Shashank Muduri Column: ಪರಿಸರ ರಕ್ಷಣೆಯ ʼಹರಿಕಾರʼ !
ಪಶ್ಚಿಮ ಘಟ್ಟವನ್ನು ಕಾಪಾಡುವ ಕುರಿತು ಶಿಫಾರಸು ಮಾಡಿದ ಈ ವರದಿಯನ್ನು ವಿಶ್ವಸಂಸ್ಥೆಯ ಯುನೆಸ್ಕೋ ಗಂಭೀರವಾಗಿ ತೆಗೆದುಕೊಂಡಿತು ಮತ್ತು ಪಶ್ಚಿಮ ಘಟ್ಟಗಳ ಹಲವು ತಾಣಗಳನ್ನು ವಿಶ್ವ ಪರಂಪರೆ ತಾಣಗಳ ಪಟ್ಟಿಗೆ ಸೇರಿಸಿತು. ಆದರೆ, ಪಶ್ಚಿಮ ಘಟ್ಟಗಳು ಹರಡಿರುವ ಕೇರಳ ಮತ್ತು ಕರ್ನಾಟಕ ಸರಕಾರಗಳು ಆ ವರದಿಯನ್ನು ಪೂರ್ತಿಯಾಗಿ ಒಪ್ಪಲಿಲ್ಲ!
-
ಶಶಾಂಕ್ ಮುದೂರಿ
ಜನರು ನೆಮ್ಮದಿಯಿಂದ ಇರಬೇಕೆಂದರೆ, ಪರಿಸರವನ್ನು, ಪಶ್ಚಿಮ ಘಟ್ಟಗಳನ್ನು ಉಳಿಸಬೇಕು ಎಂಬ ಕಳಕಳಿ ಹೊಂದಿದ್ದ ಮಾಧವ ಗಾಡ್ಗೀಳರು, ತಮ್ಮ ಪರಿಸರ ಕಾಳಜಿಯಿಂದಲೇ ಹೆಸರಾದವರು. ಪಶ್ಚಿಮ ಘಟ್ಟಗಳ ಪ್ರಾಮುಖ್ಯತೆಯನ್ನು ಗುರುತಿಸಲೆಂದು ಅವರ ಅಧ್ಯಕ್ಷತೆಯಲ್ಲಿ ನಡೆದ ಅಧ್ಯಯ ನದ ಸಾರವನ್ನು 2011ರಲ್ಲಿ ಸಲ್ಲಿಸಲಾಯಿತು.
ಅದೇ ‘ಗಾಡ್ಗೀಳ್ ವರದಿ’! ಪಶ್ಚಿಮ ಘಟ್ಟವನ್ನು ಕಾಪಾಡುವ ಕುರಿತು ಶಿಫಾರಸು ಮಾಡಿದ ಈ ವರದಿ ಯನ್ನು ವಿಶ್ವಸಂಸ್ಥೆಯ ಯುನೆಸ್ಕೋ ಗಂಭೀರವಾಗಿ ತೆಗೆದುಕೊಂಡಿತು ಮತ್ತು ಪಶ್ಚಿಮ ಘಟ್ಟಗಳ ಹಲವು ತಾಣಗಳನ್ನು ವಿಶ್ವಪರಂಪರೆ ತಾಣಗಳ ಪಟ್ಟಿಗೆ ಸೇರಿಸಿತು. ಆದರೆ, ಪಶ್ಚಿಮ ಘಟ್ಟಗಳು ಹರಡಿರುವ ಕೇರಳ ಮತ್ತು ಕರ್ನಾಟಕ ಸರಕಾರಗಳು ಆ ವರದಿಯನ್ನು ಪೂರ್ತಿಯಾಗಿ ಒಪ್ಪಲಿಲ್ಲ!
ಬಹುಷಃ, ಇನ್ನು ಕೆಲವು ದಶಕಗಳ ನಂತರ, ನಮ್ಮ ಜನರು ಎದುರಿಸಬೇಕಾಗಬಹುದಾದ ಬಿಕ್ಕಟ್ಟು ಗಳನ್ನು ಕಂಡು, ‘ಛೆ, 21ನೆಯ ಶತಮಾನದ ಮೊದಲ ಭಾಗದಲ್ಲೇ ನಮ್ಮ ಕೈಗೆ ದೊರೆತ ಗಾಡ್ಗೀಳ್ ವರದಿಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿತ್ತು, ಅದರ ಕೆಲವು ಅಂಶಗಳನ್ನಾದರೂ ಅಳವಡಿಸಿದ್ದರೆ, ಈಗ ಇಂತಹ ದುಸ್ಥಿತಿ ಬರುತ್ತಿರಲಿಲ್ಲ’ ಎಂದು ಹೇಳಬೇಕಾದ ಸಂದರ್ಭ ಎದುರಾಗ ಲೂಬಹುದು!
ಇದನ್ನೂ ಓದಿ: Pavan Kumar Shirva Column: ದೇಗುಲನಗರಿ ಉಡುಪಿಯಲ್ಲಿ 253ನೆಯ ದ್ವೈವಾರ್ಷಿಕ ಪರ್ಯಾಯ ಸಂಭ್ರಮ !
‘ಗಾಡ್ಗೀಳ್ ವರದಿ’ಯಿಂದ ಬಹು ಪ್ರಸಿದ್ಧರಾದ ಮಾಧವ ಗಾಡ್ಗೀಳರು (24.5.1942 - 7.1.2026) ಜೀವನದುದ್ದಕ್ಕೂ ಪರಿಸರ ಮತ್ತು ಪ್ರಕೃತಿಯನ್ನೇ ಉಸಿರಾಡಿಕೊಂಡು ಬಂದವರು! ಬಾಲ್ಯದಲ್ಲೇ ಅವರಲ್ಲಿ ಪರಿಸರ ಕಾಳಜಿಯ ಬೀಜವನ್ನು ಬಿತ್ತಿದವರು ಅವರ ತಂದೆ! ಅವರ ತಂದೆಯವರಿಗೆ ಪಕ್ಷಿವೀಕ್ಷಣೆ ಎಂದರೆ ಇಷ್ಟ; ಬಾಲಕ ಮಾಧವನನ್ನೂ ಜತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಆ ದಿನಗಳಲ್ಲಿ, ಅವರಿಗೆ ಪಕ್ಷಿತಜ್ಞರಾದ ಸಲೀಂ ಆಲಿಯವರ ಸಾಂಗತ್ಯವಿತ್ತು. ಬಾಲಕ ಮಾಧವ ಗಾಡ್ಗೀಳರ ಪಕ್ಷಿ ವೀಕ್ಷಣೆಯ ಹವ್ಯಾಸಕ್ಕೆ ಮತ್ತು ಹೊಸ ಪಕ್ಷಿಗಳ ಗುರುತಿಸುವಿಕೆಗೆ ಸಲೀಂ ಆಲಿ ಯವರ ಮಾರ್ಗದರ್ಶನ ದೊರಕಿತ್ತು!
ಮಾಧವ ಗಾಡ್ಗೀಳರು ಪುಣೆಯಲ್ಲಿ ಜೀವಶಾಸ ಪದವಿ ಪಡೆದ ನಂತರ, ಮುಂಬೈನಲ್ಲಿ ಪ್ರಾಣಿಶಾಸ್ತ್ರದ ಸ್ನಾತಕೋತ್ತರ ಪದವಿ ಪಡೆದರು. ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪರಿಸರದ ಕುರಿತು ಪಿಎಚ್‌ಡಿ ಪದವಿ ಪಡೆದರು. ಅಮೆರಿಕದಲ್ಲಿ ಹಲವು ಉದ್ಯೋಗಾವಕಾಶಗಳು ಇದ್ದರೂ, ಭಾರತಕ್ಕೆ ಮರಳಿ ದರು.
ಎರಡು ವರ್ಷ ಪುಣೆಯಲ್ಲಿ ಸಂಶೊಧಕರಾಗಿ ವೃತ್ತಿ ನಿರ್ವಹಿಸಿ, 1973ರಲ್ಲಿ ಬೆಂಗಳೂರಿನ ಭಾರತೀ ಯ ವಿಜ್ಞಾನ ಸಂಸ್ಥೆಯನ್ನು (ಐಐಎಸ್‌ಸಿ) ಸೇರಿ, ‘ಪರಿಸರ ವಿಜ್ಞಾನ ಕೇಂದ್ರ’ವನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. 2004ರಲ್ಲಿ ನಿವೃತ್ತಿ ಹೊಂದಿ, ಪುಣೆಗೆ ಮರಳಿ, ಅಗರ್‌ಕರ್ ರಿಸರ್ಚ್ ಇನ್ಸ್ಟಿಟ್ಯೂಟ್‌ನೊಂದಿಗೆ ಗುರುತಿಸಿಕೊಂಡು, ಅಧ್ಯಯನ ಮತ್ತು ಸಂಶೋಧನೆಯನ್ನು ಮುಂದು ವರಿಸಿದರು.
ಗಾಡ್ಗೀಳ್ ವರದಿ
ಡಾ.ಗಾಡ್ಗೀಳ್ ಅವರ ಪ್ರಮುಖ ಕೊಡುಗೆಗಳಲ್ಲಿ ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಸಂಬಂಧಿಸಿದ ‘ಗಾಡ್ಗೀಳ್ ವರದಿ’ ಮಹತ್ವದ್ದು. ಕೇಂದ್ರ ಸರ್ಕಾರವು ನೇಮಿಸಿದ್ದ ‘ಪಶ್ಚಿಮ ಘಟ್ಟಗಳ ಪರಿಸರ ವಿಜ್ಞಾನ ತಜ್ಞರ ಸಮಿತಿ’ಯ ಅಧ್ಯಕ್ಷರಾಗಿ ಈ ವರದಿಯನ್ನು ತಯಾರಿಸಿ, ಪಶ್ಚಿಮ ಘಟ್ಟಗಳ 75% ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಲು ಶಿಫಾರಸು ಮಾಡಿದರು.
ಅವೈಜ್ಞಾನಿಕ ಗಣಿಗಾರಿಕೆ, ಪಶ್ಚಿಮ ಘಟ್ಟಗಳಲ್ಲಿ ಬೃಹತ್ ಅಣೆಕಟ್ಟುಗಳ ನಿರ್ಮಾಣ ಮತ್ತು ಪರಿಸರ ವಿರೋಧಿ ಕೈಗಾರಿಕೆಗಳನ್ನು ನಿಷೇಧಿಸುವಂತಹ ಕ್ರಮಗಳನ್ನು ಸೂಚಿಸಿದ್ದರಿಂದ, ಈ ವರದಿಯು ಕರ್ನಾಟಕ, ಕೇರಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ರಾಜಕೀಯ ಮತ್ತು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಮತ್ತು ವಿವಾದಗಳಿಗೆ ಕಾರಣವಾಯಿತು. ಜನರ ಮತಗಳ ಮೇಲೆ ಕಣ್ಣಿಟ್ಟ ರಾಜಕೀಯ ಪಕ್ಷಗಳು, ಗಾಡ್ಗೀಳ್ ವರದಿಯ ಶಿಫಾರಸುಗಳನ್ನು ಅವು ಇದ್ದಂತೆ ಜಾರಿ ಮಾಡಲು ಸಾಧ್ಯವಿಲ್ಲ ಎಂದೇ ತಗಾದೆ ಮಾಡಿದವು!
ಮಾಧವ ಗಾಡ್ಗೀಳರು ನೂರಾರು ಸಂಶೋಧನಾ ಪ್ರಬಂಧಗಳನ್ನು ಬರೆದಿದ್ದಾರೆ; ಹಲವು ಪುಸ್ತಕ ಗಳನ್ನು ರಚಿಸಿದ್ದಾರೆ. ಅವರ ಆತ್ಮಕಥೆ ‘ಎ ವಾಕ್ ಅಪ್ ದ ಹಿಲ್: ಲಿವಿಂಗ್ ವಿತ್ ಪೀಪಲ್ ಅಂಡ್ ನೇಚರ್’ ಬಹು ಪ್ರಸಿದ್ಧ; ಇದು‘ಏರುಘಟ್ಟದ ನಡಿಗೆ’ ಎಂಬ ಹೆಸರಿನಲ್ಲಿ ಕನ್ನಡಕ್ಕೂ ಅನುವಾದ ವಾಗಿದೆ.
ಗಾಡ್ಗೀಳ್ ಅವರು ಪರಿಸರ ಕ್ಷೇತ್ರದಲ್ಲಿ ಮಾಡಿದ ಸೇವೆಗಾಗಿ ಪದ್ಮಶ್ರೀ (1981) ಮತ್ತು ಪದ್ಮಭೂಷಣ (2006) ಪ್ರಶಸ್ತಿಗಳಿಗೆ ಭಾಜನರಾದರು. ಇತರ ಹಲವು ಗೌರವಗಳು ಅವರನ್ನು ಅರಸಿಕೊಂಡು ಬಂದಿವೆ; ಕ್ಯಾಲಿಫೋರ್ನಿಯಾ ಮೊದಲಾದ ವಿಶ್ವವಿದ್ಯಾಲಯಗಳ ಸಂದರ್ಶಕ ಪ್ರಾಧ್ಯಾಪಕ ರಾಗಿಯೂ ಸೇವೆ ಸಲ್ಲಿಸಿದ್ದಾರೆ.
2024ರಲ್ಲಿ ವಿಶ್ವಸಂಸ್ಥೆಯ ಅತ್ಯುನ್ನತ ಪರಿಸರ ಪ್ರಶಸ್ತಿಯಾದ ‘ಚಾಂಪಿಯನ್ಸ್ ಆಫ್ ದಿ ಅರ್ಥ್’ ಪ್ರಶಸ್ತಿಗೂ ಭಾಜನರಾಗಿದ್ದಾರೆ. ನಮ್ಮ ಪರಿಸರವನ್ನು ಕಾಪಾಡಿಕೊಳ್ಳಬೇಕು; ಪ್ರಕೃತಿ ಮತ್ತು ಪರಿಸರ ವನ್ನು ನಾಶ ಮಾಡಿ, ಅಭಿವೃದ್ಧಿ ಸಾಧಿಸಿದರೆ, ಅದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂಬುದು ಅವರ ಅಧ್ಯಯನದ ತಿರುಳು. ಮಾಧವ ಗಾಡ್ಗೀಳರ ನಿಧನದಿಂದಾಗಿ, ನಮ್ಮ ದೇಶದ ಪರಿಸರ ಅಧ್ಯಯನ ಕ್ಷೇತ್ರವು ಅಪಾರ ನಷ್ಟವನ್ನು ಅನುಭವಿಸಿದೆ.