ಜಂಬಗಾ (ಬಿ) ರೈತನ ಈರುಳ್ಳಿಗೆ ಥೈಲ್ಯಾಂಡ್ನಲ್ಲೂ ಬೇಡಿಕೆ: ಬರದ ನೆಲದಲ್ಲಿ ಈರುಳ್ಳಿ ‘ಭರಪೂರ’ ಇಳುವರಿ
ಎರಡು ಎಕರೆ ಜಮೀನನ್ನು ಲೀಜ್ಗೆ ಪಡೆದುಕೊಂಡು ಕೃಷಿ ಆರಂಭಿಸಿದ ಶ್ರೀಕಾಂತ್, ಕೇವಲ ಮೂರು ಕೆ.ಜಿ. ಈರುಳ್ಳಿ ಬೀಜ ಬಿತ್ತನೆ ಮಾಡಿದ್ದಾರೆ. ನಾಲ್ಕು ತಿಂಗಳ ನಿರಂತರ ಶ್ರಮದ ಬಳಿಕ ಇದೀಗ ಜಮೀನಿ ನಲ್ಲಿ 80ರಿಂದ 100 ಕ್ವಿಂಟಾಲ್ವರೆಗೆ ಇಳುವರಿ ನಿರೀಕ್ಷಿಸಿದ್ದಾರೆ. ಕಡಿಮೆ ಪ್ರಮಾಣದ ಬೀಜದಿಂದ ಇಷ್ಟೊಂದು ಪ್ರಮಾಣದ ಉತ್ಪಾದನೆ ಸಾಧ್ಯವಾಗಿರುವುದು ರೈತರ ವಲಯದಲ್ಲಿ ಕುತೂಹಲ ಮೂಡಿಸಿದೆ.
-
ಕಲಬುರಗಿ: ಮಳೆ ಕೈಕೊಟ್ಟಿದೆ. ನೀರಿನ ಲಭ್ಯತೆಯೂ ಕಡಿಮೆಯಾಗಿದೆ. ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ ಕೃಷಿ ಕೈಬಿಡದೆ, ಲಭ್ಯವಿರುವ ನೀರನ್ನು ಸಮರ್ಪಕವಾಗಿ ಬಳಸಿಕೊಂಡು ಜಂಬಗಾ (ಬಿ) ಗ್ರಾಮದ ರೈತ ಶ್ರೀಕಾಂತ್ ಈರುಳ್ಳಿ ಬೆಳೆ(Onion Crop)ಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.
ಎರಡು ಎಕರೆ ಜಮೀನನ್ನು ಲೀಜ್ಗೆ ಪಡೆದುಕೊಂಡು ಕೃಷಿ ಆರಂಭಿಸಿದ ಶ್ರೀಕಾಂತ್, ಕೇವಲ ಮೂರು ಕೆ.ಜಿ. ಈರುಳ್ಳಿ ಬೀಜ ಬಿತ್ತನೆ ಮಾಡಿದ್ದಾರೆ. ನಾಲ್ಕು ತಿಂಗಳ ನಿರಂತರ ಶ್ರಮದ ಬಳಿಕ ಇದೀಗ ಜಮೀನಿನಲ್ಲಿ 80ರಿಂದ 100 ಕ್ವಿಂಟಾಲ್ವರೆಗೆ ಇಳುವರಿ ನಿರೀಕ್ಷಿಸಿದ್ದಾರೆ. ಕಡಿಮೆ ಪ್ರಮಾಣದ ಬೀಜದಿಂದ ಇಷ್ಟೊಂದು ಪ್ರಮಾಣದ ಉತ್ಪಾದನೆ ಸಾಧ್ಯವಾಗಿರುವುದು ರೈತರ ವಲಯದಲ್ಲಿ ಕುತೂಹಲ ಮೂಡಿಸಿದೆ.
ಕೃಷಿಗೆ ಅಗತ್ಯವಾದ ನೀರಿಗಾಗಿ ಪಕ್ಕದ ಜಮೀನಿನಿಂದ ನೀರು ಪಡೆದು ರೈನ್ಪೈಪ್ ಮೂಲಕ ನೀರಾವರಿ ವ್ಯವಸ್ಥೆ ರೂಪಿಸಿಕೊಂಡಿದ್ದಾರೆ. ಮಳೆನೀರನ್ನೇ ಅವಲಂಬಿಸದೆ, ಲಭ್ಯವಿರುವ ನೀರನ್ನು ಮಿತವಾಗಿ ಬಳಸಿಕೊಂಡು ಬೆಳೆ ನಿರ್ವಹಣೆ ಮಾಡಿದ್ದಾರೆ. ಕೃಷಿ ಚಟುವಟಿಕೆಗಳಿಗೆ ಒಟ್ಟು ₹70ರಿಂದ ₹80 ಸಾವಿರದಷ್ಟು ವೆಚ್ಚವಾಗಿದೆ.
ಇದನ್ನೂ ಓದಿ: Benefits of Spring Onions: ಈರುಳ್ಳಿ ಸೊಪ್ಪು: ರುಚಿ, ಘಮ, ಸತ್ವಗಳ ಸಂಗಮ
ಈರುಳ್ಳಿ ಬೆಳೆ ಕೊಯ್ಲಿನ ಹಂತಕ್ಕೆ ಬಂದಿರುವ ಬೆನ್ನಲ್ಲೇ ಶ್ರೀಕಾಂತ್ ಅವರ ಉತ್ಪನ್ನಕ್ಕೆ ಮಾರುಕಟ್ಟೆ ಯಿಂದಲೂ ವಿಶೇಷ ಬೇಡಿಕೆ ಬಂದಿದೆ. ಬೀಜ ಉತ್ಪಾದನೆ ಉದ್ದೇಶಕ್ಕಾಗಿ ಈರುಳ್ಳಿ ಖರೀದಿಸಲು ಕಂಪನಿಯೊಂದು ಆಸಕ್ತಿ ತೋರಿಸಿದ್ದು, ಪ್ರತಿ ಕ್ವಿಂಟಾಲ್ಗೆ ₹5 ಸಾವಿರ ದರ ನಿಗದಿಪಡಿಸಿದೆ. ಇದರಿಂದ ಸಾಮಾನ್ಯ ಮಾರುಕಟ್ಟೆ ಮಾರಾಟಕ್ಕಿಂತ ವಿಭಿನ್ನ ಅವಕಾಶ ರೈತನ ಮುಂದಾಗಿದೆ.
ಕಲಬುರಗಿಯಲ್ಲಿ ಬೆಳೆಯುವ ಈರುಳ್ಳಿ ಇದೀಗ ಜಿಲ್ಲೆಯ ಗಡಿ ದಾಟಿ ವಿದೇಶಿ ಮಾರುಕಟ್ಟೆಯತ್ತ ಹೆಜ್ಜೆ ಇಟ್ಟಿದೆ. ಕಲಬುರಗಿಯಿಂದ ಔರಂಗಾಬಾದ್ ಮಾರ್ಗವಾಗಿ ಥೈಲ್ಯಾಂಡ್ಗೆ ಈರುಳ್ಳಿ ರವಾನೆಯಾಗುತ್ತಿದೆ. ಸ್ಥಳೀಯವಾಗಿ ಬೆಳೆಯುವ ಕೃಷಿ ಉತ್ಪನ್ನಕ್ಕೂ ಅಂತಾರಾಷ್ಟ್ರೀಯ ಬೇಡಿಕೆ ಸೃಷ್ಟಿಯಾಗಬಹುದು ಎಂಬುದಕ್ಕೆ ಇದು ಉದಾಹರಣೆಯಾಗಿದೆ.
ಬರದ ಕಾರಣದಿಂದ ಕೃಷಿಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿರುವ ರೈತರ ನಡುವೆ ಶ್ರೀಕಾಂತ್ ಅವರ ಪ್ರಯತ್ನ ಗಮನ ಸೆಳೆಯುತ್ತಿದೆ. ಜಮೀನು ಸ್ವಂತದ್ದಾಗಿರದಿದ್ದರೂ ಲೀಜ್ಗೆ ಪಡೆದು, ಸೀಮಿತ ನೀರಿನ ಸಂಪನ್ಮೂಲ ಬಳಸಿ, ಕಡಿಮೆ ಪ್ರಮಾಣದ ಬೀಜದಿಂದ ಉತ್ತಮ ಇಳುವರಿ ಪಡೆಯುವ ಮೂಲಕ ಕೃಷಿಯಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ.
ಕೃಷಿಯಲ್ಲಿ ಲಾಭ ಪಡೆಯಲು ದೊಡ್ಡ ಪ್ರಮಾಣದ ಭೂಮಿ ಅಥವಾ ಅಪಾರ ಬಂಡವಾಳವೇ ಬೇಕೆಂದಿಲ್ಲ; ಲಭ್ಯವಿರುವ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಸಿಕೊಂಡು ಬೆಳೆ ಆಯ್ಕೆ ಮತ್ತು ನಿರ್ವಹಣೆಗೆ ಆದ್ಯತೆ ನೀಡಿದರೆ ಬರದ ನಡುವೆಯೂ ಫಲ ಪಡೆಯಬಹುದು ಎಂಬ ಸಂದೇಶವನ್ನು ಜಂಬಗಾ (ಬಿ) ಗ್ರಾಮದ ಶ್ರೀಕಾಂತ್ ಅವರ ಈ ಪ್ರಯತ್ನ ನೀಡಿದೆ.
ಕಡಿಮೆ ನೀರಿನಲ್ಲಿ ಕೃಷಿ ಪ್ರಯೋಗ: ಬರಪೀಡಿತ ಪ್ರದೇಶದಲ್ಲಿ ನೀರಿನ ಬಳಕೆಯೇ ದೊಡ್ಡ ಸವಾಲು. ಆದರೆ ರೇನ್ಪೈಪ್ ಮೂಲಕ ನೀರನ್ನು ನೇರವಾಗಿ ಬೆಳೆ ಪ್ರದೇಶಕ್ಕೆ ತಲುಪಿಸುವ ವ್ಯವಸ್ಥೆ ಮಾಡಿಕೊಂಡಿರುವುದು ಶ್ರೀಕಾಂತ್ ಅವರ ಪ್ರಯೋಗದ ಪ್ರಮುಖ ಅಂಶ. ನೀರಿನ ಪೋಲು ತಪ್ಪಿಸುವ ಕ್ರಮದೊಂದಿಗೆ ಬೆಳೆ ನಿರ್ವಹಣೆ ಮಾಡಿರುವುದು ಸೀಮಿತ ಸಂಪನ್ಮೂಲದ ರೈತರಿಗೆ ಗಮನಾರ್ಹ ಮಾದರಿಯಾಗಿದೆ.
ಸ್ಥಳೀಯ ಬೆಳೆಗೆ ಜಾಗತಿಕ ಮಾರುಕಟ್ಟೆ: ಕಲಬುರಗಿ ಜಿಲ್ಲೆಯ ಕೃಷಿ ಉತ್ಪನ್ನಗಳಿಗೆ ಹೊರಗಿನ ಮಾರುಕಟ್ಟೆ ಸಂಪರ್ಕ ಸಿಕ್ಕರೆ ರೈತರ ಆದಾಯದ ಅವಕಾಶಗಳು ವಿಸ್ತರಿಸಬಹುದು. ಶ್ರೀಕಾಂತ್ ಅವರ ಈರುಳ್ಳಿ ಬೀಜೋತ್ಪಾದನೆ ಉದ್ದೇಶದ ಖರೀದಿಗೆ ಕಂಪನಿ ಮುಂದಾಗಿರುವುದು ಮೌಲ್ಯ ವರ್ಧಿತ ಕೃಷಿಯ ಸಾಧ್ಯತೆಯನ್ನು ತೋರಿಸಿದೆ. ಸ್ಥಳೀಯ ಉತ್ಪನ್ನಕ್ಕೆ ಗುಣಮಟ್ಟ ಮತ್ತು ನಿರಂತರ ಪೂರೈಕೆ ದೊರೆತರೆ ಅಂತಾರಾಷ್ಟ್ರೀಯ ಬೇಡಿಕೆಯೂ ಹೆಚ್ಚುವ ಸಾಧ್ಯತೆ ಇದೆ.
![]()
ಮಳೆ ಕೊರತೆಯಿದ್ದರೂ ನೀರನ್ನು ಸಮರ್ಪಕವಾಗಿ ನಿರ್ವಹಿಸಿ ಈರುಳ್ಳಿ ಬೆಳೆ ಬೆಳೆಸಿದ್ದೇನೆ. ನಾಲ್ಕು ತಿಂಗಳ ಶ್ರಮಕ್ಕೆ ಉತ್ತಮ ಪ್ರತಿಫಲ ಸಿಗುವ ನಿರೀಕ್ಷೆಯಿದೆ. ನನ್ನ ಬೆಳೆಗೆ ಹೊರರಾಜ್ಯ ಮಾತ್ರವಲ್ಲ, ವಿದೇಶದಲ್ಲೂ ಬೇಡಿಕೆ ಬಂದಿರುವುದು ಸಂತಸ ತಂದಿದೆ.
- ರೈತ ಶ್ರೀಕಾಂತ್, ಈರುಳ್ಳಿ ಬೆಳೆಗಾರ