ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Roopa Gururaj Column: ನಮ್ಮ ವೇದ ಪುರಾಣಗಳ ದಿವ್ಯದರ್ಶನ

ಆ ಜಿಜ್ಞಾಸು ವಿನಯದಿಂದಲೇ, ‘ಗುರುದೇವ, ನೀವು ವೇದಗಳನ್ನು ಸುಲಭವಾಗಿ ವಿಂಗಡಿಸಿಕೊಟ್ಟರಿ. ಆದರೂ ನನ್ನಂತಹ ಸಾಮಾನ್ಯ ಮನುಷ್ಯನಿಗೆ ಈ ಗೂಢವಾದ ಮಂತ್ರಗಳ ತತ್ವಗಳು ನೇರವಾಗಿ ಅರ್ಥವಾಗುವುದು ಕಷ್ಟವಲ್ಲವೇ?’ ಎಂದು ಕೈ ಮುಗಿದ. ಆಗ ವೇದವ್ಯಾಸರು, ‘ನಿನ್ನ ಆತಂಕ ನಿಜವಾ ದದ್ದು. ಅದಕ್ಕಾಗಿಯೇ ವೇದಗಳನ್ನು ಕೇವಲ ವಿಂಗಡಿಸದೆ ಅವುಗಳ ಕಠಿಣ ತತ್ವಗಳನ್ನು ಸಾಮಾನ್ಯ ಜನರಿಗೂ ತಲುಪಿಸಲು ಕಥೆಗಳ ರೂಪದಲ್ಲಿ ಒಂದು ಹೊಸ ಸಾಹಿತ್ಯವನ್ನೇ ಸ್ವತಃ ರಚಿಸಿದ್ದೇನೆ

Roopa Gururaj Column: ನಮ್ಮ ವೇದ ಪುರಾಣಗಳ ದಿವ್ಯದರ್ಶನ

-

ಒಂದೊಳ್ಳೆ ಮಾತು

ದಟ್ಟವಾದ ಕಾಡಿನ ಮಧ್ಯೆ, ಹರಿಯುವ ನದಿಯ ದಂಡೆಯ ಮೇಲೆ ಮಹರ್ಷಿ ಕೃಷ್ಣ ದ್ವೈಪಾಯನರ ಆಶ್ರಮವಿತ್ತು. ಅಂದು ಆಶ್ರಮಕ್ಕೆ ಒಬ್ಬ ತರುಣ ಜಿeಸು ಬಂದಿದ್ದ. ಅತ್ಯಂತ ಭಕ್ತಿಯಿಂದ ಮಹರ್ಷಿ ಗಳ ಪಾದಕ್ಕೆ ನಮಸ್ಕರಿಸಿ ತರುಣ ಕುತೂಹಲದಿಂದ ಕೇಳಿದ, ‘ಗುರುಗಳೇ, ವೇದಗಳು ಮೊದಲಿ ನಿಂದಲೂ ಹೀಗೆ ನಾಲ್ಕಾಗಿದ್ದವೇ?’ ಮಹರ್ಷಿಗಳು ಗಂಭೀರವಾಗಿ ಉತ್ತರಿಸಿದರು, ‘ಇಲ್ಲ, ಸೃಷ್ಟಿಯ ಆದಿಯಲ್ಲಿ ಋಷಿಮುನಿಗಳ ತಪಸ್ಸಿನ ದಿವ್ಯ ಜ್ಞಾನದಿಂದ ಸುರಿಸಿದ ಬ್ರಹ್ಮಜ್ಞಾನದ ಧ್ವನಿಗಳೇ ವೇದಗಳು. ಅವುಗಳನ್ನು ಯಾವುದೇ ಮನುಷ್ಯ ಸೃಷ್ಟಿಸಿದ್ದಲ್ಲ, ಅವು ಅಪೌರುಷೇಯ.

ಮೂಲತಃ ವೇದವು ಒಂದು ವಿಶಾಲವಾದ ಮಹಾಸಾಗರದ ಜ್ಞಾನವಾಗಿತ್ತು. ಆದರೆ ಕಾಲ ಉರುಳಿ ದಂತೆ, ಕಲಿಯುಗದ ಮನುಷ್ಯರ ಆಯುಷ್ಯ ಮತ್ತು ಬುದ್ಧಿಶಕ್ತಿ ಕಡಿಮೆಯಾಗುವುದನ್ನು ಕಂಡು, ಆ ವಿಶಾಲ ಜ್ಞಾನವನ್ನು ಅಧ್ಯಯನ ಮಾಡುವುದು ಅಸಾಧ್ಯ ಎಂದು ನನಗನಿಸಿತು.

ಅದಕ್ಕಾಗಿಯೇ ಆ ಒಂದೇ ವೇದದ ಮಹಾ ಪ್ರವಾಹವನ್ನು ಮನುಕುಲದ ಕಲ್ಯಾಣಕ್ಕಾಗಿ ನಾಲ್ಕು ಭಾಗಗಳಾಗಿ ವಿಂಗಡಿಸಿದೆ. ಹಾಗೆ ವೇದಗಳನ್ನು ವಿಭಾಗಿಸಿದ (ವ್ಯಾಸಗೊಳಿಸಿದ) ಕಾರಣಕ್ಕಾಗಿಯೇ ಲೋಕ ನನ್ನನ್ನು ವೇದವ್ಯಾಸ ಎಂದು ಕರೆಯಿತು’ ಎಂದರು ಮುಗುಳ್ನಗುತ್ತಾ.

ಇದನ್ನೂ ಓದಿ: Roopa Gururaj Column: ಅಕ್ಷರ ಸಂತ ಹರೇಕಳ ಹಾಜಬ್ಬ

ನಾಲ್ಕು ವೇದಗಳು ಇವು:

೧. ಮೊದಲನೆಯದು ಋಗ್ವೇದ, ಪ್ರಕೃತಿಯ ಶಕ್ತಿಗಳನ್ನು, ದೇವತೆಗಳನ್ನು ಸ್ತುತಿಸುವ ಮಂತ್ರಗಳ ಭಂಡಾರ. ಸೃಷ್ಟಿಯ ಆದಿ ಧ್ವನಿ ಇದು.

೨. ಎರಡನೆಯದು ಸಾಮವೇದ, ಋಗ್ವೇದದ ಮಂತ್ರಗಳಿಗೆ ಮಧುರವಾದ ಗಾಯನದ ರೂಪ ಕೊಟ್ಟು, ಸಂಗೀತದ ಮೂಲಕ ದೈವತ್ವವನ್ನು ತಲುಪುವ ಮಾರ್ಗ.

೩. ಮೂರನೆಯದು ಯಜುರ್ವೇದ, ಜ್ಞಾನವನ್ನು ಕ್ರಿಯೆಯನ್ನಾಗಿ ಬದಲಾಯಿಸುವುದು ಹೇಗೆ, ಯಾಗ-ಯಜ್ಞಗಳನ್ನು ಯಾವ ನಿಯಮದಂತೆ ಮಾಡಬೇಕು ಎಂದು ತಿಳಿಸುವ ವಿಧಿವಿಧಾನಗಳು.

೪. ನಾಲ್ಕನೆಯದು ಅಥರ್ವವೇದ, ನಿನ್ನ ದೈನಂದಿನ ಜೀವನಕ್ಕೆ ಹತ್ತಿರವಾದದ್ದು. ಆರೋಗ್ಯ, ಆಯುರ್ವೇದ, ಸಮಾಜದಲ್ಲಿ ಬದುಕುವ ಕಲೆ ಮತ್ತು ರಕ್ಷಣೆಯ ಮಂತ್ರಗಳು ಇದರಲ್ಲಿವೆ’ ಎಂದರು.

ಆ ಜಿಜ್ಞಾಸು ವಿನಯದಿಂದಲೇ, ‘ಗುರುದೇವ, ನೀವು ವೇದಗಳನ್ನು ಸುಲಭವಾಗಿ ವಿಂಗಡಿಸಿಕೊಟ್ಟರಿ. ಆದರೂ ನನ್ನಂತಹ ಸಾಮಾನ್ಯ ಮನುಷ್ಯನಿಗೆ ಈ ಗೂಢವಾದ ಮಂತ್ರಗಳ ತತ್ವಗಳು ನೇರವಾಗಿ ಅರ್ಥವಾಗುವುದು ಕಷ್ಟವಲ್ಲವೇ?’ ಎಂದು ಕೈ ಮುಗಿದ. ಆಗ ವೇದವ್ಯಾಸರು, ‘ನಿನ್ನ ಆತಂಕ ನಿಜವಾದದ್ದು. ಅದಕ್ಕಾಗಿಯೇ ವೇದಗಳನ್ನು ಕೇವಲ ವಿಂಗಡಿಸದೆ ಅವುಗಳ ಕಠಿಣ ತತ್ವಗಳನ್ನು ಸಾಮಾನ್ಯ ಜನರಿಗೂ ತಲುಪಿಸಲು ಕಥೆಗಳ ರೂಪದಲ್ಲಿ ಒಂದು ಹೊಸ ಸಾಹಿತ್ಯವನ್ನೇ ಸ್ವತಃ ರಚಿಸಿದ್ದೇನೆ. ಅವುಗಳೇ 18 ಮಹಾಪುರಾಣಗಳು. ವೇದಗಳು ಕಣ್ಣಿಗೆ ಕಾಣದ ಪರಮ ಸತ್ಯವನ್ನು ನಿಯಮಗಳ ರೂಪದಲ್ಲಿ ಹೇಳಿದರೆ, ನಾನು ರಚಿಸಿದ ಪುರಾಣಗಳು ಆ ಸತ್ಯಕ್ಕೆ ರೂಪ ಕೊಟ್ಟು ಕಥೆಗಳ ಮೂಲಕ ಬದುಕನ್ನು ಕಲಿಸುತ್ತವೆ’ ಎಂದು ಮಹರ್ಷಿಗಳು ತಾವು ರಚಿಸಿದ ಹದಿನೆಂಟು ಪುರಾಣಗಳನ್ನು ಪರಿಚಯಿಸಿದರು:

೧. ಸೃಷ್ಟಿ ಮತ್ತು ಶಕ್ತಿಯ ಪಾಠ (ಬ್ರಹ್ಮ ಪುರಾಣಗಳು): ಲೋಕದ ಸೃಷ್ಟಿ ಮತ್ತು ಬ್ರಹ್ಮಾಂಡದ ರಹಸ್ಯ ತಿಳಿಸುವುದೇ ಬ್ರಹ್ಮ ಪುರಾಣ ಮತ್ತು ಬ್ರಹ್ಮಾಂಡ ಪುರಾಣ. ಹೆಣ್ಣಿನ ಒಳಗಿರುವ ದೈವೀ ಶಕ್ತಿಯನ್ನು ಕೊಂಡಾಡುವ ಮಾರ್ಕಂಡೇಯ ಪುರಾಣ (ಇದರ ದೇವಿ ಮಹಾತ್ಮ್ಯ ಇರುವುದು). ಭವಿಷ್ಯದ ದಿಕ್ಸೂಚಿಯಾಗಿ ಭವಿಷ್ಯ ಪುರಾಣ, ಕೃಷ್ಣನ ಲೀಲೆಗಳನ್ನೊಳಗೊಂಡ ಬ್ರಹ್ಮವೈವರ್ತ ಪುರಾಣ ಮತ್ತು ವಾಮನನ ಕಥೆ ಹೇಳುವ ವಾಮನ ಪುರಾಣ.

  1. ಸ್ಥಿತಿ ಮತ್ತು ಭಕ್ತಿಯ ಮಾರ್ಗ (ವಿಷ್ಣು ಪುರಾಣಗಳು): ಲೋಕವನ್ನು ರಕ್ಷಿಸುವ ಕರುಣಾಮಯಿ ಶಕ್ತಿಯನ್ನು ತಿಳಿಯಲು ವಿಷ್ಣು ಪುರಾಣ ಹಾಗೂ ಭಕ್ತಿರಸದ ಶಿಖರವಾದ ಭಾಗವತ ಪುರಾಣ. ಧರ್ಮದ ಸೂಕ್ಷ್ಮಗಳನ್ನು ವಿವರಿಸುವ ನಾರದ ಪುರಾಣ, ಭೂಮಿಯನ್ನು ರಕ್ಷಿಸಿದ ವರಾಹನ ಕಥೆಯಿರುವ ವರಾಹ ಪುರಾಣ, ವಿಶಾಲವಾದ eನವಿರುವ ಪದ್ಮ ಪುರಾಣ ಮತ್ತು ಸಾವಿನ ನಂತರದ ಜೀವನ ಹಾಗೂ ಕರ್ಮಫಲದ ಬಗ್ಗೆ ಎಚ್ಚರಿಸುವ ಗರುಡ ಪುರಾಣ.
  2. ಲಯ ಮತ್ತು ವೈರಾಗ್ಯದ ದರ್ಶನ (ಶಿವ ಪುರಾಣಗಳು): ತ್ಯಾಗ ಮತ್ತು ಲಯದ ಸಂಕೇತ ವಾದ ಪರಶಿವನ ಮಹಿಮೆಯನ್ನು ತಿಳಿಸಲು ಶಿವ ಪುರಾಣ ಹಾಗೂ ನಿರಾಕಾರ ಸತ್ಯವನ್ನು ಆರಾಧಿಸುವ ಲಿಂಗ ಪುರಾಣ. ಹದಿನೆಂಟು ಪುರಾಣಗಳ ಅತಿ ದೊಡ್ಡದಾದ, ಕಾರ್ತಿಕೇಯನ ಶೌರ್ಯ ಸಾರುವ ಸ್ಕಂದ ಪುರಾಣ. ಇದರೊಂದಿಗೆ ಸರ್ವಕಲೆಗಳ ವಿಶ್ವಕೋಶದಂತಿರುವ ಅಗ್ನಿ ಪುರಾಣ, ಪ್ರಳಯದ ಕಾಲದಲ್ಲಿ ದಾರಿ ತೋರಿಸಿದ ಮತ್ಸ್ಯ ಹಾಗೂ ಕೂರ್ಮ ಅವತಾರಗಳ ಕಥೆ ಹೇಳುವ ಮತ್ಸ್ಯ ಪುರಾಣ ಮತ್ತು ಕೂರ್ಮ ಪುರಾಣಗಳನ್ನು ಸೃಷ್ಟಿಸಲಾಗಿದೆ ಎಂದರು.

ಇದನ್ನೆಲ್ಲ ಕೇಳುತ್ತಿದ್ದ ತರುಣ ಜಿಜ್ಞಾಸುವಿಗೆ ಕಣ್ತುಂಬಿ ಬಂದಿತ್ತು. ಬದುಕಿಗೆ ಒಂದು ಸಂಸ್ಕಾರ ವನ್ನು ಜ್ಞಾನದ ಮೋಕ್ಷವನ್ನು ನೀಡಲು ನಮ್ಮ ಸನಾತನ ಧರ್ಮ ಅದೆಷ್ಟೊಂದು ಕಾಣಿಕೆಗಳನ್ನು ನಮಗೆ ನೀಡಿದೆ. ಇವುಗಳನ್ನು ಅರಿತು ಬದುಕುವ ಪುಣ್ಯ ಒದಗಿ ಬರಲಿ ಎಂದು ಆಶೀರ್ವದಿಸಿ ಎಂದನು ನಮಸ್ಕರಿಸುತ್ತಾ. ಇಂತಹ ವೇದ ಪುರಾಣಗಳು ನಮ್ಮ ಓದಿಗೆ, ಅರಿವಿಗೆ ಸಿಗುವಂತಹ ಪುಣ್ಯಭೂಮಿಯಲ್ಲಿ ನಾವು ಜನಿಸಿದ್ದೇವೆ. ಇವುಗಳ ಮಹತ್ವ ಅರಿತು, ಅಳವಡಿಸಿಕೊಂಡು ಬದುಕನ್ನು ಬಂಗಾರವಾಗಿಸಿಕೊಳ್ಳೋಣ.