ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Naveen Sagar Column: ವೈಲ್ಡ್‌ ಕಾರ್ಡ್‌ ಪಡೆದು ರೊಚ್ಚಿಗೆದ್ದು ಆಡಿದ ಹುಚ್ಚ !

ಕಳೆದೊಂದು ವಾರದಿಂದ ನನ್ನ ಮನಸು ಫುಟ್ಬಾಲ್ ಆಡುತ್ತಿದೆ. ಒಂದಷ್ಟು ಆಟಗಾರರಿಗಾಗಿ, ಕೆಲವು ತಂಡಗಳಿಗಾಗಿ ಟೈಮ್ ಟೇಬಲ್ ಮೇಲೆ ಮಾರ್ಕ್ ಮಾಡ್ಕೊಂಡು, ಆ ದಿನಕ್ಕೆ ಅಲಾರ್ಮ್ ಇಟ್ಕೊಂಡು ಫಾಲೋ ಮಾಡ್ತಾ ಇದೀನಿ. ಮರಡೋನಾ ಕಾಲದಿಂದ ಅರ್ಜೆಂಟೀನಾ ತಂಡದ ಮೇಲೊಂದು ಪ್ರೀತಿ. ಅದು ಮೆಸ್ಸಿಯ ತನಕವೂ ಮುಂದುವರಿದಿದೆ.

ವೈಲ್ಡ್‌ ಕಾರ್ಡ್‌ ಪಡೆದು ರೊಚ್ಚಿಗೆದ್ದು ಆಡಿದ ಹುಚ್ಚ !

-

Profile
Ashok Nayak Jun 16, 2026 9:49 AM

ಪದಸಾಗರ

ಮೊನ್ನೆಮೊನ್ನೆಯಷ್ಟೇ ಐಪಿಎಲ್ ಹುಚ್ಚು ಬಿಟ್ಟಿತ್ತು. ಅಷ್ಟರಲ್ಲಿ ಫಿಫಾ ಫುಟ್ಬಾಲ್ ವಿಶ್ವಕಪ್ ಶುರು ವಾಗಿದೆ. ಇದರ ಜೊತೆಜೊತೆಯ ಈ ತಿಂಗಳ ಕೊನೆಗೆ ವಿಂಬಲ್ಡನ್ ಹುಚ್ಚು ಶುರುವಾಗಲಿದೆ. ಮನುಷ್ಯ ಮೂಲತಃ ಹುಚ್ಚ. ಅದು ಆತನ ಮೂಲಗುಣ. ಬದುಕಿರುವ ತನಕವೂ ಹುಚ್ಚು ಬಿಡುವು ದಿಲ್ಲ. ಅದು ಒಂದು ಹುಚ್ಚಿನಿಂದ ಇನ್ನೊಂದು ಹುಚ್ಚಾಗಿ ಬದಲಾಗುತ್ತಾ ಹೋಗುತ್ತದೆ ಅಷ್ಟೆ.

ಹುಚ್ಚಿಲ್ಲದ ಮನುಷ್ಯ ಪರಮ ಬೋರಿಂಗ್. ಬೇರೆಯವರಿಗಷ್ಟೇ ಅಲ್ಲ, ಅವನಿಗವನೇ ಬೋರ್ ಆಗಿ ಹೋಗುತ್ತಾನೆ. ಅದರಲ್ಲೂ, ಯಾವುದಾದರೂ ಒಂದು ಆಟದ ಹುಚ್ಚಂತೂ ಇರಲೇಬೇಕು. ಆಡದ ವರಿಗೂ ಸಹ ನೋಡುವ ಹುಚ್ಚಾದರೂ ಇರಬೇಕು. ಅಂಥದ್ದೇನೋ ಹುಚ್ಚಿದ್ದಾಗಲೇ ಮನುಷ್ಯ ನಾರ್ಮಲ್ ಆಗಿರೋಕೆ ಸಾಧ್ಯ!

ಕಳೆದೊಂದು ವಾರದಿಂದ ನನ್ನ ಮನಸು ಫುಟ್ಬಾಲ್ ಆಡುತ್ತಿದೆ. ಒಂದಷ್ಟು ಆಟಗಾರರಿಗಾಗಿ, ಕೆಲವು ತಂಡಗಳಿಗಾಗಿ ಟೈಮ್ ಟೇಬಲ್ ಮೇಲೆ ಮಾರ್ಕ್ ಮಾಡ್ಕೊಂಡು, ಆ ದಿನಕ್ಕೆ ಅಲಾರ್ಮ್ ಇಟ್ಕೊಂಡು ಫಾಲೋ ಮಾಡ್ತಾ ಇದೀನಿ. ಮರಡೋನಾ ಕಾಲದಿಂದ ಅರ್ಜೆಂಟೀನಾ ತಂಡದ ಮೇಲೊಂದು ಪ್ರೀತಿ. ಅದು ಮೆಸ್ಸಿಯ ತನಕವೂ ಮುಂದುವರಿದಿದೆ.

ಜರ್ಮನಿ, ಸ್ಪೇನ್, ಬ್ರೆಜಿಲ್, - ಕೂಡ ಇಷ್ಟವೇ ಆದರೂ ಅರ್ಜೆಂಟೀನಾ ಎದುರು ಇವರು ಗೆಲ್ಲದಿರಲಿ ಎಂದು ಮನಸು ಪ್ರಾರ್ಥಿಸುತ್ತದೆ. ನಾನು ಪೀಲೆಯ ಆಟ ಪ್ರತ್ಯಕ್ಷ ನೋಡಿಲ್ಲ, ಮರಡೋನಾ ಹೊಡೆದ ಹ್ಯಾಂಡ್ ಗೋಲ್ ಸೇರಿದಂತೆ ಪ್ರತಿ ಗೋಲನ್ನೂ ನೋಡಿದೀನಿ. ಅವನ ಕಾಂಟ್ರವರ್ಸಿ ಯಲ್ ಜೀವನವನ್ನು ಕಣ್ಣರಳಿಸಿಕೊಂಡು ಗಮನಿಸುತ್ತಾ ಬಂದಿದೀನಿ. ಆ ನಂತರದಲ್ಲಿ ಬೆಕಮ್, ರೊನಾಲ್ಡೋ, ಕ್ರಿಸ್ಚಿಯಾನೋ ರೊನಾಲ್ಡೋ, ಎಂಬೆಪ್ಪೆ, ಜೈಡೆನ್, ಸಾಕಷ್ಟು ಮಂದಿಯ ಆಟ ನೋಡುತ್ತ, ಮರಡೋನಾನನ್ನು ಮಿಸ್ ಮಾಡಿಕೊಳ್ತೀನಿ.

ಇದನ್ನೂ ಓದಿ: Naveen Sagar Column: 94ರ ಈ ಯುವ ನಿರ್ದೇಶಕನ ಹೆಸರು ಸಿಂಗೀತಂ !

ಮೆಸ್ಸಿಯಲ್ಲಿ ಮರಡೋನಾನನ್ನು ಕಾಣ್ತೀನಿ. ಇತ್ತೀಚಿನ ಸೆನ್ಸೇಷನ್ ಲಮೈನ್ ಯಮಾಲ್‌ನ ಆಟ ನೋಡಲು, ವೈಭವ್ ಸೂರ್ಯವಂಶಿಯ ಬ್ಯಾಟಿಂಗ್‌ಗೆ ಕಾದಂತೆ ಕಾಯ್ತಿದೀನಿ. ಇದು ಫುಟ್ʼಬಾಲ್ ಹುಚ್ಚಿನ ಕಥೆಯಾದರೆ, ಇದರ ಬೆನ್ನ ಶುರುವಾಗ್ತಿರೋ ಆಲ್ ಇಂಗ್ಲೆಂಡ್ ಕ್ಲಬ್‌ನ ವಿಂಬಲ್ಡನ್‌ಗಾಗಿ ಈಗ್ಲೇ ಮನಸು ಕಾಯಲಾರಂಭಿಸಿದೆ.

ಕ್ರಿಕೆಟ್ ಫುಟ್ಬಾಲ್‌ಗಿಂತ ಬೇರೆಯೇ ಕಿಕ್ ಟೆನಿಸ್‌ನಲ್ಲಿದೆ. ಅದರಲ್ಲೂ ವಿಂಬಲ್ಡನ್ ಪಂದ್ಯಗಳು ಕೊಡುವ ನಶೆ ಬೇರೆಯದೇ ಮಾದರಿಯದ್ದು. ಅಲ್ಲಿ ಹುಚ್ಚೆದ್ದು ಕುಣಿಯುವ ಕ್ರೌಡ್ ಇರುವುದಿಲ್ಲ. ಆದರೆ ಅವರೆಲ್ಲರೂ ಒಂದು ನಶೆಯಲ್ಲಿರುತ್ತಾರೆ. ಆಟಗಾರರಷ್ಟೇ ಏಕಾಗ್ರತೆಯಲ್ಲಿ ಪ್ರೇಕ್ಷಕನೂ ಇರುತ್ತಾನೆ. ಆ ಏಕಾಗ್ರತೆ ಹುಟ್ಟುವುದು ಟೆನಿಸ್ ಕೊಡುವ ನಶೆಯಿಂದ.

ನಾನು ಸುಮಾರು 1988ರಿಂದ ಟೆನಿಸ್ ನೋಡುತ್ತಿದ್ದೇನೆ. ಪುರುಷರಲ್ಲಿ ಸ್ಟಿಫಾನ್ ಎಡ್ಬರ್ಗ್, ಬೋರಿ ಸ್ ಬೆಕರ್, ಇವಾನ್ ಲೆಂಡ್ಲ್, ಜಾನ್ ಮೆಕೆನ್ರೋ, ಆಂಡ್ರೆ ಅಗಾಸ್ಸಿ, ಪೀಟ್ ಸಂಪ್ರಾಸ್ ಕಣದಲ್ಲಿ ಕಾಣುತ್ತಿದ್ದ ಪ್ರಮುಖರು. ಮಹಿಳೆಯರಲ್ಲಿ ಮಾರ್ಟಿನಾ ನವ್ರಾಟಿಲೋವಾ, ಕ್ರಿಸ್ ಎವರ್ಟ್, ಸ್ಟೆಫಿ ಗ್ರಾಫ್, ಗೇಬ್ರಿಯಲಾ ಸಬಾಟಿನಿ. ಇಂಥ ಟೈಮಲ್ಲಿ ಆಟ ನೋಡಲು ಶುರು ಮಾಡಿದ್ದ ನನಗೆ, ಬೋರಿಸ್ ಬೆಕರ್ ಹುಚ್ಚು ಹಿಡಿಸಿದ್ದ.

ತಲೆಕೂದಲು, ಕಣ್ಣಿನ ಹುಬ್ಬು, ರೆಪ್ಪೆ, ಮೈರೋಮ ಎಲ್ಲವೂ ಹೊಂಬಣ್ಣ. ಆತನ ಆಕ್ರಮಣಕಾರಿ ಆಟದ ಜೊತೆಗೆ ಡೈವಿಂಗ್ ನನ್ನನ್ನು ಆಕರ್ಷಿಸಿತ್ತು. ಸ್ಪೋರ್ಟ್ಸ್ ಸ್ಟಾರ್ ಪತ್ರಿಕೆಯಲ್ಲಿ ಬಂದಿದ್ದ ಅವನ ಫುಲ್ ಸ್ಟ್ರೆಚ್ ಡೈವಿಂಗ್‌ನ ಫೊಟೋ ಎತ್ತಿಟ್ಟುಕೊಂಡಿದ್ದೆ. ಉದ್ದ ಕೂದಲೊಂದಿಗೆ ಅಗಾಸ್ಸಿ ಕಣಕ್ಕಿಳಿದಿದ್ದ, ಮೆಕೆನ್ರೋ ಎಂಬ ಜಗಳಗಂಟನಿದ್ದ, ನಾಲಗೆ ಹೊರತೆಗೆದು ಏದುಸಿರು ಬಿಡುತ್ತಾ ಆಡಿ ಎದುರಾಳಿಗಳನ್ನು ಪುಡಿಗಟ್ಟುತ್ತಿದ್ದ ಪೀಟ್ ಸಂಪ್ರಾಸ್ ಇದ್ದ. ಆದರೆ ಎಲ್ಲರಿಗಿಂತ ಇಷ್ಟ ಬೋರಿಸ್ ಬೆಕರ್. ಹೆಣ್ಮಕ್ಕಳಲ್ಲಿ ಅದ್ಯಾಕೋ ಸುಮ್ಮಸುಮ್ಮನೆ ಸಬಾಟಿನಿ ಇಷ್ಟವಾಗಿದ್ಳು. ಮೋನಿಕಾ ಸೆಲೆಸ್ ಎಂಬ ಗುಟುರುರಾಣಿ ಬಂದ ನಂತರ ಆಕೆಯ ಅಭಿಮಾನಿಯಾಗಿದ್ದೆ.

62 ok

ನಂತರ ವಿಲಿಯಂ ಸೋದರಿಯರ ದೈತ್ಯಶೈಲಿಯ ಆಟ ಎಲ್ಲ ಮಹಿಳಾಮಣಿಗಳನ್ನೂ ಮೀರಿಸಿ ಹಾಕಿಬಿಟ್ಟಿತು. ಸೆರೆನಾ ವಿಲಿಯಂಸ್‌ಳ ಫೋನ್ ಆಗಿಬಿಟ್ಟೆ. ಆದರೆ ಪುರುಷರ ಟೆನಿಸ್‌ನಲ್ಲಿ ಬೋರಿಸ್ ಬೆಕರ್ ನಂತರ ನಾನು ಒಬ್ಬ ಆಟಗಾರನಿಗೆ ಅತಿ ಅನ್ನುವಷ್ಟು ಅಭಿಮಾನಿಯಾಗಿ ಹೋದೆ. ಆತನ ಹೆಸರು ಗೊರಾನ್ ಇವಾನಿಸೆವಿಚ್. ಆ ಹೆಸರೇ ಎಷ್ಟು ರಿದಮಿಕ್ ಅನಿಸುವಂತಿದೆ.

ಇಂಗ್ಲಿಷಲ್ಲಿ ಬರೆದರೆ ಒಂದು ವ್ಯಂಜನದ ನಂತರ ಒಂದು ಸ್ವರ ಎಂಬಂತೆ g-o-r-a-n i-v-a-n-i-s-e-v-i ಹೆಸರು ಅಲೆಅಲೆಯಾಗಿ ಬರುತ್ತದೆ. ಆತನ ಹೈಟು, ಚೂಪು ಫೀಚರ್ʼಗಳು ಎಲ್ಲವೂ ಮೊದಲ ನೋಟಕ್ಕೇ ಗಮನ ಸೆಳೆದಿದ್ದವು. ಆತನ ದೇಶ ಕ್ರೊಯೇಷಿಯಾ ಎಂಬ ಹೆಸರಲ್ಲೂ ಅದೇನೋ ಫೋರ್ಸ್ ಕಾಣಿಸುತ್ತಿತ್ತು. ಅದೆಲ್ಲದಕ್ಕೂ ಕಳಶಪ್ರಾಯ ಎಂಬಂತೆ ಕಂಡದ್ದು ಆತನ ಸಿಡಿಲಬ್ಬರದ ಸರ್ವಿಸ್‌ ಗಳು.

ಇವಾನಿಸೆವಿಚ್‌ನ ಶಕ್ತಿಯೇ ಸರ್ವಿಸ್. ಆತನ ಬಲಶಾಲಿ ಸರ್ವ್‌ರ್ಗಳಿಗೆ ಬ್ಯಾಟ್ ಅಡ್ಡ ಇಡುವಷ್ಟೂ ಎದುರಾಳಿಗಳ ಬಳಿ ಟೈಮ್ ಇರ್ತಿರಲಿಲ್ಲ. ಆ ವೇಗದಲ್ಲಿ ಅದು ಎದುರಾಳಿಯನ್ನು ದಾಟಿ ಹೋಗಿರುತ್ತಿತ್ತು. ಇವತ್ತು ಅಸಲಿಗೆ ನಾನು ಬರೆಯೋಕೆ ಹೊರಟಿದ್ದೇ ಇವಾನಿಸೆವಿಚ್ ಬಗ್ಗೆ. ಫೀನಿಕ್ಸ್ ಪದಕ್ಕೆ ಪರ್ಯಾಯವಾಗಿ ಇವಾನಿಸೆವಿಚ್ ಅಂದರೂ ಅತಿ ಏನಲ್ಲ.

ಕಪ್ ಗೆದ್ದ ದಾಖಲೆಗಳನ್ನು ನೋಡಿ ಅಳೆಯುವುದಾದರೆ ಗೊರಾನ್ ಇವಾನಿಸೆವಿಚ್‌ನ ಸಾಧನೆ ಏನೇನೂ ಅಲ್ಲ. ಆದರೆ ಆತನ ಹೋರಾಟಗುಣ, ಆತನ ಸರ್ವಿಸ್, ಆತನ ಆನ್ ಫೀಲ್ಡ್ ವರ್ತನೆ, ಛಲ, ಹಟ, ಶ್ರಮ, ಇದೆಲ್ಲವೂ ಟೆನಿಸ್ ಇತಿಹಾಸ ಯಾವತ್ತೂ ಮರೆಯಲಾಗದ ಅಧ್ಯಾಯಗಳು.

ವಿಂಬಲ್ಡನ್ ಸೆಂಟರ್ ಕೋರ್ಟ್‌ಗೆ ಮೂರು ಬಾರಿ ಫೈನಲ್ ಆಡಲು ಬಂದು ಸೋತವ, ನಾಲ್ಕನೆಯ ಬಾರಿ ಯಾರೂ ಕಲ್ಪನೆಯೂ ಮಾಡಿಕೊಳ್ಳದ ರೀತಿಯಲ್ಲಿ ಚಾಂಪಿಯನ್ ಆಗಿ ನಿಂತಿದ್ದ. ಅದು ಇವಾನಿಸೆವಿಚ್.ಕುಟುಂಬದಲ್ಲಿ ಬಡತನವಿತ್ತು. ದೇಶ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿತ್ತು. ಅಂಥ ಟೈಮಿನಲ್ಲಿ ಈತ ಟೆನಿಸ್ ರಾಕೆಟ್ ಹಿಡಿದು ದಿಗ್ಗಜರ ಜಗತ್ತನ್ನು ಪ್ರವೇಶ ಮಾಡಿದ್ದ.

ಮೊದಲ ಪಂದ್ಯದ ತನ್ನ ಸರ್ವ್‌ಗಳ ಮೂಲಕ ಕ್ರೀಡಾಪುಟಗಳ ಹೆಡ್‌'ಲೈನ್ ಆಗಿ ಬಿಟ್ಟಿದ್ದ ಗೊರಾನ್. ಅವನ ಸರ್ವಿಸ್‌ಗಳಿಗೆ ಎದುರಾಳಿ ಟೆನಿಸ್ ಜಗತ್ತೇ ಕಕ್ಕಾಬಿಕ್ಕಿಯಾಗಿ ಬಿಟ್ಟಿತ್ತು. ಆತ ರಿಟೈರ್‌ಮೆಂಟ್‌ಗೆ ಹತ್ತಿರವಿದ್ದಾಗ ಅವನ ಸರ್ವಿಸ್‌ನ ವೇಗ ಗಂಟೆಗೆ 251 ಕಿಮೀ ಇತ್ತು ಅಂದರೆ ಆತ ಬಿಸಿರಕ್ತದ ಯುವಕ ನಾಗಿದ್ದಾಗ ಅದರ ವೇಗ ಎಷ್ಟಿದ್ದಿರಬಹುದು? ಅಫ್ ಕೋರ್ಸ್ ಅವನ ರಕ್ತದ ಬಿಸಿ ತಣಿದದ್ದಾದರೂ ಯಾವಾಗ? ಅವನು ಪ್ರಸ್ತುತ ಕೋಚ್ ಆಗಿರೋದು ಯಾವ ಆಟಗಾರನಿಗೆ ಅಂತ ನೋಡಿದರೆ ಉತ್ತರ ಸಿಗುತ್ತದೆ!

1996ರ ಋತುವಿನಲ್ಲಿ ಒಂದೇ ವರ್ಷದಲ್ಲಿ 1477 ಏಸ್‌ಗಳನ್ನು ಬಾರಿಸಿ ದಾಖಲೆ ನಿರ್ಮಿಸಿದ್ದ ಇವಾನಿಸೆವಿಚ್‌ನ ದಾಖಲೆ ಇವತ್ತಿಗೂ ಆಬಾಧಿತ. ನನ್ನಿಷ್ಟದ ಆಟಗಾರ ಬೋರಿಸ್ ಬೆಕರ್‌ನನ್ನು ಇದೇ ಸರ್ವ್‌ನ ಬಲದಿಂದ 1990ರ ಫ್ರೆಂಚ್ ಓಪನ್‌ನ ಟೂರ್ನಿಯ ಮೊದಲ ರೌಂಟ್‌ನ ಧೂಳಿಪಟ ಮಾಡಿಹಾಕಿದ್ದ 19 ವರ್ಷದ ಇವಾನಿಸೆವಿಚ್.

ಆ ರೀತಿಯ ಆಗಮನ ಸಾರಿದ್ದ ಇವಾನಿಸೆವಿಚ್, ಎಂಟ್ರಿ ಕೊಟ್ಟ ಮೂರೇ ವರ್ಷಕ್ಕೆ ಅಂದ್ರೆ 1994ರ ಹೊತ್ತಿಗೆ ಆತ ವಿಶ್ವದ ನಂಬರ್ 2 ಆಟಗಾರನಾಗಿದ್ದ. ಆತನನ್ನು ಅಂಗಣದಲ್ಲಿ ನೋಡುವುದು ಒಂದು ಎಮೋಷನಲ್ ಆಕ್ಷನ್ ಮೂವೀ ನೋಡಿದಂತೆ. ಪಾಯಿಂಟ್ ಕಳೆದುಕೊಂಡರೆ ತನ್ನ ಮೇಲೆ ತಾನೇ ಸಿಟ್ಟಿಗೇಳುತ್ತಿದ್ದ, ಅಂಪೈರ್ ನಿರ್ಧಾರಗಳನ್ನು ಪ್ರಶ್ನಿಸಿ ಸೀನ್ ಕ್ರಿಯೇಟ್ ಮಾಡ್ತಿದ್ದ.

ಉದ್ವೇಗ ಹೆಚ್ಚಾದರೆ ಕೈಲಿದ್ದ ಬ್ಯಾಟನ್ನೇ ಮುರಿದು ಬಿಸಾಕುತ್ತಿದ್ದ. ಅಳುತ್ತಿದ್ದ, ನಗುತ್ತಿದ್ದ. ಈ ಎಲ್ಲ ಎಮೋಷನ್‌ಗಳಿಂದಲೇ ಆತ ಇಷ್ಟವಾಗುತ್ತಿದ್ದ. ಟೆನಿಸ್ ಅಂದ್ರೆ ಎರಡು ಮಶಿನ್‌ಗಳು ಆಡ್ತಾ ಇವೆ ಎಂದನಿಸುತ್ತಿದ್ದ ಹೊತ್ತಿನಲ್ಲಿ ಇವಾನಿಸೆವಿಚ್ ತನ್ನ ಭಾವುಕ ಹುಚ್ಚಾಟಗಳಿಂದ ಪ್ರೇಕ್ಷಕರಿಗೆ ಕನೆP ಆಗಿಬಿಟ್ಟಿದ್ದ.

ಆತ ಸೋತರೆ ಪ್ರೇಕ್ಷಕರು ಅಳುತ್ತಿದ್ದರು. ಆತ ಒಂದೇ ಒಂದು ಬಾರಿ ವಿಂಬಲ್ಡನ್ ಗೆಲ್ಲಲಿ ಅಂತ ಆಶಿಸಿದ ಅಭಿಮಾನಿಗಳು ಅದೆಷ್ಟು ಕೋಟಿಯೋ! ಅದರಲ್ಲಿ ಆತನ ದೇಶದ ಜನಸಂಖ್ಯೆ ಕೇವಲ ಮೂರ್ನಾಲ್ಕು ಲಕ್ಷವಷ್ಟೆ. ವಿಂಬಲ್ಡನ್‌ನಲ್ಲಿ 1992ರಲ್ಲಿ ಅಗಾಸ್ಸಿ ಎದುರು ಸೋತಿದ್ದ ಇವಾನಿ ಸೆವಿಚ್, 1994ರಲ್ಲಿ ಮತ್ತೆ ಫೈನಲ್‌ಗೆ ಬಂದಿದ್ದ. ಆದರೆ ಪೀಟ್ ಸಂಪ್ರಾಸ್ ಎದುರು ನೇರ ಸೆಟ್‌ಗಳಲ್ಲಿ ಸೋತು ಹೋದ. ಮತ್ತೆ 1998ರಲ್ಲಿ ಸಂಪ್ರಾಸ್ ಎದುರ ಫೈನಲ್ ಆಡುವಂತಾದಾಗ, ಈ ಬಾರಿ ಖಂಡಿತ ಗೆಲ್ಲುತ್ತಾನೆ ಎಂದೇ ಜಗತ್ತು ಭಾವಿಸಿತ್ತು. ಆದರೆ ಐದು ಸೆಟ್‌ಗಳ ಭಯಂಕರ ಹೋರಾಟ ದಲ್ಲಿ ಸಂಪ್ರಾಸ್ ಗೆದ್ದಿದ್ದ.

1998ರ ನಂತರ ಅವನ ದೇಹ ಮತ್ತು ಮನಸು ಎರಡೂ ಕೈಕೊಟ್ಟವು. ಭುಜದ ಗಾಯ ಇನ್ನಿಲ್ಲದಂತೆ ಕಾಡಿತು. ನಂಬರ್ ಒನ್ ಸ್ಥಾನಕ್ಕೆ ಪೈಪೋಟಿ ನೀಡುತ್ತಿದ್ದ ಆತ ಶ್ರೇಯಾಂಕರಹಿತನಾಗಿ ಹೋದ. 2001ರ ಸಮಯಕ್ಕೆ ಆತನ ಶ್ರೇಯಾಂಕ 125. ವಿಂಬಲ್ಡನ್ ಆಡುವ ಅರ್ಹತೆಯನ್ನೇ ಕಳೆದು ಕೊಂಡಿದ್ದ. ಆದರೆ ಚರಿತ್ರೆ ಅವನ ಹೆಸರು ಬರೆಯಲು ಕಾದಿತ್ತು.

ಆಲ್ ಇಂಗ್ಲೆಂಡ್ ಕ್ಲಬ್ ಅವನ ಹಿಂದಿನ ಸಾಧನೆಯನ್ನು ಪರಿಗಣಿಸಿ, ಗೌರವದ ರೂಪದಲ್ಲಿ ವೈಲ್ಡ್ ಕ್ಕಾರ್ಡ್ ನೀಡಿ ಬಿಟ್ಟಿತು. ಆದರೆ ಅಂದು ಯಾರೂ ನಿರೀಕ್ಷೆ ಕೂಡ ಮಾಡಿರಲಿಲ್ಲ ಪವಾಡವೊಂದು ಘಟಿಸಬಹುದೆಂದು! ವೈಲ್ಡ್ ಕಾರ್ಡ್ ಪಡೆದು ಬಂದ ಇವಾನಿಸೆವಿಚ್ ನಿಜಕ್ಕೂ ವೈಲ್ಡ್ ಆಗಿಯೇ ಆಡತೊಡಗಿದ. ಆತನ ಸ್ಫೋಟಕ ಆಟಕ್ಕೆ ಸರ್ವಿಸ್‌ಗಳಿಗೆ ದೊಡ್ಡ ದೊಡ್ಡ ತಲೆಗಳೇ ಉರುಳಿ ಹೋದವು.

ಕಾರ್ಲೋಸ್ ಮೊಯಾ, ಆಂಡಿ ರಾಡಿಕ್, ಮರಾತ್ ಸಫಿನ್ ಒಬ್ಬೊಬ್ಬರಾಗಿ ಶರಣಾಗತರಾದರು. ಸೆಮಿಫೈನಲ್‌ನಲ್ಲಿ ಟಿಮ್ ಹೆನ್ಮನ್‌ನನ್ನು ಸೋಲಿಸಿ ಫೈನಲ್ ಪ್ರವೇಶಿಸಿಯೇ ಬಿಟ್ಟ. ಜುಲೈ 9, 2001. ವಿಂಬಲ್ಡನ್‌ನ ಸೆಂಟರ್ ಕೋರ್ಟ್‌ನಲ್ಲಿ ಒಂದು ಬದಿಯಲ್ಲಿ ಪಾಟ್ರಿಕ್ ರಾಫ್ಟರ್ ಮತ್ತೊಂದು ಬದಿಯಲ್ಲಿ ಇವಾನಿಸೆವಿಚ್.

ಜಿದ್ದಾಜಿದ್ದಿಯ ಪಂದ್ಯದಲ್ಲಿ ಇಬ್ಬರೂ ಎರಡೆರಡು ಸೆಟ್ ಗೆದ್ದು ಐದನೇ ಸೆಟ್‌ಗೆ ಹೋದ ಪಂದ್ಯ ದಲ್ಲಿ ಗೆದ್ದದ್ದು ಇವಾನಿಸೆವಿಚ್. 6-3, 3-6, 6-3, 2-6, 9-7. ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟು ಚಾಂಪಿ ಯನ್ ಆದ ಇನ್ನೊಬ್ಬ ಆಟಗಾರ ವಿಂಬಲ್ಡನ್ ಟೆನಿಸ್ ಇತಿಹಾಸದ ಇಲ್ಲ. ಕ್ರೊಯೇಷಿಯಾ ಆ ದಿನವನ್ನು ಹಬ್ಬದ ಹಾಗೆ ಆಚರಿಸಿತು. ದೇಶದ ರಸ್ತೆರಸ್ತೆಗಳಲ್ಲಿ ಜನ ಕುಣಿದಾಡಿದರು. ಆತನ ಹುಟ್ಟೂರಿನ ಕೆಫೆಗಳಲ್ಲಿ ಆಟ ನೋಡ್ತಾ ಇದ್ದ ಜನ ಖುಷಿಯಲ್ಲಿ ಸೀದಾ ಓಡಿ ಹೋಗಿ ಸಮುದ್ರಕ್ಕೆ ಜಿಗಿದಿದ್ದರು.

ಕ್ರೊಯೇಷಿಯಾದಲ್ಲಿ ಅಂಥ ಸಂಭ್ರಮ ಹಿಂದೂ ಮುಂದೂ ಕಂಡಿಲ್ಲ. ಸ್ವಾತಂತ್ರ್ಯ ಸಿಕ್ಕಾಗಲೂ! ಖುದ್ದು ಗೊರಾನ್ ಇವಾನಿಸೆವಿಚ್, ನಾಲ್ಕು ದಿನ ಎಡೆಬಿಡದೆ ಪಾರ್ಟಿ ಮಾಡಿ, ಹತ್ತು ದಿನ ಮಲಗಿದ್ದ ನಂತೆ. ಆ ನಂತರವೇ ಆತ ಪ್ರೆಸ್ ಮೀಟ್‌ಗೆ ಸಿಕ್ಕಿದ್ದ. ವಿಜಯೋತ್ಸವದಲ್ಲಿ ಲಕ್ಷಾಂತರ ಅಭಿಮಾನಿಗಳ ಎದುರು ತನ್ನೆಲ್ಲ ಬಟ್ಟೆಗಳನ್ನು ಕಳಚಿ ಅಂಡರ್ ವೇರ್‌ನಲ್ಲಿ ಸ್ಟೇಜ್ ಏರಿದ್ದ ಇವಾನಿಸೆವಿಚ್ ಅಂದು ವೇದಿಕೆಯಲ್ಲಿ ಹೇಳಿದ್ದು, ‘ನಾವು ಇರೋದು ಮೂರು ಲಕ್ಷ ಮಂದಿ ಮಾತ್ರ. ಆದರೆ ಜಗತ್ತಿನ ನಾವು ಅತ್ಯಂತ ದೊಡ್ಡ ಹುಚ್ಚರು!’

2001ರ ವಿಂಬಲ್ಡನ್‌ನಲ್ಲಿ, ಪ್ರತಿ ಪಂದ್ಯದ ಮೊದಲು ಆತ ಮಕ್ಕಳು ನೋಡುವ ಕಾರ್ಟೂನ್ ‘ಟೆಲಿಟಬ್ಬೀಸ್’ ನೋಡುತ್ತಿದ್ದನಂತೆ, ಅದೇ ರೆಸ್ಟೊರೆಂಟ್‌ನಲ್ಲಿ, ಅದೇ ಕುರ್ಚಿಯಲ್ಲಿ ಕೂತು, ಅದೇ ಊಟ ಮಾಡುತ್ತಿದ್ದನಂತೆ. ಪಂದ್ಯ ಗೆದ್ದರೆ ಮರುದಿನ ಅದೇ ತಿನ್ನು, ಅದೇ ವ್ಯಕ್ತಿಯ ಜೊತೆ ಮಾತ ನಾಡು, ಅದೇ ಕಾರ್ಯಕ್ರಮ ನೋಡು, ಹೀಗೊಂದು ಮೂಢನಂಬಿಕೆಯನ್ನು ಬಿಟ್ಟೂ ಬಿಡದೇ ಪಾಲಿಸುತ್ತಿದ್ದನಂತೆ.

ರಿಟೈರ್ ಆದಾಗ, ‘ಸದ್ಯ ನಾನಿನ್ನು ಟೆಲಿಟಬ್ಬೀಸ್ ನೋಡಬೇಕಿಲ್ಲ’ ಅಂತ ನಿಟ್ಟುಸಿರು ಬಿಟ್ಟು ನಕ್ಕಿದ್ದ. ತನ್ನ ಸರ್ವ್‌ಗಳಿಂದ ಎದುರಾಳಿಗಳನ್ನು ನಡುಗಿಸುತ್ತಿದ್ದ ಗೊರಾನ್ ಇವಾನಿಸೆವಿಚ್‌ಗೆ, 2001ರ ಆ ಫೈನಲ್ ಪಂದ್ಯದ ಫೈನಲ್ ಸರ್ವ್ ಮಾಡುವಾಗ ಕೈಗಳು ಗಡಗಡ ನಡುತ್ತಿದ್ದವಂತೆ. ಚೆಂಡೇ ಕಾಣಿಸ್ತಿರಲಿಲ್ಲವಂತೆ!

ಇವಾನಿಸೆವಿಚ್‌ನ್ನ ಭಾವುಕತೆ ಬರಹದಲ್ಲಿ ವಿವರಿಸಿದರೆ ಅರ್ಥವಾಗುವಂಥದ್ದಲ್ಲ; ಮೈದಾನದ ನಡುವೆ ನೋಡಿದರೆ ಮಾತ್ರವೇ ಅರ್ಥವಾಗೋದು. ಇಂಥ ಅಸಾಮಾನ್ಯ ಆಟಗಾರ ಈಗ ಕೋಚ್ ಆಗಿರೋದು ಅಂಥದ್ದೇ ಒಂದು ಕ್ಯಾರಕ್ಟರ್ʼಗೆ. 2019ರಿಂದ ಇಂದಿನತನಕ ಆತ ತರಬೇತಿ ನೀಡ್ತಾ ಇರೋದು ತನ್ನ ಗುಣಗಳ ಪಡಿಯಚ್ಚಿನಂತಿರುವ ಜಾಕೋವಿಕ್ ಎಂಬ ಚಾಂಪಿಯನ್ ಆಟಗಾರನಿಗೆ. ನಾನು ಈಗಿಂದಲೇ ವಿಂಬಲ್ಡನ್ ನೋಡಲು ಕಾಯ್ತಿರೋದು ಈ ಗುರುಶಿಷ್ಯರನ್ನು ಕಣ್ತುಂಬಿ ಕೊಳ್ಳಲು. ಗೆಲುವು ಸೋಲುಗಳಾಚೆ, ಅಂಗಣದಲ್ಲಿ ಇವರ ಇರುವಿಕೆ ಕೊಡುವ ಖುಷಿ ಅವರ್ಣ ನೀಯ. ನನ್ನ ಅಭಿಮಾನಿಗಳಾಗಿರುವುದು ಸುಲಭ ಅಲ್ಲ. ನನಗಿಂತ ಹುಚ್ಚರಾಗಿರಬೇಕು ಅಂತಾನೆ ಇವಾನಿಸೆವಿಚ್. ಅಂಥ ಹುಚ್ಚ ನಾನೆಂದು ಹೆಮ್ಮೆಯಿಂದ ಹೇಳಿಕೊಳ್ಳುವೆ.