ಬೆಂಗಳೂರಿನಲ್ಲಿ ಮತ್ತೊಂದು ರೋಡ್ ರೇಜ್; ರಸ್ತೆ ಮಧ್ಯೆಯೇ ಕಾರ್ ಅಡ್ಡಗಟ್ಟಿ ಕುಟುಂಬದ ಮೇಲೆ ಅಪರಿಚಿತರಿಂದ ಹಲ್ಲೆ
Viral Video: ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕುಟುಂಬದ ಮೇಲೆ ಅಪರಿಚಿತ ಪುರುಷರ ಗುಂಪೊಂದು ಹಲ್ಲೆ ಎಸಗಿರುವ ಘಟನೆಯೊಂದು ನಡೆದಿದೆ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಈ ಭೀಕರ ಕೃತ್ಯ ನಡೆದಿದೆ. ಹಿಂದೆ ಚಲಿಸುತ್ತಿದ್ದ ವಾಹನದ ಡ್ಯಾಶ್‌ಕ್ಯಾಮ್‌ನಲ್ಲಿ ಈ ಘಟನೆ ಸೆರೆಯಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬೆಂಗಳೂರಿನ ರಸ್ತೆ ಮಧ್ಯೆ ಕಾರ್ ಅಡ್ಡಗಟ್ಟಿ ಹಲ್ಲೆ ಎಸಗಿದ ದುಷ್ಕರ್ಮಿಗಳು -
ಬೆಂಗಳೂರು, ಜು. 7: ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕುಟುಂಬದ ಮೇಲೆ ಅಪರಿಚಿತರ ಗುಂಪೊಂದು ಹಲ್ಲೆ ಎಸಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಪ್ರಶ್ನೆ ಮೂಡಿದೆ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಈ ಭೀಕರ ಕೃತ್ಯ ನಡೆದಿದೆ. ಹಿಂದೆ ಚಲಿಸುತ್ತಿದ್ದ ವಾಹನದ ಡ್ಯಾಶ್‌ಕ್ಯಾಮ್‌ನಲ್ಲಿ ಈ ಘಟನೆ ಸೆರೆಯಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕುಟುಂಬವನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಹಲ್ಲೆಯನ್ನು ನಡೆಸಿದ್ದಾರೆ. ಗುಂಪೊಂದು ಕೂಗಾಡುತ್ತ ಕಾರ್‌ನ ಬಾಗಿಲು ತೆರೆದು ಚಾಲಕನ ಮೇಲೆ ಹಲ್ಲೆ ನಡೆಸುವುದನ್ನು ವಿಡಿಯೊದಲ್ಲಿ ಕಾಣಬಹುದು.
ದುಷ್ಕರ್ಮಿಗಳ ಗುಂಪು ಇದ್ದಕ್ಕಿದ್ದಂತೆ ದಾಳಿ ನಡೆಸಿದೆ. ದಾಳಿಗೆ ಒಳಗಾದ ಮಾರುತಿ ಸುಜುಕಿ ಆಲ್ಟೋ ಕಾರಿನಲ್ಲಿ ಪತಿ, ಪತ್ನಿ, ಮಕ್ಕಳು, ವೃದ್ಧೆ ಸೇರಿ ಕುಟುಂಬ ಎಲ್ಲ ಸದ್ಯಸರಿದ್ದರು. ಆಗ ಗುಂಪೊಂದು ಅವರ ವಾಹನವನ್ನು ಅಡ್ಡಗಟ್ಟಿ ದಾಳಿ ನಡೆಸಿದೆ. 52 ಸೆಕೆಂಡುಗಳ ಈ ದೃಶ್ಯ ಆಲ್ಟೋ ನಿಲ್ಲುವ ಮೊದಲು ಎಕ್ಸ್‌ಪ್ರೆಸ್‌ವೇಯಲ್ಲಿ ಹಲವು ವಾಹನಗಳು ಚಲಿಸುವುದರೊಂದಿಗೆ ಪ್ರಾರಂಭವಾಗುತ್ತದೆ. ಸ್ವಲ್ಪ ಕ್ಷಣಗಳ ನಂತರ ಆಲ್ಟೋ ಕಾರಿನ ಕಡೆಗೆ ಗುಂಪು ಧಾವಿಸಿದೆ.
ವೈರಲ್ ವಿಡಿಯೊ ಇಲ್ಲಿದೆ:
Shocking Road-Rage case from Bengaluru-Mysuru Expressway.🚨
— Sharma Ji (@Hsharma2712) July 7, 2026
A family travelling in maruti suzuki alto was attacked by a group of men. 😡
His wife, kids was crying‼️
An investigation and further action are awaited ✔️ pic.twitter.com/ahCMZuImaR
ದುಷ್ಕರ್ಮಿಗಳ ಗುಂಪು ಚಾಲಕನ ಮೇಲೆ ಕೂಗಾಡುತ್ತಾ ಬಾಗಿಲು ತೆರೆದು ಹಲ್ಲೆ ನಡೆಸುವುದನ್ನು ಕಾಣಬಹುದು. ದಾಳಿ ನಡೆಯುತ್ತಿದ್ದಂತೆ ಮತ್ತೊಂದು ವಾಹನದ ಚಾಲಕರೊಬ್ಬರು ಮಧ್ಯ ಪ್ರವೇಶಿಸಲು ಪ್ರಯತ್ನಿಸಿದ್ದಾರೆ. ಆದರೂ ದುಷ್ಕರ್ಮಿಗಳು ಚಾಲಕನನ್ನು ಕಾರಿನಿಂದ ಹೊರಗೆ ಎಳೆದು ಹಾಕಿ ಕ್ರೂರವಾಗಿ ಹೊಡೆದಿದ್ದಾರೆ. ಈ ಹಲ್ಲೆಗೆ ಕಾರಣವೇನು? ವೈಯಕ್ತಿಕ ವಿಚಾರವಿದೆಯೇ? ಎನ್ನುವುದು ತಿಳಿದು ಬಂದಿಲ್ಲ. ಸದ್ಯ ಪೊಲೀಸರು ಈ ಘಟನೆಯನ್ನು ತನಿಖೆ ನಡೆಸುತ್ತಿದ್ದು, ಸಿಸಿಟಿವಿ ಹಾಗೂ ಡ್ಯಾಶ್‌ಕ್ಯಾಮ್ ದೃಶ್ಯಾವಳಿಗಳ ಆಧಾರದ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಪೊಲೀಸ್ ಠಾಣೆಯಲ್ಲೇ ಕಾನ್ಸ್‌ಟೇಬಲ್‌ಗಳ ರೊಮ್ಯಾನ್ಸ್; ಪೇದೆಯನ್ನು ತಬ್ಬಿ ಮುತ್ತಿಕ್ಕಿದ ಲೇಡಿ ಪೊಲೀಸ್
ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಪ್ರಯಾಣಿಕರ ಸುರಕ್ಷತೆ ಬಗ್ಗೆ ಅನೇಕರು ಕಳವಳ ವ್ಯಕ್ತಪಡಿಸಿದ್ದಾರೆ. ʼʼಕಾರಣ ಏನೇ ಇರಲಿ ಈ ರೀತಿ ಹಲ್ಲೆ ಎಸಗುವುದು ತಪ್ಪು. ಇವರಿಗೆ ಸರಿಯಾದ ಶಿಕ್ಷೆ ನೀಡಬೇಕುʼʼ ಎಂದು ನೆಟ್ಟಿಗರು ಖಂಡಿಸಿದ್ದಾರೆ. ಮತ್ತೊಬ್ಬರು, ʼʼಜಗತ್ತಿನಲ್ಲಿ ಇಂತಹ ಕ್ರೂರ ಮನುಷ್ಯರಿದ್ದರಾ?ʼʼ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.