ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishweshwar Bhat Column: ವರ್ಜೀನಿಯಾದ ಅಗ್ಗಳಿಕೆ

ಅಮೆರಿಕದ ಸ್ವಾತಂತ್ರ್ಯ ಸಂಗ್ರಾಮ, ಸಂವಿಧಾನದ ರಚನೆ ಮತ್ತು ಆರಂಭಿಕ ರಾಷ್ಟ್ರ ನಿರ್ಮಾಣದಲ್ಲಿ ಈ ರಾಜ್ಯದ ಕೊಡುಗೆ ಅನನ್ಯವಾದದ್ದು. ಅಮೆರಿಕದ ರಾಷ್ಟ್ರಪಿತ ಎಂದು ಕರೆಯಿಸಿಕೊಳ್ಳುವ ಜಾರ್ಜ್ ವಾಷಿಂಗ್ಟನ್, ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಯುದ್ಧದಲ್ಲಿ ಅಮೆರಿಕನ್ ಸೈನ್ಯವನ್ನು ಮುನ್ನಡೆಸಿ ಗೆಲುವು ತಂದುಕೊಟ್ಟರು. ಇವರು ದೇಶದ ಮೊದಲ ಅಧ್ಯಕ್ಷರಾಗಿ ಯಾವುದೇ ವಿರೋಧ ವಿಲ್ಲದೆ ಆಯ್ಕೆಯಾದರು. ಇವರ ನಾಯಕತ್ವ ಮತ್ತು ಆದರ್ಶಗಳು ಇಂದಿಗೂ ಅಮೆರಿಕದ ಪ್ರಜಾ ಪ್ರಭುತ್ವಕ್ಕೆ ಅಡಿಪಾಯವಾಗಿವೆ.

Vishweshwar Bhat Column: ವರ್ಜೀನಿಯಾದ ಅಗ್ಗಳಿಕೆ

-

ಸಂಪಾದಕೀಯ ಸದ್ಯಶೋಧನೆ

ಅಮೆರಿಕ ಸಂಯುಕ್ತ ಸಂಸ್ಥಾನದ (USA) ರಾಜಕೀಯ ಇತಿಹಾಸವನ್ನು ಗಮನಿಸಿದಾಗ, ಒಂದು ರಾಜ್ಯವು ಅತ್ಯಂತ ವಿಶಿಷ್ಟ ಮತ್ತು ಹೆಮ್ಮೆಯ ಸ್ಥಾನವನ್ನು ಪಡೆದುಕೊಂಡಿದೆ. ಅದು ವರ್ಜೀನಿಯಾ. ಅಮೆರಿಕದ ಇತಿಹಾಸದಲ್ಲಿ ಅತ್ಯಂತ ಹೆಚ್ಚು ಅಧ್ಯಕ್ಷರನ್ನು ದೇಶಕ್ಕೆ ನೀಡಿದ ಹೆಗ್ಗಳಿಕೆ ವರ್ಜೀನಿಯಾ ರಾಜ್ಯಕ್ಕೆ ಸಲ್ಲುತ್ತದೆ. ಈ ಕಾರಣಕ್ಕಾಗಿಯೇ ವರ್ಜೀನಿಯಾವನ್ನು ‘ಮದರ್ ಆಫ್ ಪ್ರೆಸಿಡೆಂಟ್ಸ್’ ಎಂದು ಕರೆಯಲಾಗುತ್ತದೆ. ಅಮೆರಿಕವನ್ನು ಆಳಿದವರ ಪೈಕಿ ಒಟ್ಟು 8 ಅಧ್ಯಕ್ಷರು ವರ್ಜೀನಿಯಾ ಮಣ್ಣಿನಲ್ಲಿ ಜನಿಸಿದವರಾಗಿದ್ದಾರೆ.

ಅಮೆರಿಕದ ಸ್ವಾತಂತ್ರ್ಯ ಸಂಗ್ರಾಮ, ಸಂವಿಧಾನದ ರಚನೆ ಮತ್ತು ಆರಂಭಿಕ ರಾಷ್ಟ್ರ ನಿರ್ಮಾಣದಲ್ಲಿ ಈ ರಾಜ್ಯದ ಕೊಡುಗೆ ಅನನ್ಯವಾದದ್ದು. ಅಮೆರಿಕದ ರಾಷ್ಟ್ರಪಿತ ಎಂದು ಕರೆಯಿಸಿಕೊಳ್ಳುವ ಜಾರ್ಜ್ ವಾಷಿಂಗ್ಟನ್, ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಯುದ್ಧದಲ್ಲಿ ಅಮೆರಿಕನ್ ಸೈನ್ಯವನ್ನು ಮುನ್ನಡೆಸಿ ಗೆಲುವು ತಂದುಕೊಟ್ಟರು. ಇವರು ದೇಶದ ಮೊದಲ ಅಧ್ಯಕ್ಷರಾಗಿ ಯಾವುದೇ ವಿರೋಧ ವಿಲ್ಲದೆ ಆಯ್ಕೆಯಾದರು. ಇವರ ನಾಯಕತ್ವ ಮತ್ತು ಆದರ್ಶಗಳು ಇಂದಿಗೂ ಅಮೆರಿಕದ ಪ್ರಜಾ ಪ್ರಭುತ್ವಕ್ಕೆ ಅಡಿಪಾಯವಾಗಿವೆ.

ಇವರು ವರ್ಜೀನಿಯಾದ ವೆಸ್ಟ್‌ಮೋರ್‌ಲ್ಯಾಂಡ್ ಕೌಂಟಿಯವರು. ಅಮೆರಿಕದ ಸ್ವಾತಂತ್ರ್ಯ ಘೋಷಣೆಯ ಮುಖ್ಯ ರೂವಾರಿ ಥಾಮಸ್ ಜೆಫರ್ಸನ್. ಇವರು ಕೇವಲ ರಾಜಕಾರಣಿಯಾಗಿರಲಿಲ್ಲ, ಬದಲಿಗೆ ಒಬ್ಬ ಮಹಾನ್ ತತ್ವಜ್ಞಾನಿ, ವಾಸ್ತುಶಿಲ್ಪಿ ಮತ್ತು ಲೇಖಕರಾಗಿದ್ದರು. ಇವರು ವರ್ಜೀನಿಯಾದ ಶಾಡ್ವೆಲ್‌ನಲ್ಲಿ ಜನಿಸಿದವರು. ಜೇಮ್ಸ ಮ್ಯಾಡಿಸನ್ ಅವರನ್ನು ‘ಅಮೆರಿಕನ್ ಸಂವಿಧಾನದ ಪಿತಾಮಹ’ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ: Vishweshwar Bhat Column: ಓಶೋ ನೀಡಿದ ಎರಡು ಉತ್ತರ

ಅಮೆರಿಕದ ಸಂವಿಧಾನವನ್ನು ರೂಪಿಸುವಲ್ಲಿ ಮತ್ತು ನಾಗರಿಕರ ಹಕ್ಕುಗಳ ಮಸೂದೆಯನ್ನು ( Bill of Rights) ಸಿದ್ಧಪಡಿಸುವಲ್ಲಿ ಇವರ ಪಾತ್ರ ಪ್ರಮುಖವಾಗಿತ್ತು. ಇವರು ವರ್ಜೀನಿಯಾದ ಪೋರ್ಟ್ ಕಾನ್ವೇಯವರು. ಅಮೆರಿಕದ ಐದನೇ ಅಧ್ಯಕ್ಷ ಜೇಮ್ಸ ಮನ್ರೋ ಕೂಡ ವರ್ಜೀನಿಯಾದ ವೆಸ್ಟ್‌ ಮೋರ್‌ಲ್ಯಾಂಡ್ ಕೌಂಟಿಯವರು. ಇವರ ಆಡಳಿತಾವಧಿಯನ್ನು ಅಮೆರಿಕದ ಇತಿಹಾಸದಲ್ಲಿ ‘ಒಳ್ಳೆಯ ಭಾವನೆಗಳ ಯುಗ’ ಎಂದು ಕರೆಯಲಾಗುತ್ತದೆ.

ವಿಲಿಯಂ ಹೆನ್ರಿ ಹ್ಯಾರಿಸನ್, ಜಾನ್ ಟೈಲರ್, ಜಕರಿ ಟೇಲರ್ ಕೂಡ ವರ್ಜೀನಿಯಾದವರೇ. ಮೊದಲನೇ ಮಹಾಯುದ್ಧದ ಸಮಯದಲ್ಲಿ ಅಮೆರಿಕವನ್ನು ಮುನ್ನಡೆಸಿದ ನಾಯಕ ವುಡ್ರೋ ವಿಲ್ಸನ್ ಯುದ್ಧದ ನಂತರ ಜಾಗತಿಕ ಶಾಂತಿಗಾಗಿ ಲೀಗ್ ಆಫ್ ನೇಷನ್ಸ್ (League of Nations) ಸಂಸ್ಥೆಯನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಇವರ ಅಂತಾರಾಷ್ಟ್ರೀಯ ಶಾಂತಿ ಪ್ರಯತ್ನಗಳಿಗಾಗಿ ಇವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಲಭಿಸಿತು. ಇವರು ಸಹ ವರ್ಜೀನಿಯಾದವರೇ. ವರ್ಜೀನಿಯಾ ಇಷ್ಟೊಂದು ಅಧ್ಯಕ್ಷರನ್ನು ನೀಡಲು ಕಾರಣಗಳೇನು?

ಅಮೆರಿಕದ ಆರಂಭಿಕ ಇತಿಹಾಸದಲ್ಲಿ ವರ್ಜೀನಿಯಾ ರಾಜ್ಯವು ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕವಾಗಿ ಅತ್ಯಂತ ಶಕ್ತಿಶಾಲಿ ರಾಜ್ಯವಾಗಿತ್ತು. ಇದಕ್ಕೆ ಪ್ರಮುಖ ಕಾರಣಗಳು- ಆರಂಭಿಕ ವಸಾಹತು ಇತಿಹಾಸ. ಬ್ರಿಟಿಷರು ಅಮೆರಿಕದಲ್ಲಿ ಸ್ಥಾಪಿಸಿದ ಮೊದಲ ಯಶಸ್ವಿ ವಸಾಹತು ‘ಜೇಮ್ಸ್‌ ಟೌನ್’ ವರ್ಜೀನಿಯಾದಲ್ಲಿತ್ತು. ಹಾಗಾಗಿ, ರಾಜಕೀಯ ಚಿಂತನೆಗಳು ಮತ್ತು ನಾಯಕತ್ವದ ಗುಣಗಳು ಇಲ್ಲಿ ಶತಮಾನಗಳಿಗೂ ಮುನ್ನವೇ ಮೊಳಕೆಯೊಡೆದಿದ್ದವು.

ಆರ್ಥಿಕ ಮತ್ತು ಜನಸಂಖ್ಯೆಯ ಬಲವೂ ಒಂದು ಕಾರಣವಾಗಿದ್ದಿರಬಹುದು. ತಂಬಾಕು ಕೃಷಿಯ ಮೂಲಕ ವರ್ಜೀನಿಯಾ ಅತ್ಯಂತ ಶ್ರೀಮಂತ ರಾಜ್ಯವಾಗಿತ್ತು. ಹದಿನೆಂಟನೇ ಶತಮಾನದಲ್ಲಿ ಅಮೆರಿಕದ ಅತಿ ಹೆಚ್ಚು ಜನಸಂಖ್ಯೆ ಹೊಂದಿದ್ದ ರಾಜ್ಯ ಇದಾಗಿದ್ದರಿಂದ, ಸ್ವಾಭಾವಿಕವಾಗಿ ರಾಜಕೀಯದಲ್ಲಿ ಇದರ ಪ್ರಭಾವ ಹೆಚ್ಚಾಗಿತ್ತು. ಅಮೆರಿಕದ ಮೊದಲ ಐದು ಅಧ್ಯಕ್ಷರಲ್ಲಿ ನಾಲ್ವರು ವರ್ಜೀನಿಯಾದವರೇ ಆಗಿದ್ದರು (ವಾಷಿಂಗ್ಟನ್, ಜೆಫರ್ಸನ್, ಮ್ಯಾಡಿಸನ್, ಮನ್ರೋ). ಈ ಅವಧಿ ಯನ್ನು ಇತಿಹಾಸದಲ್ಲಿ ‘ವರ್ಜೀನಿಯಾ ರಾಜವಂಶದ ಆಡಳಿತ’ ಎಂದೇ ಕರೆಯಲಾಗುತ್ತದೆ.

ಅಮೆರಿಕದಲ್ಲಿ ಅತಿ ಹೆಚ್ಚು ಅಧ್ಯಕ್ಷರನ್ನು ನೀಡಿದ ರಾಜ್ಯಗಳ ಪಟ್ಟಿಯಲ್ಲಿ ವರ್ಜೀನಿಯಾ ಪ್ರಥಮ ಸ್ಥಾನದಲ್ಲಿದ್ದರೆ, ಒಹಾಯೋ ರಾಜ್ಯವು ಪೈಪೋಟಿ ನೀಡುತ್ತದೆ. ಅಲ್ಲಿಂದ ಏಳು ಮಂದಿ ಅಧ್ಯಕ್ಷ ರಾಗಿದ್ದಾರೆ. ವರ್ಜೀನಿಯಾದಲ್ಲಿ ಜನಿಸಿದ ಅಧ್ಯಕ್ಷರು ಕೇವಲ ಅಧಿಕಾರ ನಡೆಸಲಿಲ್ಲ, ಬದಲಿಗೆ ಇಡೀ ವಿಶ್ವದ ರಾಜಕೀಯ ವ್ಯವಸ್ಥೆಯನ್ನೇ ಬದಲಾಯಿಸಿದರು.

ಜಾರ್ಜ್ ವಾಷಿಂಗ್ಟನ್ ಅಧಿಕಾರದ ಆಸೆ ಇಲ್ಲದೇ ಎರಡು ಅವಽಯ ನಂತರ ಸ್ವಇಚ್ಛೆಯಿಂದ ನಿವೃತ್ತಿ ಪಡೆದು ಜಗತ್ತಿಗೆ ಮಾದರಿಯಾದರು. ಥಾಮಸ್ ಜೆಫರ್ಸನ್ ಮಾನವ ಹಕ್ಕುಗಳ ಬಗ್ಗೆ ಬರೆದ ಸಾಲು ಗಳು ಇಂದಿಗೂ ವಿಶ್ವಸಂಸ್ಥೆಯ ನೀತಿಗಳಿಗೆ ಪ್ರೇರಣೆಯಾಗಿವೆ. ಜೇಮ್ಸ್ ಮ್ಯಾಡಿಸನ್ ಬರೆದ ಸಂವಿ ಧಾನದ ತತ್ವಗಳನ್ನು ಇಂದು ಭಾರತ ಸೇರಿದಂತೆ ಜಗತ್ತಿನ ನೂರಾರು ಪ್ರಜಾಪ್ರಭುತ್ವ ರಾಷ್ಟ್ರಗಳು ಅಳವಡಿಸಿಕೊಂಡಿವೆ.