ರೋಗಿ ಮೇಲೆ ವೈದ್ಯ ಹಲ್ಲೆ ನಡೆಸಿದ ಪ್ರಕರಣಕ್ಕೆ ಭಾರಿ ಟ್ವಿಸ್ಟ್; ನಿಜಕ್ಕೂ ಗಲಾಟೆ ಆರಂಭಿಸಿದ್ದು ಯಾರು? ಅಂದು ನಡೆದಿದ್ದೇನು?
Viral Video: ಹಿಮಾಚಲ ಪ್ರದೇಶದ ಶಿಮ್ಲಾದ ಆಸ್ಪತ್ರೆಯೊಂದರಲ್ಲಿ ಇತ್ತೀಚೆಗೆ ರೋಗಿಯ ಮೇಲೆ ವೈದ್ಯ ಹಲ್ಲೆ ನಡೆಸಿದ ಪ್ರಕರಣ ಭಾರಿ ಸದ್ದು ಮಾಡಿತ್ತು. ವೈದ್ಯನದ್ದೇ ತಪ್ಪು, ಅವರು ರೋಗಿಗೆ ಚಿಕಿತ್ಸೆ ನೀಡುವ ಬದಲು ಮನಬಂದಂತೆ ಥಳಿಸಿದ್ದಾರೆ ಎಂದೇ ಹೇಳಲಾಗಿತ್ತು. ಆದರೆ ಈಗ ಈ ಘಟನೆ ಹೊಸ ತಿರುವು ಪಡೆದುಕೊಂಡಿದೆ. ಘಟನೆ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದದ್ದನ್ನು ಮನಗಂಡ ವೈದ್ಯರು ವಿಡಿಯೊ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಅಂದು ನಿಜವಾಗಿಯೂ ನಡೆದಿದ್ದೇನು ಎನ್ನುವುದನ್ನು ವಿವರಿಸಿದ್ದಾರೆ.
ವೈದ್ಯರಿಂದ ರೋಗಿಗೆ ಹಲ್ಲೆ ಆರೋಪ -
ಶಿಮ್ಲಾ, ಡಿ. 24: ʼವೈದ್ಯೋ ನಾರಾಯಣ ಹರಿʼ ಎಂಬ ಮಾತಿದೆ. ವೈದ್ಯರು ರೋಗಿಗಳ ಪ್ರಾಣ ಉಳಿಸುವ ಮೂಲಕ ದೇವರಿಗೆ ಸಮಾನರಾಗಿರುತ್ತಾರೆ ಎಂಬುದು ಈ ಮಾತಿನ ಅರ್ಥ. ಆದರೆ ಇತ್ತೀಚೆಗೆ ವೈದ್ಯರೊಬ್ಬರು ತಮ್ಮ ಬಳಿ ಚಿಕಿತ್ಸೆಗೆಂದು ಬಂದ ರೋಗಿಯ ಮೇಲೆ ಹಲ್ಲೆ ಮಾಡಿದ್ದ ಘಟನೆ ಶಿಮ್ಲಾ ಆಸ್ಪತ್ರೆಯಲ್ಲಿ ನಡೆದು ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಇದರಲ್ಲಿ ತಪ್ಪೆಲ್ಲ ವೈದ್ಯನದ್ದೆ, ಅವರು ರೋಗಿಗೆ ಚಿಕಿತ್ಸೆ ನೀಡುವ ಬದಲು ಮನ ಬಂದಂತೆ ಥಳಿಸಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈಗ ಈ ಘಟನೆ ಹೊಸ ತಿರುವು ಪಡೆದುಕೊಂಡಿದೆ. ವಿಡಿಯೊ ವೈರಲ್ ಆಗುತ್ತಿದ್ದಂತೆ ಮಾತನಾಡಿದ ವೈದ್ಯ ಘಟನೆ ಹಿಂದಿನ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಶಿಮ್ಲಾದಲ್ಲಿನ ಐಜಿಎಂಸಿಯಲ್ಲಿ ನಡೆದ ಈ ಘಟನೆ ಬಳಿಕ ವೈದ್ಯರನ್ನು ಅಮಾನತುಗೊಳಿಸಲಾಗಿತ್ತು. ಅಲ್ಲದೆ ಫ್‌ಐಆರ್ ಕೂಡ ದಾಖಲಿಸಲಾಗಿದೆ. ಇದೀಗ ಈ ಬಗ್ಗೆ ತನಿಖೆ ನಡೆಯುತ್ತಿದ್ದು, ವೈದ್ಯ ಸ್ಪಷ್ಟನೆ ನೀಡಿದ್ದಾರೆ.
ಡಿಸೆಂಬರ್ 22ರಂದು ಹಿಮಾಚಲ ಪ್ರದೇಶದ ಇಂದಿರಾ ಗಾಂಧಿ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯ ಮತ್ತು ರೋಗಿಯ ನಡುವೆ ನಡೆದ ಜಗಳಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ. ಈ ಜಗಳಕ್ಕೆ ಕಾರಣವಾದ ಘಟನೆಯನ್ನು ವೈದ್ಯ ಡಾ. ರಾಘವ್ ನರುಲಾ ವಿಡಿಯೊ ಮೂಲಕ ವಿವರಿಸಿದ್ದಾರೆ. ರೋಗಿಯು ಆರಂಭದಲ್ಲಿ ತನ್ನನ್ನು ನಿಂದಿಸಿ ಮಾತನಾಡಿದ್ದಾನೆ. ಬಳಿಕ ಐವಿ ಸ್ಟ್ಯಾಂಡ್‌ನಿಂದ ತನ್ನ ಮೇಲೆ ಹಲ್ಲೆ ಮಾಡಿದ್ದಾನೆ. ಆತನ ಹಲ್ಲೆ ಯಿಂದ ರಕ್ಷಿಸಿಕೊಳ್ಳಲು ಹೀಗೆ ವರ್ತಿಸುವುದು ಅನಿವಾರ್ಯವಾಗಿತ್ತು ಎಂದು ವಿಡಿಯೊದಲ್ಲಿ ತಿಳಿಸಿದ್ದಾರೆ.
ವಿಡಿಯೋ ನೋಡಿ:
The doctor side story:pic.twitter.com/572yBjAobp https://t.co/llzGlNYrzo
— Ghar Ke Kalesh (@gharkekalesh) December 23, 2025
ʼʼಆತನಿಂದ ನಿಂದನೆಯ ಮಾತು ಕೇಳಿದ್ದ ಬಳಿಕಕ ನಾನು ಪರಿಸ್ಥಿತಿಯನ್ನು ಶಾಂತಗೊಳಿಸಲು ಪದೇ ಪದೆ ಪ್ರಯತ್ನಿಸಿದ್ದೇನೆ. ಆದರೆ ಆ ರೋಗಿಯು ತನ್ನ ಹೆತ್ತವರ ವಿರುದ್ಧ ಕೆಟ್ಟ ಪದಗಳನ್ನು ಬಳಸಿ ಮಾತನಾಡಿದ್ದಾನೆ. ತನ್ನನ್ನು ಮತ್ತು ತನ್ನ ಕುಟುಂಬವನ್ನು ಆತ ನಿಂದಿಸಿದ್ದಾರೆʼʼ ಎಂದು ಡಾ. ನರುಲಾ ಆರೋಪಿಸಿದ್ದಾರೆ. ʼʼನಂತರ ರೋಗಿಯು ಐವಿ ಸ್ಟ್ಯಾಂಡ್ ಎತ್ತಿಕೊಂಡು ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ. ಇದರಿಂದ ನನ್ನ ಕೈಗೆ ಗಾಯವಾಗಿದೆ ಮತ್ತು ಬೆನ್ನು ನೋವು ಕಾಣಿಸಿಕೊಂಡಿದೆ. ಹೀಗಾಗಿ ನನ್ನನ್ನು ನಾನು ರಕ್ಷಿಸಿಕೊಳ್ಳಲು ಈ ರೀತಿ ವರ್ತಿಸಬೇಕಾಯಿತುʼʼ ಎಂದು ಅವರು ಹೇಳಿದ್ದಾರೆ.
ಏಕಾಏಕಿ ಆಸ್ಪತ್ರೆಗೆ ಎಂಟ್ರಿ ಕೊಟ್ಟ ದೈತ್ಯ ಸರ್ಪ.... ಎದ್ನೋ ಬಿದ್ನೋ ಓಡಿದ ಜನ
ಡಾ. ನರುಲಾ ಎಂಟು ವರ್ಷಗಳಿಗೂ ಹೆಚ್ಚು ಕಾಲ ಆಸ್ಪತ್ರೆಯಲ್ಲಿ ಕೆಲಸ ಮಾಡಿದ್ದಾರೆ. ಸುಮಾರು 5,000–7,000 ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಅವರ ವಿರುದ್ಧ ಇದುವರೆಗೆ ಯಾವುದೇ ರೀತಿಯ ದುರ್ವರ್ತನೆಯ ದೂರು ಬಂದಿಲ್ಲ ಎಂದು ಶಿಮ್ಲಾದ ಇಂದಿರಾ ಗಾಂಧಿ ವೈದ್ಯಕೀಯ ಕಾಲೇಜಿನ ಸಿಬ್ಬಂದಿ ತಿಳಿಸಿದ್ದಾರೆ.
ಈ ಹಿಂದೆ ವೈರಲ್ ಆದ ವಿಡಿಯೊದಲ್ಲಿ ಹಾಸಿಗೆಯ ಮೇಲೆ ಮಲಗಿದ್ದ ರೋಗಿಯು ಆರಂಭದಲ್ಲಿ ಡಾ. ನರುಲಾ ಅವರನ್ನು ಒದೆಯುವುದು ಕಂಡು ಬಂದಿದೆ. ಬಳಿಕ ಡಾ. ನರುಲಾ ರೋಗಿಗೆ ಥಳಿಸಿದ್ದು ಈ ವಿಡಿಯೊ ಎಲ್ಲೆಡೆ ವೈರಲ್ ಆಗಿತ್ತು. ಶಿಮ್ಲಾ ಐಜಿಎಂಸಿ ಆಡಳಿತವು ಮೂವರು ಸದಸ್ಯರ ತನಿಖಾ ಸಮಿತಿಯನ್ನು ರಚಿಸಿದೆ. ವೈದ್ಯಕೀಯ ಅಧೀಕ್ಷಕ ಡಾ. ರಾಹುಲ್ ರಾವ್ ಮಾತನಾಡಿ, ʼʼಸಮಿತಿಯು ಈ ಘಟನೆಯ ತನಿಖೆ ನಡೆಸುತ್ತಿದ್ದು, ಶೀಘ್ರವೇ ವರದಿ ಸಲ್ಲಿಸಲಿದೆʼʼ ಎಂದು ಹೇಳಿದ್ದಾರೆ.