Dr N Someshwara Column: ಸಾವಿಗೆ ಸವಾಲು ಹಾಕಿ ಗೆದ್ದ ವಿಜ್ಞಾನಿಗಳು !
ವೇದಕಾಲದ ಋಷಿಗಳಿಗೆ ಯಾವುದೋ ಒಂದು ಕ್ಷಣದಲ್ಲಿ ಹೇಗೆ ನಿರ್ದಿಷ್ಟ ಮಂತ್ರವು ಸುರಿಸು ತ್ತದೆಯೋ, ಹಾಗೆಯೇ ವಿಜ್ಞಾನಿಗಳಿಗೂ ಪರಿಹಾರವು ಮಿಂಚಿನಂತೆ ಹೊಳೆಯುತ್ತದೆ. ಅಂಥ ಮಿಂಚಿನ ಹೊಳಹು ‘ಹೃದಯದ ಗತಿನಿಯಂತ್ರಕ’ದ (ಕಾರ್ಡಿಯಾಕ್ ಪೇಸ್ ಮೇಕರ್) ಆವಿಷ್ಕಾರಕ್ಕೆ ಅನುವು ಮಾಡಿಕೊಟ್ಟ ಕಥೆಯು ರೋಚಕವಾಗಿದೆ.
-
ಹಿಂದಿರುಗಿ ನೋಡಿದಾಗ
ಯುರೇಕಾ’ ಎಂದರೆ ‘ನಾನು ಕಂಡುಕೊಂಡೆ’ ಎಂದರ್ಥ. ವಿಜ್ಞಾನದಲ್ಲಿ ಬಹುಕಾಲದ ಸಮಸ್ಯೆಗೆ ಉತ್ತರವೊಂದು ಮಿಂಚಿನಂತೆ ಹೊಳೆಯುವ ಕ್ಷಣವನ್ನು ‘ಯುರೇಕಾ’ ಅಥವಾ ‘ಮಿಂಚಿನ ಹೊಳಹು’ ಎನ್ನಬಹುದು. ಆರ್ಕಿಮಿಡೀಸನು ಪ್ಲವನತೆಯ (ಬಾಯನ್ಸಿ) ತತ್ತ್ವ ವನ್ನು ಕಂಡುಹಿಡಿದದ್ದು, ನ್ಯೂಟನ್ ಗುರುತ್ವಾಕರ್ಷಣೆಯ ನಿಯಮವನ್ನು ಕಂಡು ಕೊಂಡದ್ದು, ಕೆಕುಲೆ ಬೆಂಜ಼ೀನ್ ರಚನೆಯನ್ನು ಕಲ್ಪಿಸಿಕೊಂಡದ್ದು, ಅಲೆಗ್ಸಾಂಡರ್ ಫ್ಲೆಮಿಂಗ್ ಪೆನಿಸಿಲಿನ್ ಅನ್ನು ಗುರುತಿಸಿದ್ದು ಇಂಥ ಮಿಂಚಿನ ಹೊಳಹುಗಳಿಂದಲೇ! ಅಂಥ ಮತ್ತೊಂದು ಹೊಳಹನ್ನು ಈಗ ನೋಡೋಣ.
ಒಬ್ಬ ವಿಜ್ಞಾನಿಯ ಬದುಕಿನಲ್ಲಿ ಯುರೇಕಾ ಕ್ಷಣಗಳು ಕೇವಲ ಅದೃಷ್ಟದಿಂದ ಬರುವುದಿಲ್ಲ. ಅವರು ಆ ವಿಷಯದ ಬಗ್ಗೆ ತಿಂಗಳುಗಟ್ಟಲೆ ಅಥವಾ ವರ್ಷಗಟ್ಟಲೆ ನಿರಂತರವಾಗಿ ಚಿಂತನ-ಮಂಥನವನ್ನು ನಡೆಸಿರಬೇಕಾಗುತ್ತದೆ.
ವೇದಕಾಲದ ಋಷಿಗಳಿಗೆ ಯಾವುದೋ ಒಂದು ಕ್ಷಣದಲ್ಲಿ ಹೇಗೆ ನಿರ್ದಿಷ್ಟ ಮಂತ್ರವು ಸುರಿಸುತ್ತದೆಯೋ, ಹಾಗೆಯೇ ವಿಜ್ಞಾನಿಗಳಿಗೂ ಪರಿಹಾರವು ಮಿಂಚಿನಂತೆ ಹೊಳೆಯು ತ್ತದೆ. ಅಂಥ ಮಿಂಚಿನ ಹೊಳಹು ‘ಹೃದಯದ ಗತಿನಿಯಂತ್ರಕ’ದ (ಕಾರ್ಡಿಯಾಕ್ ಪೇಸ್ ಮೇಕರ್) ಆವಿಷ್ಕಾರಕ್ಕೆ ಅನುವು ಮಾಡಿಕೊಟ್ಟ ಕಥೆಯು ರೋಚಕವಾಗಿದೆ.
1956. ವಿಲ್ಸನ್ ಗ್ರೇಟ್‌ಬ್ಯಾಚ್ (1919-2011) ಅಮೆರಿಕದ ಬಫೆಲೋ ವಿಶ್ವವಿದ್ಯಾಲಯದ ಇಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಸಹ ಪ್ರಾಚಾರ್ಯನಾಗಿ (ಅಸಿಸ್ಟೆಂಟ್ ಪ್ರೊಫೆಸರ್) ಆಗಿ ಕೆಲಸವನ್ನು ಮಾಡುತ್ತಿದ್ದರು. ವೇಗವಾಗಿ ಮಿಡಿಯುತ್ತಿರುವ ಹೃದಯದ ಮಿಡಿತವನ್ನು ದಾಖಲಿಸುವಂಥ ಒಂದು ಆಂದೋಲಕವನ್ನು (ಆಸಿಲೇಟರ್) ರೂಪಿಸು ವಂತೆ ದೀರ್ಘಕಾಲಿಕ ರೋಗಗಳ ಸಂಶೋಧನಾ ಸಂಸ್ಥೆಯವರು ಕೇಳಿಕೊಂಡಿದ್ದರು. ಆ ಸಾಧನವನ್ನು ನಿರ್ಮಿಸುವ ಕೆಲಸದಲ್ಲಿ ಗ್ರೇಟ್‌ಬ್ಯಾಚ್ ಮಗ್ನರಾಗಿದ್ದರು.
ಹೊಸ ಆಂದೋಲಕವನ್ನು ಸೃಜಿಸಲು, ವಿವಿಧ ಇಲೆಕ್ಟ್ರಾನಿಕ್ ಬಿಡಿಭಾಗಗಳನ್ನು ಮೇಜಿನ ಮೇಲೆ ಹರಡಿಕೊಂಡಿದ್ದರು. ಆ ಬಿಡಿಭಾಗಗಳನ್ನು ತಾವೇ ಬೆಸುಗೆ (ಸಾಲ್ಡರಿಂಗ್) ಹಾಕಿ ಜೋಡಿಸುತ್ತಿದ್ದರು. ಹೀಗೇ 10000 ಓಮ್ ನಿರೋಧಕವನ್ನು (ರೆಸಿಸ್ಟರ್) ತೆಗೆದುಕೊಳ್ಳಲೆಂದು ಅಪ್ರಜ್ಞಾಪೂರ್ವಕವಾಗಿ ಕೈಯನ್ನು ಚಾಚಿದರು. ಅವರ ಕೈ 10000 ಓಮ್ ಇದ್ದ ಪೆಟ್ಟಿಗೆಯ ಒಳಗೆ ಹೋಗುವ ಬದಲು, 1000 ಓಮ್ ಇದ್ದ ಪೆಟ್ಟಿಗೆಯೊಳಗೆ ಹೋಯಿತು.
ಇದನ್ನೂ ಓದಿ: Dr N Someshwara Column: ಅವನ ಸಂಶೋಧನೆಯು ಅವನ ಜೀವವನ್ನು ಉಳಿಸಿತು
1000 ಓಮ್ ಮೌಲ್ಯದ ನಿರೋಧಕವನ್ನು ಮಂಡಲದಲ್ಲಿ ಇಟ್ಟು ಬೆಸುಗೆಯನ್ನು ಹಾಕಿದರು. ಆಂದೋಲಕವು ನಿರಂತರವಾಗಿ ‘ಹಂ’ಕಾರವನ್ನು ಮಾಡುವುದನ್ನು ನಿರೀಕ್ಷಿಸಿ ದ್ದರು. ಆದರೆ ಆಂದೋಲಕವು ತಾಳಬದ್ಧವಾಗಿ ‘ಬೀಪ್... ಬೀಪ್’ ಎಂದು ಸ್ಪಂದಿಸಲಾ ರಂಬಿಸಿತು. ಈ ಸ್ಪಂದನವು ಪ್ರತಿ 1.8 ಸೆಕೆಂಡಿಗೆ ಒಂದು ಸಲ ಬೀಪ್ ಶಬ್ದವನ್ನು ಹೊರಡಿಸಿ, 1 ಸೆಕೆಂಡಿನ ಕಾಲ ವಿಶ್ರಾಂತಿಯನ್ನು ತೆಗೆದುಕೊಂಡು ಮತ್ತೆ 1.8 ಸೆಕೆಂಡಿನ ಅವಧಿಯ ಬೀಪ್ ಶಬ್ದವನ್ನು ಹೊರಡಿಸುತ್ತಿತ್ತು. ಈ ಸ್ಪಂದನವು ನಿಯತವಾಗಿ ಹಾಗೂ ತಾಳಬದ್ಧವಾಗಿ ನಿಮಿಷಕ್ಕೆ 60 ಸಲ ಸ್ಪಂದಿಸುತ್ತಿತ್ತು.
ಬೇರೆ ಯಾರಾದರೂ ಆಗಿದ್ದರೆ, ‘ತಪ್ಪು ಬಿಡಿಭಾಗವನ್ನು ಜೋಡಿಸಿದ್ದೇನೆ’ ಎಂದು 1000 ಓಮ್ ನಿರೋಧಕವನ್ನು ತೆಗೆದು ಹಾಕುತ್ತಿದ್ದರು. ಆದರೆ ಗ್ರೇಟ್‌ಬ್ಯಾಚ್ ಹಾಗೆ ಮಾಡಲಿಲ್ಲ. ಕಾರಣ ಅಂದಿಗೆ ಐದು ವರ್ಷಗಳ ಹಿಂದೆ, ಹೃದಯ ಹಾಗೂ ಹೃದಯ ಮಿಡಿತದ ಬಗ್ಗೆ ಅವರು ಗಳಿಸಿದ್ದ ಅರಿವೇ ಅದಕ್ಕೆ ಕಾರಣವಾಗಿತ್ತು.
ಕುರಿ-ಮೇಕೆಗಳೊಡನೆ: ವೈದ್ಯಕೀಯ ಹಾಗೂ ಇಲೆಕ್ಟ್ರಾನಿಕ್ಸ್ ವಿಜ್ಞಾನಗಳ ನಡುವೆ ಇದ್ದ ಅಪೂರ್ವ ಸಂಬಂಧವನ್ನು ಗ್ರೇಟ್‌ಬ್ಯಾಚ್ ಗ್ರಹಿಸಿದ್ದರು. ಇದಕ್ಕೆ 1951ರಲ್ಲಿ ಅವರು ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ಪಡೆದಿದ್ದ ತರಬೇತಿಯೇ ಕಾರಣವಾಗಿತ್ತು. 1951ರಲ್ಲಿ ಗ್ರೇಟ್‌ಬ್ಯಾಚ್ ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದರು. ಅಲ್ಲಿ ‘ಕಾರ್ನೆಲ್ ಬಿಹೇವಿಯರ್ ಫಾರ್ಮ್’ನಲ್ಲಿ ಕುರಿ ಮತ್ತು ಮೇಕೆಗಳು ಅಪಾರ ಮಾನಸಿಕ ಒತ್ತಡಕ್ಕೆ ಒಳಗಾದಾಗ, ಅವುಗಳ ಹೃದಯವು ಹೇಗೆ ವರ್ತಿಸುತ್ತವೆ ಎನ್ನುವುದರ ಬಗ್ಗೆ ಸಂಶೋಧನೆಯಲ್ಲಿ ಭಾಗಿಯಾಗಿದ್ದರು.
ಹಾಗಾಗಿ ಸೂಕ್ತ ಸಲಕರಣೆಗಳ ನೆರವಿನಿಂದ ಅವುಗಳ ಹೃದಯದ ಪ್ರತಿಕ್ರಿಯೆಯನ್ನು ಅಧ್ಯಯನ ಮಾಡುತ್ತಿದ್ದರು. ಒಂದು ದಿನ ಬಫೆಲೋದಲ್ಲಿದ್ದ ‘ವೆಟೆರನ್ಸ್ ಅಡ್ಮಿನಿಸ್ಟ್ರೇಶನ್ ಹಾಸ್ಪಿಟಲ್’ನಿಂದ ಇಬ್ಬರು ಹೃದಯ ಶಸ್ತ್ರವೈದ್ಯರು, ಡಾ.ವಿಲಿಯಮ್ ಚಾರ್ಡಾಕ್ (1914-2006) ಮತ್ತು ಡಾ.ಆಂಡ್ರೂ ಗೇಜ್ (1922-2024) ಬಿಹೇವಿಯರ್ ಫಾರ್ಮ್ʼಗೆ ಬಂದರು.
ಮಾನಸಿಕ ಒತ್ತಡದಲ್ಲಿರುವ ಪ್ರಾಣಿಗಳು ಹೇಗೆ ವರ್ತಿಸುತ್ತವೆ ಎನ್ನುವುದನ್ನು ತಿಳಿದು ಕೊಳ್ಳುವ ಕುತೂಹಲ ಅವರಲ್ಲಿತ್ತು. ಊಟದ ಸಮಯ. ಗ್ರೇಟ್‌ಬ್ಯಾಚ್ ಮತ್ತು ಇಬ್ಬರು ಶಸ್ತ್ರವೈದ್ಯರು ಊಟಮಾಡುತ್ತಾ ಲೋಕಾಭಿರಾಮವಾಗಿ ಮಾತನಾಡುತ್ತಿದ್ದರು; ಅದು ಹೃದಯದಲ್ಲಿ ಕಂಡುಬರುವ ‘ಸಂಪೂರ್ಣ ವಿದ್ಯುತ್ ವಹನ ರೋಧ’ (ಕಂಪ್ಲೀಟ್ ಹಾರ್ಟ್ ಬ್ಲಾಕ್) ಬಗೆಗಿನ ಮಾತಾಗಿತ್ತು.
ಹೃದಯ ವಿದ್ಯುತ್‌ಜನಕ: ಹೃದಯವು ತನಗೆ ಅಗತ್ಯವಾದ ವಿದ್ಯುತ್ ಉತ್ಪಾದನೆಯನ್ನು ತಾನೇ ಮಾಡಿಕೊಳ್ಳಬೇಕಾಗುತ್ತದೆ ಹಾಗೂ ವಿತರಿಸಿಕೊಳ್ಳಬೇಕಾಗುತ್ತದೆ. ಹೃದಯದಲ್ಲಿ ವಿದ್ಯುತ್ತನ್ನು ಉತ್ಪಾದಿಸಲೆಂದು ಎರಡು ವಿದ್ಯುತ್ ಜನಕ ಅಥವಾ ‘ಜನರೇಟರ್’ ಇವೆ. ಮೊದಲನೆಯದು ಪ್ರಧಾನ ವಿದ್ಯುತ್ ಜನಕ. ಇದನ್ನು ‘ಹೃತ್ಕುಳಿ ಗಂಟು’ (ಸೈನೋ ಏಟ್ರಿಯಲ್ ನೋಡ್, ಎಸ್‌ಎ ನೋಡ್) ಎಂದು ಕರೆಯುವರು. ಎರಡನೆಯದು ಸ್ಟಾಂಡ್-ಬೈ ಜನರೇಟರ್ ಇದನ್ನು ‘ಕರ್ಣಕುಕ್ಷಿ ಗಂಟು’ (ಏಟ್ರಿಯೋವೆಂಟ್ರಿಕ್ಯುಲಾರ್ ನೋಡ್, ಎವಿ ನೋಡ್) ಎನ್ನುವರು. ಈ ವಿದ್ಯುತ್ ಜನಕಗಳು ಉತ್ಪಾದಿಸಿದ ವಿದ್ಯುತ್ತನ್ನು ಹೃದಯ ದಾದ್ಯಂತ ವಿತರಿಸಲು ‘ಹಿಸ್ ಕಂತೆ’ (ಬಂಡ್ಲ್ ಆಫ್ ಹಿಸ್) ಮತ್ತು ‘ಪರ್ಕಿಂಜಿ ತಂತುಗಳು’ (ಪರ್ಕಿಂಜಿ ಫೈಬರ್ಸ್) ಎಂಬ ವ್ಯವಸ್ಥೆಯಿದೆ.
ಸಾಮಾನ್ಯವಾಗಿ ಪ್ರಧಾನ ವಿದ್ಯುತ್ ಜನಕದಲ್ಲಿ ಉತ್ಪಾದನೆಯಾದ ವಿದ್ಯುತ್ ಅಲೆಯು ಎಡ ಹಾಗೂ ಬಲ ಹೃತ್ಕುಕ್ಷಿಗಳಾದ್ಯಂತ ವ್ಯಾಪಿಸುತ್ತದೆ. ಆಗ ಎರಡೂ ಹೃತ್ಕರ್ಣಗಳು ಸಂಕುಚಿಸಿ, ತಮ್ಮಲ್ಲಿರುವ ರಕ್ತವನ್ನು ಎರಡೂ ಹೃತ್ಕುಕ್ಷಿಗಳ ಒಳಗೆ ಪಂಪ್ ಮಾಡುತ್ತವೆ.
ವಿದ್ಯುತ್ ಅಲೆಗಳು ಸ್ಟಾಂಡ್-ಬೈ ಜನರೇಟರಿನ ಬಳಿ ಬಂದಾಗ, ಅದು ವಿದ್ಯುತ್ ಅಲೆಗ ಳನ್ನು 0.1 ಸೆಕೆಂಡುಗಳ ಕಾಲ ತಡೆಹಿಡಿದು, ನಂತರ ‘ಹಿಸ್ ಕಂತೆ’ಯ ಮೂಲಕ, ‘ಪರ್ಕಿಂಜಿ ತಂತು’ಗಳ ಮೂಲಕ ಇಡೀ ಹೃದಯದ ಸ್ನಾಯುಗಳಿಗೆ ವಿದ್ಯುತ್ತನ್ನು ಪೂರೈಸುತ್ತದೆ.
ಆಗ ಹೃತ್ಕುಕ್ಷಿಗಳು ಸಂಕುಚಿಸಿ, ರಕ್ತವನ್ನು ಪಂಪ್ ಮಾಡುತ್ತವೆ. ಈ ಪ್ರಕ್ರಿಯೆಯು ನಿಮಿಷಕ್ಕೆ 40-60 ಸಲ ನಡೆಯುತ್ತದೆ. ಸಂಪೂರ್ಣ ವಿದ್ಯುತ್ ವಹನ ನಿರ್ಬಂಧದಲ್ಲಿ ಪ್ರಧಾನ ಜನಕದಲ್ಲಿ ಉತ್ಪಾದನೆಯಾದ ವಿದ್ಯುತ್ತು, ತನ್ನ ಅಲೆಗಳನ್ನು ಎರಡು ಹೃತ್ಕರ್ಣ ಗಳಲ್ಲಿ ಹರಿಯಬಿಟ್ಟು, ಎರಡು ಹೃತ್ಕುಕ್ಷಿಗಳ ಬಳಿ ಬಂದಾಗ, ಪೂರ್ಣ ಸ್ಥಗಿತವಾಗುತ್ತದೆ.
ಹೃದಯವು ಆರೋಗ್ಯವಾಗಿಯೇ ಇರುತ್ತದೆ. ಆದರೆ ವಿದ್ಯುತ್ ವಹನ ಮಾತ್ರ ಪೂರ್ಣ ನಿಂತುಹೋಗಿರುತ್ತದೆ. ಈಗ ವಿದ್ಯುತ್ ಹೃತ್ಕುಕ್ಷಿಯೊಳಗೆ ಹರಿಯಬೇಕಾದರೆ ಒಂದು ಸಣ್ಣ ವಿದ್ಯುತ್ ಘಾತ ಬೇಕಾಗುತ್ತದೆ. ಈ ಘಾತವನ್ನು ಹೊರಗಿನಿಂದ ಪೂರೈಸಬೇಕಾಗುತ್ತದೆ. ಇದನ್ನು ‘ಬಾಹ್ಯ ಗತಿನಿಯಂತ್ರಕ’ (ಎಕ್ಸ್‌ಟರ್ನಲ್ ಪೇಸ್‌ಮೇಕರ್) ಎಂದು ಕರೆಯುತ್ತಿದ್ದರು.
ಈ ಗತಿನಿಯಂತ್ರಕಗಳು ಒಂದು ಟೆಲಿವಿಷನ್ ಸೆಟ್‌ನಷ್ಟು ದೊಡ್ಡದಿದ್ದವು. ಅದು ನೀಡುವ ಘಾತವು ಉಗ್ರಪ್ರಮಾಣದ ಲ್ಲಿದ್ದು, ರೋಗಿಗೆ ಅಪಾರ ನೋವನ್ನು ಕೊಡುತ್ತಿತ್ತು. ಅನೇಕ ಸಲ ಘಾತವನ್ನು ನೀಡಿದ ಸ್ಥಳದಲ್ಲಿ ಚರ್ಮವು ಸುಟ್ಟು ಹೋಗುತ್ತಿತ್ತು. ನಿಗದಿತ ಪ್ರಮಾಣದ ಅತ್ಯಲ್ಪ ವಿದ್ಯುತ್ ಘಾತವನ್ನು ಇವು ನೀಡಲಾರದಾಗಿದ್ದವು.
ಒಂದು ವೇಳೆ ಯಾವುದಾದರೂ ಕಾರಣದಿಂದ ವಿದ್ಯುತ್ ಸರಬರಾಜು ನಿಂತರೆ, ಆ ವ್ಯಕ್ತಿ ಸಾಯುವ ಸಾಧ್ಯತೆಯು ಹೆಚ್ಚಾಗಿರುತ್ತಿತ್ತು. ಹಾಗಾಗಿ ‘ಹೃದಯದ ಒಳಗೇ ಅಳವಡಿಸ ಬಹುದಾದ, ಅಗತ್ಯ ಪ್ರಮಾಣದ ವಿದ್ಯುತ್ತನ್ನು ಮಾತ್ರ ಪೂರೈಸುವ, ಸುರಕ್ಷಿತ ಹಾಗೂ ಸ್ವಯಂಚಾಲಿತ ಉಪಕರಣವು ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. ಅವರೆಲ್ಲ ಬದುಕಿ ಕೊಳ್ಳುತ್ತಿದ್ದರು...’ ಹೀಗೆ ಇಬ್ಬರೂ ಶಸ್ತ್ರವೈದ್ಯರು ಗ್ರೇಟ್‌ಬ್ಯಾಚ್ ಬಳಿ ಮಾತುಕತೆಯನ್ನಾ ಡಿದ್ದರು.
ಮಿಂಚಿನ ಹೊಳಹು: ಗ್ರೇಟ್‌ಬ್ಯಾಚ್ ಆಗಷ್ಟೇ ರೂಪಿಸಿದ್ದ ಆಂದೋಲಕವು ನಿಯತವಾಗಿ ಸ್ಪಂದಿಸುತ್ತಿತ್ತು. ನಿಮಿಷಕ್ಕೆ 60 ಸಲ! ಆಗ ತಕ್ಷಣವೇ ಐದು ವರ್ಷಗಳ ಹಿಂದೆ ಇಬ್ಬರು ಶಸ್ತ್ರವೈದ್ಯರು ವಿವರಿಸಿದ್ದ ಹೃದಯ ವಿದ್ಯುತ್ ವ್ಯವಸ್ಥೆಯ ಮಾಹಿತಿಯೆಲ್ಲ ಕಣ್ಣ ಮುಂದೆ ಬಂದಿತು. ಪ್ರಧಾನ ವಿದ್ಯುತ್ ಜನಕವು ನಿಮಿಷಕ್ಕೆ 60 ಸಲ ವಿದ್ಯುತ್ತಿನ ಅಲೆಗಳನ್ನು ಹೊರಡಿಸುತ್ತಿತ್ತು. ಇಲ್ಲಿಯೂ ಈ ಆಂದೋಲಕವೂ ನಿಮಿಷಕ್ಕೆ 60 ಸಲ ವಿದ್ಯುತ್ತನ್ನು ಹರಿಸಿ, ನಡುವೆ 1 ಸೆಕೆಂಡಿನ ಕಾಲ ವಿಶ್ರಾಂತಿಯನ್ನು ಪಡೆಯುತ್ತಿತ್ತು. ಅಂದರೆ ಆ ಶಸ್ತ್ರ ವೈದ್ಯರಿಬ್ಬರೂ ನಿರೀಕ್ಷಿಸಿದ್ದ ವಿದ್ಯುತ್ ಜನಕವನ್ನು ತಾನು ಈಗಷ್ಟೇ ರೂಪಿಸಿದ್ದೇನೆ ಎಂಬ ಅರಿವು ಅವರಿಗೆ ಮಿಂಚಿನಂತೆ ಹೊಳೆಯಿತು.
ಕೈದೋಟದ ಕೊಟ್ಟಿಗೆ: ಗ್ರೇಟ್‌ಬ್ಯಾಚ್ ಅವರ ಮುಂದೆ ಎರಡು ಸವಾಲುಗಳಿದ್ದವು. ಮೊದ ಲನೆಯದು ಹೃದಯದ ಒಳಗೆ ಅಳವಡಿಸಬಹುದಾದಷ್ಟು ಚಿಕ್ಕ ಸಾಧನವನ್ನು ರೂಪಿಸ ಬೇಕಾಗಿತ್ತು. ಎರಡನೆಯದು ಬ್ಯಾಟರಿಯನ್ನೂ ಒಳಗೊಂಡಿರುವ ಪೇಸ್‌ಮೇಕರ್, ಹೃದಯ ಕ್ಕೆ ಯಾವುದೇ ರೀತಿಯಲ್ಲಿ ಹಾನಿಯನ್ನು ಉಂಟುಮಾಡದೆ ಸುರಕ್ಷತೆಯ ಭರವಸೆಯನ್ನು ನೀಡಬೇಕಿತ್ತು.
1958. ಗ್ರೇಟ್‌ಬ್ಯಾಚ್ ಪುಟ್ಟದಾಗಿರುವ, ಸುರಕ್ಷಿತವಾಗಿರುವ ಹಾಗೂ ಹೃದಯದ ಒಳಗೆ ಅಳವಡಿಸಬಹುದಾದ ಗತಿನಿಯಂತ್ರಕವನ್ನು ರೂಪಿಸಬೇಕೆಂದು ತೀರ್ಮಾನಿಸಿದರು. ತಮ್ಮ ಅಧ್ಯಾಪಕ ವೃತ್ತಿಗೆ ರಾಜೀನಾಮೆಯನ್ನು ನೀಡಿದರು. ತಮ್ಮ ಬ್ಯಾಂಕ್ ಖಾತೆಯನ್ನು ನೋಡಿದರು. ಬರೀ 2000 ಡಾಲರುಗಳ ಮಾತ್ರ ಇದ್ದವು. ಆದರೂ ಎದೆಗುಂದಲಿಲ್ಲ. ತಮ್ಮ ಮನೆಯ ಹಿಂದಿದ್ದ ಕೈದೋಟದ ಕೊಟ್ಟಿಗೆಯನ್ನೇ (ಪಾಟಿಂಗ್ ಶೆಡ್- ಹೂವಿನ ಕುಂಡಗಳು ಹಾಗೂ ಇತರ ಕೈದೋಟದ ವಸ್ತುಗಳಿರುವ ಮರದಿಂದ ನಿರ್ಮಾಣವಾದ ಪುಟ್ಟ ರಚನೆ) ನೂತನ ಪ್ರಯೋಗಾಲಯವನ್ನಾಗಿ ಪರಿವರ್ತಿಸಿಕೊಂಡರು.
ಮನುಕುಲದ ಮಹಾಸೇವೆಯನ್ನು ಮಾಡುವ ಸಂಶೋಧನೆಯ ಅಭಿಯಾನವು, ಕೇವಲ 2000 ಡಾಲರುಗಳ ಬಂಡವಾಳದೊಡನೆ, ಒಂದು ಕೈದೋಟದ ಶೆಡ್ಡಿನಲ್ಲಿ ಆರಂಭವಾಯಿತು ಎಂದರೆ, ಅದನ್ನು ನಂಬಲು ಕಷ್ಟವಾಗುತ್ತದೆ. ಆದರೆ ಇದು ವಿಚಿತ್ರ ವಾದರೂ ಸತ್ಯವಾಗಿತ್ತು.
ಕೈದೋಟದ ಸಸಿಗಳ ಕುಂಡಗಳ ನಡುವೆ, ಗೊಬ್ಬರಚೀಲಗಳನ್ನು ಪಕ್ಕಕ್ಕೆ ಸರಿಸಿ, ಹಾರೆ, ಗುದ್ದಲಿ, ಪಿಕಾಸಿಗಳಂಥ ಉಪಕರಣಗಳನ್ನು ಮೂಲೆಗೆ ಸೇರಿಸಿ, ನಡುವೆ ಒಂದು ಮೇಜನ್ನು ಇರಿಸುವಷ್ಟು ಸ್ಥಳವನ್ನು ರೂಪಿಸಿಕೊಂಡರು. ಅಲ್ಲಿಯೇ ಪುಟ್ಟ ಪೇಸ್‌ಮೇಕರ್ ನಿರ್ಮಾಣದ ಕೆಲಸವನ್ನು ಆರಂಭಿಸಿದರು. ಅವರು ಎಪಾಕ್ಸಿ ರೆಸಿನ್ ಎಂಬ ವಸ್ತುವಿನಿಂದ ತಯಾರಾದ ಒಂದು ಪುಟ್ಟ ಪೆಟ್ಟಿಗೆಯನ್ನು ರೂಪಿಸಿ, ಅದರ ಒಳಗೆ ಅದಕ್ಕಿಂತಲೂ ಪುಟ್ಟದಾದ ಪೇಸ್‌ಮೇಕರ್ ಸಾಧನವನ್ನು ಅಳವಡಿಸಿದರು. ಈ ಸಾಧನವು ಕೆಲಸ ಮಾಡು ತ್ತದೆಯೇ ಎನ್ನುವುದನ್ನು ಪರೀಕ್ಷಿಸಿ ನೋಡಬೇಕಾಗಿತ್ತು.
ಹಾಗಾಗಿ ಅವರು ಇಬ್ಬರು ಹೃದಯ ಶಸ್ತ್ರಚಿಕಿತ್ಸಾ ತಜ್ಞರನ್ನು ಭೇಟಿ ಮಾಡಿದರು. ತಮ್ಮ ನೂತನ ಗತಿನಿಯಂತ್ರಕವನ್ನು ತೋರಿಸಿದರು. ಇದನ್ನು ಪ್ರಾಯೋಗಿಕವಾಗಿ ಪರೀಕ್ಷಿಸಲು ಸಾಧ್ಯವೇ ಎಂದು ಕೇಳಿದರು.
ಪ್ರಾಣಿ ಪ್ರಯೋಗ: ಹೃದಯ ಶಸ್ತ್ರವೈದ್ಯರಿಬ್ಬರಿಗೂ ಕುತೂಹಲವುಂಟಾಯಿತು. ಆದರೆ ಅವರಿಗೆ ಅವರದ್ದೇ ಆದ ಅನುಮಾನಗಳಿದ್ದವು. ಮಿಗಿಲಾಗಿ ಶಸ್ತ್ರಚಿಕಿತ್ಸಾ ವಿಧಿವಿಧಾನದ ನಿರೀಕ್ಷಿತ ಹಾಗೂ ಅನಿರೀಕ್ಷಿತ ಸವಾಲುಗಳಿದ್ದವು. ಹಾಗಾಗಿ ಅವರು ಈ ನೂತನ ಗತಿ ನಿಯಂತ್ರಕವನ್ನು ನೇರವಾಗಿ ಮನುಷ್ಯರ ಮೇಲೆ ಪ್ರಯೋಗಿಸುವ ಬದಲು, ಮೊದಲು ಒಂದು ಸಲ ಪ್ರಾಣಿಯ ಮೇಲೆ ಪರೀಕ್ಷಿಸೋಣವೆಂದು ನಿರ್ಧರಿಸಿದರು.
ಮೇ 7, 1958. ಬಫೆಲೋ ವೆಟರನ್ಸ್ ಅಡ್ಮಿನಿಸ್ಟ್ರೇಷನ್ ಹಾಸ್ಪಿಟಲ್. ಇಬ್ಬರು ಹೃದಯ ಶಸ್ತ್ರವೈದ್ಯರು ಹಾಗೂ ಒಬ್ಬ ಇಲೆಕ್ಟಿಕ್ ಎಂಜಿನಿಯರ್. ಆಸ್ಪತ್ರೆಯ ಆಪರೇಷನ್ ಥಿಯೇಟ ರಿಗೆ ಒಂದು ನಾಯಿಯನ್ನು ತಂದರು. ಅದಕ್ಕೆ ಅರಿವಳಿಕೆಯನ್ನು ನೀಡಿದರು. ಅದರ ಎದೆಗೂಡನ್ನು ಛೇದಿಸಿ, ಗತಿನಿಯಂತ್ರಕವನ್ನು ಹೃದಯಕ್ಕೆ ಸಮೀಪದಲ್ಲಿ ಎಲ್ಲಿಡಬಹು ದೆಂದು ಯೋಚಿಸಿದರು.
ಗ್ರೇಟ್‌ಬ್ಯಾಚ್ ರೂಪಿಸಿದ ಗತಿನಿಯಂತ್ರಕದ ಗಾತ್ರವು ಒಂದು ಪಾಕೆಟ್ ವಾಚಿನಷ್ಟು ಮಾತ್ರ ಇತ್ತು. ಹಾಗಾಗಿ ಗತಿನಿಯಂತ್ರಕವನ್ನು ಅಳವಡಿಸುವುದು ಅಷ್ಟು ಕಷ್ಟವಾಗಲಿಲ್ಲ. ನೂತನ ಗತಿನಿಯಂತ್ರಕವು ವಿದ್ಯುತ್ತನ್ನು ಹರಿಸಲಾರಂಭಿಸಿತು. ನಾಯಿಯ ಹೃದಯವು ಹರಿಸುತ್ತಿದ್ದ ಸಹಜ ವಿದ್ಯುತ್ ಅಲೆಗಳು ಸ್ಥಗಿತವಾದವು. ಅಳವಡಿಸಿದ್ದ ಗತಿನಿಯಂತ್ರಕವು ಕರಾರು ವಾಕ್ಕಾಗಿ ತನ್ನ ವಿದ್ಯುತ್ ಅಲೆಗಳನ್ನು ಹರಿಸಲಾರಂಭಿಸಿತು.
ಅದು ಮಾನಿಟರಿನ ಪರದೆಯ ಮೇಲೆ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಮಾನವನ ಇತಿಹಾಸ ದಲ್ಲಿ ಮೊತ್ತಮೊದಲ ಬಾರಿಗೆ ಎದೆಗೂಡಿನಲ್ಲಿದ್ದ ಪುಟ್ಟ ಸಾಧನವೊಂದು ಹೃದಯದ ಕೆಲಸ ಕಾರ್ಯಗಳನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಪಡೆದಿತ್ತು. ಮೂವರಿಗೂ ತುಂಬಾ ಸಂತೋಷವಾಯಿತು. ಆದರೆ, ನಾಯಿಯಲ್ಲಿ ಯಶಸ್ವಿಯಾದ ಪ್ರಯೋಗವು ಮನುಷ್ಯರಲ್ಲೂ ಯಶಸ್ವಿಯಾಗಬೇಕೆಂಬ ನಿಯಮವೇನೂ ಇಲ್ಲವಲ್ಲ!
ಮಾನವ ಮೈಲಿಗಲ್ಲು: 1960ರ ಏಪ್ರಿಲ್ 15. 77 ವರ್ಷದ ಹಿರಿಯನಿಗೆ ಸಂಪೂರ್ಣ ವಿದ್ಯುತ್ ವಹನ ನಿರ್ಬಂಧವು ಉಂಟಾಗಿತ್ತು. ಅವನು ಹಾಸಿಗೆಯನ್ನು ಹಿಡಿದಿದ್ದ. ಮೃತ್ಯು ಮುಖನಾಗಿದ್ದ. ಯಾವ ಕ್ಷಣದಲ್ಲಿ ಬೇಕಾದರೂ ಸಾಯಬಹುದಾಗಿತ್ತು. ಆಗ ರೋಗಿಯ ಮನೆಯವರನ್ನು ಹಾಗೂ ಆಸ್ಪತ್ರೆಯ ಆಡಳಿತವರ್ಗವನ್ನೂ ಒಪ್ಪಿಸಿ, ಗ್ರೇಟ್ ಬ್ಯಾಚ್ ನಿರ್ಮಿಸಿದ್ದ ನೂತನ ಗತಿನಿಯಂತ್ರಕವನ್ನು ಆ ಹಿರಿಯನ ಹೃದಯದ ಒಳಗೆ ಅಳವಡಿಸಿ ದರು. ಆಗ ಆ ಹಿರಿಯನ ಹೃದಯವು ಸಂಗೀತಗಾರನ ಲಯವನ್ನು ನಿಖರವಾಗಿ ಗುರುತಿ ಸುವ ‘ಲಯಮಾಪಕ’ (ಮೆಟ್ರೋ ನೀಮ್) ಯಂತ್ರದಂತೆ ಕರಾರುವಾಕ್ಕಾಗಿ ಮಿಡಿಯಲಾ ರಂಭಿಸಿತು.
ಸಾವಿನ ಬಾಯಲ್ಲಿದ್ದ ಹಿರಿಯ, ಗ್ರೇಟ್‌ಬ್ಯಾಚ್ ರೂಪಿಸಿದ್ದ ಸಾಧನದ ಕಾರಣ, ಸಾವಿನಿಂದ ಪೂರ್ಣ ಪಾರಾಗಿದ್ದ! ಆ ಹಿರಿಯ ನೂತನ ಗತಿನಿಯಂತ್ರಕದೊಡನೆ 18 ತಿಂಗಳ ಕಾಲ ಬದುಕಿದ್ದ. ಗ್ರೇಟ್‌ಬ್ಯಾಚ್ ರೂಪಿಸಿದ್ದ ಗತಿನಿಯಂತ್ರಕದಲ್ಲಿದ್ದ ಬ್ಯಾಟರಿ 2 ವರ್ಷಗಳ ಕಾಲ ಮಾತ್ರ ಬಾಳಿಕೆ ಬರುತ್ತಿತ್ತು. ನಂತರ ಶಸ್ತ್ರಚಿಕಿತ್ಸೆಯಿಂದ ಗತಿನಿಯಂತ್ರಕವನ್ನು ಹೊರ ತೆಗೆದು, ಹೊಸ ಬ್ಯಾಟರಿಯನ್ನು ಹಾಕಿ, ಮತ್ತೆ ಹೃದಯದ ಒಳಗೆ ಅಳವಡಿಸಬೇಕಿತ್ತು. ಕೊನೆಗೆ ಲಿಥಿಯಂ-ಅಯೋಡಿನ್ ಬ್ಯಾಟರಿಗಳ ಆವಿಷ್ಕಾರವಾದವು. ಗ್ರೇಟ್‌ಬ್ಯಾಚ್ ಈ ಬ್ಯಾಟರಿಗಳ ಹಕ್ಕುಗಳನ್ನು ಕೊಂಡು, ರೂಪಿಸಿದ ಗತಿನಿಯಂತ್ರಕಗಳು ದಶಕಗಳ ಕಾಲ ಬಾಳಿಕೆಗೆ ಬರಲಾರಂಭಿಸಿದವು.
ಮೌಢ್ಯ: ಮಾನವನ ಇತಿಹಾಸದಲ್ಲಿ ಮೊತ್ತಮೊದಲ ಬಾರಿಗೆ ಒಂದು ವಿದ್ಯುನ್ಮಾನ ಉಪಕರಣವು, ಮನುಷ್ಯನ ಒಡಲಿನೊಳಗೆ ಸ್ವಸ್ಥವಾಗಿ ಕುಳಿತ್ತಿತ್ತು. ಈಗಲೋ ಆಗಲೋ ಸಾಯಬೇಕಾಗಿದ್ದ ಮನುಷ್ಯನು 18 ತಿಂಗಳ ಕಾಲ ಬದುಕಿದ್ದನೆಂದರೆ, ಅದು ಅಂದಿನ ಕಾಲಕ್ಕೆ ‘ಪವಾಡ’ಸದೃಶವಾಗಿತ್ತು; ಹಾಗೆಯೇ ಯಾರೂ ನಿರೀಕ್ಷಿಸದೇ ಇದ್ದ ಮೌಢ್ಯ ವೊಂದರ ಆರ್ಭಟಕ್ಕೂ ಅದು ಕಾರಣವಾದದ್ದು ವಿಪರ್ಯಾಸಕರ. 1960ರ ದಶಕದಲ್ಲಿ ‘ಹೃದಯದಲ್ಲಿ ಆತ್ಮವಿರುತ್ತದೆ, ಹೃದಯವು ಸ್ಥಗಿತವಾದಾಗ ಆತ್ಮವು ಹೃದಯವನ್ನು ತ್ಯಜಿಸುವುದರಿಂದ ಸಾವು ಸಂಭವಿಸುತ್ತದೆ’ ಇತ್ಯಾದಿ ನಂಬಿಕೆಗಳಿದ್ದವು.
ಈಗ ಅಂಥ ಪರಮಪವಿತ್ರವಾದ ಆತ್ಮವಿರುವ ಹೃದಯದೊಳಗೇ ವಿದ್ಯುನ್ಮಾನ ಸಾಧನ ವನ್ನು ಇಟ್ಟರೆ, ಅದು ಆತ್ಮಕ್ಕೆ ತೊಂದರೆಯನ್ನುಂಟು ಮಾಡಬಹುದು; ಬ್ಯಾಟರಿಯ ವಿದ್ಯುತ್ತು ಆತ್ಮವನ್ನು ‘ಕದಿಯಬಹುದು’ ಆಗ ಮನುಷ್ಯನಲ್ಲಿ ಮಾನವೀಯತೆಯು ಕಡಿಮೆಯಾಗಬಹುದು... ಹೀಗೆಲ್ಲ ಗಾಳಿಸುದ್ದಿಗಳು ಹರಡಲಾರಂಭಿಸಿದವು. ಈ ಗಾಳಿಸುದ್ದಿ ಗಳಿಂದ ಗ್ರೇಟ್ ಬ್ಯಾಚ್ ವಿಚಲಿತರಾಗದಿದ್ದರೂ, ‘ಮನುಕುಲಕ್ಕೆ ಇಂಥ ಒಂದು ಕಾಣಿಕೆ ಯನ್ನು ನೀಡುವ ಭಾಗ್ಯವನ್ನು ಆ ದೇವರು ನನಗೆ ಕರುಣಿಸಿದ್ದಾನೆ’ ಎಂದೇ ನಂಬಿದ್ದರು.
ಜೀವದಾಯಕ: ಗ್ರೇಟ್‌ಬ್ಯಾಚ್ ರೂಪಿಸಿದ ಗತಿನಿಯಂತ್ರಕಗಳು ಇಂದು ಸಾಕಷ್ಟು ಸುಧಾರಿಸಿವೆ. ಒಂದು ಕ್ಯಾಪ್ಸೂಲಿನಷ್ಟು ಕಿರಿದಾದ ಗತಿನಿಯಂತ್ರಕಗಳು ದೊರೆಯುತ್ತಿವೆ. ಗತಿನಿಯಂತ್ರಕವನ್ನು ಹಾಕಿಕೊಂಡಿರುವ ವ್ಯಕ್ತಿಯ ದೈಹಿಕ- ಮಾನಸಿಕ ಸ್ಥಿತಿಗತಿಗಳಿಗೆ ಅನುಗುಣವಾಗಿ ಹೃದಯದ ಮಿಡಿತದ ಗತಿಯನ್ನು ಕಾದಿಡುವ ಗತಿನಿಯಂತ್ರಕಗಳು ಈಗ ಲಭ್ಯವಿವೆ. ಎಲ್ಲಕ್ಕಿಂತಲೂ ಮಿಗಿಲಾಗಿ ರೋಗಿಯ ಹೃದಯದೊಳಗಿರುವ ಗತಿನಿಯಂತ್ರಕವು ತನ್ನ ಆರೋಗ್ಯ- ಅನಾರೋಗ್ಯದ ಬಗ್ಗೆ ಬ್ಲೂ ಟೂತ್ ಮೂಲಕ ಸದಾ ಮಾಹಿತಿಯನ್ನು ವೈದ್ಯರ ಮೊಬೈಲಿಗೆ ರವಾನಿಸುತ್ತಿರುತ್ತದೆ. ಗತಿನಿಯಂತ್ರಕವು ಸೋಲುತ್ತಿರುವ ಸುದ್ದಿಯು ರೋಗಿಗೆ ಗೊತ್ತಾಗುವುದಕ್ಕೆ ಮೊದಲೇ ವೈದ್ಯರಿಗೆ ಗೊತ್ತಾಗುತ್ತದೆ. ಕೂಡಲೇ ವೈದ್ಯರು ಅಗತ್ಯ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ.
ಗ್ರೇಟ್‌ಬ್ಯಾಚ್ ಮಾಡಿರುವ ಸಂಶೋಧನೆಯು ‘ನ್ಯೂರೋಮಾಡ್ಯುಲೇಶನ್’ ಎಂಬ ಜ್ಞಾನ ಶಾಖೆಗೆ ಜನ್ಮವನ್ನು ನೀಡಿದೆ. ವಿದ್ಯುತ್ ಅಲೆಗಳನ್ನು ಹಾಯಿಸಿ, ಪಾರ್ಕಿನ್ಸನ್ ಕಾಯಿಲೆ ಯನ್ನು ನಿಯಂತ್ರಿಸುವ ಹಾಗೂ ಅಪಸ್ಮಾರವನ್ನು ತಡೆಗಟ್ಟುವ ಮತ್ತು ದೀರ್ಘಕಾಲದ ನೋವನ್ನು ಗುಣಪಡಿಸುವ ಪ್ರಯತ್ನಗಳು ನಡೆಯುತ್ತಿವೆ.