Shashidhara Halady Column: ಕೋಣಗಳ ಜತೆ ಮಕ್ಕಳಿಗೂ ತೋಡಿನ ಸ್ನಾನ!
ನಮ್ಮ ಮನೆ ಎದುರಿನಲ್ಲೇ ಗದ್ದೆಗಳು; ಎಷ್ಟು ಹತ್ತಿರ ಎಂದರೆ, ಚಾವಡಿ ದಾಟಿ ಹೊರ ಬಂದರೆ ಸಿಗುವ ಪುಟ್ಟ ಕೊಟ್ಟಿಗೆಯನ್ನು ಹಾದು ಮುಂದಡಿಯಿಟ್ಟರೆ, ನೇರವಾಗಿ ಹೆಜ್ಜೆ ಬೀಳುವುದು ಅಗೇಡಿ ಗದ್ದೆಗೆ! ಆ ಅಗೇಡಿಯ ಅಂಚಿನ ಮೇಲೆ ನಡೆದು, ಮುಂದಿನ ಎರಡು ಮುಡಿ ಗದ್ದೆ ಅಂಚಿನ ಮೇಲೆ ಬ್ಯಾಲೆನ್ಸ್ ಮಾಡುತ್ತಾ ನಡೆದರೆ ದೊಡ್ಡತೋಡು ಸಿಗುತ್ತದೆ.
-
ಶಶಾಂಕಣ
ಈ ವರ್ಷ ಮಳೆ ಕಡಿಮೆ ಎಂದು ಹವಾಮಾನ ತಜ್ಞರು ಹೇಳಿದ್ದರು; ಆದರೆ, ಕರಾವಳಿ ಮತ್ತು ಮಲೆನಾಡಿನಲ್ಲಿ ಸಾಕಷ್ಟು ಮಳೆ ಸುರಿದುಬಿಟ್ಟಿದೆ! ಜುಲೈ ಎರಡನೆಯ ವಾರದ ಹೊತ್ತಿಗೆ, ಕೆಲವು ಅಣೆಕಟ್ಟುಗಳು ಒಂದು ಮಟ್ಟದ ನೀರಿನಿಂದ ತುಂಬುವ ಸಾಧ್ಯತೆ ಕಾಣಿಸುತ್ತಿದೆ. ಕೃಷಿಕರು, ವಿದ್ಯುತ್ ಗಾಗಿ ನೀರನ್ನು ಅವಲಂಬಿಸಿದವರು ಸದ್ಯ ದೇವರು ಕಣ್ಣು ಬಿಟ್ಟ ಎಂದು ಸಣ್ಣಗೆ ನಿಟ್ಟುಸಿರು ಬಿಟ್ಟದ್ದಂತೂ ಹೌದು.
ನಮ್ಮ ಹಳ್ಳಿಯಲ್ಲೂ ಸಾಕಷ್ಟು ಮಳೆ ಸುರಿದಿದೆಯಂತೆ. ಗದ್ದೆಗಳ ನಡುವೆಯೇ ಇರುವ ನಮ್ಮ ಮನೆಯ ಸರಹದ್ದಿನಲ್ಲಿ ಎರಡು ತೋಡುಗಳಿವೆ; ಮೊದಲನೆಯದು ಸಣ್ಣ ತೋಡು, ಎರಡನೆಯದು ದೊಡ್ಡ ತೋಡು. ಮಳೆಗಾಲದಲ್ಲಿ ಮಾತ್ರ ಜೀವ ತಳೆವ ಸಣ್ಣತೋಡಿನ ಒಡನಾಟಕ್ಕಿಂತಲೂ, ಹೆಚ್ಚು ಕಾಲ ನೀರು ಹರಿಯುವ ದೊಡ್ಡ ತೋಡಿನ ಜತೆಗಿನ ನಮ್ಮ ಬಾಂಧವ್ಯ ಹೆಚ್ಚು ಅರ್ಥಪೂರ್ಣ. ಈ ಎರಡೂ ತೋಡು ಗಳು ಒಂದಕ್ಕೊಂದು ಪೂರಕವಾಗಿದ್ದು, ಮಳೆರಾಯನ ಕೃಪೆಯಿಂದ ಮಾತ್ರ ಜೀವ ತುಂಬಿಕೊಳ್ಳುವು ದರಿಂದಾಗಿ, ದೊಡ್ಡತೋಡಿನ ವಿಚಾರ ಹೇಳುವಾಗಲೆಲ್ಲಾ, ನಡುನಡುವೆ ಸಣ್ಣ ತೋಡಿನ ನೀರು, ಹರಿಯುತ್ತಲೇ ಇರುತ್ತದೆ.
ನಮ್ಮ ಮನೆ ಎದುರಿನಲ್ಲೇ ಗದ್ದೆಗಳು; ಎಷ್ಟು ಹತ್ತಿರ ಎಂದರೆ, ಚಾವಡಿ ದಾಟಿ ಹೊರ ಬಂದರೆ ಸಿಗುವ ಪುಟ್ಟ ಕೊಟ್ಟಿಗೆಯನ್ನು ಹಾದು ಮುಂದಡಿಯಿಟ್ಟರೆ, ನೇರವಾಗಿ ಹೆಜ್ಜೆ ಬೀಳುವುದು ಅಗೇಡಿ ಗದ್ದೆಗೆ! ಆ ಅಗೇಡಿಯ ಅಂಚಿನ ಮೇಲೆ ನಡೆದು, ಮುಂದಿನ ಎರಡು ಮುಡಿ ಗದ್ದೆ ಅಂಚಿನ ಮೇಲೆ ಬ್ಯಾಲೆನ್ಸ್ ಮಾಡುತ್ತಾ ನಡೆದರೆ ದೊಡ್ಡತೋಡು ಸಿಗುತ್ತದೆ. ಜೂನ್ ಮೊದಲ ವಾರ, ಮಳೆನೀರಿನಿಂದ ತುಂಬಿ ಕೊಳ್ಳುವ ದೊಡ್ಡ ತೋಡು, ಮುಂದಿನ ಎಂಟು ತಿಂಗಳುಗಳ ಕಾಲ ಹರಿಯುತ್ತಲೇ ಇರುತ್ತದೆ. ಅಕ್ಟೋಬರ್ -ನವೆಂಬರ್‌ನಲ್ಲಿ ಮಳೆಗಾಲ ನಿಂತು, ಚಳಿಗಾಲ ಆರಂಭವಾದರೂ, ಇನ್ನೂ ಸುಮಾರು ಮೂರು ತಿಂಗಳು ಅದರಲ್ಲಿ ನೀರು ಇರುವುದು ಒಂದು ಚೋದ್ಯ.
ಇದನ್ನೂ ಓದಿ: Shashidhara Halady Column: ಸಿಮೆಂಟ್ ಪೈಪ್ʼಗೆ ದಾರಿ ಮಾಡಿಕೊಟ್ಟ ಮರ !
ಈಗಂತೂ ಅದರಲ್ಲಿ, ಕೆಂಪನೆಯ ನೀರು! ಆ ತೋಡಿಗೆ ಸುಮಾರು ಎರಡು ಕಿ.ಮೀ. ದೂರದಿಂದ ಮಳೆ ನೀರು ಹರಿದುಬರುವುದುಂಟು. ದೂರದ ಹರನ ಗುಡ್ಡ, ಚೇರ್ಕಿ, ಬೈಲಿನ ಎರಡೂ ಬದಿಗಳಲ್ಲಿ ಮೇಲೇರಿ ಹೋಗಿರುವ ಗುಡ್ಡ ಮತ್ತು ಕಾಡಿನಲ್ಲಿ ಬಿದ್ದ ನೀರು, ಹರಿದು ಬರುವಾಗ, ತನ್ನ ಜತೆ, ಸ್ವಲ್ಪ ಮಣ್ಣು, ಕೆಸರನ್ನೂ ಕೊಚ್ಚಿಕೊಂಡು ಬರುವುದರಿಂದಾಗಿ, ಜುಲೈ ತಿಂಗಳಿನಲ್ಲಿ ಅದರಲ್ಲಂತೂ ಕೆಂಪನೆಯ ನೀರು ತೀರಾ ಸಾಮಾನ್ಯ. ನಾಲ್ಕಾರು ದಿನ ಮಳೆ ಬಿಟ್ಟಾಗ ಮಾತ್ರ, ಉಜರು ನೀರು ಬರುವುದರಿಂದ, ತಿಳಿಯಾ ಗಿರುತ್ತದೆ; ಅಂತಹ ದಿನಗಳಲ್ಲಿ, ಆ ನೀರನ್ನು ಕುಡಿಯಬಹುದು. ನಮ್ಮ ಶಾಲಾ ದಿನಗಳಲ್ಲಿ ನಾವೆಲ್ಲಾ ಧೈರ್ಯವಾಗಿ ತೋಡಿನಲ್ಲಿ ಹರಿದು ಬರುವ ತಿಳಿನೀರನ್ನು ಕುಡಿದು, ಬಾಯಾರಿಕೆ ನೀಗಿಸಿಕೊಳ್ಳುತ್ತಿದ್ದೆವು. ಆಗ ಸರಕಾರಿ ಶಾಲೆಗೆ ಹೋಗುವ ಮಕ್ಕಳು, ತಮ್ಮ ಜತೆ ನೀರಿನ ಬಾಟಲನ್ನು ಕೊಂಡೊಯ್ಯುವ ಪದ್ಧತಿಯೇ ಇರಲಿಲ್ಲವಲ್ಲ!
ಬೆಳಗ್ಗೆ ಎಂಟೂವರೆಗೆ ಮನೆ ಬಿಟ್ಟರೆ, ಸಂಜೆ ಐದಕ್ಕೇ ವಾಪಸಾಗುವ ನಾವು, ಮಧ್ಯಾಹ್ನ ಬುತ್ತಿ ಊಟ ಮಾಡುವಾಗ ಸ್ವಲ್ಪ ನೀರು ಕುಡಿಯು ವುದುಂಟು. ಅದು ಬಿಟ್ಟರೆ, ಮೂರು ಕಿ.ಮೀ. ನಡೆದು ವಾಪಸು ಬರುವಾಗ, ಬಾಯಾರಿದರೆ, ತೋಡಿನ ನೀರನ್ನು ಕುಡಿದು ಬಾಯಾರಿಕೆ ನೀಗಿಸಿಕೊಳ್ಳುವುದು ತೀರಾ ಸಾಮಾನ್ಯ. ತೋಡಿನ ನೀರು ತಿಳಿಯಾ ಗಿಲ್ಲದೇ ಇದ್ದಾಗ, ದಾರಿಯಲ್ಲಿದ್ದ ಯಾರದ್ದಾದರೂ ಮನೆಗೆ ಹೋಗಿ ನೀರು ಕುಡಿದದ್ದೂ ಇದೆ. ಇಂದಿನ ಮಕ್ಕಳು, ತೋಡಿನ ನೀರನ್ನು ಕುಡಿಯುವ ಧೈರ್ಯ ಮಾಡಲಾರರು, ಅದೆಷ್ಟೇ ತಿಳಿಯಾಗಿ ದ್ದರೂ, ಸಿಹಿಯಾಗಿದ್ದರೂ!
ಜೂನ್ ತಿಂಗಳಿನಿಂದ ನವೆಂಬರ್ ತನಕವೂ ದೊಡ್ಡ ತೋಡಿನಲ್ಲಿ ನೀರು ಹರಿಯತ್ತಲೇ ಇರುತ್ತದೆ. ಕೆಲವು ಕೃಷಿ ಕಾರ್ಮಿಕರ ಕುಟುಂಬಗಳು, ಅಂದಿನ ದಿನಗಳಲ್ಲಿ ಕುಡಿಯಲು ಅದೇ ನೀರು ಬಳಸು ತ್ತಿದ್ದುದುಂಟು. ಶಿವರಾತ್ರಿ ಕಳೆದ ನಂತರ, ಸುಮಾರು ಫೆಬ್ರವರಿ ತಿಂಗಳಲ್ಲಿ ನಮ್ಮ ಮನೆ ಎದುರಿನ ದೊಡ್ಡತೋಡು ಪೂರ್ತಿ ಒಣಗುತ್ತದೆ; ಆಗ ಅದರ ಮುಖ್ಯ ಉಪಯೋಗವೆಂದರೆ, ಬಹು ಜನರು ಉಪಯೋಗಿಸಬಲ್ಲ ಬಯಲು ಶೌಚಾಲಯದ ಸ್ವರೂಪ! ಗದ್ದೆಬೈಲಿನ ಮಟ್ಟಕ್ಕಿಂತ ನಾಲ್ಕು ಅಡಿ ತಗ್ಗಿನಲ್ಲಿದ್ದುದರಿಂದ ಮತ್ತು ಅದರ ಒಂದು ಅಂಚಿನಲ್ಲಿ ದಟ್ಟವಾಗಿ ಪೊದೆಸ್ವರೂಪದ ಗಿಡಗಳು ಬೆಳೆದು ಗುಬಸಲು ಆಗಿದ್ದರಿಂದ, ಬೇಸಗೆಯ ಶೌಚಾಲಯವಾಗಿ ಉಪಯೋಗಿಸಲು ಆ ಪೊದೆಗಳೇ ಮರೆ ನೀಡುತ್ತವೆ. ತೋಡಿನ ಇನ್ನೊಂದು ಬದಿಯಲ್ಲಿ, ಉದ್ದಕ್ಕೂ ಹಾಡಿ, ಹಕ್ಕಲು, ಗುಡ್ಡೆ.
ಎಂಟು ತಿಂಗಳುಗಳ ಕಾಲ ದೊಡ್ಡತೋಡಿನಲ್ಲಿ ನೀರಿದ್ದರೂ, ಆ ನೀರನ್ನು ಜನರು ಕೃಷಿಗೆ ಉಪಯೋಗಿಸುತ್ತಿದ್ದುದು ನವೆಂಬರ್ ನಂತರ ಮಾತ್ರ. ಏಕೆಂದರೆ, ಜೂನ್ ತಿಂಗಳಿನಲ್ಲಿ ನಮ್ಮೂರಿ ನಲ್ಲಿ ಆರಂಭವಾಗುವ ಜಡಿಮಳೆಯಿಂದಾಗಿ, ಬತ್ತದ ಪಯಿರಿಗೆ ಬೇರಾವ ನೀರೂ ಬೇಡ. ವಾಸ್ತವ ವೆಂದರೆ, ಆಗ ಸುರಿವ ಮಳೆನೀರು ಅಗತ್ಯಕ್ಕಿಂತ ಜಾಸ್ತಿ. ಮಳೆ ಬೀಳುತ್ತಿರುವಾಗಲೇ, ಕಂಬಳಿಕೊಪ್ಪೆ ಹೊದ್ದು ಹೂಟಿ ಮಾಡಿ, ಗೊರಬು ಹೊದ್ದು ನಾಟಿ ಮಾಡಿ, ಒಂದಷ್ಟು ಗೊಬ್ಬರ ಹಾಕಿ ಬತ್ತ ಬೆಳೆಯಲು ಪ್ರಯತ್ನಿಸಿದರೆ, ಹಾಕಿದ ಗೊಬ್ಬರವೆ ಲ್ಲಾ ಮಳೆನೀರಿಗೆ ತೊಳೆದು ಹೋಗಿ, ತೋಡು ಗಳನ್ನು ಸೇರುವ ಬೈಲು ನಮ್ಮದು. ಹಾಗೂ ಹೀಗೂ ಮಳೆಯ ನಡುವೆಯೇ ಬೆಳೆಯುವ ಮೊದಲ ಬೆಳೆಯು ಅಕ್ಟೋಬರ್‌ನಲ್ಲಿ ಕುಯಿಲಿಗೆ ಬಂದಾಗ, ಕೈಗೆ ಸಿಗುವ ಬತ್ತ ಅಷ್ಟಕ್ಕಷ್ಟೇ. ಎರಡನೆಯ ಬತ್ತದ ಬೆಳೆಯಷ್ಟು ಮೊದಲ ಬೆಳೆಯಲ್ಲಿ ಸಿಗುವುದಿಲ್ಲ. ಎರಡನೆಯ ಬೆಳೆಯ ಆರಂಭವು ದೀಪಾವಳಿಯ ಸಮಯದಲ್ಲಿ.
ಆಗ ದೊಡ್ಡ ತೋಡಿಗೆ ‘ಕಟ್ಟು’ (ಕೆಲವು ಕಡೆ ಇದನ್ನು ಕಟ್ಟ ಎಂದು ಕರೆಯುತ್ತಾರೆ) ಹಾಕಿ, ನೀರು ನಿಲ್ಲಿಸಿ, ಗದ್ದೆಗೆ ಹರಿಸುವ ಕ್ರಮ ನಮ್ಮ ಬೈಲಿನಲ್ಲಿತ್ತು. (ಈಗ ಆ ಪದ್ಧತಿ ಅಪರೂಪ ಎನಿಸಿದೆ). ಅಕ್ಕಪಕ್ಕದಲ್ಲಿರುವ ಕೃಷಿಕರು ಆರೆಂಟು ಜನ ಸೇರಿ ಕಟ್ಟು ಹಾಕುತ್ತಿದ್ದರು - ಅದು ಒಂದು ದಿನದ ಕೆಲಸ. ಮೊದಲಿಗೆ ಕಾಡು ಮರದ ತೊಲೆಗಳ, ಅಡಕೆಯ ದಪ್ಪ ದಬ್ಬೆಗಳನ್ನು ತೋಡಿಗೆ ಅಡ್ಡಲಾಗಿ ಜೋಡಿಸುತ್ತಾರೆ; ಆಗ ತೋಡಿನಲ್ಲಿ ತಿಳಿನೀರು ಹರಿಯುತ್ತಲೇ ಇರುತ್ತದೆ. ಒಂದೆರಡು ದೊಡ್ಡ ಮರದ ಕಾಂಡಗಳನ್ನು ಸಹ ಅಡ್ಡಲಾಗಿ ಇಡಬೇಕು; ಇದು ಕಟ್ಟಿಗೆ ಬಲ ತುಂಬುತ್ತದೆ. ನಂತರ ಪಕ್ಕದ ಹಕ್ಕಲಿನ ಗಿಡಗಳ ರೆಂಬೆಕೊಂಬೆ ಗಳನ್ನು ಕಡಿದು, ಅಡರು ಮಾಡಿ, ಆ ಮರದ ತುಂಡುಗಳ ನಡುವೆ ಸಿಕ್ಕಿಸುತ್ತಾರೆ; ಆ ನಂತರ, ಪಕ್ಕದಲ್ಲೇ ಇರುವ ದರೆಯ ಮಣ್ಣನ್ನು ತರಿದು, ಹೆಡಿಗೆಗಳಲ್ಲಿ ತುಂಬಿ, ಆ ಜಾಗಕ್ಕೆ ಸುರಿಯುತ್ತಾರೆ. ಪೂರ್ತಿ ಮಣ್ಣನ್ನು ತುಂಬಿ, ನೀರನ್ನು ತಡೆಯುವ ಕಟ್ಟು ಸಿದ್ಧವಾಗುವ ಹೊತ್ತಿಗೆ ಸಂಜೆಯಾಗುತ್ತದೆ.
ಮರುದಿನ ಬೆಳಗಿನ ಹೊತ್ತಿಗೆ ಕಟ್ಟಿನ ತುಂಬಾ ನೀರು. ಕಟ್ಟಿನ ನೀರು ಗದ್ದೆಗೆ ಬರಲು ಒಂದು ‘ನೀರ್ ಕಡು’ ಮಾಡುತ್ತಾರೆ. ಯಾವಾಗ ನೀರಿನ ಅಗತ್ಯವಿರುತ್ತದೋ, ಆಗೆಲ್ಲಾ ನೀರನ್ನು ಹರಿಸಿ, ಬತ್ತ ಬೆಳೆಯುತ್ತಾರೆ. ಒಂದು ಕಟ್ಟಿನ ನೀರು ಹತ್ತಾರು ಗದ್ದೆಗಳಿಗೆ ಸಾಕು. ದೊಡ್ಡ ತೋಡು ಹರಿದು ಮುಂದೆ ಸಾಗಿದ ಭಾಗದ ಕೆಲವು ರೈತರಿಗೆ, ನೀರಿನ ಕೊರತೆಯಾದರೆ, ಒಂದು ಕಿತಾಪತಿ ಮಾಡುತ್ತಾರೆ. ಈ ಕಿತಾಪತಿಯ ಸಾಹಸಕ್ಕೆ ರಾತ್ರಿಯೇ ಪ್ರಶಸ್ತ. ಇದೊಂದು ರೀತಿಯ ಕಳ್ಳತನ - ನೀರಿನ ಕಳ್ಳತನ. ದೊಡ್ಡ ಮರದ ಸ್ವಾಟೆ (ದಪ್ಪನೆಯ ಕೋಲು) ಹಿಡಿದು ನಿಶ್ಶಬ್ದವಾಗಿ ಕತ್ತಲಿನಲ್ಲೇ ನಡೆಯುತ್ತಾ, ಮೇಲ್ಭಾಗದ ಕಟ್ಟಿನ ಮಧ್ಯಕ್ಕೆ ಒಂದು ತೂತು ಮಾಡುತ್ತಾರೆ. ಆ ತೂತಿನ ಮೂಲಕ ನೀರು ನಿಧಾನ ವಾಗಿ ತೋಡಿನಲ್ಲಿ ಕೆಳಗೆ ಹರಿದು, ತುಸು ದೂರದಲ್ಲಿನ ಕೆಳಭಾಗದ ಕಟ್ಟಿನಲ್ಲಿ ತುಂಬಿಕೊಳ್ಳುತ್ತದೆ; ಆ ಕಟ್ಟಿಗೂ ಅಂತಹ ಒಂದು ಸಣ್ಣ ತೂತು ಮಾಡಿರುತ್ತಾರೆ; ಹೀಗೆ ನಾಲ್ಕಾರು ಕಟ್ಟುಗಳಿಗೆ ತೂತು ಮಾಡಿ, ಕೆಳಭಾಗದ ಕೆಲವರು ತಮ್ಮ ಕಟ್ಟಿನಲ್ಲಿ ನೀರು ತುಂಬಿಸಿಕೊಳ್ಳುತ್ತಾರೆ!
ಮೇಲ್ಭಾಗದಲ್ಲಿರುವ ಕಟ್ಟಿನ ಪಕ್ಕದ ಮನೆಯವರು ಬೆಳಗ್ಗೆ ಬಂದು ನೋಡಿದರೆ, ನೀರಿನ ಸಂಗ್ರಹ ಅರ್ಧ ಕ್ಕರ್ಧ ಖಾಲಿ! ಕೂಡಲೆ, ಕಿಡಿಗೇಡಿಗಳು ಮಾಡಿದ ತೂತನ್ನು ಮುಚ್ಚುತ್ತಾರೆ; ಸಂಜೆಯೊಳಗೆ ಪುನಃ ಕಟ್ಟಿನಲ್ಲಿ ನೀರು ತುಂಬಿಕೊಳ್ಳುತ್ತದೆ. ಈ ಕಿತಾಪತಿಯಲ್ಲೂ ಮಾನವೀಯತೆ, ಪರಸ್ಪರ ಸಹಕಾರ ಉಂಟು! ಬೇರೊಬ್ಬರು ನಿರ್ಮಿಸಿದ ಕಟ್ಟಿನಲ್ಲಿ ಸಣ್ಣ ತೂತನ್ನು ಮಾಡಿ ನೀರನ್ನು ಹರಿಸು ತ್ತಾರೆಯೇ ಹೊರತು, ಕಟ್ಟಿನ ಸ್ವರೂಪವನ್ನು ನಾಶ ಮಾಡುವುದಿಲ್ಲ, ಅನಾಹುತವನ್ನೂ ಮಾಡುವು ದಿಲ್ಲ; ಮರುದಿನ ಆ ತೂತನ್ನು ಮುಚ್ಚಿದಾಗ ನೀರು ತುಂಬಿಕೊಳ್ಳುತ್ತದೆ; ಕಿತಾಪತಿ ಮಾಡಿದವರಿಗೂ ಆ ರಾತ್ರಿ ಸ್ವಲ್ಪ ನೀರು ಸಿಗುತ್ತದೆ. ಇಂತಹ ಕಿತಾಪತಿ ಮಾಡಿದವರನ್ನು ಮೇಲ್ಭಾಗದ ಕಟ್ಟಿನವರು ಉದಾರ ಮನಸ್ಸಿನಿಂದ ಕ್ಷಮಿಸುತ್ತಿದ್ದರೇ ಹೊರತು, ಜಗಳಕ್ಕೆ ಹೋಗುತ್ತಿರಲಿಲ್ಲ.
ದೊಡ್ಡ ತೋಡಿನ ವಿಷಯ ಇಷ್ಟು ಹೇಳಿದ ಮೇಲೆ, ಮನೆಯ ಹತ್ತಿರವೇ ಇರುವ ಸಣ್ಣ ತೋಡಿನ ವಿಚಾರ ವನ್ನೂ ಹೇಳಬೇಕಲ್ಲವೆ? ಇಲ್ಲವಾದರೆ, ಸಣ್ಣ ತೋಡಿಗೆ, ಸಣ್ಣಗೆ ಅಸೂಯೆಯಾದೀತು! ಸಣ್ಣ ತೋಡು ಹರಿಯುವುದು ನಮ್ಮ ಮನೆಯಿಂದ ಸುಮಾರು ಐವತ್ತು ಅಡಿ ದೂರದಲ್ಲಿ. ಜೂನ್ ನಿಂದ ಅಕ್ಟೋಬರ್ ತನಕ ಮಾತ್ರ ಅದರಲ್ಲಿ ನೀರಿನ ಹರಿವು. ದೊಡ್ಡ ತೋಡು ಮತ್ತು ಸಣ್ಣ ತೋಡುಗಳು ಅಕ್ಕತಂಗಿಯ ರಿದ್ದಂತೆ. ನಮ್ಮ ಮನೆಯ ಹಿಂದಿನಿಂದ ಹರಿದು ಸಾಗುವ ಸಣ್ಣ ತೋಡು, ಎದುರಾಗುವ ಗದ್ದೆಬಯಲನ್ನು ಇಬ್ಭಾಗ ಮಾಡುತ್ತಾ ಉತ್ತರಕ್ಕೆ ಸಾಗಿ, ದೊಡ್ಡ ತೋಡನ್ನು ಸೇರಿಕೊಳ್ಳುತ್ತದೆ. ಕರೆಯುವುದು ಸಣ್ಣ ತೋಡು ಎಂದಾದರೂ, ಮಳೆಗಾಲದಲ್ಲಿ ಅದರ ರಭಸ ಕಡಿಮೆಯೇನಲ್ಲ!
ಸೊಪ್ಪಿನ ಅಣೆ, ಬೋಳುಗುಡ್ಡ ಮೊದಲಾದ ಪ್ರದೇಶಗಳ ಮಳೆ ನೀರು, ಅದರಲ್ಲಿ ತುಂಬಿ ಹರಿದು, ಸಣ್ಣ ನೆರೆಯನ್ನೇ ಸೃಷ್ಟಿಸುತ್ತದೆ. ಆ ಕೆಂಪನೆಯ ನೀರು ತುಂಬಿದ ಸಣ್ಣ ತೋಡು, ರಭಸದಿಂದ ದೊಡ್ಡ ತೋಡನ್ನು ಸೇರಿಕೊಳ್ಳುವ ಜಾಗದಲ್ಲಿ ಒಂದು ಗುಂಡಿ ಬಿದ್ದಿದೆ. ಜಡಿಮಳೆ ಕಡಿಮೆಯಾದಾಗ, ಉಜರು ನೀರು ಇನ್ನೂ ಹರಿಯುತ್ತಿರುವ ಸೆಪ್ಟೆಂಬರ್ ಸಮಯದಲ್ಲಿ, ಈ ಗುಂಡಿ ಯಲ್ಲಿ ಈಜುವ ಮಜವೇ ಮಜ! ಎರಡು ತೋಡುಗಳಿಂದ ಹರಿದು ಬರುವ ತಿಳಿಯಾದ ನೀರು, ಆ ಗುಂಡಿಯಲ್ಲಿ ತುಂಬಿದಾಗ ಮೂರು ಅಥವಾ ನಾಲ್ಕು ಅಡಿ ಆಳದ ಪುಟಾಣಿ ಈಜುಕೊಳವೇ ಅಲ್ಲಿ ನಿರ್ಮಾಣವಾಗುತ್ತದೆ.
ನಾವು ಮಕ್ಕಳು ಒಮ್ಮೊಮ್ಮೆ ಮಧ್ಯಾಹ್ನದ ಹೊತ್ತಿನಲ್ಲಿ ಆ ಗುಂಡಿಯಲ್ಲಿ ಮುಳುಗಿ ಸ್ನಾನ ಮಾಡುವು ದಿತ್ತು. ಜಾಸ್ತಿ ಈಜುವಷ್ಟು ಜಾಗ ಅಲ್ಲಿಲ್ಲ; ಕಾಲು ಬಡಿಯುತ್ತಾ, ಈಜುವಂತೆ ನಟಿಸುತ್ತಾ, ಒಂದು ಗಂಟೆ ಆ ನೀರಿನಲ್ಲಿ ಹೊರಳಾಡಿದರೆ, ಅದೇನೋ ವಿಶೇಷ ಆನಂದ, ಉಲ್ಲಾಸ. ಒಮ್ಮೊಮ್ಮೆ ನಮ್ಮ ಜತೆ, ಅಕ್ಕಪಕ್ಕದ ಮನೆಗಳವರ ಕೋಣಗಳು, ಹಸುಗಳು ಸಹ ಈ ಗುಂಡಿಯಲ್ಲಿ ಮೀಯುತ್ತಿದ್ದವು! ಇದೊಂದು ಜಾಗದಲ್ಲಿ, ನಮ್ಮ ಹಳ್ಳಿಯ ಕೋಣಗಳಿಗೂ, ಮನುಷ್ಯರಿಗೂ ಸಮಾನ ಸ್ಥಾನ. ಅವುಗಳನ್ನು ಆ ನೀರಿನ ಗುಂಡಿಗೆ ಕರೆದುಕೊಂಡು ಬಂದವರು, ನಾವು ಮಕ್ಕಳು, ಕೋಣಗಳು ಎಲ್ಲರೂ ಆ ತೋಡಿನ ನೀರಿನಲ್ಲಿ ಸ್ನಾನ ಮಾಡುವ ದೃಶ್ಯವನ್ನು ಕಲ್ಪಿಸಿಕೊಂಡರೆ, ಈಗ ಅದೊಂದು ಸ್ವರ್ಗದ ತುಣುಕಿನಂತೆಯೇ ಭಾಸವಾಗುತ್ತಿದೆ!
ಸುಮಾರು ಎರಡು ಕಿ.ಮೀ. ದೂರದಿಂದ ಹರಿದು ಬರುವ ದೊಡ್ಡ ತೋಡಿನಲ್ಲಿ ಸಾಕಷ್ಟು ಮೀನು ಗಳಿದ್ದವು; ಕಾಣಿ, ಕರ್ಸೆ ಹೆಸರಿನ ಅವೆಲ್ಲವೂ ಸಣ್ಣ ಗಾತ್ರದವು. ಅವನ್ನು ಹಿಡಿಯುವುದು ಕೆಲವರ ಹವ್ಯಾಸ. ಗಾಳ ಹಾಕಿ ಹಿಡಿಯುವುದು ಒಂದು ವಿಧಾನ; ಬಿದಿರಿನ ಕಡ್ಡಿಗಳ ಕೂಣಿಯಲ್ಲಿ ಮೀನು ಹಿಡಿಯುವುದು ಇನ್ನೊಂದು ವಿಧಾನ. ಜತೆಗೆ, ಕಾಡಿನ ಅದಾವುದೋ ಕಾಯಿಯನ್ನು ಜಜ್ಜಿ ತೋಡಿನ ನೀರಿಗೆ ಹಾಕಿ, ಆಗ ಸಾಮೂಹಿಕವಾಗಿ ಪ್ರಜ್ಞೆ ತಪ್ಪುವ ಮೀನುಗಳನ್ನು ಸಹ ಹಿಡಿಯುತ್ತಿದ್ದರು. ಮಳೆಗಾಲ ಪ್ರಾರಂಭವಾದಾಗ, ನೆರೆನೀರಿನಲ್ಲಿ ಬಹುದೂರದಿಂದ ಈಜಿ ನಮ್ಮ ತೋಡುಗಳಿಗೆ, ಬೈಲಿಗೆ ಬರುವ ‘ಹತ್ಮೀನು’ಗಳನ್ನು ಹಿಡಿಯುವುದೆಂದರೆ ಅದೊಂದು ಹಬ್ಬ - ಮಳೆ ಸುರಿಯು ತ್ತಿರುವಾಗಲೇ, ತೋಡು ಮತ್ತು ಗದ್ದೆಗಳಿಗೆ ನುಗ್ಗಿ ಬರುವ ಮೀನುಗಳನ್ನು ಹಿಡಿಯುವ ಹಬ್ಬ.
ಮಳೆಗಾಲದ ಚಕ್ರವೇ ಬದಲಾಗಿರುವ ಈಗಿನ ಸಂದರ್ಭದಲ್ಲಿ, ನಮ್ಮ ಹಳ್ಳಿಯ ತೋಡಿನ ನೀರಿನ ನೆನಪುಗಳು ಮಧುರ ಎನಿಸುತ್ತವೆ; ಇತ್ತೀಚಿನ ಕೆಲವು ವರ್ಷಗಳಲ್ಲಿ, ದೊಡ್ಡ ತೋಡಿನಲ್ಲಿ ಬಹು ಬೇಗನೆ, ಅಂದರೆ ನವೆಂಬರ್‌ಗಿಂತಲೂ ನೀರು ಮುಂಚೆಯೇ ಒಣಗಿ ಹೋಗುವುದುಂಟು. ಏಕೆಂದರೆ, ಅದಕ್ಕೆ ನೀರುಣಿಸುತ್ತಿದ್ದ ಬೆಟ್ಟ ಗುಡ್ಡಗಳಲ್ಲಿ, ಈಚೆಗೆ ನಾನಾ ಕಾಮಾಗಾರಿಗಳು ನಡೆಯುತ್ತಿವೆ. ಹೊಸ ರಸ್ತೆ, ಅದಕ್ಕಾಗಿ ಮರ ಕಡಿತ, ಹೊಸ ನೀರಾವರಿ ಕಾಲುವೆಗಾಗಿ, ಗುಡ್ಡ ಅಗೆತ, ಹಲವು ಕಡೆ ಕಾಡು ಮರಗಳನ್ನು ಉರುಳಿಸಿ ಅದರ ಜಾಗದಲ್ಲಿ ಅಕೇಶಿಯಾ ಬೆಳೆದಿರುವುದು, ಪಂಪ್ ಬಳಸಿ ನೀರೆತ್ತುವ ಆಧುನಿಕ ಕೃಷಿ ಹೀಗೆ ನಾನಾ ಚಟುವಟಿಕೆಗಳಿಂದ ದೊಡ್ಡ ತೋಡು ಸೊರಗುತ್ತಿದೆ. ಯಾರಿಗೆ ಗೊತ್ತು, ಇದೇ ರೀತಿ ಮುಂದುವರಿದರೆ, ಇನ್ನು ಕೆಲವು ದಶಕಗಳಲ್ಲಿ, ದೊಡ್ಡ ತೋಡು ಒಂದು ಪಳೆಯುಳಿಕೆಯಾಗಿ ಪರಿವರ್ತನೆ ಹೊಂದುತ್ತದೋ ಏನೋ!