ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕಪಿಗೆ ʼಚಪಲತೆʼ ಸಹಜಂ !

ಒಮ್ಮೊಮ್ಮೆ ಪ್ರವಾಸಿಗರೊಂದಿಗೆ ಹಲ್ಲು ಮಸಿಯುತ್ತ ಅವರನ್ನು ಹೆದರಿಸುತ್ತ ಅವರ ಮೇಲೆ ಪ್ರಭುತ್ವ ಸಾಧಿಸಲು ಹವಣಿಸುತ್ತವೆ. ಅಷ್ಟರಲ್ಲೇ ಜೊತೆಗಾರರೂ ಹಾಜರೂ! ಅಲ್ಲಿಂದ ಗುಹಾಂತರ ದೇವಾಲಯ, ಮ್ಯೂಸಿಯಂ, ಕಪ್ಪೆ ಆರೆಭಟ್ಟನ ಶಾಸನ, ರಂಗನಾಥ ಮಂದಿರ, ಭೂತನಾಥ ಟೆಂಪಲ್ ಎಂದೆಲ್ಲಾ ಬಂದ ಪ್ರವಾಸಿಗರ ಪ್ರಫುಲ್ಲ ಮನಸಿನಲ್ಲಿ ಈ ಕೋತಿಗಳು ಅವ್ಯಕ್ತ ಭಯವನ್ನಂತೂ ಹುಟ್ಟು ಹಾಕಿ ಬಿಡುತ್ತವೆ.

ಕಪಿಗೆ ʼಚಪಲತೆʼ ಸಹಜಂ !

-

Ashok Nayak
Ashok Nayak Jan 18, 2026 4:45 PM

ಶೀಲಾ.ಶಿ. ಗೌಡರ ಬಾದಾಮಿ

ಮನೆ ಸುತ್ತಮುತ್ತ ಮಂಗಗಳಿದ್ದರೆ, ಮನುಷ್ಯನಿಗೆ ನೆಮ್ಮದಿ ಇಲ್ಲ. ಮಂಗಗಳ ಚೇಷ್ಟೆ ಪುರಾತನವಾದುದು. ಅದನ್ನು ಕಂಡೇ, ಕವಿ ರನ್ನನು ಕಪಿಗೆ ಚಪಲತೆ ಸಹಜಂ ಎಂದಿರ ಬೇಕು.

ಬಾದಾಮಿಯಲ್ಲಿ ಕಾಣ ಸಿಗುವ ಮಂಗಗಳ ಕುರಿತು ಹೇಳಲೇಬೇಕು! ಅಲ್ಲಿನ ಬೃಹದಾಕಾರದ ಕೆಂಪು ಬಂಡೆಗಲ್ಲಿನ ಸೌಂದರ್ಯದ ವೈಭವಕ್ಕೆ ಸಚೇತನ ಆಭರಣಗಳು ಈ ಕೆಂಪುಮೂತಿಯ ಮಂಗಗಳು. ಈಗೀಗ ಇವುಗಳೊಟ್ಟಿಗೆ ಕಪ್ಪು ಮಂಗಗಳ ಸಂಖ್ಯೆಯೂ ಹೆಚ್ಚುತ್ತಿದೆ. ಬಂಗಾರದೊಟ್ಟಿಗೆ ಪ್ಲಾಟಿನಮ್ ಇದ್ದಂತೆ!

ಪ್ರವಾಸಿಗರು ಇಳಿಯುವ ಮೊದಲೇ, ‘ಇಲ್ಲಿ ಮಂಗಗಳು ಜಾಸ್ತಿ. ಕಿಟಕಿ ಕ್ಲೋಸ್ ಮಾಡಿಬಿಡಿ. ಅಲ್ಲಿ ಇಳಿಯುವಾಗ ಯಾವುದೇ ಬ್ಯಾಗು ಕೈಯಲ್ಲಿ ಹಿಡಿಬೇಡಿ. ಹೆಣ್ಣ ಮಕ್ಳು ನಿಮ್ಮ ವೆನಿಟಿ ಬ್ಯಾಗು , ಪರ್ಸು ಹುಶಾರು’ ಎಂದು ಹೇಳುತ್ತಲೇ ಪ್ರೇಕ್ಷಣೀಯ ಸ್ಥಳಗಳಿಗೆ ಕರೆದೊಯ್ಯುತ್ತಾರೆ.

ಗಾಡಿ ನಿಲ್ಲಿಸಿ ಬಾದಾಮಿಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಿದ್ದಂತೆ ನಿಮ್ಮ ಗಾಡಿಯ ಕ್ಯಾಬಿನ ಮೇಲೆ ಆಗಲೇ ಪ್ರತ್ಯಕ್ಷವಾಗಿ ಅತ್ತಿಂದಿತ್ತ ಓಡಾಡುತ್ತ ತನ್ನ ಅರಸುವ ಕಾರ್ಯಪ್ರಾರಂಭಿಸಿರುತ್ತವೆ! ಮಕ್ಕಳು , “ಮಂಗ...ಮಂಗ..!" ಎಂದು ಕೈಮಾಡುತ್ತಿರುವಾಗ ತಿಂಡಿ ಹುಡುಕುವ ಈ ತಿಂಡಿಪೋತಗಳು ಸಿಕ್ಕ ತಿಂಡಿಯ ಪೊಟ್ಟಣವನ್ನು ಕಸಿದು ಮಾಯವಾಗುತ್ತವೆ.

ಒಮ್ಮೊಮ್ಮೆ ಪ್ರವಾಸಿಗರೊಂದಿಗೆ ಹಲ್ಲು ಮಸಿಯುತ್ತ ಅವರನ್ನು ಹೆದರಿಸುತ್ತ ಅವರ ಮೇಲೆ ಪ್ರಭುತ್ವ ಸಾಧಿಸಲು ಹವಣಿಸುತ್ತವೆ. ಅಷ್ಟರಲ್ಲೇ ಜೊತೆಗಾರರೂ ಹಾಜರೂ! ಅಲ್ಲಿಂದ ಗುಹಾಂತರ ದೇವಾಲಯ, ಮ್ಯೂಸಿಯಂ, ಕಪ್ಪೆ ಆರೆಭಟ್ಟನ ಶಾಸನ, ರಂಗನಾಥ ಮಂದಿರ, ಭೂತನಾಥ ಟೆಂಪಲ್ ಎಂದೆಲ್ಲಾ ಬಂದ ಪ್ರವಾಸಿಗರ ಪ್ರಫುಲ್ಲ ಮನಸಿನಲ್ಲಿ ಈ ಕೋತಿಗಳು ಅವ್ಯಕ್ತ ಭಯವನ್ನಂತೂ ಹುಟ್ಟು ಹಾಕಿ ಬಿಡುತ್ತವೆ.

ಇದನ್ನೂ ಓದಿ: Monkey Fighting: ರೈಲು ಸಂಚಾರಕ್ಕೂ ಕೋತಿಗಳ ಕಾಟ; ಅಷ್ಟಕ್ಕೂ ಆಗಿದ್ದೇನು ಗೊತ್ತಾ? ವಿಡಿಯೊ ಇದೆ

ಇದು ಪ್ರವಾಸಿಗರ ಪಾಡಾದರೆ ಬಾದಾಮಿ ಪುರವಾಸಿಗಳ ಪಾಡೇನು? ಬೆಳಗಾದರೆ ಸಾಕು, ಹಿಂಡು ಹಿಂಡು ಮಂಗಗಳು ಸಂಸಾರ ಸಮೇತ ವಾಕಿಂಗ ಹೊರಟು ಬಿಡುತ್ತವೆ. ಬಿಲ್ಡಿಂಗಗಳ ಟೆರೆಸ್ ಮೇಲೆ ಓಡಾಡುತ್ತ, ಒಂದು ಮಾಳಿಗೆಯಿಂದ ಮತ್ತೊಂದಕ್ಕೆ ಜಂಪ್ ಹೊಡೆಯುತ್ತ, ಹೊಟ್ಟೆಯಲ್ಲಿ ಮರಿ ಗಳನ್ನು ಅವುಚಿಕೊಳ್ಳುತ್ತ, ಒಂದು ಅಡ್ಡ ರಸ್ತೆಯಿಂದ ಮತ್ತೊಂದು ಅಡ್ಡ ರಸ್ತೆಗೆ ಜಿಗಿಯುತ್ತ ಊರೆಲ್ಲ ಸುತ್ತುತ್ತವೆ.

ಬೆಳಗಿನ ಕೆಲಸಗಳಲ್ಲಿ ತಲ್ಲೀನವಾದ ಗೃಹಿಣಿಯರ ಕಣ್ಣು ತಪ್ಪಿಸಿ, ಯಾವುದೋ ಮಾಯದಲ್ಲಿ ಅಡುಗೆ ಮನೆ ನುಗ್ಗಿ ಕ್ಷಣಾರ್ಧದಲ್ಲಿ ಹಣ್ಣು ಹಂಪಲಗಳನ್ನ, ರೊಟ್ಟಿಗಳನ್ನ, ಕೈಗೆ ಸಿಕ್ಕ ತಿನಿಸು ಗಳನ್ನು ಹೊತ್ತು ಪರಾರಿಯಾಗುತ್ತವೆ. ಅವು ನೇರವಾಗಿ ಅಡುಗೆಮನೆಯನ್ನೇ ಹೇಗೆ ಅರಸುತ್ತವೆ ಎಂಬುದು ನನಗೊಂದು ಯಕ್ಷಪ್ರಶ್ನೆ!

ಚೀರುವ ಧ್ವನಿಗೆ ಬೆದರಿದ ಮಂಗ

ಯಾವುದಕ್ಕೂ ಹೆದರದ ಮಂಗಗಳು ಎಷ್ಟೋ ಬಾರಿ ನನ್ನ ಮತ್ತು ಮಗಳ ಬಾಯಿಗೆ ಹೆದರಿ ಎದ್ದೆನೋ-ಬಿದ್ದೆನೋ ಎಂದು ದಿಕ್ಕಾಪಾಲಾಗಿ ಓಡಿದ್ದಿದೆ. ಏನೋ ಆಯಿತೆಂದು ತುಂಬಾ ಟೆನ್ಶನ್‌ ನಲ್ಲಿ ಉಟ್ಟ ಲುಂಗಿಯನ್ನು ಎತ್ತಿಕಟ್ಟುತ್ತ ವೀರಾವೇಶದಲ್ಲಿ ಬಂದ ತಂದೆಯನ್ನು ನೋಡಿ ಓಡಿ ಹೋದ ಮಂಗನನ್ನು ತೋರಿಸುತ್ತ ನಗುವವನು ಮಗ. “ ಮಮ್ಮಿ ಸುಮ್ನ ಸಣ್ಣ ಹುಡುಗರಂಗ ಇಷ್ಟ ಬಾಯಿ ಮಾಡಿ ಎಲ್ಲಾರ್ನೂ ಗಾಬರಿ ಮಾಡಿಬಿಡತಾಳ ನೋಡ ಪಪ್ಪಾ" ಎನ್ನುವ ಮಗನ ಜೊತೆ, “ಯವ್ವಾ! ಮಮ್ಮಿ ಎಷ್ಟು ಜೋರ ಚೀರಿದಿ ಬೆ! ನಾನೂ ಏನ ಬಂತ ಅಂತ ಹೆದರಿ ನಿನಜೊತಿ ಚೀರಿ ಓಡಿದೆ.

ನೋಡ ನನ್ನ ಕಾಲು ಇನ್ನೂ ನಡಗಾಕತ್ತಾವು" ಎಂದು ಸೋ ಎನ್ನುವವಳು ಮಗಳು. ತಿನ್ನುವರಂತೆ ನೋಡುತ್ತಿರುವ ಪತಿಯನ್ನು ನೋಡಿ ನಗುತ್ತ, “ಏನ್ಮಾಡ್ಲಿರೀ ಹೆದರಿಕಿ ಬಂತು" ಎಂದು ನಗುವಿಗೆ ಮತ್ತಷ್ಟು ಎಕ್ಸಲೇಟರ್ ಕೊಡುವವಳು ನಾನು. ಮದುವೆಯಾಗಿ ಬಂದ ಹೊಸತರಲ್ಲಿ ನನ್ನ ಚೀರುವ ಧ್ವನಿಗೆ ಹೆದರಿ ಅಕ್ಕ ಪಕ್ಕದವರೂ ಓಡಿ ಬಂದು ಬೆಪ್ಪಾದ ನಂತರ ಅವರಿಗೆಲ್ಲ ಈಗ ನನ್ನ ಚೀರುವಿಕೆ ಮಂಗಗಳು ಬರುವ ಅಲಾಮ್ ಗಂಟೆ ಶಬ್ದ ದಂತಾಗಿದೆಯೇನೋ! ಈಗೀಗ ನಮ್ಮ ಹಿಂದಿನ ಮನೆಗೆ ಬಂದಿರುವ ಹೊಸ ಸೊಸೆ ನನ್ನ ಚೀರುವ ಪ್ರಕ್ರಿಯೆಗೆ ಸಾತ್ ನೀಡುತ್ತಿದ್ದಾಳೆ!

“ಮಂಗ್ಯಾಕ್ಕ ಇಷ್ಟು ಹೆದರಿದರ ನಾಳೆ ಹುಲಿ ಬಂದರ ಹೆಂಗವಾ?" ಎನ್ನುವರು ನನ್ನ ಅತ್ತೆ. ನಾನು “ಅಯ್ಯೋ ! ನಾ ಹುಲಿಗೆ-ಹಾವಿಗೆ ಅಂಜಗಿಲ್ಲರೀ! ಇವು ಮಂಗ್ಯಾ, ಇಲಿ... ಇಂತಾವು ನೋಡಿದ್ರ ಅಂಜತೇನಷ್ಟ! ಅದೂ ಅಂಜಂಗಿಲ್ಲ! ಅವು ಸುಮ್ ಸುಮ್ನ ಕಾಲಕಾಲಾಗ ಬರ್ತಾವು. ಅದಕ್ಕ ಇರಿಟೇಟ್ ಆಗತೇತಿ ಅಷ್ಟ" ಎಂದು ಮಾತಿನ ವರಸೆ ಬದಲಿಸುತ್ತೇನೆ.

ಭಾವ ಲಹರಿ

ಮೊದಮೊದಲು ಬೆಳ್ಳಂಬೆಳಿಗ್ಗೆ ಪಟಾಕಿಗಳ ಶಬ್ದ ಕೇಳಿದಾಗ ನಾ ಕಸಿವಿಸಿಗೊಳ್ಳುತ್ತಿದ್ದೆ. “ಇವತ್ತೇನು ಹಬ್ಬಿಲ್ಲ... ಹುಣವಿ ಇಲ್ಲಾ! ಪಟಾಕಿ ಯಾಕ?" ಎಂದು ಹೊರಬಂದು ನೋಡಿದರೆ ತಿಳಿಯ ತೊಡಗಿತು, ಇದು ಮಂಗಗಳನ್ನು ಓಡಿಸಲು ಮಾಡುತ್ತಿರುವ ಸಾಹಸವೆಂದು. ಸಂಡಿಗೆ ಭಾಗ್ಯವಿಲ್ಲ!

ಬಾದಾಮಿಗೆ ಸೂರ್ಯನ ಕೃಪೆ ಸಾಕಷ್ಟಿದ್ದರೂ ನಮಗೆ ಸಂಡಿಗೆ ಭಾಗ್ಯವಿಲ್ಲ ನೋಡಿ. ಮಾಳಿಗೆಯ ಮೇಲೆ ಏನನ್ನಾದರೂ ಒಣಹಾಕಿದರೆ ಹತ್ತು ನಿಮಿಷದಲ್ಲಿ ಮಾಳಿಗೆ ತುಂಬ ಸೂರು ಮಾಡಿ ಕಂಗಾಲು ಮಾಡುವ ಮಂಗಗಳನ್ನು ಓಡಿಸಲೆಂದೇ ಬಡಿಗೆಗಳು ಖಾಯಂ. ಮಂಗಗಳೊಂದಿಗೆ ಯುದ್ಧಮಾಡಿ ಸಂಡಿಗೆ ಮಾಡುವ ಬದಲು ತವರಿಗೆ ಹೋದಾಗ ಸಂಡಿಗೆ ಮಾಡಿಕೊಂಡೇ ಬರುವುದು ಉತ್ತಮ ಎನ್ನುವುದು ಬಾದಾಮಿ ಊರಿನ ಸೊಸೆಯಂದಿರ ಅಭಿಮತ. ತವರಿಗೆ ಹೋಗುವ ಮತ್ತೊಂದು ನೆವ ಸೊಸೆಗಾದರೆ, ಈಗಂತೂ ಬಸ್ ಚಾರ್ಜ ಉಚಿತ ಬಿಡು ಎನ್ನುವುದು ಅತ್ತಿಯ ಲೆಕ್ಕ.

“ಜಬ್ ಮಿಯಾ ಬೀಬಿ ರಾಜಿ, ಕ್ಯಾ ಕರೇಗಾ ಖಾಜಿ?" ಸಂಡಿಗೆ ಡಬ್ಬಿ ಹೊರುವ ಕೆಲಸ ಮಾತ್ರ ಭಾವ-ಮೈದುನರದು. ಸಂಡಿಗೆಯ ವಿಚಾರ ಬಿಡಿ, ಮನೆ ಬೀಗಹಾಕಿ ನೆಮ್ಮದಿಯಿಂದ ಹೊರಗೆ ಹೋಗು ವಂತಿಲ್ಲ, ನೆಮ್ಮದಿಯಿಂದ ಮಧ್ಯಾನ್ಹ ಮಲಗುವಂತಿಲ್ಲ. ಯಾವುದಾದರೂ ಮಾಯದಿಂದ ಸಡಿಲ ಗೊಂಡ ಕೊಂಡಿಯ ಕಿಟಿಕಿ ತೆಗೆದು, ಸೊಳ್ಳೆ ಪರದೆ ಕಿತ್ತು ಠಣ್ಣ! ಎಂದು ಒಳಗೆ ಜಿಗಿವ ಮರಿಕೋತಿಗಳ ಕೋತಿಯಾಟ ಮನೆಯನ್ನು ಅಲ್ಲೋಲಕಲ್ಲೋಲ ಮಾಡಿಬಿಡುತ್ತದೆ.

ಅಡುಗೆ ಮನೆಯ ಫ್ರಿಜ್ಜುಬಾಗಿಲು ತೆಗೆಯುವುದರಿಂದ ಹಿಡಿದು ಇಂಚಿಂಚನ್ನೂ ಶೋಧಿಸಿ, ಅರ್ಧ ತಿಂದು, ಅರ್ಧ ಚೆಲ್ಲಿ, ಬೆಡ್ ರೂಮಿನ ಬೆಡ್ ಮೇಲೆ ಲಾಗಾಹೊಡೆಯುತ್ತ ಗಲಾಟೆ ಎಬ್ಬಿಸಿದಾಗ ಪಕ್ಕದ ಮನೆಯಿಂದ ಎಚ್ಚರಿಕೆಯ ಕರೆಗಂಟೆ ಮೊಬೈಲ್‌ಗೆ. ಈ ತಾಪತ್ರಯಗಳಿಂದ ತಪ್ಪಿಸಿಕೊಳ್ಳ ಲೆಂದು ಈಗೀಗ ಬಾದಾಮಿಯ ಎಲ್ಲ ಮನೆಗಳಿಗೂ ಕಬ್ಬಿಣದ ಪಂಜರದ ದಿಗ್ಬಂಧನ.

ಮನೆಕಟ್ಟಿದ ಮೇಲೆ, ಎಲ್ಲಾ ಕಿಟಕಿಗಳಿಗೆ ಕಬ್ಬಿಣದ ಪಂಜರ ಮಾಡಿಸಲು ಮತ್ತೆ ಎರಡು-ಮೂರು ಲಕ್ಷ ಹೂಡಿಕೆ! ಕಬ್ಬಿಣದ ವೆಲ್ಡಿಂಗ್ ಶಾಪ್‌ನವನಿಗಂತೂ ಮಂಗಗಳೇ ದೇವರು. ಮಂಗಗಳ ಸಂತತಿ ಮತ್ತಷ್ಟು ಹೆಚ್ಚಲಿ, ಅವು ಊರಕಡೆಗೆ ಮತ್ತಷ್ಟು ಬರಲಿ ಎಂದು ದಿನವೂ ಬೇಡುವನೋ ಏನೋ!

ಮನೆಯ ಪಕ್ಕದ ಚಿಕ್ಕ ಕೈ ತೋಟದಲಿ ಅತ್ತೆ ಬೆಳೆಸಿದ ಅರಿಷಣ, ಕರಿಬೇವು, ನಿಂಬೆ, ಹೂವಿನ ಗಿಡಗಳು.... ಜೊತೆಗೆ ಪೇರಲ ನಳನಳಿಸುತ್ತಿದ್ದವು. ಗಿಡದಲ್ಲಿ ಪೇರಲ ಹಣ್ಣುಗಳು ಮೂಡ ತೊಡಗಿ ದಾಗ ಮಂಗಗಳು ಅತ್ತೆಯ ಬಡಿಗೆಗೂ ಬಗ್ಗಲಿಲ್ಲ. ಮಾಡುವ ಕೆಲಸ, ನಿದ್ದೆ, ಊಟ ಬಿಟ್ಟು ಮಂಗಗ ಳೊಡನೆ ಸೆಣಸಾಡಿ ಪೇರಲಹಣ್ಣುಗಳ ರಕ್ಷಣೆಗೆ ನಿಂತ ಅತ್ತೆಯ ಆರೋಗ್ಯ ಎಲ್ಲಿ ಕೆಡುವು ದೋ, ಎಲ್ಲಿ ಅವರು ಕಾಲು ಜಾರಿ ಬೀಳುವರೋ ಎಂದು ಪೇರಲಗಿಡವನ್ನೇ ನನ್ನ ನಾದಿನಿ ತೆಗೆಸಿ ಬಿಟ್ಟರು! ಪಾಪ! ಗಿಡಗಳನ್ನು ತುಂಬಾ ಪ್ರೀತಿಸುವ ಅತ್ತೆ ಸಿಕ್ಕಾಪಟ್ಟೆ ಮರುಗಿದರು.

ಮುಖ ನೋಡಿ ಮಣೆ?

ಬಾದಾಮಿಯ ಮಂಗಗಳೂ ತುಂಬಾ ಚುರುಕು. ಹೆದರುವವರನ್ನು ಕಂಡರೆ ಹೆದರಿಸುವವರು ಹೆಚ್ಚುತ್ತಾರೆ ಎಂಬ ಅನುಭವದ ನುಡಿ ಮಂಗಗಳಿಗೂ ಹೇಗೆ ತಿಳಿದಿದಿಯೋ. ಅವು ವ್ಯಕ್ತಿಯನ್ನು ನೋಡಿ ಕಾರ್ಯವೈಖರಿಯನ್ನು ಬದಲಿಸುತ್ತವೆ. ಸಾಮಾನ್ಯವಾಗಿ ಹೆಣ್ಣುಮಕ್ಕಳನ್ನು ಕಂಡರೆ ಕ್ಯಾರೇ ಎನ್ನದೇ ಮೈಮೇಲೆ ಎಗರಿ ಬ್ಯಾಗು ಕಸಿಯುವ ಮಂಗಗಳು, ಗಂಡಸರ ಉಸಾಬರಿಗೇ ಹೋಗುವುದಿಲ್ಲ. ಮಕ್ಕಳಂತೂ ಪಾಪ ಅಂಗಡಿಗೆ ಹೋಗಿ ತಮಗೆ ಬೇಕಾದ ತಿನಿಸುಗಳನ್ನು ತರುವುದಕ್ಕೆ ಹೆದರುತ್ತವೆ. “ಮೊದಲೆಲ್ಲ ಇಷ್ಟು ಮಂಗ್ಯಾ ಇದ್ದಿದ್ದಿಲ್ಲವಾ. ಬ್ಯಾರೆಬ್ಯಾರೆ ಊರಾನವರು ಮಂಗ್ಯಾನ್ನ ತಂದು ಬಾದಾಮಿ ಗುಡ್ಡದಾಗ ಬಿಟ್ಟ ಹೋಗ್ಯಾರಂತ!" ಎಂದು ಕಟ್ಟೆ ಪುರಾಣಗಳಲ್ಲಿ ಮಂಗನ ಪಾತ್ರವೂ ಇದ್ದೇ ಇರುತ್ತದೆ.

ಉಚಿತ ತಿಂಡಿ!

ಬಾದಾಮಿ-ಮಹಾಕೂಟವನ್ನು ಸುತ್ತುವರೆಯುವ ದೊಡ್ಡ ಬಂಡೆಗಲ್ಲುಗಳ ಗುಡ್ಡವು ಮನುಷ್ಯರ ಚಟುವಟಿಕೆಗಳಿಂದ ದೂರವಿದ್ದು, ಬಂಡೆಗಲ್ಲುಗಳ ಕೊರಕಲುಗಳು ಮಂಗಗಳಿಗೆ ಮಳೆ, ಬಿಸಿಲು, ಚಳಿಗಳಿಂದ ರಕ್ಷಣೆ ಕೊಡುವ ಆಲಯಗಳಾಗಿವೆ. ಬಾದಾಮಿಯ ಬೆಟ್ಟದ ಮೇಲೆ ಮತ್ತೊಂದು ಬಾದಾಮಿಯನ್ನೇ ನಿರ್ಮಿಸಬಹುದಾದಷ್ಟು ಸಮತಟ್ಟು ಜಾಗವಿದೆ.

ವಿವಿಧ ಭಂಗಿಗಳಲ್ಲಿ ನಿಂತ ಬಂಡೆಗಲ್ಲುಗಳು ನೈಸರ್ಗಿಕ ಶಿಲಾಬಾಲಕಿಯರೇ ಸರಿ. ಇದು ನಿಸರ್ಗ ನಿರ್ಮಿತ ‘ರಾಕ್ ಗಾರ್ಡನ್’. ಗುಡ್ಡದ ಮೇಲೆ ವಿವಿಧ ಗಿಡಗಳು, ನೀರಿನ ಹೊಂಡಗಳು, ಮಂಗಗಳ ಹಿಂಡುಗಳು ಮತ್ತೊಂದು ಲೋಕವನ್ನೇ ಅನಾವರಣ ಮಾಡುತ್ತವೆ.

ಕರೋನಾದ ಭಯಾವರಿಸಿದ ಆ ದಿನಗಳಲ್ಲಿ ಎಷ್ಟೋ ಜನ ಮತ್ತು ಸರಕಾರವೂ ಮಂಗಗಳನ್ನೂ ಮರೆಯಲಿಲ್ಲ. ಮಂಗಗಳಿಗಾಗಿ ಬಾಳೆಹಣ್ಣುಗಳು, ಬಿಸ್ಕೆಟ್‌ಗಳು ಅಂದು ರವಾನೆಯಾಗಿದ್ದವು!

ಮಂಗಗಳಿಗೆ ಸರಕಾರವೇ ಉಚಿತ ತಿಂಡಿ ಎಂದಾದರೂ ನೀಡಿದ್ದರೆ, ಅದು ಕರೋನಾ ಲಾಕ್‌ಡೌನ್‌ ನಲ್ಲೇ ಇರಬೇಕು! ವಾತಾಪಿಯ ಮಂಗಗಳೆಂದರೆ ಅವು ಯಾರದೋ ಕೆಲವು ಮನೆಯ ಸಾಕು ಪ್ರಾಣಿಗಳಂತಲ್ಲ. ಅವು ಸಂಪೂರ್ಣ ಮನೆಮಕ್ಕಳಂತೆ. ವಾರಸುದಾರರಂತೆ! ಅವು ‘ಬರೀ ಮಂಗಗಳ ಲ್ಲೋ ಅಣ್ಣ! ವಾತಾಪಿಯ ಅಸ್ಮಿತೆ’! ಇತ್ತೀಚಿಗೆ ಇಲ್ಲಿ ಕಪ್ಪು ಮೂತಿ ಮಂಗಗಳ ಸಂಖ್ಯೆಯೂ ಹೆಚ್ಚುತ್ತಿದೆ.

ದೈಹಿಕವಾಗಿ ಕೆಂಪು ಮಂಗಗಳಿಗಿಂತ ಬಲಿಷ್ಟವಾಗಿರುವ ಇವು ಗಂಭೀರವಾಗಿರುತ್ತವೆ. ಕೆಂಪು ಮಂಗ ಗಳು ತಮ್ಮ ತುಂಟುತನದಿಂದ ನಮಗೆ ಆತ್ಮೀಯವೆನಿಸಿದರೆ, ಕಪ್ಪು ಮಂಗಗಳು ತಮ್ಮ ಗಾತ್ರದಿಂದ ಭಯಹುಟ್ಟಿಸುತ್ತವೆ. ಬಾದಾಮಿಯ ಕಪ್ಪು ಮಂಗಗಳಿಗೆ ಕೆಂಪು ಮಂಗಗಳ ಮೇಲೆ ಹೊಟ್ಟೆ ಕಿಚ್ಚಿರಲೂಬಹುದು.

ಮಂಗಗಳ ಮಂಗನಾಟವನ್ನು ನೋಡುವುದಂತೂ ಮಕ್ಕಳಿಗೆ ಬಲು ಪ್ರಿಯ. ರಜೆಯಲ್ಲಿ ಮೊಮ್ಮಕ್ಕಳು ಬಂಧುಗಳನ್ನು, ಅಜ್ಜ- ಅಜ್ಜಿಯರನ್ನು ಭೇಟಿಯಾಗಲು ಬರುವುದಕ್ಕಿಂತ ಮಂಗ ಗಳನ್ನು ನೋಡಿ ಖುಶಿಪಡಲು ಬರುತ್ತಾರೆ. ಬಹುತೇಕ ಅಂಶಗಳಲ್ಲಿ ಮನುಷ್ಯರನ್ನು ಹೋಲುವ ಅವುಗಳ ಮಕ್ಕಳೊಂದಿಗೆ ಆಟ, ಎತ್ತರದ ಬಿಲ್ಡಿಂಗ್‌ಗಳನ್ನು ಏರಿ ಕಿಟಕಿಯ ಅಂಚುಗಳನ್ನು ಹಿಡಿದು ಬೀಳದೆ ದಾಟುವ ಸಾಹಸ, ಮರಿಗಳ ದೇಹದ ಹೇನು ಹುಡುಕುವ ಕಲೆ, ವಾಹನಗಳ ಕನ್ನಡಿಯಲ್ಲಿ ಸೌಂದರ್ಯ ಸವಿಯುವ ಪರಿ, ಹಾಗೇ ವಾಹನಗಳ ಸೀಟಿನ ಕವರ ಕಿತ್ತು ಹಾಕಿ ಚಿನ್ನಾಟವಾಡುವ ಮಂಗಗಳು ಕೆಲವುಸಲ ಸಿಟ್ಟುಬರುವಂತೆ ಮಾಡಿದರೆ, ಕೆಲವೊಮ್ಮೆ ಅಚ್ಚರಿ. ವೈರ್‌ಗಳಿಗೆ ಜೋತು ಬಿದ್ದು ಟ್ರಾಫಿಕನ್ ರಸ್ತೆಗಳನ್ನು ದಾಟುವ ಅವುಗಳ ಕೌಶಲ್ಯವನ್ನು ನಾನೇ ಎಷ್ಟೋ ಬಾರಿ ಬೆಕ್ಕಸ ಬೆರಗಾಗಿ ನೋಡುತ್ತ ನಿಂತದ್ದಿದೆ.

ಕಬ್ಬಿಣದ ಸರಳುಗಳ ಹಿಂದಿನಿಂದ ಮಂಗಗಳ ಚಲನವಲನಗಳನ್ನು ಆನಂದಿಸುವ ನಾನು, ನನ್ನ ಮಗಳು ಟೋಪಿ ಮಾರುವವನ ಕತೆ, ಮರದ ಮೇಲೆ ಹೃದಯ ಬಿಟ್ಟುಬಂದ ಕೋತಿ ಮತ್ತು ಮೊಸಳೆ ಯ ಕತೆ, ಕೆಟ್ಟದ್ದನ್ನು ಕೇಳದ, ನೋಡದ, ಮಾತನಾಡದ ಮೂರು ಕೋತಿಗಳು, ಹಾಲು ಮಾರುವ ಮಂಗಮ್ಮನ ಕತೆಗಳ ಚಿತ್ರಗಳನ್ನು ಚಿತ್ತಭಿತ್ತಿಯಲ್ಲಿ ಕಲ್ಪಿಸುತ್ತಿರುತ್ತೇವೆ.

ಬಾದಾಮಿಯಲ್ಲಿ ಮಂಗಗಳಿಲ್ಲದ ಜಾಗೆಗಳೇ ಇಲ್ಲ. ಬಸ್ ನಿಲ್ದಾಣ, ರೈಲು ನಿಲ್ದಾಣಗಳಲ್ಲೂ ಪ್ರಯಾಣಿಕರ ತಿಂಡಿ ಚೀಲಗಳನ್ನು ಹಾರಿಹೊಡೆಯುವ ಹುನ್ನಾರದಲ್ಲಿ ಅವಿತು ಕುಳಿತು, ದಿಡೀರ್ ಜಿಗಿದು ಓಡಿ ಹೋಗುವ ಮಂಗಳು ತಮ್ಮ ಚಲನಶೀಲತೆಗೆ ಪ್ರಸಿದ್ಧವಾಗಿವೆ.

ಕಪಿಚೇಷ್ಟೆ ಮಾಡುವ ಮಕ್ಕಳಿಗೆ “ನಿಮಗ ಬಾಲ ಒಂದ ಇಲ್ಲನೋಡ್ರಿ! “ ಎಂದು ಬಹಳ ಸಾರಿ ನಾನೇ ಬಯ್ದದುಂಟು. “ಕಪಿಗೆ ಚಪಲತೆ ಸಹಜಂ" ಎಂದು ರನ್ನನಿಗೂ ಕೂಡ ಕಪಿಯ ಚಪಲತೆ ಕಾಡಿದ್ದುಂಟು. ಕಪಿಯು ಕೋಡಗನಾಗಿ ಶಿಶುನಾಳ ಶರೀ-ರ ತತ್ವ ಪದದಲ್ಲಿ ಕೋಳಿಗೆ ಆಹುತಿ ಯಾಗುತ್ತದೆ. ಅಲ್ಲಮ ಪ್ರಭುಗಳ ವಚನದಲ್ಲೂ ಆಡಾಡುತ ಬರುವ ಕೋಡಗವು ಜಪವಮಾಡುವ ತಪಸ್ವಿಯನ್ನೇ ನುಂಗುತ್ತದೆ!

ಅತಿರೇಕದ ಆಟ

ತನ್ನಾಟಗಳಿಂದ ಜನರನ್ನೇ ಮಂಗನನ್ನಾಗಿ ಮಾಡುವ ಈ ಮಂಗಗಳ ಮಂಗನಾಟ ಹಲವು ಬಾರಿ ಅತಿರೇಕವಾಗಿಬಿಡುತ್ತದೆ. ಒಂಟಿಯಾಗಿ ಓಡಾಡುವ ಜನರನ್ನು ಕಚ್ಚುವ ಮೂಲಕ, ವಾಹನಗಳ ಮೇಲೆ ಜಿಗಿದು ಬೀಳಿಸುವ ಮೂಲಕ ಟಿ.ವಿ ಸುದ್ದಿಗಳಲ್ಲಿ ಸುದ್ದಿಕೂಡ ಮಾಡುತ್ತವೆ.

ನಾ ಚಿಕ್ಕವಳಿದ್ದಾಗ ಮಂಗ, ಆನೆ, ನಾಯಿಗಳು ಪ್ರಮುಖಪಾತ್ರ ವಹಿಸುವ ಚಲನಚಿತ್ರಗಳನ್ನು ತುಂಬಾ ಇಷ್ಟ ಪಡುತ್ತಿದ್ದೆ. ಅದರಲ್ಲಿ ಸಾಕಿದ ಮಂಗಕ್ಕೆ ಚಂದ ಚಂದದ ಬಟ್ಟೆ ಹೊಲಿದು, ಬಣ್ಣದ ಅಂಗಿಗಳನ್ನು ಹಾಕಿ ಹಾಸ್ಯಭರಿತ ಚಲನಚಿತ್ರಗಳನ್ನು ಮಾಡಿ, ಅವುಗಳ ಜಾಣ್ಮೆ, ಕೌಶಲಗಳನ್ನು ಮನಮುಟ್ಟುವಂತೆ ತೋರಿಸುತ್ತಿದ್ದ ಸೀನುಗಳನ್ನು ಕಂಡು ನಗುತ್ತಿದ್ದೆವು.

ಬೇಬಿ ಶ್ಯಾಮಿಲಿಯ ಚಲನಚಿತ್ರಗಳು, ಹಿಂದಿಯಲ್ಲಿ ಇಷ್ಕ...ಒಂದೇ-ಎರಡೇ! ಇವೆಲ್ಲ ಸಕಾರಾತ್ಮಕ ಬಾವನೆಗಳಿಂದ ಜೀವನಕ್ಕೆ ಉತ್ಸಾಹ ತುಂಬುವಂತವು.

“ಮಮ್ಮಿ , ಮಂಗ್ಯಾ ಟೆರೆಸ ಮ್ಯಾಲೆ ಸೋಲಾರ್ ನೀರಿನ ಪೈಪ್ ಹಿಡಕೊಂಡ ಆಡಾಕತ್ತಾವಂತ. ಹೊಡಿಯೋಣ ಬಾ" ಮಗಳ ಕರೆ. ಮಂಗಗಳನ್ನು ಕಂಡರೆ ಮಾರುದ್ದ ಜಿಗಿಯುವ ನಾನು ಈಗ ಮಗ ನನ್ನು ಹುಡುಕಬೇಕು. ಬರಲಾ?