MI vs GT: 4 ವಿಕೆಟ್ ಕಿತ್ತ ತಮ್ಮ ಬೌಲಿಂಗ್ ಪ್ಲ್ಯಾನ್ ಏನೆಂದು ತಿಳಿಸಿದ ಅಶ್ವಿನಿ ಕುಮಾರ್!
ಏಪ್ರಿಲ್ 20 ರಂದು ಸೋಮವಾರ ನಡೆದಿದ್ದ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಎದುರು ಮುಂಬೈ ಇಂಡಿಯನ್ಸ್ ತಂಡದ ಪರ ಅಶ್ವಿನಿ ಕುಮಾರ್ 4 ವಿಕೆಟ್ ಸಾಧನೆ ಮಾಡಿದ್ದಾರೆ. ಆ ಮೂಲಕ ಮುಂಬೈ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಪಂದ್ಯದ ಬಳಿಕ ಅಶ್ವಿನಿ ಕುಮಾರ್ ತಮ್ಮ ಬೌಲಿಂಗ್ ಪ್ರದರ್ಶನದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಗುಜರಾತ್ ಟೈಟನ್ಸ್ ವಿರುದ್ಧ 4 ವಿಕೆಟ್ ಕಿತ್ತ ಅಶ್ವಿನಿ ಕುಮಾರ್. -
ಅಹಮದಾಬಾದ್: ಗುಜರಾತ್ ಟೈಟನ್ಸ್ ವಿರುದ್ಧ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (MI) ತಂಡದ ಯುವ ವೇಗಿ ಅಶ್ವಿನಿ ಕುಮಾರ್ (Ashwini Kumar) ಮಾರಕ ಬೌಲಿಂಗ್ ದಾಳಿ ನಡೆಸಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದರು. ಆ ಮೂಲಕ ಮುಂಬೈ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಪಂದ್ಯದ ಬಳಿ ಅವರು, ತಮ್ಮ ಯಾರ್ಕರ್‌ಗಳು ಮತ್ತು ಸ್ವಿಂಗ್ ಬೌಲಿಂಗ್‌ನಲ್ಲಿ ತುಂಬಾ ಶ್ರಮಿಸಿದ್ದೇನೆ ಮತ್ತು ತಮ್ಮ ಅವಕಾಶಕ್ಕಾಗಿ ತಾಳ್ಮೆಯಿಂದ ಕಾಯುತ್ತಿದ್ದೆ ಎಂದು ಹೇಳಿದ್ದಾರೆ.
ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ತಿಲಕ್ ವರ್ಮಾ ಅವರ ಅಜೇಯ 101 ರನ್‌ಗಳ ಬಲದಿಂದ, ಮುಂಬೈ ಇಂಡಿಯನ್ಸ್ ಐದು ವಿಕೆಟ್‌ಗಳ ನಷ್ಟಕ್ಕೆ ಒಟ್ಟು 199 ರನ್‌ಗಳನ್ನು ಗಳಿಸಿತು. ಬಳಿಕ ಪ್ರಸಕ್ತ ಋತುವಿನ ತಮ್ಮ ಮೊದಲ ಪಂದ್ಯವನ್ನು ಆಡಿದ ಅಶ್ವನಿ 24 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಪಡೆದರು ಹಾಗೂ ಗುಜರಾತ್ ಟೈಟನ್ಸ್ ತಂಡವನ್ನು 15.5 ಓವರ್‌ಗಳಲ್ಲಿ 100 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು.
GT vs MI: ತಿಲಕ್ ಚೊಚ್ಚಲ ಶತಕ; ಗೆಲುವಿನ ಹಳಿಗೆ ಮರಳಿದ ಮುಂಬೈ ಇಂಡಿಯನ್ಸ್
ಅಶ್ವಿನಿ ಕುಮಾರ್ ಹೇಳಿದ್ದೇನೆ?
ಪಂದ್ಯದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ 24 ವರ್ಷದ ಅಶ್ವಿನಿ ಕುಮಾರ್, "ನಾನು ನನ್ನ ಯಾರ್ಕರ್‌ಗಳು ಮತ್ತು ಸ್ವಿಂಗ್ ಬೌಲಿಂಗ್‌ನಲ್ಲಿ ಕೆಲಸ ಮಾಡುತ್ತಿದ್ದೆ. ನಾನು ನನ್ನ ಅವಕಾಶಕ್ಕಾಗಿ ಕಾಯುತ್ತಿದ್ದೆ. ನನಗೆ ಅವಕಾಶ ಸಿಕ್ಕಾಗಲೆಲ್ಲಾ ನಾನು ಉತ್ತಮವಾಗಿ ಪ್ರದರ್ಶನ ನೀಡುತ್ತೇನೆ; ಇಲ್ಲದಿದ್ದರೆ, ನಾನು ದೇವಸ್ಥಾನಕ್ಕೆ ಭೇಟಿ ನೀಡುತ್ತೇನೆ. ನಾನು ಮಾಡುತ್ತಿದ್ದದ್ದು ಅಷ್ಟೇ," ಎಂದು ಹೇಳಿದ್ದಾರೆ.
"ನಾನು ವಿಕೆಟ್‌ನ ಪರಿಸ್ಥಿತಿಗಳಿಗೆ ಅನುಗುಣವಾಗಿ ಬೌಲ್ ಮಾಡಿದ್ದೇನೆ. ನಾವು ಇದರ ಬಗ್ಗೆ ನಾಯಕನೊಂದಿಗೆ ಚರ್ಚಿಸಿದ್ದೇವೆ ಮತ್ತು ನಮ್ಮ ತಂತ್ರವನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲು ಪ್ರಯತ್ನಿಸಿದ್ದೇವೆ," ಎಂದು ಅವರು ತಿಳಿಸಿದ್ದಾರೆ.
GT vs MI: ಚೊಚ್ಚಲ ಐಪಿಎಲ್ ಶತಕ ಬಾರಿಸಿ ಹಲವು ದಾಖಲೆ ಬರೆದ ತಿಲಕ್ ವರ್ಮಾ
ಪ್ರಥಮ ಇನಿಂಗ್ಸ್‌ನಲ್ಲಿ ಸ್ವಿಂಗ್ ಆಗುತ್ತಿತ್ತು
"ಇದು ಕಪ್ಪು ಮಣ್ಣಿನ ಪಿಚ್, ಆದ್ದರಿಂದ ಚೆಂಡು ಸ್ವಲ್ಪ ಕೆಳಮಟ್ಟದಲ್ಲಿರುತ್ತದೆ ಎಂದು ನಮಗೆ ತಿಳಿದಿತ್ತು. ಪ್ರಥಮ ಇನಿಂಗ್ಸ್‌ನಲ್ಲಿ ಚೆಂಡು ಸ್ವಲ್ಪ ಸ್ವಿಂಗ್ ಆಗುತ್ತಿತ್ತು. ಆದ್ದರಿಂದ, ಸರಿಯಾದ ಲೆನ್ತ್‌ನಲ್ಲಿ ಬೌಲ್ ಮಾಡುವುದು ಮತ್ತು ನಮ್ಮ ಬೌಲಿಂಗ್ ಅನ್ನು ಪಿಚ್‌ನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವುದು ನಮ್ಮ ತಂತ್ರವಾಗಿತ್ತು," ಎಂದರು.
ಮುಂಬೈ ಇಂಡಿಯನ್ಸ್‌ಗೆ ಏಳನೇ ಸ್ಥಾನ
ಗುಜರಾತ್ ಟೈಟನ್ಸ್ ತಂಡದ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ ತಮ್ಮ ನಾಲ್ಕು ಪಂದ್ಯಗಳ ಸೋಲಿನ ಸರಣಿಯನ್ನು ಕೊನೆಗೊಳಿಸಿತು ಮತ್ತು 2026ರ ಐಪಿಎಲ್ ಟೂರ್ನಿಯ ಅಂಕಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ಏರಿದೆ. ಈ ಬಗ್ಗೆ ಮಾತನಾಡಿದ ಅವರು "ನಾವು ನಮ್ಮ ತಪ್ಪುಗಳನ್ನು ವಿಶ್ಲೇಷಿಸುತ್ತಿದ್ದೇವೆ ಮತ್ತು ನಮ್ಮ ತರಬೇತುದಾರರ ಸಲಹೆಯನ್ನು ಅನುಸರಿಸುತ್ತಿದ್ದೇವೆ. ಸೋಲುಗಳ ಹೊರತಾಗಿಯೂ, ನಮ್ಮ ನೈತಿಕತೆ ಕಡಿಮೆಯಾಗಲಿಲ್ಲ. ಆ ಹಂತದಲ್ಲಿಯೂ ಸಹ, ತಂಡವು ಅತ್ಯಂತ ಸಕಾರಾತ್ಮಕವಾಗಿ ಉಳಿಯಿತು," ಎಂದು ಹೇಳಿದ್ದಾರೆ.