ಹಾಲಿಗೆ ಡಿಟರ್ಜೆಂಟ್, ಯೂರಿಯಾ ಬೆರೆಸಿ ಮಾರಾಟ! ಯಾಮಾರಿದ್ರೆ ಜೀವ ಹೋಗೋದು ಗ್ಯಾರಂಟಿ
Viral Video: ದೇಶದ ವಾಣಿಜ್ಯ ನಗರಿ ಮುಂಬೈನ ಅಂಧೇರಿಯಲ್ಲಿ ಹಾಲು ಕಲಬೆರಕೆ ದಂಧೆ ನಡೆದಿದೆ. ಹಾಲಿನ ಸಾಂದ್ರತೆ ಹೆಚ್ಚು ಮಾಡಲು ಡಿಟರ್ಜೆಂಟ್, ಯೂರಿಯಾ ಮತ್ತು ರಿಫೈನ್ಡ್ ಆಯಿಲ್ ಬಳಕೆ ಮಾಡುತ್ತಿರುವ ಆಘಾತಕಾರಿ ದೃಶ್ಯ ಕಂಡು ಬಂದಿದ್ದು ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಹಾಲಿನ ಕಲಬೆರಕೆ ದಂಧೆ ಪತ್ತೆ -
ಮುಂಬೈ,ಡಿ.28: ಆಹಾರದಲ್ಲಿ ಕಲಬೆರಕೆ ಎನ್ನುವುದು ಇತ್ತೀಚೆಗೆ ಸಾಮಾನ್ಯವಾಗಿ ಬಿಟ್ಟಿದೆ. ದಿನ ನಿತ್ಯ ಬಳಕೆ ಮಾಡುವ ಅಕ್ಕಿ, ಸಕ್ಕರೆ, ಎಣ್ಣೆ ಇತ್ಯಾದಿ ವಸ್ತುಗಳು ಸೇರಿದಂತೆ ಕಲಬೆರಕೆ ಆಗುತ್ತಿರುವ ಬಗ್ಗೆ ಸುದ್ದಿಯಾಗುತ್ತಲೆ ಇದೆ. ಇಂತಹ ಆಹಾರ ಪದಾರ್ಥಗಳನ್ನು ಬಳಕೆ ಮಾಡಿದ್ರೆ ಸಾಮಾನ್ಯರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಇದೀಗ ದೇಶದ ವಾಣಿಜ್ಯ ನಗರಿ ಮುಂಬೈನ ಅಂಧೇರಿಯಲ್ಲಿ ಹಾಲು ಕಲಬೆರಕೆ ದಂಧೆ ನಡೆದಿದೆ. ಹಾಲಿನ ಸಾಂದ್ರತೆ ಹೆಚ್ಚು ಮಾಡಲು ಡಿಟರ್ಜೆಂಟ್, ಯೂರಿಯಾ ಮತ್ತು ರಿಫೈನ್ಡ್ ಆಯಿಲ್ ಬಳಕೆ ಮಾಡುತ್ತಿರುವ ಆಘಾತಕಾರಿ ದೃಶ್ಯ ಕಂಡು ಬಂದಿದ್ದು ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral Video) ಆಗಿದೆ.
ಅಂಧೇರಿ ಪಶ್ಚಿಮದ ಕಪಾಸ್‌ವಾಡಿಯಲ್ಲಿ ಈ ದಂಧೆ ನಡೆಯುತ್ತಿತ್ತು. ಹಾಲಿನ ಪ್ಯಾಕೆಟ್‌ಗಳು ಅಧಿಕೃತ ಡೈರಿ ಕೇಂದ್ರಗಳಿಂದ ನೇರವಾಗಿ ಗ್ರಾಹಕರಿಗೆ ತಲುಪಿಸದೆ ಪ್ಯಾಕೆಟ್‌ಗಳನ್ನು ಕಲಬೆರಕೆ ನಡೆಯುವ ಖಾಸಗಿ ಸ್ಥಳಗಳಿಗೆ ಸಾಗಿಸಲಾಗುತ್ತಿತ್ತು. ಬಳಿಕ ಪ್ಯಾಕೆಟ್ ಕತ್ತರಿಸಿ ಕಲಬೆರಕೆ ಮಾಡ ಲಾಗುತ್ತಿತ್ತು. ಹಾಲಿನಲ್ಲಿ ನೊರೆ ಅಂಶ ಹೆಚ್ಚಿಸಲು ಡಿಟರ್ಜೆಂಟ್ ಮತ್ತು ಸೋಪ್ ದ್ರಾವಣ ಬಸಲಾಗುತ್ತಿತ್ತು. ಹಾಲಿನ ಪ್ರೊಟೀನ್ ಅಂಶವನ್ನು ಕೃತಕವಾಗಿ ಹೆಚ್ಚಿಸಲು ಲ್ಯಾಕ್ಟೋಮೀಟರ್ ರೀಡಿಂಗ್‌ಗಾಗಿ ಯೂರಿಯಾ ಹಾಗೂ ಹಾಲಿನಲ್ಲಿ ಕೊಬ್ಬಿನಾಂಶ ಇದೆ ಎಂದು ಗುರುತು ಪಡಿಸಲು ರಿಫೈನ್ಡ್ ಆಯಿಲ್ ಎಣ್ಣೆಯನ್ನು ಬೆರೆಸಲಾಗುತ್ತಿತ್ತು.
ವಿಡಿಯೋ ನೋಡಿ:
ನಂತರ ಕಲಬೆರಕೆ ಹಾಲನ್ನು ಮರು ಪ್ಯಾಕ್ ಮಾಡಿ ಹತ್ತಿರದ ಪ್ರದೇಶಗಳಲ್ಲಿ ಮಾರಾಟ ಮಾಡು ತ್ತಿದ್ದರು ಎಂದು ತಿಳಿದು ಬಂದಿದೆ. ವೈರಲ್ ಆದ ವೀಡಿಯೊದಲ್ಲಿ ಸ್ಥಳೀಯ ನಿವಾಸಿಗಳು ಮತ್ತು ಪೊಲೀಸರು ಆಪಾದಿತ ದಂಧೆಯನ್ನು ಭೇದಿಸುತ್ತಿರುವ ದೃಶ್ಯ ನೋಡಬಹುದು. ಈ ವಿಷಕಾರಿ ಹಾಲನ್ನು ಸೇವಿಸುವುದರಿಂದ ವಿಶೇಷವಾಗಿ ಮಕ್ಕಳು ಮತ್ತು ವೃದ್ಧರು ತೀವ್ರ ಆರೋಗ್ಯ ಸಮಸ್ಯೆ ಗಳಿಗೆ ತುತ್ತಾಗುತ್ತಿದ್ದಾರೆ. ಇಂತಹ ಅಪಾಯಕಾರಿ ಸೇವನೆಯೂ ಕ್ಯಾನ್ಸರ್‌ನಂತಹ ಅಪಾಯಕಾರಿ ಕಾಯಿಲೆಗಳು ಬರುವ ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಈ ದಂಧೆಯು ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ, ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಮತ್ತು ಇತರ ಜಾರಿ ಸಂಸ್ಥೆಗಳ ಮೇಲ್ವಿಚಾರಣೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪೊಲೀಸರು ತಕ್ಷಣದ ತಪಾಸಣೆ, ಮಾದರಿ ಪರೀಕ್ಷೆ ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನೆಟ್ಟಿಗರು ಒತ್ತಾಯಿಸಿದ್ದಾರೆ. ಆದರೆ ಈ ಆರೋಪಗಳ ಕುರಿತು ಆಹಾರ ಸುರಕ್ಷತಾ ಅಧಿಕಾರಿಗಳಿಂದ ಯಾವುದೇ ಅಧಿಕೃತ ದೃಢೀಕರಣ ಅಥವಾ ಪ್ರತಿಕ್ರಿಯೆ ಬಂದಿಲ್ಲ.
ಸದ್ಯ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕೂಡ ನಾನಾ ಬಗೆಯ ಕಾಮೆಂಟ್ ಮಾಡಿ ದ್ದಾರೆ. ಬಳಕೆದಾರರೊಬ್ಬರು ಇತ್ತೀಚೆಗೆ ಬರುವ ಆರೋಗ್ಯ ಸಮಸ್ಯೆಗೆ ಇಂತಹ ದಂಧೆಗಳೇ ಕಾರಣ ಎಂದು ಬರೆದು ಕೊಂಡಿದ್ದಾರೆ. ಮತ್ತೊಬ್ಬರು ಆಹಾರ ಪದಾರ್ಥಗಳ ತಯಾರಿಕೆ, ಮಾರಾಟ ಕುರಿತಂತೆ ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸಬೇಕು, ನಿಯಮ ಉಲ್ಲಂಘನೆಯ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಕ್ರಿಯೆ ನೀಡಿದ್ದಾರೆ.