ನೇಪಾಳ ಪ್ರವಾಹ: ಮಹಿಳೆಯ ಸೀರೆಯಿಂದ ಉಳಿಯಿತು 21 ಯಾತ್ರಿಕರ ಜೀವ!
Viral Video: ಟಿಬೆಟ್ ಗಡಿಯ ಬಳಿ ಉಂಟಾದ ದಿಢೀರ್ ಪ್ರವಾಹದ ವೇಳೆ ತಮಿಳುನಾಡಿನ ಯಾತ್ರಿಕರ ಗುಂಪೊಂದು ಸಿಲುಕಿಕೊಂಡಿತ್ತು. ಈ ಸಂದರ್ಭದಲ್ಲಿ ಅವರು ಪ್ರಾಣ ಉಳಿಸಿಕೊಳ್ಳಲು ಮಹಿಳೆಯೊಬ್ಬರ ಸೀರೆಯನ್ನು ಬಳಸಿದ್ದಾರೆ. ಸೀರೆಯನ್ನು ಹಿಡಿದುಕೊಂಡು ಜಾರುತ್ತಿದ್ದ ಇಳಿಜಾರಿನಿಂದ ಯಾತ್ರಿಕರು ಮೇಲೇರಿದ್ದಾರೆ.
ಸಾಂದರ್ಭಿಕ ಚಿತ್ರ -
ಕಠ್ಮಂಡು, ಆ. 31: ನೇಪಾಳ-ಟಿಬೆಟ್ (Nepal Flood) ಗಡಿಯಲ್ಲಿ ಸಂಭವಿಸಿದ ಹಠಾತ್ ಪ್ರವಾಹ ನೇಪಾಳವನ್ನೇ ಬೆಚ್ಚಿ ಬೀಳಿಸಿದೆ. ರಕ್ಷಣಾ ಕಾರ್ಯಚರಣೆ ಮುಂದುವರಿದಿದ್ದು, ಮೃತರ ಸಂಖ್ಯೆ ಏರಿಕೆಯಾಗುತ್ತಲೇ ಇವೆ. ಇದೀಗ ಟಿಬೆಟ್ ಗಡಿಯ ಬಳಿ ಉಂಟಾದ ದಿಢೀರ್ ಪ್ರವಾಹಕ್ಕೆ ತಮಿಳುನಾಡಿನ ಯಾತ್ರಿಕರ ಗುಂಪೊಂದು ಸಿಲುಕಿ ತತ್ತರಿಸಿತ್ತು. ಈ ಸಂದರ್ಭದಲ್ಲಿ ಅವರು ತಮ್ಮ ಗುಂಪಿನಲ್ಲಿದ್ದ ಮಹಿಳೆಯೊಬ್ಬರ ಸೀರೆಯನ್ನು ಬಳಸಿ ಜೀವ ಉಳಿಸಿಕೊಂಡಿದ್ದಾರೆ. ಸೀರೆಯನ್ನು ಹಿಡಿದುಕೊಂಡು ಅವರು ಇಳಿಜಾರಿನಿಂದ ಮೇಲೇರಿ ಅಪಾಯದಿಂದ ಪಾರಾಗಿದ್ದಾರೆ.
ತಮಿಳುನಾಡಿ ಈ 21 ಯಾತ್ರಿಕರು ಕೈಲಾಸ-ಮಾನಸ ಸರೋವರ ಯಾತ್ರೆಯ ಭಾಗವಾಗಿ ಸೈಬ್ರುಬೇಸಿಯಿಂದ ಕೆರುಂಗ್ ಕಡೆಗೆ ತೆರಳುತ್ತಿದ್ದರು. ಆಗ ಇದ್ದಕ್ಕಿದ್ದಂತೆ ದಿಢೀರ್ ಪ್ರವಾಹ ಉಂಟಾಯಿತು. ಈ ಪ್ರವಾಹದ ಮಧ್ಯೆ ಸಿಲುಕಿಕೊಂಡಿದ್ದ ಯಾತ್ರಿಕರು ಬೆಟ್ಟದ ಇಳಿಜಾರಿನಿಂದ ಮೇಲಕ್ಕೆ ಬರಲು ಸೀರೆಯೇ ರಕ್ಷಾ ಕವಚವಾಯ್ತು.
ಆಗಸ್ಟ್ 26ರಂದು ನೇಪಾಳದ ಟಿಬೆಟ್‌ನ ಗಡಿಯ ಬಳಿಯ ತಿಮುರೆ ಪ್ರದೇಶದಲ್ಲಿ ಪ್ರಬಲ ಹಠಾತ್ ಪ್ರವಾಹ ಮತ್ತು ಮಣ್ಣು ಕುಸಿತ ಸಂಭವಿಸಿದೆ. ಬೆಟ್ಟಗಳಿಂದ ರಭಸವಾಗಿ ಹರಿದು ಬಂದ ಕೆಸರು ನೀರು, ಕಲ್ಲುಗಳ ರಾಶಿ ಸುನಾಮಿಯಂತೆ ಅಪ್ಪಳಿಸಿದೆ. ರಸ್ತೆ ಮಧ್ಯೆ 21 ಯಾತ್ರಿಕರ ಗುಂಪು ಸಿಲುಕಿಕೊಂಡಿತ್ತು. ಕೆಸರಿನಲ್ಲಿ ಹೆಜ್ಜೆ ಇಡುವುದು ಕಷ್ಟವಾಗಿತ್ತು. ಅವರಲ್ಲಿ ಹಲವರು 50 ವರ್ಷಕ್ಕಿಂತ ಮೇಲ್ಪಟ್ಟವರು, ಹತ್ತಲು ಪ್ರಯತ್ನಿಸುವಾಗ ಪದೇ ಪದೆ ಜಾರಿಬಿದ್ದರು.
ನೇಪಾಳದಲ್ಲಿ ಸಂಭವಿಸಿದ ಪ್ರವಾಹ:
Received a group of 21 pilgrims from Tamil Nadu who were rescued from the floods in Nepal.
— Dr. S. Jaishankar (@DrSJaishankar) August 28, 2026
Was moved to hear their experience first hand. Thank the @NepaliArmyHQ and Government for this rescue effort. Appreciate @IndiaInNepal’s facilitation of their smooth return to India. pic.twitter.com/P0cNsY5exF
ಯಾತ್ರಿಕರು ಅಪಾಯದಿಂದ ಹೊರಬರಲು ಪ್ರಯತ್ನಿಸುತ್ತಲೇ ಇದ್ದರು. ಆದರೆ ಸಾಧ್ಯವಾಗಿರಲಿಲ್ಲ. ಈ ವೇಳೆ ಮೊದಲು ಬೆಟ್ಟದ ಮೇಲಕ್ಕೆ ತಲುಪಿದ ಮಹಿಳೆ, ತಕ್ಷಣವೇ ತಮ್ಮ ಸೀರೆಯನ್ನು ಬಿಚ್ಚಿ ಕೆಳಗಿದ್ದ ಯಾತ್ರಿಕರಿಗೆ ಹಗ್ಗದಂತೆ ನೀಡಿದ್ದಾರೆ. ಈ ಭಯಾನಕ ಕ್ಷಣಗಳಲ್ಲಿ, ಜೀವವು ಧರಿಸಿದ ಬಟ್ಟೆಗಿಂತ ಹೆಚ್ಚಾಗಿತ್ತು ಎಂದು ಅವರು ಹೇಳಿದ್ದಾರೆ.
ನಿದ್ದೆಯ ಮಂಪರಿನಲ್ಲಿ ಬೈಕ್ ಸವಾರನನ್ನು ಅರ್ಧ ಕಿಲೋ ಮೀಟರ್ ಎಳೆದೊಯ್ದ ಉಬರ್ ಚಾಲಕ
ಮಹಿಳೆಯ ಪತಿ ರತ್ನಕುಮಾರ್ ಮತ್ತು ಇತರರು ಈ ಸೀರೆ ಚಾಚಿ ಕೆಳಗೆ ಸಿಲುಕಿದ್ದ ಯಾತ್ರಿಕರನ್ನು ಒಬ್ಬೊಬ್ಬರಾಗಿ ಮೇಲೆ ಎಳೆದರು. ಯಾತ್ರಿಕರು ಒಬ್ಬರನ್ನೊಬ್ಬರು ಕೈ ಹಿಡಿದುಕೊಂಡು ಮೇಲೆ ಬಂದಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಯಾತ್ರಿಕರು ಸುಮಾರು ಒಂದೂವರೆ ದಿನಗಳ ಕಾಲ ಎತ್ತರದ ಪ್ರದೇಶಗಳಲ್ಲಿ ಉಳಿಯಬೇಕಾಯಿತು. ನಂತರ ನೇಪಾಳ ಸೇನೆ, ಭಾರತೀಯ ರಾಯಭಾರ ಕಚೇರಿ ಮತ್ತು ತಮಿಳುನಾಡು ಸರ್ಕಾರದ ಕಾರ್ಯಾಚರಣೆಯ ಮೂಲಕ ಕಠ್ಮಂಡು ಮೂಲಕ ಸುರಕ್ಷಿತವಾಗಿ ಭಾರತ ತಲುಪಿದರು.