ಕೊಳ್ಳಂಗಿಯ ಜಂಪ ಮಹೋತ್ಸವ
ಧರ್ಮದೇವತೆಯ ಸಾಕ್ಷಿಯಾಗಿ ನಡೆಯುತ್ತಿದ್ದ ಈ ತೀರ್ಪುಗಳಿಗೆ ಎಲ್ಲರೂ ತಲೆಬಾಗು ತ್ತಿದ್ದರು. ಈ ಸಹಬಾಳ್ವೆ ಮತ್ತು ಬುದ್ಧಿವಂತಿಕೆಯ ಫಲವಾಗಿಯೇ ಕೊಳ್ಳಂಗಿಗೆ ಕಟ್ಟೆಮನೆ ಎಂಬ ಗೌರವ ಯುತ ಹೆಸರು ಬಂದಿದೆ. ಇದು ಕೇವಲ ಒಂದು ಜನಾಂಗಕ್ಕೆ ಸೀಮಿತವಾಗದೆ, ಇಡೀ ಪ್ರಾಂತ್ಯದ ಜನರಿಗೆ ಭರವಸೆಯ ತಾಣವಾಗಿತ್ತು.
-
ಗೊರೂರು ಶಿವೇಶ್
ಹಾಸನ ಜಿಲ್ಲೆಯ ಕೊಳ್ಳಂಗಿಯಲ್ಲಿ ನಡೆಯುವ ‘ಝಂಪ ಮಹೋತ್ಸವ’ ಕೇವಲ ಒಂದು ಧಾರ್ಮಿಕ ಆಚರಣೆಯಲ್ಲ, ಅದು ಇತಿಹಾಸ ಮತ್ತು ಜಾನಪದದ ಸಂಗಮ.
ಕೊಳ್ಳಂಗಿಯ ಇತಿಹಾಸವು ಪುರಾತನವಾದದ್ದು. ಅರಕಪುರಿ ಎಂದು ಕರೆಯಲ್ಪಡುತ್ತಿದ್ದ ಇಂದಿನ ಅರಕಲಗೂಡು ಪ್ರಾಂತ್ಯವು ಪಾಳೆಯಗಾರ ಕೃಷ್ಣಪ್ಪ ನಾಯಕರ ಆಳ್ವಿಕೆಯಲ್ಲಿತ್ತು. ಅಂದಿನ ರಕ್ಷಣಾ ಪಡೆಯಲ್ಲಿ ದೇವಾಂಗ ಜನಾಂಗದವರು ಪ್ರಮುಖ ಸೈನಿಕರಾಗಿದ್ದರು. ಇವರು ಕೇವಲ ಯುದ್ಧರಂಗದ ವೀರರಷ್ಟೇ ಅಲ್ಲದೆ, ಸೈನ್ಯಕ್ಕೆ ಬೇಕಾದ ಮದ್ದು-ಗುಂಡು ಗಳನ್ನು ತಯಾರಿಸುವ ನೈಪುಣ್ಯತೆಯನ್ನು ಹೊಂದಿದ್ದರು. ಈ ಸೈನಿಕರ ನಿಷ್ಠೆ ಮತ್ತು ದೇಶಪ್ರೇಮಕ್ಕೆ ಮೆಚ್ಚಿದ ಪಾಳೆಯಗಾರರು ಕೊಳ್ಳಂಗಿಯಲ್ಲಿ ಆಂಜನೇಯ, ಗಣಪತಿ ದೇವಾ ಲಯಗಳನ್ನು ನಿರ್ಮಿಸಿ, ಊರಿಗೆ ಪ್ರಮುಖ ಹೆಬ್ಬಾಗಿಲನ್ನು ಮಾಡಿಕೊಟ್ಟಿದ್ದರು.
ಈ ಶೌರ್ಯದ ಪರಂಪರೆಯೇ ಇಂದಿನ ಉತ್ಸವಗಳಲ್ಲಿ ‘ಅಲಗು ಸೇವೆ’ ಮತ್ತು ‘ಖಡ್ಗ’ಗಳ ರೂಪದಲ್ಲಿ ಆಚರಿಸಲ್ಪಡುತ್ತಿದೆ. ಕೊಳ್ಳಂಗಿ ಗ್ರಾಮವು ಹತ್ತಾರು ಹಳ್ಳಿಗಳ ನಡುವೆ ‘ಕಟ್ಟೆಮನೆ’ ಎಂದು ಪ್ರಸಿದ್ಧಿ ಪಡೆದಿದೆ. ಕಟ್ಟೆಮನೆ ಎಂದರೆ ಧಾರ್ಮಿಕ ಮತ್ತು ಸಾಮಾಜಿಕ ನ್ಯಾಯದ ಕೇಂದ್ರ. ಹಿಂದಿನ ಕಾಲದಲ್ಲಿ ಜನರ ನಡುವೆ ಯಾವುದೇ ವ್ಯಾಜ್ಯ ಅಥವಾ ತಕರಾರುಗಳು ಉಂಟಾದಾಗ, ಈ ಗ್ರಾಮದ ಶೆಟ್ಟರು ಮತ್ತು ಯಜಮಾನರು ದೇವಸ್ಥಾನದ ಸನ್ನಿಧಿಯಲ್ಲಿ ಅದನ್ನು ಬಗೆಹರಿಸುತ್ತಿದ್ದರು.
ಧರ್ಮದೇವತೆಯ ಸಾಕ್ಷಿಯಾಗಿ ನಡೆಯುತ್ತಿದ್ದ ಈ ತೀರ್ಪುಗಳಿಗೆ ಎಲ್ಲರೂ ತಲೆಬಾಗು ತ್ತಿದ್ದರು. ಈ ಸಹಬಾಳ್ವೆ ಮತ್ತು ಬುದ್ಧಿವಂತಿಕೆಯ ಫಲವಾಗಿಯೇ ಕೊಳ್ಳಂಗಿಗೆ ಕಟ್ಟೆಮನೆ ಎಂಬ ಗೌರವಯುತ ಹೆಸರು ಬಂದಿದೆ. ಇದು ಕೇವಲ ಒಂದು ಜನಾಂಗಕ್ಕೆ ಸೀಮಿತವಾಗದೆ, ಇಡೀ ಪ್ರಾಂತ್ಯದ ಜನರಿಗೆ ಭರವಸೆಯ ತಾಣವಾಗಿತ್ತು.
ಇದನ್ನೂ ಓದಿ: Srivathsa Joshi Column: ಗಂಗಾಲಹರಿ ಸ್ತೋತ್ರವೂ ಜಗನ್ನಾಥ ಪಂಡಿತನ ಕಥೆಯೂ
‘ಝಂಪ’ ಎನ್ನುವ ಪದದ ಅರ್ಥ ಕುತೂಹಲಕಾರಿ. ‘ಝಂಪ’ ಎಂದರೆ ಎತ್ತರದಿಂದ ಹಾರು ವುದು ಅಥವಾ ಜಿಗಿಯುವುದು. ವಿಜಯನಗರದ ಅರಸರ ಕಾಲದಲ್ಲಿ ಹಂಪಿಯ ಹೇಮ ಕೂಟದಲ್ಲಿ ಆರಂಭವಾದ ಈ ಸಂಪ್ರದಾಯವು ಶಿವ ಮತ್ತು ಪಂಪಾಂಬಿಕೆಯ ಕಲ್ಯಾಣೋ ತ್ಸವದ ನೆನಪಿಗೆ ನಡೆಯುತ್ತದೆ ಎನ್ನಲಾಗುತ್ತದೆ.
ಕೊಳ್ಳಂಗಿಯಲ್ಲಿಯೂ ಈ ಉತ್ಸವವು ಯುಗಾದಿಯ ನಂತರದ ಮಂಗಳವಾರದಂದು ಅತ್ಯಂತ ವೈಭವದಿಂದ ಜರುಗುತ್ತದೆ. ಯುಗಾದಿ ಹಬ್ಬದ ಸಂಭ್ರಮ ಮುಗಿದು, ಅದೇ ಬರುವ ಮಂಗಳವಾರ ರಾತ್ರಿ ಊರ ಮುಂದಿನ ಕೆರೆಯಂಗಳದಲ್ಲಿ ದೇವರ ಪ್ರತಿಮೆಗಳಿಗೆ ಜಲಾಭಿಷೇಕ ನಡೆಸಲಾಗುತ್ತದೆ.
ಅಲ್ಲಿಂದ ಕನ್ನಿಕೆಯರ ಕಳಸಗಳು ಮತ್ತು ದೀವಟಿಗೆಗಳ ಸಲಾಮಿನೊಂದಿಗೆ ಮೆರವಣಿಗೆ ಸಾಗುತ್ತದೆ. ಇಲ್ಲಿನ ಪ್ರಮುಖ ಆಕರ್ಷಣೆಯೆಂದರೆ ವೀರಭದ್ರನ ದಂಡಕಗಳು. ವೀರ ಕುಮಾರರು ಬಲಗೈಯಲ್ಲಿ ಕತ್ತಿ ಮತ್ತು ಎಡಗೈಯಲ್ಲಿ ದೇವರ ಹಲಗೆ ಹಿಡಿದು, ರಣವಾದ್ಯ ಗಳ ಲಯಕ್ಕೆ ತಕ್ಕಂತೆ ಕುಣಿಯುವ ದೃಶ್ಯ ಮೈರೋಮಾಂಚನಗೊಳಿಸುತ್ತದೆ.
ದೇವಿಯ ಕಟುಕಗಳನ್ನು ಹಾಡುವ ಈ ‘ಹೊಗಳು’ ಸಂಪ್ರದಾಯವು ವಿಶಿಷ್ಟವಾದುದು. ದುಷ್ಟರ ಶಿಕ್ಷಿಸಿ, ಶಿಷ್ಟರ ರಕ್ಷಿಸು ಎಂದು ದೇವಿಯನ್ನು ಆಗ್ರಹಿಸುವ ಈ ದಂಡಕಗಳು ಭಕ್ತರಲ್ಲಿ ಶೌರ್ಯದ ಸಂಚಲನ ಮೂಡಿಸುತ್ತವೆ.
ಮಣಜೂರು ಸಂಬಂಧ: ಈ ಉತ್ಸವಕ್ಕೆ ಮಣಜೂರು ಗ್ರಾಮದೊಂದಿಗೆ ಒಂದು ಅಪೂರ್ವ ಸಂಬಂಧವಿದೆ. ಐತಿಹ್ಯದ ಪ್ರಕಾರ, ಮಣಜೂರಿನ ರೈತರೊಬ್ಬರ ಹೊಲದಲ್ಲಿ ನೇಗಿಲಿಗೆ ಸಿಕ್ಕ ಕಲ್ಲು, ಚೌಡೇಶ್ವರಿ ದೇವಿಯ ರೂಪವಾಗಿತ್ತು. ದೇವಿಯ ಇಚ್ಛೆಯಂತೆ ಆಕೆಯನ್ನು ಕೊಳ್ಳಂಗಿ ಯ ಬನಶಂಕರಿ ದೇವಾಲಯದಲ್ಲಿ ನೆಲೆಗೊಳಿಸಲಾಯಿತು.
ಇಂದಿಗೂ ಝಂಪೋತ್ಸವದ ದಿನ ಮಣಜೂರಿನ ಭಕ್ತರು ವಾದ್ಯದ ಸಮೇತ ಬಂದು ದರ್ಶನ ಪಡೆಯುವುದು ಪದ್ಧತಿಯಾಗಿದೆ. ಬೆಳಕು ಹರಿಯುವ ಹೊತ್ತಿಗೆ ದೇವಾಲಯದ ಮುಂದೆ ಕೆಂಡೋತ್ಸವ ನಡೆಯುತ್ತದೆ. ಕೆಂಡ ಹಾಯುವ ಮೂಲಕ ಗ್ರಾಮದ ದನಕರುಗಳ ರೋಗ-ರುಜಿನಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆ ಇಲ್ಲಿದೆ. ಹತ್ತಾರು ಊರುಗಳಿಂದ ಬಂದ ಭಕ್ತರು ತಮ್ಮ ಕಷ್ಟಗಳನ್ನು ವೀರಭದ್ರನ ಮುಂದೆ ತೋಡಿಕೊಳ್ಳುತ್ತಾರೆ. ದೇವರು ನೀಡುವ ನಿಂಬೆಹಣ್ಣು ಮತ್ತು ತೆಂಗಿನಕಾಯಿ ಮಂತ್ರಾಕ್ಷತೆಯನ್ನು ನಂತರ ಊಟವನ್ನು ಪ್ರಸಾದ ವಾಗಿ ಸ್ವೀಕರಿಸುತ್ತಾರೆ.
ಗೊರೂರು ಸೋಮಶೇಖರ್ ಅವರ ‘ಗೊರೂರು ನೆನಪುಗಳು’ ಕೃತಿಯಲ್ಲಿ ಬಂದಮ್ಮನ ಕುರಿತಾದ ಪ್ರಬಂಧವು ಈ ಸಂಸ್ಕೃತಿಯ ಬೇರುಗಳನ್ನು ಸಾರಿ ಹೇಳುತ್ತದೆ. ಪ್ರಕೃತಿಯೇ ಶಕ್ತಿಯಾಗಿ, ಹರಿಯುವ ನೀರೇ ಗಂಗೋಧಕವಾಗಿ ಆಚರಿಸಲ್ಪಡುವ ಈ ಉತ್ಸವವು ಮನುಷ್ಯ ಮತ್ತು ಪರಿಸರದ ನಡುವಿನ ಬಾಂಧವ್ಯವನ್ನು ಎತ್ತಿ ಹಿಡಿಯುತ್ತದೆ. ಇಂದಿನ ಆಧುನಿಕ ಯುಗದಲ್ಲೂ ಸಾವಿರಾರು ಭಕ್ತರನ್ನು ಸೆಳೆಯುತ್ತಿರುವ ಕೊಳ್ಳಂಗಿಯ ಝಂಪ ಮಹೋತ್ಸವ ವು ನಮ್ಮ ಮಣ್ಣಿನ ಜನಪದ ಸೌಂದರ್ಯವನ್ನು ಜೀವಂತವಾಗಿರಿಸಿದೆ.
ಇದು ಕೇವಲ ಒಂದು ಧಾರ್ಮಿಕ ಕ್ರಿಯೆಯಲ್ಲ, ನಮ್ಮ ಪೂರ್ವಜರ ಶೌರ್ಯ, ನ್ಯಾಯನಿಷ್ಠೆ ಮತ್ತು ಸಾಮುದಾಯಿಕ ಬದುಕಿನ ದರ್ಶನ ಮಾಡಿಸುವ ಒಂದು ಮಹಾನ್ ಕನ್ನಡಿ.
(ಪೂರಕ ಮಾಹಿತಿ: ಕೆ ಬಿ ಶಂಕರ ಶೆಟ್ಟಿ, ಕೊಳ್ಳಂಗಿ)