ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ವರದಕ್ಷಿಣೆ ಕಿರುಕುಳಕ್ಕೆ ಬಲಿಯಾಗಿದ್ದವಳು ಪ್ರಿಯಕರನ ಮನೆಯಲ್ಲಿ ಪ್ರತ್ಯಕ್ಷ! ಸಾವಿನ ನಾಟಕ ಕೊನೆಗೂ ಬಯಲು

ವರದಕ್ಷಿಣೆ ಕೊಲೆ ಪ್ರಕರಣದಲ್ಲಿ ಸತ್ತಿದ್ದಾಳೆ ಎಂದೇ ನಂಬಲಾಗಿದ್ದ ಮಹಿಳೆಯೊಬ್ಬರು ಜೀವಂತವಾಗಿ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಘಾಜಿಪುರದಲ್ಲಿ ನಡೆದಿದೆ. ಸತ್ತಿದ್ದಾಳೆ ಎಂದೇ ಭಾವಿಸಲಾಗಿದ್ದ ಮಹಿಳೆ ಗ್ವಾಲಿಯರ್‌ನಲ್ಲಿ ತನ್ನ ಪ್ರಿಯಕರನೊಂದಿಗೆ ಪತ್ತೆಯಾಗಿದ್ದಾಳೆ. ವರದಕ್ಷಿಣೆ ಕೊಲೆ ಪ್ರಕರಣ ಒಂದು ಕಟ್ಟುಕಥೆ ಎಂದು ಪೊಲೀಸರು ತಿಳಿಸಿದ್ದಾರೆ.

ವರದಕ್ಷಿಣೆ ಕಿರುಕುಳಕ್ಕೆ ಬಲಿಯಾಗಿದ್ದವಳು ಪ್ರಿಯಕರನ ಮನೆಯಲ್ಲಿ ಪ್ರತ್ಯಕ್ಷ!

ವರದಕ್ಷಿಣೆ ಕೊಲೆ ಪ್ರಕರಣದಲ್ಲಿ ಸತ್ತಿದ್ದಾಳೆ ಎಂದು ನಂಬಲಾಗಿದ್ದ ಮಹಿಳೆ ಪ್ರಿಯಕರನೊಂದಿಗೆ ಪತ್ತೆ (ಸಂಗ್ರಹ ಚಿತ್ರ) -

ಉತ್ತರಪ್ರದೇಶ: ವರದಕ್ಷಿಣೆ ಕೊಲೆ ( dowry case) ಪ್ರಕರಣದಲ್ಲಿ ಸತ್ತಿದ್ದಾಳೆ ಎಂದೇ ನಂಬಲಾಗಿದ್ದ ಮಹಿಳೆಯೊಬ್ಬಳು ಜೀವಂತವಾಗಿ ಪತ್ತೆಯಾಗಿರುವ ಘಟನೆ ಉತ್ತರಪ್ರದೇಶದಲ್ಲಿ (Uttar Pradesh) ನಡೆದಿದೆ. ಘಾಜಿಪುರದಲ್ಲಿ ನಡೆದಿದ್ದ ವರದಕ್ಷಿಣೆ (dowry case) ಕೊಲೆ ಪ್ರಕರಣದಲ್ಲಿ ಸತ್ತಿದ್ದಾಳೆ ಎಂದು ನಂಬಲಾಗಿದ್ದ ಮಹಿಳೆ ಮಧ್ಯಪ್ರದೇಶದ (Madhya Pradesh) ಗ್ವಾಲಿಯರ್‌ನಲ್ಲಿ ತನ್ನ ಪ್ರಿಯಕರನೊಂದಿಗೆ ಪತ್ತೆಯಾಗಿದ್ದಾಳೆ. ಘಾಜಿಪುರದ ವರದಕ್ಷಿಣೆ ಕೊಲೆ ಪ್ರಕರಣ ಒಂದು ಕಟ್ಟು ಕಥೆ. ಸುಳ್ಳು ದೂರು ನೀಡಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಘಾಜಿಪುರ ಜಿಲ್ಲೆಯಲ್ಲಿ ರುಚಿ ಎಂಬ ಮಹಿಳೆ ವರದಕ್ಷಿಣೆ ಕೊಲೆ ಪ್ರಕರಣದಲ್ಲಿ ಸತ್ತಿದ್ದಾಳೆ ಎಂದೇ ನಂಬಲಾಗಿತ್ತು. ಆದರೆ ಆಕೆ ಈಗ ತನ್ನ ಪ್ರಿಯಕರನೊಂದಿಗೆ ವಾಸಿಸುತ್ತಿರುವುದಾಗಿ ತಿಳಿದು ಬಂದಿದೆ. ಆಕೆಯ ಕೊಲೆ ಆರೋಪದಲ್ಲಿ ಗಂಡನ ಮನೆಯ ಆರು ಮಂದಿ ವಿರುದ್ಧ ಕೇಸು ದಾಖಲಾಗಿದ್ದು, ಮಹಿಳೆ ಕೊಲೆ ಮತ್ತು ಸಾಕ್ಷ್ಯ ನಾಶಪಡಿಸಿದ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದರು.

ಇದನ್ನೂ ಓದಿ: G Parameshwar: ಪರಪ್ಪನ ಅಗ್ರಹಾರದಲ್ಲಿ ಉಗ್ರನಿಗೆ ರಾಜಾತಿಥ್ಯ: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?

ಘಾಜಿಪುರದ ಬರಹಪರ್ ಭೋಜುರಾಯ್ ಗ್ರಾಮದ ರುಚಿಯನ್ನು ಆಕೆಯ ಗಂಡನ ಮನೆಯವರು ಕೊಂದು ಶವವನ್ನು ವಿಲೇವಾರಿ ಮಾಡಿದ್ದಾರೆ ಎಂದು ರುಚಿಯ ತಾಯಿ ರಾಜವಂತಿ ದೇವಿ ಅವರು ಅಕ್ಟೋಬರ್ 3 ರಂದು ಪೊಲೀಸರಿಗೆ ದೂರು ನೀಡಿದ್ದರು. ಈ ಕುರಿತು ಕೇಸು ದಾಖಲಿಸಿದ ಪೊಲೀಸರು ರುಚಿಯ ಪತಿ ರಾಜೇಂದ್ರ ಯಾದವ್, ಅವರ ತಾಯಿ ಕಮಲಿ ದೇವಿ ಮತ್ತು ಇತರ ನಾಲ್ವರು ಕುಟುಂಬ ಸದಸ್ಯರ ವಿರುದ್ಧ ವರದಕ್ಷಿಣೆ ಕೊಲೆ ಮತ್ತು ಸಾಕ್ಷ್ಯ ನಾಶದ ಪ್ರಕರಣವನ್ನು ದಾಖಲಿಸಿದ್ದರು.

ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಡ ಸಾದತ್‌ನ ವೃತ್ತ ಅಧಿಕಾರಿ ರಾಮಕೃಷ್ಣ ತಿವಾರಿ ನೇತೃತ್ವದ ತಂಡ ಇದೀಗ ರುಚಿ ಜೀವಂತವಾಗಿದ್ದಾಳೆ ಮತ್ತು ಗ್ವಾಲಿಯರ್‌ನಲ್ಲಿ ಗಜೇಂದ್ರ ಯಾದವ್ ಎಂಬ ವ್ಯಕ್ತಿಯೊಂದಿಗೆ ವಾಸಿಸುತ್ತಿದ್ದಾಳೆ ಎಂದು ಪತ್ತೆ ಹಚ್ಚಿದೆ. ಗ್ವಾಲಿಯರ್‌ಗೆ ತೆರಳಿದ ಪೊಲೀಸ್ ತಂಡ ರುಚಿಯನ್ನು ಅಕ್ಟೋಬರ್ 7 ರಂದು ಬಂಧಿಸಿ ಕರೆದುಕೊಂಡು ಬಂದಿದೆ.

ರಾಜೇಂದ್ರ ಯಾದವ್ ಜೊತೆ ತನ್ನ ವಿವಾಹವು ಇಚ್ಛೆಗೆ ವಿರುದ್ಧವಾಗಿ ನಿಶ್ಚಯಿಸಲ್ಪಟ್ಟಿತ್ತು. ತಾನು ಶಾಲಾ ದಿನಗಳಿಂದಲೂ ರೇವಾಯಿ ಗ್ರಾಮದ ನಿವಾಸಿ ಗಜೇಂದ್ರನನ್ನು ಪ್ರೀತಿಸುತ್ತಿದ್ದೆ. ಅವನನ್ನು ಮದುವೆಯಾಗಲು ಗಂಡನ ಮನೆಯಿಂದ ಓಡಿಹೋಗಿರುವುದಾಗಿ ರುಚಿ ಪೊಲೀಸರಿಗೆ ತಿಳಿಸಿದ್ದಾಳೆ.

ರಾಜೇಂದ್ರ ಯಾದವ್ ಮತ್ತು ಮನೆಯವರ ವಿರುದ್ಧ ದಾಖಲಾಗಿರುವ ಆರೋಪಗಳು ಸುಳ್ಳು ಎಂದು ದೃಢಪರಿಸಿದ ಸಿಒ ತಿವಾರಿ, ಇದೊಂದು ಕಟ್ಟುಕಥೆಯಾಗಿದೆ. ಸುಳ್ಳು ದೂರು ದಾಖಲಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಇದನ್ನೂ ಓದಿ: Physical Assault: ಬಾಲಕನನ್ನು ಅಪಹರಿಸಿ ಲೈಂಗಿಕ ಕಿರುಕುಳ; ಆರೋಪಿ ಮಹಿಳೆಗೆ 54 ವರ್ಷಗಳ ಜೈಲು ಶಿಕ್ಷೆ!

ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ರುಚಿಯ ಪತಿ ರಾಜೇಂದ್ರ ಯಾದವ್, ನಾವು ನಿರಪರಾಧಿಗಳು. ಆದರೆ ನಮ್ಮ ವಿರುದ್ಧ ಸುಳ್ಳು ಆರೋಪ ಹೊರಿಸಲಾಗಿದೆ. ಹೆಂಡತಿ ಎಂದಿಗೂ ನಮ್ಮೊಂದಿಗೆ ಇರಲಿಲ್ಲ. ಆಗಾಗ್ಗೆ ಕುಟುಂಬ ಸದಸ್ಯರೊಂದಿಗೆ ಜಗಳವಾಡುತ್ತಿದ್ದಳು. ಅವಳು ಬೇರೊಬ್ಬರನ್ನು ಪ್ರೀತಿಸುತ್ತಿದ್ದಾಳೆ ಎಂದು ಅವಳ ಹೆತ್ತವರಿಗೆ ತಿಳಿದಿತ್ತು. ಆದರೆ ಅವರು ನಮ್ಮನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿದರು. ನಮ್ಮ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದವರ ವಿರುದ್ಧ ನಾವು ದೂರು ದಾಖಲಿಸುತ್ತೇವೆ ಎಂದು ಅವರು ತಿಳಿಸಿದರು. ವೈದ್ಯಕೀಯ ಪರೀಕ್ಷೆಯ ಬಳಿಕ ರುಚಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.