ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಗೂಗಲ್ ಅರ್ಥ್ ಮೂಲಕ 25 ವರ್ಷದ ನಂತರ ತಾಯಿಯನ್ನು ಪತ್ತೆ ಹಚ್ಚಿದ ವ್ಯಕ್ತಿ: ಸಾರೂ ಬ್ರಿರ್ಲಿಯ ಭಾವುಕ ಕ್ಷಣ ಹೀಗಿತ್ತು

Viral News: ಸಾರೂ ಬ್ರಿರ್ಲಿ ಎಂಬ ವ್ಯಕ್ತಿಯ ಜೀವನ ಕಥೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಕೇಳಿ ನೆಟ್ಟಿಗರು ಅಚ್ಚರಿಗೊಳಗಾಗಿದ್ದಾರೆ. 25 ವರ್ಷಗಳ ಹಿಂದೆ ತನ್ನ ತಾಯಿಯನ್ನು ಕಳೆದುಕೊಂಡ ವ್ಯಕ್ತಿ ಸುಮಾರು ಎರಡು ದಶಕಗಳ ನಂತರ ತಾಯಿಯೊಂದಿಗೆ ಮತ್ತೆ ಒಂದಾದ ಸುದ್ದಿ ಎಲ್ಲರನ್ನು ಭಾವುಕಗೊಳಿಸಿದೆ. ಸಾರೂ ಬ್ರಿರ್ಲಿ ತನ್ನ ತಾಯಿಯನ್ನು ಪತ್ತೆ ಹಚ್ಚಿದ ಈ ಸಾಹಸಗಾಥೆ ಸದ್ಯ ವೈರಲ್‌ ಆಗಿದೆ.

25 ವರ್ಷದ ನಂತರ ತಾಯಿ-ಮಗನನ್ನು ಒಂದು ಮಾಡಿದ ಗೂಗಲ್ ಅರ್ಥ್

ಗೂಗಲ್ ಅರ್ಥ್ ಮೂಲಕ ತಾಯಿಯನ್ನು ಕಂಡು ಹಿಡಿದ ವ್ಯಕ್ತಿ -

Profile
Pushpa Kumari Apr 21, 2026 3:11 PM

ನವದೆಹಲಿ, ಏ. 21: ಕೆಲವೊಮ್ಮೆ ಬದುಕಿನಲ್ಲಿ ಅಸಾಧ್ಯ ಎನ್ನುವುದನ್ನು ಕೂಡ ನಡೆಯುತ್ತದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಹೌದು, ಸಾರೂ ಬ್ರಿರ್ಲಿ ಎಂಬ ವ್ಯಕ್ತಿಯ ಜೀವನ ಕಥೆ ಸೋಷಿಯಲ್ ಮೀಡಿಯಾದಲ್ಲಿ ಎಲ್ಲರನ್ನು ದಂಗಾಗಿಸಿದೆ. 25 ವರ್ಷಗಳ ಹಿಂದೆ ತನ್ನ ತಾಯಿಯನ್ನು ಕಳೆದುಕೊಂಡ ಸಾರೂ ಬ್ರಿರ್ಲಿ ಸುಮಾರು ಎರಡು ದಶಕಗಳ ನಂತರ ಅವರನ್ನು ಸೇರಿದ ಸುದ್ದಿ ಎಲ್ಲರನ್ನು ಭಾವುಕಗೊಳಿಸಿದೆ. ಬಾಲಕನು ತನ್ನ ತಾಯಿಯನ್ನು ಪತ್ತೆ ಹಚ್ಚಿದ ಸದೃಶವಾದ ಕಥೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral News) ಆಗಿದೆ.

ಡಾಕ್ಟರ್ ಲೆಮ್ಮ ಈ ಪೋಸ್ಟ್ ಶೇರ್ ಮಾಡಿಕೊಂಡಿದ್ದು ತ್ವರಿತವಾಗಿ ವೈರಲ್ ಆಗಿದೆ. ಸಾವಿರಾರು ಬಳಕೆದಾರರನ್ನು ಭಾವುಕರನ್ನಾಗಿ ಮಾಡಿದ ಈ ಹಳೆಯ ಕಥೆ ಮತ್ತೊಮ್ಮೆ ಇಂಟರ್‌ನೆಟ್‌ ಗಮನ ಸೆಳೆದಿದೆ. ಸಾರೂ ಬ್ರಿರ್ಲಿ ಕೇವಲ ಐದು ವರ್ಷದವನಿದ್ದಾಗ ರೈಲಿನಲ್ಲಿ ದಾರಿ ತಪ್ಪಿ ಮನೆಯಿಂದ ಸಾವಿರಾರು ಕಿಲೋ ಮೀಟರ್ ದೂರದಲ್ಲಿದ್ದರು.

1986ರಲ್ಲಿ ಕೇವಲ ಐದು ವರ್ಷ ಇದ್ದಾಗ ತನ್ನ ಅಣ್ಣನ ಜತೆ ರೈಲು ನಿಲ್ದಾಣಕ್ಕೆ ಹೋದಾಗ ಆಕಸ್ಮಿಕವಾಗಿ ದೂರ ಆಗಿದ್ದರು. ಕಥೆಯ ಪ್ರಕಾರ ಸರೂ ತನ್ನ ಅಣ್ಣ ಗುಡ್ಡುಗಾಗಿ ರೈಲ್ವೆ ನಿಲ್ದಾಣದಲ್ಲಿ ಕಾಯುತ್ತಿದ್ದಾಗ ಆಕಸ್ಮಿಕವಾಗಿ ಖಾಲಿ ರೈಲು ಬೋಗಿಯನ್ನು ಹತ್ತಿದ್ದ‌ರು. ತನ್ನ ಸಹೋದರ ಒಳಗೆ ಇರಬಹುದೆಂದು ನಂಬಿ ಆತ ನಿದ್ರೆಗೆ ಜಾರಿದ್ದರು. ಸುಮಾರು 1,500 ಕಿಲೋ ಮೀಟರ್‌ವರೆಗೆ ಕೋಲ್ಕತ್ತಾ ತಲುಪಿದ ಸರೂ ತನ್ನ ಊರು, ತಾಯಿಯ ಹೆಸರು ಯಾವುದು ಹೇಳಲು ಗೊತ್ತಿರಲಿಲ್ಲ.

ಸುಮಾರು ವಾರಗಳವರೆಗೆ, ಅವರು ಬೀದಿಗಳಲ್ಲಿ ಅಲೆದಾಡಿ, ರೈಲು ನಿಲ್ದಾಣಗಳಲ್ಲಿ ಬೆಂಚುಗಳ ಕೆಳಗೆ ಮಲಗಿದ್ದು ಕೊನೆಗೆ, ಅವನನ್ನು ಒಂದು ಅನಾಥಾಶ್ರಮಕ್ಕೆ ಕರೆದೊಯ್ಯಲಾಯಿತು. ಆದರೆ ಯಾರಿಗೂ ಅವನ ಕುಟುಂಬವನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ನಂತರ ಸರೂವನ್ನು ಟ್ಯಾಸ್ಮೇನಿಯಾದ ಆಸ್ಟ್ರೇಲಿಯಾದ ದಂಪತಿ ದತ್ತು ತೆಗೆದುಕೊಂಡು ವಿದೇಶಕ್ಕೆ ತೆರಳಿದರು. ಅಲ್ಲಿ ಆತ ಹೊಸ ಕುಟುಂಬ ಮತ್ತು ಹೊಸ ಜೀವನದೊಂದಿಗೆ ಬೆಳೆದರು.

ಸೆಲ್ಫಿಗಾಗಿ ವಿದೇಶಿ ಮಹಿಳೆ ಹಿಂದೆ ಬಿದ್ದ ಯುವಕರು; ವಿಡಿಯೊ ವೈರಲ್

ಆದಾಗ್ಯೂ ಅವರು ಭಾರತದಲ್ಲಿ ತಮ್ಮ ಬಾಲ್ಯದಿಂದ ಸಾಗಿಸುತ್ತಿದ್ದ ನೆನಪಿನ ಕ್ಷಣವನ್ನು ಎಂದಿಗೂ ಮರೆಯಲಿಲ್ಲ. ರೈಲ್ವೆ ನಿಲ್ದಾಣ, ಸೇತುವೆ, ನೀರಿನ ಗೋಪುರ ಮತ್ತು ಅವರ ಮನೆಯ ಸುತ್ತಲಿನ ಬೀದಿಗಳ ವಿನ್ಯಾಸ ನೆನಪಿಸುತ್ತಿದ್ದರು. 2011ರಲ್ಲಿ ಸಾರೂ ಗೂಗಲ್ ಅರ್ಥ್ ಮೂಲಕ ಭಾರತದ ರೈಲ್ವೆ ಮಾರ್ಗಗಳನ್ನು ಹುಡುಕಲು ಪ್ರಾರಂಭ ಮಾಡಿದ್ದು ತನಗೆ ನೆನಪಿದ್ದ ಕೆಲವು ಕುರುಹುಗಳಾದ ಸೇತುವೆ ಮತ್ತು ರೈಲ್ವೆ ನಿಲ್ದಾಣದ ಆಧಾರದ ಮೇಲೆ ಸತತ ಹುಡುಕಾಟ ನಡೆಸಿದರು.

ರೈಲು ಎಷ್ಟು ದೂರ ಪ್ರಯಾಣಿಸಬಹುದೆಂದು ಅಂದಾಜು ಮಾಡುವ ಮೂಲಕ ಮತ್ತು ಕೋಲ್ಕತ್ತಾದ ಸುತ್ತಮುತ್ತಲಿನ ರೈಲ್ವೆ ಮಾರ್ಗಗಳನ್ನು ಅಧ್ಯಯನ ಮಾಡುವ ಮೂಲಕ 2011ರಲ್ಲಿ ಅವರು ಅಂತಿಮವಾಗಿ ತಮ್ಮ ಹುಟ್ಟಿದ ಊರು ಪತ್ತೆ ಹಚ್ಚಿದರು. ಆ ಮೂಲಕ ತಾಯಿಯನ್ನು ಭೇಟಿಯಾದರು.

ಸಾರೂ ನಾಪತ್ತೆಯಾದ ಅದೇ ದಿನ ರಾತ್ರಿ ಅವರ ಅಣ್ಣ ಗುಡ್ಡು ರೈಲು ಅಪಘಾತದಲ್ಲಿ ಮೃತಪಟ್ಟಿದ್ದರು. ಆದರೆ ಅವರ ತಾಯಿ, ತನ್ನ ಮಗ ಖಂಡಿತಾ ಮರಳುತ್ತಾನೆ ಎಂಬ ನಂಬಿಕೆಯಿಂದ ಅದೇ ಊರಿನಲ್ಲಿ ಕಾಯುತ್ತಿದ್ದರು. ಸಾರೂ ಬ್ರಿರ್ಲಿ ಅವರ ಈ ಕಥೆ 'ಎ ಲಾಂಗ್ ವೇ ಹೋಮ್' (A Long Way Home) ಎಂಬ ಹೆಸರಿನಲ್ಲಿ ಪುಸ್ತಕವಾಗಿ ಪ್ರಕಟವಾಗಿದೆ. ಅಷ್ಟೇ ಅಲ್ಲದೆ, ಇದು 2016ರಲ್ಲಿ 'ಲಯನ್' ಎಂಬ ಹೆಸರಿನಲ್ಲಿ ಹಾಲಿವುಡ್ ಸಿನಿಮಾವಾಗಿ ಮೂಡಿಬಂದಿದೆ.