ನಿಮಿಷ ತಡವಾಗಿ ಬಂದ ಮೇಯರ್‌ನನ್ನು ಬಿಟ್ಟು ಹೊರಟೇ ಬಿಟ್ಟ ರೈಲು: ಮೆಕ್ಸಿಕೋ ರೈಲ್ವೆ ಇಲಾಖೆಯ ಸಮಯ ಪಾಲನೆಗೆ ನೆಟ್ಟಿಗರು ಫಿದಾ
Viral Video: ಸಾಮಾನ್ಯವಾಗಿ ಯಾರೇ ಅಧಿಕಾರಿ, ರಾಜಕೀಯದವರು ಬರುತ್ತಾರೆ ಅಂದಾಗ ಬಸ್ ಇರಲಿ, ಫ್ಲೈಟ್ ಇರಲಿ ಕಾದು ನಿಲ್ಲುವುದು ಇದೆ. ಆದರೆ ಮೆಕ್ಸಿಕೋದಲ್ಲಿ ನಡೆದ ಈ ಘಟನೆ ಹಲವರನ್ನು ಅಚ್ಚರಿಗೆ ದೂಡಿದೆ. ಹೌದು, ಉದ್ಘಾಟನಾ ಸಮಾರಂಭಕ್ಕೆ ತಡವಾಗಿ ಬಂದ ಮೇಯರ್ ಅನ್ನು ಅಲ್ಲೇ ಬಿಟ್ಟು ರೈಲು ಸಮಯಕ್ಕೆ ಸರಿಯಾಗಿ ಹೊರಟ ಹೋಗಿದೆ.
ಸಾಂದರ್ಭಿಕ ಚಿತ್ರ -
ಮೆಕ್ಸಿಕೋ ಸಿಟಿ, ಡಿ. 22: ಸಾಮಾನ್ಯವಾಗಿ ದೂರದ ಗಮ್ಯ ತಲುಪಲು ಪ್ರಯಾಣಿಕರು ರೈಲನ್ನು ಅವಲಂಬಿಸುತ್ತಾರೆ. ಯಾಕಂದರೆ ಸುಖ ಪ್ರಯಾಣದ ಜತೆಗೆ ಸರಿಯಾದ ಸಮಯಕ್ಕೂ ತಲುಪುತ್ತದೆ ಎನ್ನುವುದು ಇದಕ್ಕೆ ಕಾರಣ. ಆದರೆ ಇಂತಹ ಸಾರ್ವಜನಿಕ ಸಾರಿಗೆಯಲ್ಲಿ ಸಮಯ ಪಾಲನೆ ಎನ್ನುವುದು ದಿನ ನಿತ್ಯ ಪ್ರಯಾಣ ಮಾಡುವವರಿಗೆ ಮಾತ್ರವಲ್ಲ ಜನಪ್ರತಿನಿಧಿ, ರಾಜಕೀಯದವರಿಗೂ ಅನ್ವಯವಾಗುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಂತಿದೆ. ಸಾಮಾನ್ಯವಾಗಿ ಯಾರೇ ಅಧಿಕಾರಿ, ರಾಜಕೀಯದವರು ಬರುತ್ತಾರೆ ಅಂದಾಗ ಬಸ್, ರೈಲು, ವಿಮಾನ ಕಾದು ನಿಲ್ಲುವುದು ಇದೆ. ಆದರೆ ಮೆಕ್ಸಿಕೋದಲ್ಲಿ ನಡೆದ ಈ ಘಟನೆ ಜನರನ್ನೇ ಶಾಕ್‌ಗೊಳಿಸುವಂತೆ ಮಾಡಿದೆ. ಹೌದು ರೈಲ್ವೇ ಉದ್ಘಾಟನಾ ಸಮಾರಂಭಕ್ಕೆ ತಡವಾಗಿ ಬಂದ ಮೇಯರ್ ಅನ್ನು ಅಲ್ಲೇ ಬಿಟ್ಟು ರೈಲು ಸಮಯಕ್ಕೆ ಸರಿಯಾಗಿ ಹೊರಟ ವಿಡಿಯೊವೊಂದು ವೈರಲ್ (Viral Video) ಆಗಿದೆ.
ಡಿಸೆಂಬರ್ 15ರಂದು ಮೆಕ್ಸಿಕೋದ ಜಲಿಸ್ಕೊದ ಟ್ಲಾಜೊ ಮುಲ್ಕೊ ಡಿ ಜುನಿಗಾದಲ್ಲಿ ಹೊಸ ಲಘು ರೈಲು ಸೇವೆಯ ಅಧಿಕೃತ ಉದ್ಘಾಟನೆ ಕಾರ್ಯಕ್ರಮ ಇತ್ತು. ಪ್ಲಾಟ್‌ಫಾರ್ಮ್‌ಗೆ ಅಧಿಕಾರಿಗಳು, ಗಣ್ಯರು, ಮಾಧ್ಯಮ ಸಿಬ್ಬಂದಿ, ಆಹ್ವಾನಿತ ಅತಿಥಿಗಳು ಆಗಮಿಸಿದ್ದರು. ಈ ಸಂಭ್ರಮದ ಕ್ಷಣದಲ್ಲಿ ಸಾಕ್ಷಿಯಾಗಲು ರಾಜ್ಯದ ಗವರ್ನರ್ ಸೇರಿದಂತೆ ಹಲವು ಅತಿಥಿಗಳು ರೈಲಿನ ಒಳಗಿದ್ದರು. ರೈಲು ಹೊರಡುವ ಸಮಯವಾದ ಕಾರಣ ಸ್ವಯಂಚಾಲಿತ ಬಾಗಿಲು ಮುಚ್ಚಿ ಇನ್ನೇನು ರೈಲು ಹೊರಡಲು ಸಿದ್ದವಾಗಿತ್ತು.
ವಿಡಿಯೊ ನೋಡಿ:
¡No se preocupen, mi gente! 😅 Pasa cada 9 minutos. 🤙 pic.twitter.com/IMQP75OkvL
— Gerardo Quirino (@GerardoQuirinoV) December 16, 2025
ಅದೇ ಸಮಯದಲ್ಲಿ ನಗರದ ಮೇಯರ್ ಲಗೆರಾರ್ಡೊ ಕ್ವಿರಿನೊ ಲಾಜ್ಕ್ವೆಜ್ ಫ್ಲಾಟ್‌ಫಾರ್ಮ್‌ಗೆ ಬಂದಿದ್ದಾರೆ. ಅವರೂ ಈ ರೈಲಿನಲ್ಲಿ ಪ್ರಯಾಣಿಸಬೇಕಿತ್ತು. ಕೆಲವು ನಿಮಿಷಗಳ ಕಾಲ ಅವರು ತಡವಾಗಿ ಆಗಮಿಸಿದ್ದಾರೆ. ಅದರೆ ಅವರಿಗಾಗಿ ಕಾಯದೆ ರೈಲು ಸಮಯಕ್ಕೆ ಸರಿಯಾಗಿ ತೆರಳಿದೆ. ಎಷ್ಟೇ ಗಣ್ಯ ಅತಿಥಿಯಾಗಿದ್ದರೂ ಸಮಯಕ್ಕೆ ಸರಿಯಾಗಿ ಹಾಜರಿರಬೇಕು ಎನ್ನುವ ಸಂದೇಶವನ್ನು ಸಿಬ್ಬಂದಿ ಸಾರಿದ್ದಾರೆ.
ಬ್ಯಾಂಕ್‍ನಲ್ಲಿ ಹಣವಿಟ್ಟರೆ ಸುರಕ್ಷಿತ ಅಂದುಕೊಂಡಿದ್ದೀರಾ? ಗ್ರಾಹಕರ ದುಡ್ಡನ್ನೇ ಕದ್ದ ಕ್ಯಾಶಿಯರ್
ಮೇಯರ್ ಎಷ್ಟೇ ವೇಗವಾಗಿ ಓಡಿ ರೈಲನ್ನು ಹಿಡಿಯಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಗಣ್ಯ ಅತಿಥಿ ಎನ್ನುವುದನ್ನೂ ನೋಡದೆ ರೈಲು ತನ್ನ ಸಮಯಕ್ಕೆ ಸರಿಯಾಗಿ ಹೊರಟಿದೆ. ಸದ್ಯ ಈ ಘಟನೆಯ ವಿಡಿಯೊವನ್ನು ಮೇಯರ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ʼʼಪ್ರಯಾಣಿಕರೇ, ಚಿಂತಿಸಬೇಡಿ...ನಮ್ಮ ರೈಲು ಸಮಯಕ್ಕೆ ಸರಿಯಾಗಿ ಹೊರಡುತ್ತದೆʼʼ ಎಂದು ಬರೆದುಕೊಳ್ಳುವ ಮೂಲಕ ರೈಲ್ವೆ ಇಲಾಖೆಯ ಸಮಯ ಪಾಲನೆಯನ್ನು ಮೆಚ್ಚಿಕೊಂಡಿದ್ದಾರೆ. ಈ ವಿಡಿಯೊ ವೈರಲ್ ಆಗಿದ್ದು, ನೆಟ್ಟಿಗರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಅನೇಕ ಬಳಕೆದಾರರು ರೈಲ್ವೆ ವ್ಯವಸ್ಥೆಯ ಸಮಯ ಪಾಲನೆಯನ್ನು ಮೆಚ್ಚಿದ್ದಾರೆ.
ʼʼಮೆಕ್ಸಿಕೋದಲ್ಲಿ ಈ ವ್ಯವಸ್ಥೆಗಳು ಸಮಯಕ್ಕೆ ಸರಿಯಾಗಿ ನಡೆಯುತ್ತದೆ. ಆದರೆ ಭಾರತದಲ್ಲಿ ಸಚಿವರಿಗೆ ತಕ್ಕಂತೆ ಸಮಯ ಬದಲಾಗುತ್ತದೆʼʼ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ''ಭಾರತದಲ್ಲಿ ಚಾಲಕರು ಹೀಗೆ ಮಾಡಿದ್ದರೆ ಅವರನ್ನು ಅಮಾನತುಗೊಳಿಸಲಾಗುತ್ತದೆ" ಎಂದು ಇನ್ನೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೊಬ್ಬರು, "ಅಲ್ಲಿ, ವ್ಯವಸ್ಥೆಗಳು ಸಮಯದ ವೇಳಾಪಟ್ಟಿ ಪ್ರಕಾರ ನಡೆಯುತ್ತವೆ. ಇಲ್ಲಿ, ವೇಳಾಪಟ್ಟಿ ರಾಜಕಾರಣಿಗಳ ಮೇಲೆ ನಡೆಯುತ್ತವೆ'' ಎಂದು ಬರೆದುಕೊಂಡಿದ್ದಾರೆ.