ ಹೇಳಲಾಗಿದೆ.ಅದರಲ್ಲೂ ಅವರು ಬಂಗಾಳಿ ತಿಂಡಿಯ ಬಗ್ಗೆ ಮಾತನಾಡಿರುವುದು ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಬಿರುಕಿನ ಬಗ್ಗೆಯೇ ಎಂಬುದನ್ನು ಸ್ಪಷ್ಟಪಡಿಸಿದಂತಿದೆ.
ವಿಧಾನ ಸಭೆಯ ಬಳಿಕ ರಾಜ್ಯ ಸಭೆ, ಲೋಕಸಭೆಯ ಸಂಸದರು ಬಂಡಾಯವೆದ್ದು, ಕಾಕೋಲಿ ಘೋಷ್ ದಸ್ತಿದಾರ್ ನೇತೃತ್ವದಲ್ಲಿ 20 ಟಿಎಂಸಿ ಲೋಕಸಭಾ ಸಂಸದರು ಎನ್‌ಡಿಎ ಒಕ್ಕೂಟಕ್ಕೆ ಬೆಂಬಲ ನೀಡುವ ನಿರ್ಧಾರವನ್ನು ಘೋಷಿಸಿದರು. ಈ ಕುರಿತು ಅಮಿತ್ ಶಾ ಅವರು ತಮ್ಮ ಪೋಸ್ಟ್ ನಲ್ಲಿ ಟಿಎಂಸಿಯ ಪತನವನ್ನು ಸೂಚಿಸಿದೆ ಎನ್ನುತ್ತಾರೆ ವಿಶ್ಲೇಷಕರು.
ಮಂಡಕ್ಕಿಯಿಂದ ಮಾಡಲಾಗುವ ಜಲ್ಮುರಿಯು ಬಂಗಾಳದ ಒಂದು ಪ್ರಮುಖ ಬೀದಿ ಆಹಾರವಾಗಿದೆ. ಪಶ್ಚಿಮ ಬಂಗಾಳ ಚುನಾವಣೆಯನ್ನು ಬಿಜೆಪಿ ಗೆದ್ದ ಮೇಲೆ ಇದು ಸಾಕಷ್ಟು ಚರ್ಚೆಯಲ್ಲಿದೆ. ಇದಕ್ಕೆ ಮುಖ್ಯ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರದ ಸಮಯದಲ್ಲಿ ಇದನ್ನು ಸವಿದು, ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು. ಬಳಿಕ ಇದು ರಾಜಕೀಯವಾಗಿ ತೀವ್ರ ಚರ್ಚೆಯಲ್ಲಿದೆ.