Srivathsa Joshi Column: ಗಂಗಾಲಹರಿ ಸ್ತೋತ್ರವೂ ಜಗನ್ನಾಥ ಪಂಡಿತನ ಕಥೆಯೂ
ತ್ಯಾಗರಾಜರು ಪಂಚರತ್ನ ಕೃತಿಗಳನ್ನು ರಚಿಸಿದ್ದು ತಮ್ಮ ಬಾಳಿನ ಕಷ್ಟದ ದಿನಗಳಲ್ಲೇ ಅಂತೆ. ಕನಕ- ಪುರಂದರರು, ಸರ್ವಜ್ಞ-ಅಲ್ಲಮರು, ಕೊನೆಗೆ “ನೀ ಹೀಂಗ ನೋಡಬೇಡ ನನ್ನ..." ಎಂದು ಬೆಂದ ಬೇಂದ್ರೆಯವರೂ ಅಷ್ಟೇ, “ಬಂಗಾರವಿಲ್ಲದ ಬೆರಳು..." ಎಂದ ನರಸಿಂಹ ಸ್ವಾಮಿಗಳಾ ದರೂ ಅಷ್ಟೇ.
-
ತಿಳಿರುತೋರಣ
ಅದೆಷ್ಟೋ ಅಮರಕವಿಗಳ ಅಜರಾಮರ ಕೃತಿಗಳು ರಚನೆಯಾದ ಹಿನ್ನೆಲೆ, ಕಥೆ-ವ್ಯಥೆಗಳು, ಹೀಗೆಯೇ ಕರುಣಾಜನಕವಾಗಿ ಇರುತ್ತವೆ. “ಆ ಕೀರ್ತನಲೋನಿ ಪ್ರತಿ ಅಕ್ಷರಂ ವೆನುಕ ಆರ್ದ್ರತ ನಿಂಡಿ ಉಂದಿ ದಾಸು..." ಎಂದು ಶಂಕರಾಭರಣಂ ಶಂಕರಶಾಸಿಗಳು ಹೇಳಿದಂತೆ. ಭಗವಂತನ ಆಸರೆಯ ಬಾಯಾರಿಕೆಯಿಂದ ಬಳಲಿ ಬೆಂಡಾದ ಭಕ್ತನ ಎದೆಯಾಳದಲ್ಲಿ ತನ್ನಿಂತಾನೇ ಗಂಗಾಜಲವಾಗಿ ಹೊರಹೊಮ್ಮುವ ಗೀತೆಯಂತೆ ಇರುತ್ತವೆ ಆ ಘನಘೋರ ಗಾಥೆಗಳು. ಹಿಂದಿನ ಕಾಲದ ಕವಿಗಳಲ್ಲಿ ಹೆಚ್ಚಿನವರೆಲ್ಲ ಹಾಸಿಹೊದೆಯುವಷ್ಟು ಕಷ್ಟ ಗಳಿದ್ದವರೇ.
“ಬ್ರೋಚೇವಾರೆವರುರಾ..." ಕೃತಿಯನ್ನು ವಾಸುದೇವಾ ಚಾರ್ಯರು ರಚಿಸಿದ್ದೂ ಯಾವು ದೋ ಕಷ್ಟಕರ ಸನ್ನಿವೇಶದಲ್ಲೇ ಇರಬಹುದು. ಆದ್ದರಿಂದಲೇ “ನನ್ನನ್ನು ಕಾಪಾಡುವವ ರಾರಯ್ಯ" ಎಂದು ರಘುವರನಲ್ಲಿ ಮೊರೆ.
ತ್ಯಾಗರಾಜರು ಪಂಚರತ್ನ ಕೃತಿಗಳನ್ನು ರಚಿಸಿದ್ದು ತಮ್ಮ ಬಾಳಿನ ಕಷ್ಟದ ದಿನಗಳಲ್ಲೇ ಅಂತೆ. ಕನಕ- ಪುರಂದರರು, ಸರ್ವಜ್ಞ-ಅಲ್ಲಮರು, ಕೊನೆಗೆ “ನೀ ಹೀಂಗ ನೋಡಬೇಡ ನನ್ನ..." ಎಂದು ಬೆಂದ ಬೇಂದ್ರೆಯವರೂ ಅಷ್ಟೇ, “ಬಂಗಾರವಿಲ್ಲದ ಬೆರಳು..." ಎಂದ ನರಸಿಂಹ ಸ್ವಾಮಿಗಳಾದರೂ ಅಷ್ಟೇ.
ಅವರ ಕೃತಿಗಳೆಲ್ಲ ಸುಖದ ಸುಪ್ಪತ್ತಿಗೆಯಿಂದ ಬಂದವುಗಳಲ್ಲ. ಕಷ್ಟಗಳ ಕುಲುಮೆಯಲ್ಲಿ ನಳನಳಿಸಿದ ರತ್ನಗಳು. ಆದ್ದರಿಂದಲೇ “ಮೈಯನ್ನು ಹಿಂಡಿದರೂ ಸಿಹಿ ಕೊಡುವ ಕಬ್ಬು, ತೇಯುತಲಿದ್ದರೂ ಪರಿಮಳ ಬೀರುವ ಗಂಧ, ಉರಿದರೂ ಬೆಳಕು ಚೆಲ್ಲುವ ದೀಪ..." ಎಂಬ ಬಣ್ಣನೆ ಇವರಿಗೆಲ್ಲ ಏಕಪ್ರಕಾರವಾಗಿ ಸರಿ ಹೊಂದುವುದು.
ಇದನ್ನೂ ಓದಿ: Srivathsa Joshi Column: ಚರಣಶೃಂಗರಹಿತ ಸ್ತೋತ್ರವೂ ಪತಂಜಲಿಯ ಕಥೆಯೂ !
ಕವಿಗಳ ಬದುಕಿನ ಕಥೆ-ವ್ಯಥೆಗಳನ್ನು ಅರಿತುಕೊಂಡಾಗ ನಮಗೆ ಅವರ ಕಾವ್ಯ ಇನ್ನಷ್ಟು ಹಿಡಿಸುತ್ತದೆ. ಅಬ್ಬಾ ಎಂತಹ ಕಷ್ಟಕಾರ್ಪಣ್ಯದಲ್ಲೂ ಇಷ್ಟೊಂದು ಮಧುರವಾದ, ಅರ್ಥವತ್ತಾದ, ಹೃದಯಂಗಮವಾದ ಕೃತಿಗಳನ್ನು ರಚಿಸಿದರಲ್ಲಾ ಎಂದು ಮನಮಿಡಿಯುತ್ತದೆ.
ಅಂತಹದೇ ರೋಮಾಂಚಕ ಹಿನ್ನೆಲೆಯಿರುವ ಕೃತಿ ‘ಜಗನ್ನಾಥ ಪಂಡಿತನ ಗಂಗಾಲಹರಿ.’ ೫೨ ಶ್ಲೋಕಗಳಿರುವ ಒಂದು ಸಂಸ್ಕೃತ ಸ್ತೋತ್ರ. ಬೇಂದ್ರೆಯವರ ಗಂಗಾವತರಣಕ್ಕೂ ಇದೇ ಪ್ರೇರಣೆಯ ಸ್ತೋತ್ರ. ವೈಶಿಷ್ಟ್ಯವಿರುವುದು ಈ ಸ್ತೋತ್ರದಲ್ಲಲ್ಲ. ದೇವಾಧಿದೇವತೆಗಳ ಲಕ್ಷೋಪಲಕ್ಷ ಸ್ತೋತ್ರಗಳಂತೆಯೇ ಇದೂ ಒಂದು. ಪಾಂಡಿತ್ಯಪೂರ್ಣ ಸಂಸ್ಕೃತ ಭಾಷೆಯಲ್ಲಿ ಕವಿಕಲ್ಪನೆಗಳೆಲ್ಲ ಗರಿಗೆದರಿ ಮೂಡಿಬಂದಿರುವ ಗಂಗಾನದಿ ವರ್ಣನೆ, ಪೊರೆಯುವಂತೆ ಪ್ರಾರ್ಥನೆ ಅಷ್ಟೇ.
ಆದರೆ, ಜಗನ್ನಾಥ ಪಂಡಿತನ ಬದುಕಿನ ಕಥೆ ಬಹಳ ಸ್ವಾರಸ್ಯವಾದದ್ದು. ಗಂಗಾ ಲಹರಿಯನ್ನು ಆತ ರಚಿಸಿದ ಸನ್ನಿವೇಶವಂತೂ ಹೃದಯಸ್ಪರ್ಶಿಯಾದದ್ದು. ನಾನಿದರ ಬಗ್ಗೆ ಮೊದಲ ಬಾರಿ ತಿಳಿದುಕೊಂಡಿದ್ದು ಕೆಲ ವರ್ಷಗಳ ಹಿಂದೆ ಇಲ್ಲಿನ ‘ಭೂಮಿಕಾ’ ಚರ್ಚಾಚಾವಡಿಯಲ್ಲಿ ಡಾ.ರವಿ ಹರಪ್ಪನಹಳ್ಳಿ ನಡೆಸಿಕೊಟ್ಟ ಒಂದು ಕಾರ್ಯಕ್ರಮದಲ್ಲಿ. ಡಾ.ರವಿ ವೃತ್ತಿಯಲ್ಲಿ ಜೀವವಿಜ್ಞಾನಿ, ಪ್ರವೃತ್ತಿಯಲ್ಲಿ ಸಾಹಿತ್ಯಾಸಕ್ತ.
ಮುಖ್ಯವಾಗಿ ಬೇಂದ್ರೆ ಭಕ್ತ. ಆದ್ದರಿಂದಲೇ ಬೇಂದ್ರೆ ಯವರ ಗಂಗಾವತರಣ ಮತ್ತು ಜಗನ್ನಾಥ ಪಂಡಿತನ ಗಂಗಾಲಹರಿ ಎರಡನ್ನೂ ತುಲನಾತ್ಮಕವಾಗಿ ಪರಿಚಯಿಸಿದ್ದರು. ಆಮೇಲೆ ಕುತೂಹಲದಿಂದ ಅಂತರಜಾಲವನ್ನು ಮಥಿಸಿದಾಗ ಇನ್ನೊಬ್ಬ ಬೇಂದ್ರೆ ಭಕ್ತ ಹುಬ್ಬಳ್ಳಿ ನಿವಾಸಿ ಸುಧೀಂದ್ರ ದೇಶಪಾಂಡೆಯವರ ‘ಸಲ್ಲಾಪ’ ಬ್ಲಾಗ್‌ನಲ್ಲಿ ಗಂಗಾಲಹರಿ, ಜಗನ್ನಾಥ ಪಂಡಿತ, ಬೇಂದ್ರೆಯವರ ಮೇಲಾದ ಪರಿಣಾಮ...ಬಗೆಗೊಂದು ಪ್ರೌಢ ಲೇಖನ ವೂ ಓದಲಿಕ್ಕೆ ಸಿಕ್ಕಿತ್ತು.
ಹಾಗೆ ನಾನು ತಿಳಿದುಕೊಂಡಿದ್ದ ಜಗನ್ನಾಥ ಪಂಡಿತನ ಜೀವನಗಾಥೆಯ ಸಾರಾಂಶ ಇಷ್ಟು: ಕ್ರಿ.ಶ 17ನೇಯ ಶತಮಾನದಲ್ಲಿ ಬಾಳಿದ್ದ ಜಗನ್ನಾಥ ಪಂಡಿತ ಮೂಲತಃ ಆಂಧ್ರದವನು. ಅತಿಶಯ ಮೇಧಾವಿ, ಆದರೆ ಕಡುಬಡವ. ರಾಜಾಶ್ರಯ ಕೋರಿ ಉತ್ತರ ಭಾರತಕ್ಕೆ ವಲಸೆ ಹೋಗುತ್ತಾನೆ. ಮೊಘಲ್ ಚಕ್ರವರ್ತಿ ಷಹಜಹಾನನ ಆಸ್ಥಾನವನ್ನು ತಲುಪುತ್ತಾನೆ. ತನ್ನ ಪಾಂಡಿತ್ಯದಿಂದ ಅವನ ಮನಗೆಲ್ಲುತ್ತಾನೆ. ಚಕ್ರವರ್ತಿಯೊಡನೆ ಚದುರಂಗ ಆಡುವಷ್ಟು ಸಖ್ಯ-ಸಲುಗೆ ಬೆಳೆಸುತ್ತಾನೆ. ಆಟದಲ್ಲಿ ಷಹಜಹಾನನನ್ನು ಸೋಲಿಸುತ್ತಾನೆ.
ಪಣವಾಗಿ ಅಲ್ಲಿ ಸೇವಕಿಯಾಗಿದ್ದ ಸುರಸುಂದರಿ ದಾಸೀಪುತ್ರಿ ಲವಂಗಿಯನ್ನೇ ಕೊಡುವಂತೆ ಕೇಳುತ್ತಾನೆ. ಹಠ ಹಿಡಿದು ಅವಳನ್ನೇ ಮದುವೆಯಾಗುತ್ತಾನೆ, ಹಾಯಾಗಿರುತ್ತಾನೆ. ಮುಂದೆ ಔರಂಗಜೇಬ ತಂದೆ ಷಹಜಹಾನನನ್ನು ಬಂಧಿಸಿದಾಗ ಜಗನ್ನಾಥ ಪಂಡಿತ ಮತ್ತು ಲವಂಗಿ ರಾಜ್ಯದಿಂದ ಹೊರ ಬೀಳುತ್ತಾರೆ.
ಕಾಶೀಕ್ಷೇತ್ರಕ್ಕೆ ಹೋದಾಗ ಅಲ್ಲಿನ ಪಂಡಿತ ಸಮುದಾಯವು ಅವನನ್ನು ಜಾತಿಭ್ರಷ್ಟನೆಂದು ದೂರವಿಡುತ್ತದೆ. ಪ್ರತಿಭಾನ್ವಿತನಾದರೂ ಉದ್ಧಟತನದವನು ಅಂತಲೂ ಅವನ ಬಗ್ಗೆ ತಿರಸ್ಕಾರವಿರುತ್ತದೆ. ಅಂತಹ ಹತಾಶ ಪರಿಸ್ಥಿತಿಯಲ್ಲಿ ಜಗನ್ನಾಥ ಪಂಡಿತ ರಚಿಸಿದ್ದೇ ‘ಗಂಗಾಲಹರಿ.’ ಬದುಕಿನಲ್ಲಿ ಸಾಕಷ್ಟು ರೋಸಿ ಹೋಗಿ ಪ್ರಾಯಶ್ಚಿತ್ತದ ರೂಪದಲ್ಲಿ ಮಡದಿ ಯೊಂದಿಗೆ ಜಲಸಮಾಧಿ ಮಾಡಿಕೊಳ್ಳಲು ನಿಶ್ಚಯಿಸಿರುತ್ತಾನೆ.
ಕಾಶಿಯಲ್ಲಿ ಗಂಗೆಯ ದಡದಲ್ಲಿ ಕುಳಿತು ಹಂಸಗೀತೆಯೆಂಬಂತೆ ಗಂಗಾಲಹರಿಯನ್ನು ಹಾಡುತ್ತಾನೆ. ಒಂದೊಂದು ಶ್ಲೋಕಕ್ಕೂ ಒಂದೊಂದು ಮೆಟ್ಟಲಿನಷ್ಟು ಏರುವ ಗಂಗೆ, 52ನೇಯ ಶ್ಲೋಕವಾಗುವಾಗ ಅವರಿಬ್ಬರನ್ನೂ ಕೊಚ್ಚಿಕೊಂಡು ಹೋಗುತ್ತಾಳೆ.
ಮನಮಿಡಿಯುವ ದಾರುಣ ಕಥೆ. ಇದೀಗ ನನಗೆ ಇನ್ನೊಂದು ಅಮೂಲ್ಯವಾದ ನಿಧಿ ಸಿಕ್ಕಿದೆ! ಪಂಢರೀನಾಥಾಚಾರ್ಯ ಗಲಗಲಿಯವರ ಕೃತಿ “ಪಂಡಿತರಾಜ ಜಗನ್ನಾಥಕೃತ ಗಂಗಾ ಲಹರಿ. ಕನ್ನಡ ಅನುವಾದ: “ಪಂ. ಪಂಢರೀ ನಾಥಾಚಾರ್ಯ ಗಲಗಲಿ". ಬೇಂದ್ರೆ ಯವರ ಮುನ್ನುಡಿ ಇರುವ ಈ ಕೃತಿಯಲ್ಲಿ ಗಂಗಾಲಹರಿಯ ಮೂಲ ಸಂಸ್ಕೃತ ಶ್ಲೋಕಗಳ ಪಕ್ಕದಲ್ಲೇ ಅವುಗಳ ಸುಂದರ ಅನುವಾದ, ಕನ್ನಡದಲ್ಲಿ ಪದ್ಯರೂಪದಲ್ಲೇ ಇದೆ.
ಜತೆಯಲ್ಲಿ ‘ಮಂದಾಕಿನೀ ಅಭಿನಂದನೆ’ ಎಂಬೊಂದು ಮೂರು ಚರಣಗಳ ಕನ್ನಡ ಪದ್ಯ, ಪಂಢರೀನಾಥಾಚಾರ್ಯರೇ ರಚಿಸಿದ್ದು, “ರಾಜಕವಿಯ ಸಂಸ್ಕೃತದ ಸ್ವರ್ಣಭೂಮಿಯಲಿ ಹರಿದ ತೆರದಿ| ಗಂಗೆ ಎನ್ನ ಕನ್ನಡದ ಪಾತ್ರದಲ್ಲಿ ಹರಿದಳಂತೆ ಭರದಿ" ಎಂದು ಉದ್ದೇಶ ವನ್ನು ದಾಖಲಿಸಿದ್ದು ಇದೆ. ಮಹಾಕವಿ ವಾಲ್ಮೀಕಿವಿರಚಿತ ಸಂಸ್ಕೃತ ಗಂಗಾಷ್ಟಕಮ್, ಅದರದೂ ಕನ್ನಡ ಅನುವಾದ ಪಂಢರೀನಾ ಥಾಚಾರ್ಯರೇ ಮಾಡಿದ್ದು ಕೂಡ ಇದೆ. ಮತ್ತು ಬಹುಮುಖ್ಯವಾಗಿ ಸುಮಾರು 30 ಪುಟಗಳಷ್ಟು ವಿಸ್ತಾರವಾಗಿ ಜಗನ್ನಾಥ ಪಂಡಿತನ ಕವಿಪರಿಚಯ ಇದೆ, ಸಂಸ್ಕೃತಭೂಯಿಷ್ಠ ಸಿರಿವಂತ ಕನ್ನಡದಲ್ಲಿ.
ಅದನ್ನೋದುವುದೇ ಒಂದು ರೋಚಕ ಅನುಭವ. ಅದರ ಆಯ್ದ ಕೆಲ ಭಾಗಗಳನ್ನು ನೋಡೋಣ, ಆದರೆ ಮೊದಲಿಗೆ ಪಂಢರೀನಾಥಾಚಾರ್ಯ ಗಲಗಲಿಯವರ ಬಗೆಗೆ ಒಂದೆರಡು ಮಾತುಗಳು ಪ್ರಸ್ತುತವೆನಿಸುತ್ತವೆ. ಯಾರು ಪಂಢರಿನಾಥಾಚಾರ್ಯ ಗಲಗಲಿ ಎಂದು ಈಗಿನ ಜೆನ್-ಝೀಗಳಿಗೆ, ರೀಲ್ಸ್‌ಗಳಿಂದಲೇ ಜ್ಞಾನಾರ್ಜನೆ ಮಾಡುವವರಿಗೆ ಸುಲಭ ವಾಗಿ ತಿಳಿಸಬೇಕೆಂದರೆ ‘ಅಲಖ್ ನಿರಂಜನ್’ ಕಥಾವ್ಯಾಖ್ಯಾನ ರೀಲ್ ಖ್ಯಾತಿಯ ಅಮೆರಿಕ-ಕನ್ನಡಿಗ ತರುಣ ನವನೀತ ಗಲಗಲಿಯ ತಂದೆ ಅಮೆರಿಕ-ಕನ್ನಡಿಗ ಗೋಪಿನಾಥ ಗಲಗಲಿ; ಅವರ ತಂದೆಯೇ ದಿ. ಪಂಢರೀನಾಥಾಚಾರ್ಯ ಗಲಗಲಿ (1922-2015).
ಇದು, ಮಿಥಿಲೆಯ ಪ್ರಜೆಗಳಿಗೆ ಸೀತಮ್ಮನ ಗಂಡನೆಂದೇ ಶ್ರೀರಾಮನ ಪರಿಚಯ ಮಾಡಿ ಕೊಟ್ಟಂತೆ. ಇನ್ನು ಸಾಂಪ್ರದಾಯಿಕ ರೀತಿಯಲ್ಲಿ ತಿಳಿಸುವುದಾದರೆ- ಪಂಢರೀನಾಥಾ ಚಾರ್ಯರು ಕರ್ನಾಟಕದ ಪ್ರಸಿದ್ಧ ಸಂಸ್ಕೃತ ಮತ್ತು ಕನ್ನಡ ವಿದ್ವಾಂಸರು, ಪುರಾಣ ಪ್ರವಚನಕಾರರು ಮತ್ತು ಸಾಹಿತಿ. ಕನ್ನಡದ ಓದುಗರಿಗೆ ಸಂಸ್ಕೃತ ಪುರಾಣಗಳನ್ನು ಸರಳವಾಗಿ ತಲುಪಿಸಿದವರು.
ವಿಜಯಪುರ ಜಿಲ್ಲೆಯ ಗಲಗಲಿಯಲ್ಲಿ ಜನಿಸಿ, ಗದುಗಿನಲ್ಲಿ ವೀರನಾರಾಯಣ ಸಂಸ್ಕೃತ ಪಾಠಶಾಲೆ ಪ್ರಾರಂಭಿಸಿ, ಹುಬ್ಬಳ್ಳಿಯ ವೇದ ಪುರಾಣ ಸಾಹಿತ್ಯಮಾಲಾ ಟ್ರಸ್ಟ್ ಮೂಲಕ ನೂರಾರು ಸಂಸ್ಕೃತ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದವರು. 1983ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಅದಕ್ಕೆ ಮೊದಲು ಭಾರತದ ಮೊತ್ತ ಮೊದಲ ರಾಷ್ಟ್ರಪತಿ ಯಿಂದ ಪದಕ, ಇನ್ನೂ ಅನೇಕ ಪ್ರಶಸ್ತಿ-ಪುರಸ್ಕಾರಗಳಿಗೆ ಪಾತ್ರರಾದ ಪ್ರಕಾಂಡಪಂಡಿತರು.
ನಾನು ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಓದುತ್ತ ಕೃಷ್ಣ ಹಾಸ್ಟೆಲ್‌ನಲ್ಲಿದ್ದಾಗ ಅಲ್ಲಿಗೊಮ್ಮೆ ಭೇಟಿ ನೀಡಿದ್ದರು. ಕಾಳಿದಾಸನ ಮೇಘದೂತ ಕಾವ್ಯದ ಬಗ್ಗೆ ಅವರದೊಂದು ಪ್ರವಚನ ಇತ್ತು. “ಆಷಾಢಸ್ಯ ಪ್ರಥಮ ದಿವಸೇ..." ಶ್ಲೋಕವನ್ನು ನಾನು ಮೊತ್ತ ಮೊದಲ ಬಾರಿಗೆ ಕೇಳಿದ್ದು ಪಂಢರೀನಾಥಾಚಾರ್ಯರ ಮುಖವಾಣಿಯಿಂದಲೇ.
ಜಗನ್ನಾಥ ಪಂಡಿತನ ಕವಿಪರಿಚಯ, ಆಚಾರ್ಯರು ಬರೆದಂತೆ ಆರಂಭವಾಗುವುದು ಹೀಗೆ: “ಸಂಸ್ಕೃತ ಸೌರಾಷ್ಟ್ರದ ಗಿರಿನಾರ ಕಂದರಗಳಲ್ಲಿ ಜಗನ್ನಾಥ ಒಂದು ಸಿಂಹದ ಮರಿ. ಹುಟ್ಟಿದಂದಿನಿಂದಲೇ ಧೀಮಂತಿಕೆಯ ಹಮ್ಮು ಹೊಗರೇರಿ ಹೂಂಕರಿಸುತ್ತಲೇ ಇದ್ದ. ಆ ಕಾವ್ಯ ಕಂಠೀರವನಿಗೆ ಯಾರಿಂದಲೂ ‘ನಾಭಿಷೇಕೋ ನ ಸಂಸ್ಕಾರಃ’ ಆದರೂ ಅವನು ತನ್ನ ಎಳೆಯ ವಯಸ್ಸಿನಲ್ಲಿಯೇ ಪಾಂಡಿತ್ಯದ ಕಂಡೂತಿಯಿಂದ ವಾದಭೂಮಿಗೆ ಇಳಿದಾಗ ಅಲ್ಲಿನ ದರ್ಪದ ದಿನಾಗಗಳೆಲ್ಲ ದಿಕ್ಕೆಟ್ಟು ಓಡಿದವು. ಪಂಡಿತರ ಪಲಾಯನವೇ ಅವನಿಗೆ ಗೀರ್ವಾಣಗಿರಿಗರ್ಭದಲ್ಲಿ ಸ್ವಯಮೇವ ಮೃಗೇಂದ್ರತೆಯ ಪಟ್ಟ ಕಟ್ಟಿ ಗೌರವದ ಗದ್ದುಗೆ ಯನ್ನಿತ್ತಿತ್ತು.
ಸಂಸ್ಕೃತದ ಸುರಗಿರಿಯ ದೂರದ ದರಿಕೊರಿಗಳಲ್ಲಿ ಹಣಿಕೆ ಹಾಕಿದರೆ ಇಂದಿಗೂ ಆ ತುಂಟ ಹರಿಪತಿಯ ಅಕುಂಠ ಕಂಠನಾದ ಹೂಂಕರಿಸಿ ಬಂದು ದುಮ್ ದುಮಿಸಿದಂತಾಗುವುದು. ಅವನ ಶೈಶವ ಸಿಂಹನಾದವನ್ನು ಕೇಳಿಯೇ ಘನಪಂಡಿತ ಗಂಧ-ಗಜಗಳೆಲ್ಲ ಗಾಳಿಗರ ವಾದಂತೆ ಹೆದರಿ ಹುಚ್ಚೆದ್ದು ಹರಿದೋಡಿದಾಗ ತನ್ನ ನಖಶಿಖಾಂತ ಪಾಂಡಿತ್ಯವನ್ನು ಯಾರ ಮೇಲೆ ತೋರಲಿ? ಈ ವಿದ್ವತ್ತೆಯೆಲ್ಲ ಯಾರನ್ನೂ ಜಯಿಸದೇ ವ್ಯಯಿಸಿ ಹೋಗುವು ದಲ್ಲ ಎಂದು ಕೊರಗಿ ಕನಲಿದ್ದಾನೆ ಈ ಕವಿ ಕಲಭ.
ಆದರೆ ಕೈಗಾವುದೂ ಸಿಕ್ಕದಾಗ ಕಾನನದ ಕೋಡುಗಲ್ಲನ್ನೇ ಕಾಡಾನೆಯೆಂದು ಬಗೆದು, ತನ್ನ ಉಗುರಿನಿಂದ ಬಗಿದು, ಶೈಲ ಶಿಲಾ ಪದರು ಪದರುಗಳನ್ನೆಲ್ಲ ಸೀಳಿ ಹೋಳು ಮಾಡುವ ಹರಿಮರಿಯಂತೆ ಜಗನ್ನಾಥನಾದರೂ ಆ ಪಂಡಿತರಾರೂ ಕಾಣದಾಗ ಅವರ ಪಾಂಡಿತ್ಯದ ಪ್ರತೀಕಗಳಂತಿರುವ ಅವರ ಗ್ರಂಥಗಳ ಮೇಲೆ ಎರಗಿದ್ದುಂಟು.
ನ್ಯಾಯ, ವ್ಯಾಕರಣ, ಮೀಮಾಂಸಾ, ಸಾಹಿತ್ಯ ಮೊದಲಾದ ಶಾಸ್ತ್ರೀಯ ಸಂಸಾರದ ಸೀಮಾ ಪುರುಷರೆಂದೆನಿಸಿಕೊಂಡ ಮಹಾ ಪಂಡಿತರ ಕೃತಿಗಳನ್ನೆಲ್ಲ ತನ್ನ ನುಡಿಗೊಡಲಿಯಿಂದ ಕಡಿದೊಗೆದ ಪ್ರತಿಭಾ ಪರಶುರಾಮನಾಗಿದ್ದಾನೆ ಆ ಜಗನ್ನಾಥ. ಅಪ್ಪಯ್ಯ ದೀಕ್ಷಿತರಂಥ ಷಡ್‌ದರ್ಶನಾಚಾರ್ಯರಿಗೂ ಸೊಪ್ಪು ಹಾಕದೇ, ಭಟ್ಟೋಜಿ ದೀಕ್ಷಿತರಂಥ ಶಬ್ದಬ್ರಹ್ಮರ ಿಕ್ಷಾ-ಪ್ರೇಕ್ಷಾಗಳ ಪರಿವೆ ಇಲ್ಲದೇ, ಅವರ ಉದ್ಗ್ರಂಥಗಳನ್ನೆಲ್ಲ ಬಾರದ ಕಂತೆಗಳೆಂದು ಹರಿದು ತರಿದು ಅಕ್ಷರಶಃ ಖಂಡಿಸಿ ಹಾಕಿದ್ದಾನೆ.
ರಸಗಂಗಾಧರ, ಮನೋರಮಾಕುಚ ಮರ್ದಿನೀ, ಚಿತ್ರಮೀಮಾಂಸಾ ಖಂಡನ ಮೊದಲಾದ ತನ್ನ ಗ್ರಂಥಗಳಲ್ಲಿ ಪ್ರಾಚೀನ ಶಾಸ್ತ್ರೀಯ ಪ್ರಪಂಚದ ಸನಾತನ ಸಾಂಪ್ರದಾಯಿಕ ಸಿದ್ಧಾಂತ ಗಳನ್ನೆಲ್ಲ ತನ್ನ ಬುದ್ಧಿಬಲದಿಂದ ವಿಧ್ವಂಸಗೊಳಿಸಿ ಧೀರ ವೀರಭದ್ರನಂತೆ ಪ್ರಜ್ಞಾತಾಂಡವ ಗೈದಿದ್ದಾನೆ.
ವೀರ ವಿಶ್ವಾಮಿತ್ರನಂತೆ ತನ್ನ ಬೌದ್ಧಿಕ ಬ್ರಹ್ಮತೇಜಸ್ಸಿನಿಂದ ಭಾವಾಕಾಶದ ರಸನೀಲದಲ್ಲಿ ಪ್ರಜ್ಞಾನ ಘನವಾದ ಪ್ರತಿಸೃಷ್ಟಿಯೊಂದನ್ನು ನಿರ್ಮಿಸಿದ್ದಾನೆ.
ಆಂಧ್ರಪ್ರದೇಶದ ವೆಂಗಿನಾಡ ಎಂಬ ಅಡ್ಡಹೆಸರಿನ ತೈಲಂಗಬ್ರಾಹ್ಮಣ ಪೇರುಭಟ್ಟ-ಲಕ್ಷ್ಮೀ ದಂಪತಿಯ ಸುಪುತ್ರನಾಗಿ ಜನನ. ಸರ್ವಶಾಸ್ತ್ರ ಪಂಡಿತ ತಂದೆಯಲ್ಲಿಯೇ ವಿದ್ಯಾಭ್ಯಾಸ. ಮನೆಯಲ್ಲಿ ನಿತ್ಯ ದಾರಿದ್ರ್ಯ ತಾಂಡವ. ಆಗಿನ ಆಂಧ್ರದೇಶಾಧಿಪತಿಯನ್ನು ಹಾಡಿ ಹೊಗಳಿ ದರೂ ಆ ಅರಸಿಕ ಅರಸನಿಂದ ಉಪೇಕ್ಷೆ. ಸ್ವದೇಶ ಬಿಟ್ಟು ರಜಪುತಾನದಲ್ಲಿರುವ ಜಯಪೂರಕ್ಕೆ ವಲಸೆ. ಈತನ ಪಾಂಡಿತ್ಯ ಪ್ರತಿಭೆ ಕವಿತ್ವ ಕೌಶಲಗಳನ್ನು ಕಂಡ ಅಲ್ಲಿಯ ಜನರಿಂದ ಉದಾರಾಶ್ರಯ.
ದೊಡ್ಡ ಪಾಠಶಾಲೆಯೊಂದರ ಸ್ಥಾಪನೆ. ನೂರಾರು ಶಿಷ್ಯರು. ಉತ್ತರದ ಎಷ್ಟೋ ಪಂಡಿತ ರಿಗೆ ಈತನ ಪ್ರತಿಷ್ಠೆ ಕಂಡು ಮತ್ಸರ. ಆ ಸಮಯದಲ್ಲೇ ಮುಸಲ್ಮಾನ ಧರ್ಮಗುರು ವೊಬ್ಬನೊಡನೆ ವಾದ ಮಾಡಲೆಂದೇ ಅರಬ್ಬಿ ಭಾಷೆ ಕಲಿತು ಅಲ್ಲಿಯ ಗ್ರಂಥಗಳನ್ನೂ ಪಠಿಸಿ ಕೊನೆಗೂ ಆ ಕಾಜಿಯನ್ನು ಸೋಲಿಸಿ ಜಯದುಂದುಭಿ. ಅಂದಿನ ದಿಲ್ಲಿಸಮ್ರಾಟ ಜಹಾಂಗೀರ ಬಾದಶಹನಿಂದ ದಿಲ್ಲೀ ದರ್ಬಾರಕ್ಕೆ ಬರಲು ಆಮಂತ್ರಣ.
ವಿದ್ವತ್ತೆಯಿಂದಾಗಿಯೇ ಸ್ಥಾನ
ಪಡೆದು ಅರಮನೆಯಲ್ಲಿ ಅಧಿಷ್ಠಾನ ಹೊಂದಿ ಅಂತಃಪುರ ಪರಿವಾರ ವರ್ಗಕ್ಕೆಲ್ಲ ಕಣ್ಮಣಿ. ಜಹಾಂಗೀರ್, ರಾಣಿ ನೂರಜಹಾನ್, ಆಕೆಯ ಸಹೋದರ ಅಸಫಖಾನ್, ಮಗ ಷಹಜಹಾನ ಮತ್ತು ಆತನ ಮಗ ದಾರಾಶುಕ ಎಲ್ಲರೂ ಜಗನ್ನಾಥನಿಗೆ ಮಿತ್ರರೇ. ರಾಜಮಂದಿರದ ಚಂದ್ರಶಾಲೆಯಲ್ಲಿ ರತ್ನಗಂಬಳಿಯ ಮೇಲೆ ಷಹಜಹಾನನೊಡನೆ ಚದುರಂಗದಾಟ. ರಜಪೂತ ಸೀಯಲ್ಲಿ ಅರಸನಿಗೆ ಹುಟ್ಟಿದ್ದ ಅಪ್ರತಿಮ ಬೆಡಗಿ ಲವಂಗಿಯೊಡನೆ ಲಗ್ನ. ರಸಿಕಳಾಗಿ ಒಲಿದುಬಂದ ರಮಣಿ, ಮನದಲ್ಲಿ ಮೂಡಿದ ಬಯಕೆಗಳನ್ನೆಲ್ಲ ಕೂಡಲೇ ಪೂರೈಸುವಷ್ಟು ಸಂಪತ್ತು, ಪ್ರತಿಭೆ-ಪ್ರತಿಷ್ಠೆ, ರಾಜಭೋಗ-ರಸಯೋಗ. ಅವು ಜಗನ್ನಾಥನ ಉಚ್ಛ್ರಾಯ ದಿನಗಳು.
ಷಹಜಹಾನನ ಅಂತಿಮ ದಿನಗಳಲ್ಲಿ ಜಗನ್ನಾಥನ ಶೃಂಗಾರಜೀವನದ ಸಂಧ್ಯಾಕಾಲ ಪ್ರಾರಂಭವಾಯಿತು. ಪ್ರಿಯಮಿತ್ರ ಅಸಫಖಾನನೂ ತೀರಿಕೊಂಡನು. ದಾರಾಶುಕನ ಕೊಲೆಯಿಂದಂತೂ ಜಗನ್ನಾಥ ನೆಲೆ ತಪ್ಪಿದ ಹಕ್ಕಿಯಾದ. ಔರಂಗಜೇಬನ ಆಳ್ವಿಕೆ ಅವನ ಬಾಳಿನ ಬೆಳದಿಂಗಳಲ್ಲಿ ಬೆಂಕಿಯನ್ನೇ ಸುರಿದಿತ್ತು.
ರಾಜೈಶ್ವರ್ಯವನ್ನೆಲ್ಲ ತೊರೆದ ಲವಂಗಿ ಕಷ್ಟಕಾಲದಲ್ಲೂ ಜಗನ್ನಾಥನ ಜತೆಯಾದಳು. ಊರೂರು ಅಲೆಯುತ್ತ ಕಾಶಿಗೆ ಆಗಮಿಸಿದರು. ಎಲ್ಲಿ ನೋಡಿದಲ್ಲೆಲ್ಲ ‘ಯವನೀ ಸಂಸರ್ಗ ಪಾಂಸುಲ’, ‘ಹಿಂದೂ ಕುಲಕಲಂಕ’, ‘ಬ್ರಾಹ್ಮಣಾಧಮ’, ‘ಲವಂಗೀ ಲಂಪಟ’ ದೂರ ಸರಿ, ತೊಲಗು! ಎಂದು ಧಿಕ್ಕಾರ. ಅಂಡಲೆದು ಹಸಿವೆಯಿಂದ ಕುಸಿದು, ಕೂಡಲು ಸ್ಥಳವಿಲ್ಲದೆ ನಿಲ್ಲಲು ನೆಲವಿಲ್ಲದೆ ರಾತ್ರಿಯಲ್ಲಿ ಗಂಗಾತಟಕ್ಕೆ ಬಂದರು.
ಹೊದ್ದುಕೊಳ್ಳುವ ಅರಿವೆಯ ತುಂಡೊಂದನ್ನು ಅರ್ಧ ಹಾಸಿ ಅದನ್ನೇ ಹೊದ್ದುಕೊಂಡು ಹೊಟ್ಟೆಯಲ್ಲಿ ಕಾಲುಮಡಚಿಕೊಂಡು ಬಾಣನೆಟ್ಟಹಕ್ಕಿಯಂತೆ ಮುದುಡಿಕೊಂಡು ಮಲಗಿದರು. ಕಾಶಿಯಲ್ಲಿಯ ಅರುಣೋದಯ. ಕರ್ಮಠ ಅಪ್ಪಯ್ಯ ದೀಕ್ಷಿತರು ಗಂಗಾಸ್ನಾನ ಮುಗಿಸಿ ಹಿಂದಿರುಗುತ್ತಿದ್ದಾರೆ. ಜನರೆಲ್ಲ ಅವರಿಗೆ ಸಾಷ್ಟಾಂಗ ವಂದಿಸಿ ಸಾಗುತ್ತಿದ್ದಾರೆ. ಅಲ್ಲೇ ಮೂಲೆಯಲ್ಲಿ ಹರಕು ಅರಿವೆ ತುಣುಕೊಂದನ್ನು ಮೋರೆಯ ಮೇಲೆ ಎಳೆದುಕೊಂಡು ಇನ್ನೂ ಮಲಗಿದ್ದ ನಿರ್ಲಜ್ಜ ದಂಪತಿ ದೀಕ್ಷಿತರ ಕಣ್ಣಿಗೆಬಿದ್ದರು.
ದೀಕ್ಷಿತರು ಜಗನ್ನಾಥನ ಗುರುತುಹಚ್ಚಿ ತಬ್ಬಿಬ್ಬಾದರು. ಉಗುಳುನುಂಗಿ ಅಧೀರ ಧ್ವನಿಯಲ್ಲಿ “ಸುಖವಾಗಿ ಮಲಗು. ನೀನು ಮಲಗಿದರೂ ನಿನ್ನ ಮಗ್ಗುಲಲ್ಲೇ ತಾಯಿ ಗಂಗೆಯು ನಿಮ್ಮಂಥ ವರನ್ನೆಲ್ಲ ಉದ್ಧರಿಸಲು ನಿತ್ಯ ಜಾಗರೂಕಳೇ ಆಗಿ ಕುಳಿತಿದ್ದಾಳೆ" ಎಂದಂದು ಗಡಿಬಿಡಿ ಯಿಂದ ಸಾಗಿದರು.
ಜಗನ್ನಾಥ ಎದ್ದುಕುಳಿತ. ಯಾವುದೋ ಅಶರೀರವಾಣಿ ಅವನಿಗೆ ತಾರಕಮಂತ್ರವನ್ನು ಉಪದೇಶಿಸಿದಂತಾಯ್ತು. ಅಶಕ್ತ ಮಗುವಿನ ಆರೈಕೆಗಾಗಿ ತಾಯಿ ಬೆಳಗಿನ ತನಕ ಎಚ್ಚರಿರು ವಂತೆ ಇದ್ದಾಳೆ ಈ ಗಂಗಾಮಾತೆ. ಜಗತ್ತೆಲ್ಲ ಜಗನ್ನಾಥನನ್ನು ಜರೆದರೂ, ಸ್ವಕೀಯರೆಲ್ಲರೂ ತೊರೆದರೂ, ತಾಯ್ಗರುಳು ಮಾತ್ರ ತೊರೆಯುವುದು ಸಾಧ್ಯವಿಲ್ಲ.
“ಲವಂಗಿ, ಏಳು. ಒಮ್ಮೆ ಈ ತಾಯೊಡಲ ತಂಪಿಗಿಳಿದು ಈ ಜಗತ್ತಿನ ಜಂಜಾಟದಿಂದ ದೂರವಾಗುವಾ" ಎಂದು ಎದ್ದನು. ಅವಮಾನದ ಅಗ್ನಿಕುಂಡದಲ್ಲಿ ಪ್ರತಿದಿನವೂ ಬೆಂದು ನಲುಗಿಹೋಗಿದ್ದ ಲವಂಗಿ ಜಲಸಮಾಧಿಗೆ ಸಿದ್ಧಳಾಗಿ ಎದ್ದು ನಿಂತಳು.
ಇಬ್ಬರೂ ತಾಯಿಯ ತೋಳಿನಾಸರೆಗಾಗಿ ಪಾವಟಿಗೆಗಳನ್ನು ಇಳಿಯತೊಡಗಿದರು. ಜನರೆಲ್ಲ ಆ ಪಾಪಪುರುಷ ತಮ್ಮ ಮಡಿಯಾದ ಮೈಮೇಲೆ ನೆರಳು ಹಾಕಿ ನೀರು ಮುಟ್ಟಿ ಗಂಗಾಜಲವನ್ನೇ ಮೈಲಿಗೆ ಮಾಡುವನೆಂದು ಕೂಗಿದರು.
“ಕೆಳಗಿಳಿಯಬೇಡ! ಗಂಗೆಯನ್ನು ಮುಟ್ಟಬೇಡ!" ಎಂದು ಗದರಿಸಿದರು. ಗಾಬರಿಯಾದ ಜಗನ್ನಾಥ ಮೆಟ್ಟಿಲಮೇಲೆ ಕುಕ್ಕುರಿಬಿದ್ದ. ಹಸಿವೆ, ಕಸಿವಿಸಿ, ಅವಮಾನಗಳು ಅವನ ಪ್ರಾಣ ಹೀರಲು ಮೇಲಾಟ ನಡೆಸಿದ್ದವು. ಲವಂಗಿ ನೀಡಿದ ಆರೈಕೆಯಿಂದ ತುಸು ಚೇತರಿಸಿಕೊಂಡ. ಮನಸ್ಸು ಪ್ರಶಾಂತವಾಗಿತ್ತು.
ಹೃದಯದಲ್ಲಿಯ ರಾಗದ್ವೇಷ, ಕೋಪಕಾಲುಷ್ಯಗಳೆಲ್ಲ ಸುಟ್ಟು ಅಂತರಂಗವು ಗಂಗೆಯ ರಂಗತಾಣದಂತೆ ನಿರ್ಮಲವಾಗಿತ್ತು. ಕರುಳೆಲ್ಲ ಕರಗಿ, ಶೋಕದಿಂದ ಕೊರಗಿ, ಹೃದಯವು ಮರುಗಿ, ಭಾವಾಕಾಶದಲ್ಲಿ ಭಕ್ತಿಪ್ರವಾಹ ಉಕ್ಕೇರಿತ್ತು. “ತಾಯೀ, ನಿನ್ನ ಸ್ಪರ್ಶ ಭಾಗ್ಯವಿಲ್ಲ ದಿದ್ದರೂ ದರ್ಶನದ ಲಾಭವಾದರೂ ಆಯ್ತಷ್ಟೇ!
ನಿನ್ನ ಜಲರಾಶಿಯ ಸೌಂದರ್ಯವಂತೂ ಸುಧೆಯಂತಿದೆ. ಈ ಜನ್ಮದಲ್ಲಿ ನಿನ್ನ ಸ್ನಾನ ಪಾನ ಸಿಗದಿದ್ದರೂ ಗಾನದರ್ಶನಗಳೇ ನನ್ನ ಪಾಲಿನ ಪರಮಭಾಗ್ಯ ಸಮೃದ್ಧ ಸೌಭಾಗ್ಯ!" ಎನ್ನುತ್ತ ಒಂದೊಂದೇ ಶ್ಲೋಕವನ್ನು ಹಾಡತೊಡಗಿದನು. ಅವನ ಕರುಣಾಕ್ರಂದನಕ್ಕೆ ಆ ಜಲದಾಯಿಯ ಹೃದಯ ನೀರಾಯಿತು, ನೀರು ಹೃದಯವಾಯಿತು. ಶೋಕ- ಶ್ಲೋಕ ಗಳನ್ನು ಕೇಳಿದಂತೆಲ್ಲ ಆ ತಾಯಿಯ ಕರುಳು ಕರಗಿ ಕರುಣೆ ಉಕ್ಕೇರಿ ಬಂತು. ಒಂದೊಂದು ಪದ್ಯಕ್ಕೆ ಒಂದೊಂದು ಪಾವಟಿಗೆಯನ್ನು ಏರುತ್ತ ಆ ಮಹಾತಾಯಿಯು ಜಗನ್ನಾಥನು ಗಂಗಾಲಹರಿಯ ಕೊನೆಯ ಪದ್ಯವನ್ನು ಹಾಡಿದಾಗ 52ನೇಯ ಸೋಪಾನ ವನ್ನೇರಿ ತೆರೆ ತೋಳುಗಳಲ್ಲಿ ತನ್ನ ದುಃಖಾರ್ತ ಮಗುವನ್ನು ಎತ್ತಿಕೊಂಡು ಹೋಗಿ ಬಿಟ್ಟಳು. ಲವಂಗೀ ಸಹಿತ ಜಗನ್ನಾಥನು ಗಂಗೆಯಲ್ಲಿ ಜಲಸಮಾಧಿ ಹೊಂದಿದನು. ಪಂಢರೀ ನಾಥಾಚಾರ್ಯರ ಪುಸ್ತಕ ಓದುವುದಾದರೆ ಪಿಡಿಎಫ್ ಇಲ್ಲಿದೆ: bit.ly/gangaalahari