Srivathsa Joshi Column: ಷಷ್ಠೀ ವಿಭಕ್ತಿಯು ಸೃಷ್ಟಿಸುವ ಸ್ವಾರಸ್ಯಗಳ ವೃಷ್ಠಿ
ಶತಾವಧಾನಿ ಡಾ.ಆರ್.ಗಣೇಶರು ಬೆಂಗಳೂರಿನಲ್ಲಿ ‘ತುಂಬು ಗನ್ನಡ ಶತಾವಧಾನ’ ನಡೆಸಿದ್ದಾಗ, ನಾವೆಲ್ಲ ಅನಿವಾಸಿಗಳು ಅದನ್ನು ಅಂತರ್ಜಾಲದಲ್ಲಿ ನೇರಪ್ರಸಾರ ನೋಡಿದ್ದಾಗ, ಕೊನೆಯಲ್ಲಿ ಚಂದ್ರ ಶೇಖರ ಕೆದಿಲಾಯರು ಕಂಚಿನ ಕಂಠದಲ್ಲಿ ಈ ಪದ್ಯವನ್ನು ಹಾಡಿದ್ದರು. ಇದರಲ್ಲಿರುವ ಒಂದೊಂದು ಸಂಬಂಧವನ್ನೂ ಬಿಡಿಸಿಯೇ ಹಾಡಿದ್ದರು.
-
ತಿಳಿರು ತೋರಣ
ಅರ್ಜುನ ಎಂದು ನೇರವಾಗಿ ಹೇಳದೆ “ಸೂತಪುತ್ರನ ಸಾರಥಿಯ ಸೋದರಳಿಯನ ದೊಡ್ಡಮ್ಮನ ಸಹೋದರನ ಪತ್ನಿಯ ಸಹೋದರನ ಕೊಂದವನ ಸಹೋದರಿಯ ಮಗನ ತಂದೆ" ಅಂತಲೋ, “ರಥದ ಚಕ್ರ ಹಿಡಿದು ಹೋರಾಡಿದವನ ಮಗನ ತಾಯಿಯ ತಂದೆಯ ಬಂಧಿಸಿದವನಿಂದ ಬಿಡಿಸಿ ದವನ ತಮ್ಮ" ಅಂತಲೋ ಗುಹ್ಯವಾಗಿ ಹೇಳುವ ಪೌರಾಣಿಕ ಒಗಟುಗಳು ನಿಮಗೆ ಗೊತ್ತಿರಬಹುದು. ಅವುಗಳನ್ನು ಬಿಡಿಸಲಿಕ್ಕೆ ಪುರಾಣಪಾತ್ರಗಳ ಅರಿವು ಅಷ್ಟಿಷ್ಟು ಇರಬೇಕಾಗುತ್ತದೆ.
ಅರ್ಜುನ ಉತ್ತರವಾಗಿರುವ ಮೇಲಿನೆರಡು ಒಗಟುಗಳನ್ನೇ ನೋಡುವುದಾದರೆ- ಮೊದಲನೆಯದು: ಸೂತಪುತ್ರ ಕರ್ಣನ, ಸಾರಥಿ ಶಲ್ಯನ, ಸೋದರಳಿಯ ನಕುಲನ, ದೊಡ್ಡಮ್ಮ ಕುಂತಿಯ, ಸಹೋದರ ವಸುದೇವನ, ಪತ್ನಿ ದೇವಕಿಯ, ಸಹೋದರ ಕಂಸನ, ಕೊಂದ ಕೃಷ್ಣನ, ಸಹೋದರಿ ಸುಭದ್ರೆಯ, ಮಗ ಅಭಿಮನ್ಯುವಿನ, ತಂದೆ. ಎರಡನೆಯದು: ರಥದ ಚಕ್ರ ಹಿಡಿದು ಹೋರಾಡಿದ ಅಭಿಮನ್ಯುವಿನ, ಮಗ ಪರೀಕ್ಷಿತನ, ತಾಯಿ ಉತ್ತರೆಯ, ತಂದೆ ವಿರಾಟರಾಯನ, ಬಂಧಿಸಿದ ಸುಶರ್ಮನಿಂದ ಬಿಡಿಸಿದ ಭೀಮನ, ತಮ್ಮ. ಇಂಥವೇ ಬೇರೆ ಕೆಲವು ಇವೆ, ಪುರಾಣಪಾತ್ರಗಳ ಮೂಲಕವೇ ಸಾಮಾನ್ಯ ವಸ್ತು/ವಿಷಯವನ್ನು ಉತ್ತರವಾಗಿ ಪಡೆಯುವ ಒಗಟುಗಳು.
“ಈರಾರು ತಾರೆಯ ತಾಯಿಯ ತಮ್ಮನ ಇರಿದನ ಅಣ್ಣನ ಅಯ್ಯನ ವಾಹನ ಯಾವುದು?" ಈರಾರು ತಾರೆ ಅಂದರೆ ಹನ್ನೆರಡನೆಯ ನಕ್ಷತ್ರ ಉತ್ತರೆ. ಉತ್ತರೆಯ ತಾಯಿ ಸುದೇಷ್ಣೆ. ಅವಳ ತಮ್ಮ ಕೀಚಕ. ಆತನನ್ನು ಇರಿದವನು ಭೀಮಸೇನ. ಅವನಣ್ಣ ಯುಧಿಷ್ಠಿರ. ಅವನ ಅಪ್ಪ ಯಮ. ಯಮನ ವಾಹನ ಕೋಣ! ಹಾಗೆಯೇ, “ಹರನ ಹಾರನ ಆಹಾರನ ಸುತನ ಸ್ನೇಹಿತನ ವೈರಿಯ ತಮ್ಮನಿಗೆ ಒಲಿದವಳು ಯಾರು?" ಹರನ ಹಾರ ಸರ್ಪ. ಅದರ ಆಹಾರ ಗಾಳಿ. ವಾಯುಪುತ್ರ ಹನುಮಂತ.
ಇದನ್ನೂ ಓದಿ: Srivathsa Joshi Column: ಶತಾಯುಷಿ ಅಮೆರಿಕನ್ನಡಿಗ ಬುಕ್ಕಾಂಬುಧಿ ಕೃಷ್ಣಮೂರ್ತಿ
ಅವನ ಸ್ನೇಹಿತ ಶ್ರೀರಾಮ. ಅವನ ವೈರಿ ರಾವಣ. ಅವನ ತಮ್ಮ ಕುಂಭಕರ್ಣ. ಅವನಿಗೊಲಿದವಳು ನಿದ್ರಾದೇವಿ! ಕನಕದಾಸರು ಇದನ್ನೇ ತಮ್ಮದೊಂದು ಮುಂಡಿಗೆಯಲ್ಲಿ “ಹತ್ತುತಲೆ ಕೆಂಪಾಗಿಹನ ಆರುತಲೆ ಕಪ್ಪಾಗಿಹನ ಸಖನ ಸುತನ ಸ್ವಾಮಿಯ ವೈರಿಯ ತಮ್ಮನ ಸತಿ" ಎಂದಿದ್ದಾರೆ. ಹತ್ತುತ್ತಲೇ ಕೆಂಪು, ಆರುತ್ತಲೇ ಕಪ್ಪು ಅಂದರೆ ಅಗ್ನಿ. ಅದರ ಸಖ ವಾಯು. ಆಮೇಲಿನ ಹನುಮ-ರಾಮ-ರಾವಣ- ಕುಂಭಕರ್ಣ-ನಿದ್ರೆ ಸರಪಳಿ ಹಿಂದಿನಂತೆಯೇ.
ಇಂತಹ ಒಗಟುಗಳಿಗೆ ಮುಕುಟಪ್ರಾಯವಾಗಿ ಕುಮಾರವ್ಯಾಸನ ಅತಿಪ್ರಖ್ಯಾತ ಷಟ್ಪದಿಯೇ ಇದೆ ಯಲ್ಲ ಕರ್ಣಾಟ ಭಾರತ ಕಥಾಮಂ ಜರಿಯ ಆದಿಪರ್ವದಲ್ಲಿ ಬರುವ ಪದ್ಯ “ವೇದಪುರುಷನ ಸುತನ ಸುತನ ಸ| ಹೋದರನ ಮೊಮ್ಮಗನ ಮಗನ ತ| ಳೋದರಿಯ ಮಾತುಳನ ಮಾವನತುಳ ಭುಜಬಲದಿ| ಕಾದಿ ಗೆಲಿದನಣ್ಣನವ್ವೆಯ| ನಾದಿನಿಯ ಜಠರದಲಿ ಜನಿಸಿದ| ನಾದಿ ಮೂರುತಿ ಸಲಹೊ ಗದುಗಿನ ವೀರನಾರಯಣ||" ಅಂದರೆ ವೇದಪುರುಷ ವಿಷ್ಣುವಿನ, ಸುತ ಬ್ರಹ್ಮನ, ಸುತ ನಾರದನ, ಸಹೋದರ ಮರೀಚಿಯ, ಮೊಮ್ಮಗ ಇಂದ್ರನ, ಮಗ ಅರ್ಜುನನ, ತಳೋದರಿ(ಹೆಂಡತಿ) ಸುಭದ್ರೆಯ, ಮಾತುಳ (ಸೋದರ ಮಾವ) ಕಂಸನ, ಮಾವ(ಹೆಣ್ಣು ಕೊಟ್ಟ ಮಾವ) ಜರಾಸಂಧನ, ಅತುಳ ಭುಜಬಲದಿ ಕಾದಿ ಗೆಲಿದ ಭೀಮನ, ಅಣ್ಣ ಧರ್ಮಜನ, ಅವ್ವೆ ಕುಂತಿಯ, ನಾದಿನಿ ದೇವಕಿ ಯ ಜಠರದಲಿ ಜನಿಸಿದ ಆದಿಮೂರುತಿ ಕೃಷ್ಣ ಸಲಹೊ ಗದುಗಿನ ವೀರನಾರಾಯಣ.
ಶತಾವಧಾನಿ ಡಾ.ಆರ್.ಗಣೇಶರು ಬೆಂಗಳೂರಿನಲ್ಲಿ ‘ತುಂಬು ಗನ್ನಡ ಶತಾವಧಾನ’ ನಡೆಸಿದ್ದಾಗ, ನಾವೆಲ್ಲ ಅನಿವಾಸಿಗಳು ಅದನ್ನು ಅಂತರ್ಜಾಲದಲ್ಲಿ ನೇರಪ್ರಸಾರ ನೋಡಿದ್ದಾಗ, ಕೊನೆಯಲ್ಲಿ ಚಂದ್ರಶೇಖರ ಕೆದಿಲಾಯರು ಕಂಚಿನ ಕಂಠದಲ್ಲಿ ಈ ಪದ್ಯವನ್ನು ಹಾಡಿದ್ದರು. ಇದರಲ್ಲಿರುವ ಒಂದೊಂದು ಸಂಬಂಧವನ್ನೂ ಬಿಡಿಸಿಯೇ ಹಾಡಿದ್ದರು.
ಸಂಬಂಧ! ಹಾಂ, ಅದನ್ನು ಹೈಲೈಟ್ ಮಾಡಲಿಕ್ಕೆಂದೇ ನಾನು ಇವೆಲ್ಲ ಒಗಟು-ಮುಂಡಿಗೆ-ಪದ್ಯ ಗಳನ್ನು ನೆನಪಿಸಿಕೊಂಡಿದ್ದು. ಸಂಬಂಧಗಳನ್ನು ಹೆಣೆಯಲು ಬಳಸಿದ ಷಷ್ಠೀ ವಿಭಕ್ತಿ ಇಂದಿನ ಮುಖ್ಯ ವಿಷಯವಾದ್ದರಿಂದ ಈ ರೀತಿ ಪುರಾಣಪ್ರೋಕ್ತ ಪೀಠಿಕೆ ಬಳಸಿಕೊಂಡಿದ್ದು.
ಅಭಿಮನ್ಯುವಿನ ತಂದೆ ಅರ್ಜುನ ಎಂದು ಹೇಳಿದರೆ ಒಂದೇ ಸಂಬಂಧ, ಒಂದೇ ಸಲ ಷಷ್ಠೀ ವಿಭಕ್ತಿ ಪ್ರಯೋಗ. “ರಥದ ಚಕ್ರ ಹಿಡಿದು ಹೋರಾಡಿದವನ ಮಗನ ತಾಯಿಯ ತಂದೆಯ ಬಂಧಿಸಿ ದವನಿಂದ ಬಿಡಿಸಿದವನ ತಮ್ಮ" ಎಂದು ಸುತ್ತುಬಳಸಿ ಹೇಳಿದರೆ ಸರಪಳಿಯಲ್ಲಿ ಅನೇಕ ಸಂಬಂಧ ಗಳು ಬರುವುದರಿಂದ ಆರು ಸಲ ಷಷ್ಠೀ ವಿಭಕ್ತಿ ಪ್ರಯೋಗ!
ಒಗಟು ಅಂತಲ್ಲ, ಕೆಲವೊಮ್ಮೆ ನಮ್ಮದೇ ಸಂಬಂಧಗಳನ್ನು- “ಅತ್ತಿಗೆಯ ಚಿಕ್ಕಪ್ಪನ ಹೆಂಡತಿಯ ಸೋದರಮಾವನ ಮಗಳ ನಾದಿನಿಯ ಗಂಡನ ಸೋದರತ್ತೆಯ ತಮ್ಮ..." ಅಂತೆಲ್ಲ ಹೇಳುವಾಗ ಆರಲ್ಲ ಎಂಟು-ಹತ್ತು ಸಲ ಬೇಕಿದ್ದರೂ ಷಷ್ಠೀ ವಿಭಕ್ತಿ ಬಂದು ಹೋಗಿರುತ್ತದೆ, ನಾವು ಗಮನಿಸಿ ರುವುದಿಲ್ಲ.
ಅಂತೂ ವಿಷಯ ಇಷ್ಟೇ: ಸಂಬಂಧವೆಂದರೆ ಷಷ್ಠೀ ವಿಭಕ್ತಿ; ಷಷ್ಠೀ ವಿಭಕ್ತಿಯೆಂದರೆ ಸಂಬಂಧ. ವ್ಯಕ್ತಿಗಳ ನಡುವಿನ ಸಂಬಂಧವೇ ಆಗಬೇಕಿಲ್ಲ, ವಸ್ತುಗಳದಕ್ಕೂ ಷಷ್ಠೀ ವಿಭಕ್ತಿಯೇ. ಮನೆಯ ಚಾವಣಿ. ಆಟದ ಮೈದಾನ. ಕಟ್ಟಡದ ಎತ್ತರ. ಬೀಗದ ಕೈ. ದನದ ಹಾಲು. ನೀರಿನ ಶಬ್ದ. ಕನಕನ ಅಂಗಿ. ಕಮಲಳ ಲಂಗ (ಝಳಝಳ)... ಪ್ರಾಥಮಿಕ ಪಾಠಗಳಿಂದ ಹಿಡಿದು ಅವರವರ ಭಾವ ಅವರವರ ಭಕುತಿಯಂತಹ ಪಾರಮಾರ್ಥಿಕ ವಿಚಾರಗಳವರೆಗೂ ಎಲ್ಲದರಲ್ಲೂ ರಾರಾಜಿಸುವುದು ಷಷ್ಠೀ ವಿಭಕ್ತಿಯೇ.
ಕೆಲವೊಮ್ಮೆ ಸ್ವಲ್ಪ ಪರೋಕ್ಷವಾಗಿ: ಅರಸನ ಮನೆ = ಅರಮನೆ; ಬೆಟ್ಟದ ತಾವರೆ = ಬೆಟ್ಟದಾವರೆ; ಕಲ್ಲಿನ ಮಂಟಪ = ಕಲ್ಲುಮಂಟಪ; ದೇವರ ಮಂದಿರ = ದೇವಮಂದಿರ ಇತ್ಯಾದಿ. ಇದರಲ್ಲಿ ಸ್ವಾರಸ್ಯ ವೇನು ಬಂತು ಎಂದು ನೀವು ಕೇಳಬಹುದು.
ಕೆಲವೊಮ್ಮೆ ಮೇಲ್ನೋಟಕ್ಕೆ ಸರಳವಾಗಿ ಕಾಣುವ ಷಷ್ಠೀ ವಿಭಕ್ತಿಯು ಒಳಗೊಳಗೇ ತುಸು ಆಭಾಸವನ್ನೋ ಮುಜುಗರವನ್ನೋ ಬಚ್ಚಿಟ್ಟುಕೊಳ್ಳುವುದೂ ಇದೆ. “ಮಹಿಳೆಯರ ಭಾರ ಎತ್ತುವ ಸ್ಪರ್ಧೆ"ಯಂತೆ.
ಭಾರ ಮಹಿಳೆಯರದೋ ಸ್ಪರ್ಧೆ ಮಹಿಳೆಯರಿಗೋ? “ಮಹಿಳೆಯರ ಹಾಲು ಉತ್ಪಾದನಾ ಸಹಕಾರಿ ಸಂಘ"ದ್ದೂ ಅದೇ ಕಥೆ. “ರಾಜ್ಯಮಟ್ಟದ ಬೃಹತ್ ಮಹಿಳೆಯರ ಸಮಾವೇಶ" ಒಮ್ಮೆ ನಡೆದಿತ್ತು. ಬೃಹತ್ ಮಹಿಳೆಯರು ಎಂದರೆ ಎಷ್ಟು ಬೃಹತ್ ಇರಬಹುದು? ಆ ಸಮಾವೇಶದಲ್ಲಿ ಮಿಟುಕಲಾಡಿ ಮೀನಾಕ್ಷಿಗಳಿಗೆ ಪ್ರವೇಶ ಇಲ್ಲವೇ? ‘ಮಹಿಳೆಯರ’ ಅಂತಿರೋದನ್ನು ‘ಮಹಿಳಾ’ ಎಂದು ಮಾಡಿದ್ದರೆ ಸರಿಯಾಗುತ್ತಿತ್ತು ಅಂದ್ಕೊಳ್ಳಬೇಡಿ.
ಒಂದು “ಸುಸಜ್ಜಿತ ಮಹಿಳಾ ಮೀನು ಮಾರುಕಟ್ಟೆ" ಉಡುಪಿಯಲ್ಲಿದೆಯೆಂದು ಡಾ.ಕಿರಣ್ ಆಚಾರ್ಯ ಒಮ್ಮೆ ಬರೆದಿದ್ದರು. ಮೀನಿನ ಲಿಂಗನಿರ್ಧಾರ ಹೇಗೆ? ಮಹಿಳೆಯರು ಸುಸಜ್ಜಿತರಾಗೋಕೆ ಎಷ್ಟು ಟೈಮ್ ತಗೋಬಹುದು? ಅಷ್ಟರಲ್ಲಿ ತಾಜಾ ಮೀನಿನ ಗತಿಯೇನು? ಮುಂತಾದ ಪ್ರಶ್ನೆಗಳೇಳು ತ್ತವೆ. ಹೆಂಗಸರನ್ನಷ್ಟೇ ಟಾರ್ಗೆಟ್ ಮಾಡುತ್ತಿದ್ದೇನೆ ಎನ್ನದಿರಿ.
“ಇಲ್ಲಿ ಎಲ್ಲ ತರಹದ ಗಂಡಸರ ಬಟ್ಟೆಗಳನ್ನು ಹೊಲಿದು ಕೊಡಲಾಗುವುದು" ಎಂಬ ಬೋರ್ಡ್ ಶಿರಸಿಯಲ್ಲಿದೆಯಂತೆ. ಅಲ್ಲಿನ ವರದಿಗಾರ್ತಿ ವೀಣಾ ಹೆಗಡೆ ತಿಳಿಸಿದ್ದಾರೆ. “ಚಿಕ್ಕಂದಿನಲ್ಲಿ ಹಾಸಿಗೆ ಯಲ್ಲಿ ಮೂತ್ರ ಮಾಡುವ ಅಭ್ಯಾಸವಿದ್ದ ನನ್ನ ಅಕ್ಕನ ಮಗ..." ಅಂದರೆ ಚಿಕ್ಕಂದಿನಲ್ಲಿ ಬೆಡ್ ವೆಟ್ಟಿಂಗ್ ಮಾಡುತ್ತಿದ್ದದ್ದು ನಾನು? ನನ್ನ ಅಕ್ಕ? ಅಕ್ಕನ ಮಗ? ಇಂತಹ ಗೊಂದಲ ಬರಬಾರ ದೆಂದಿದ್ದರೆ “ನನ್ನ ಅಕ್ಕನ ಮಗನಿಗೆ ಚಿಕ್ಕಂದಿನಲ್ಲಿ ಹಾಸಿಗೆಯಲ್ಲಿ ಉಚ್ಚೆ ಹೊಯ್ಯುವ ಅಭ್ಯಾಸ ವಿತ್ತು." ಎಂದು ಬರೆದು ಆಮೇಲೆ ಮುಂದಿನ ವಾಕ್ಯ ಬರೆಯುವುದೊಳ್ಳೆಯದು.
ಪತ್ರಿಕೆಗಳಲ್ಲಿ ಬರುವ ಸುದ್ದಿಗಳಲ್ಲಿ ಕೆಲವೊಮ್ಮೆ ಷಷ್ಠೀ ವಿಭಕ್ತಿ ಮಾಡುವ ಧಾಂಧಲೆಗಳೂ ಮಜಾ ಇರುತ್ತವೆ. “ಒಂದು ದಿನದ ಪದವಿ ಕಾಲೇಜುಗಳ ಪ್ರಾಂಶುಪಾಲರ ಕಾರ್ಯಾಗಾರ" ಅಂತೆ. ಅಂದರೆ ಒಂದು ದಿನದ ಪದವಿ ಕಾಲೇಜುಗಳು? ಅಥವಾ, ಒಂದು ದಿನದ ಪ್ರಾಂಶುಪಾಲರು? ನೀರಿನ ಮೇಲಿನ ಗುಳ್ಳೆಯ ತೆರದಿ ಮೂರು ದಿನದ ಬಾಳಿದು ಜಗದಿ... ಎಂಬ ಹಾಡೇ ಇರುವುದರಿಂದ ಆ ಅನುಪಾತ ದಲ್ಲಿ ಒಂದು ದಿನ ಎಂದಿರೋದು ಸರಿಯೇ ಇದೆ ಅಂತೀರಾ? ಅದನ್ನು “ಪದವಿ ಕಾಲೇಜುಗಳ ಪ್ರಾಂಶುಪಾಲರ ಒಂದು ದಿನದ ಕಾರ್ಯಾಗಾರ" ಎಂದು ಬರೆದಿದ್ದರೆ ಹೆಚ್ಚು ನಿಖರತೆ.
“5ನೇ ರಾಜ್ಯ ಮಟ್ಟದ ಜನಪ್ರಿಯ ವಿಜ್ಞಾನ ಸಾಹಿತಿಗಳ ಸಮಾವೇಶ"ವೂ ಗೊಂದಲಕಾರಿಯೇ. ಹಾಗಿದ್ದರೆ ಮೊದಲ ನಾಲ್ಕು ರಾಜ್ಯಗಳು ಯಾವುವು? “ರಾಜ್ಯಮಟ್ಟದ ಜನಪ್ರಿಯ ವಿಜ್ಞಾನ ಸಾಹಿತಿ ಗಳ 5ನೇ ಸಮಾವೇಶ" ಹೆಚ್ಚು ನಿಖರ ವೆನಿಸುತ್ತದೆ. “ಕೇರಳದ ಮಾನ ಹರಾಜು ಹಾಕಿದ ಗರ್ಭಿಣಿ ಆನೆಯ ಬರ್ಬರ ಹತ್ಯೆ" ಎಂದು ಬರೆದರೆ, ಕೇರಳದ ಮಾನ ಹರಾಜು ಹಾಕಿದ್ದು ಆನೆಯ ಬರ್ಬರ ಹತ್ಯೆ ಎಂಬ ಅರ್ಥ ಬರಬೇಕಂತ ಅಂದುಕೊಂಡರೂ, ಪಾಪ ಗರ್ಭಿಣಿ ಆನೆ ಹತ್ಯೆ ಗೊಳಗಾದದ್ದಷ್ಟೇ ಅಲ್ಲ, ರಾಜ್ಯದ ಮಾನ ಹರಾಜು ಹಾಕಿದ ಆರೋಪವನ್ನೂ ಆ ಆನೆಯ ಮೇಲೆ ಹೊರಿಸಿದಂತಾಗು ತ್ತದೆ.
ಇನ್ನೂ ಸ್ವಲ್ಪ ಸಂಕೀರ್ಣವಾಗಿರುವುವನ್ನೂ ನೋಡೋಣ. “ತನ್ನ ಪತ್ನಿಯ ಜತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಮೈಸೂರು ಜಿಪಂ ಅಧ್ಯಕ್ಷರ ಕಾರಿನ ಚಾಲಕನನ್ನು ಎಳನೀರು ವ್ಯಾಪಾರಿಯೊಬ್ಬ ಶನಿವಾರ ರಾತ್ರಿ ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿದ್ದಾನೆ" ಎಂಬೊಂದು ಸುದ್ದಿ. ಇದು ಕಪೋಲ ಕಲ್ಪಿತ ಅಲ್ಲ, ಐದಾರು ವರ್ಷಗಳ ಹಿಂದೆ ನಡೆದದ್ದೇ.
ಪತ್ರಿಕೆಯಲ್ಲಿ ಅಕ್ಷರಶಃ ಇದೇ ರೀತಿಯಲ್ಲಿ ವರದಿಯಾದದ್ದೇ. ಈ ಸುದ್ದಿಯನ್ನು ನೀವು ಈಗೊಮ್ಮೆ ಒಂದೊಂದೇ ಪದದಂತೆ ಎಡದಿಂದ ಬಲಕ್ಕೆ ಓದತೊಡಗಬೇಕು. “ತನ್ನ ಪತ್ನಿಯ ಜತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಮೈಸೂರು ಜಿಪಂ ಅಧ್ಯಕ್ಷ" ಎಂಬಲ್ಲಿಯವರೆಗೆ ಓದಿ. ಜಿಪಂ ಅಧ್ಯಕ್ಷರಿಗೆ ತನ್ನದೇ ಪತ್ನಿಯ ಜತೆ ಅಕ್ರಮ ಸಂಬಂಧ? ಅಕಟ ಕಟಾ! ಅಥವಾ, ಇನ್ನೂ ಸ್ವಲ್ಪ ಮುಂದುವರಿಸಿ ದರೆ, ಅವರ ಪತ್ನಿಯ ಜತೆ ಅಕ್ರಮ ಸಂಬಂಧ ಇದ್ದದ್ದು ಅವರ ಕಾರಿಗೆ ಎಂದು ಕೂಡ ಶಂಕಿಸಬಹುದು.
ಮತ್ತಷ್ಟು ಮುಂದುವರಿದರೆ ಗೊತ್ತಾಗುವುದು ಅಕ್ರಮ ಸಂಬಂಧ ಇದ್ದದ್ದು ಜಿಪಂ ಅಧ್ಯಕ್ಷರ ಕಾರಿನ ಚಾಲಕನಿಗೆ. ಆದರೆ, ಅಕ್ರಮ ಸಂಬಂಧ ಜಿಪಂ ಅಧ್ಯಕ್ಷರ ಪತ್ನಿಯ ಜತೆ ಅಲ್ಲ, ಎಳನೀರು ಮಾರುವ ವ್ಯಾಪಾರಿಯ ಪತ್ನಿಯೊಂದಿಗೆ! ಇದು, ಒಂದೇ ವಾಕ್ಯದಲ್ಲಿ ಪದೇ ಪದೇ ಷಷ್ಠೀ ವಿಭಕ್ತಿ ಬಳಸಿದ್ದರಿಂದ ಆಗಿರುವ ಗೊಂದಲ. “ತನ್ನ ಪತ್ನಿಯ ಜತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ವ್ಯಕ್ತಿಯನ್ನು ಎಳನೀರು ವ್ಯಾಪಾರಿಯೊಬ್ಬ ಶನಿವಾರ ರಾತ್ರಿ ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿದ್ದಾನೆ.
ಮೃತ ವ್ಯಕ್ತಿ ಮೈಸೂರು ಜಿಪಂ ಅಧ್ಯಕ್ಷರ ಕಾರಿನ ಚಾಲಕ." ಎಂದು ಎರಡು ವಾಕ್ಯಗಳಾಗಿ ಬರೆದಿರು ತ್ತಿದ್ದರೆ ಸ್ವಲ್ಪವೂ ಗೊಂದಲ ಇರುತ್ತಿರಲಿಲ್ಲ. ಸ್ಪಷ್ಟವಾಗಿ, ನಿಖರವಾಗಿ ಸುದ್ದಿಯನ್ನು ತಿಳಿಸಿ ದಂತಾಗುತ್ತಿತ್ತು. ಪತ್ರಿಕೆಗಳಲ್ಲಿ ಸುದ್ದಿಯನ್ನು ಬರೆಯುವಾಗ ವ್ಯಾಕರಣ ಬದ್ಧವಾಗಿ ಇರಬೇಕು ಎನ್ನುವುದಕ್ಕಿಂತಲೂ, 100% ನಿಖರವಾಗಿ ಒಂದೇ ನಿರ್ದಿಷ್ಟ ಅರ್ಥ ಬರುವಂತೆ ಇರುವುದು ಮುಖ್ಯ ಎನ್ನುವುದು ಇದಕ್ಕೋಸ್ಕರವೇ.
ಮತ್ತೊಂದು ಉದಾಹರಣೆ, ಇದು ಕೂಡ ಕೋವಿಡ್ ಕಾಲದ್ದು. “ನಾಪತ್ತೆಯಾಗಿರುವ ಕೊಡಗು ಜಿಲ್ಲೆಯ ತಲಕಾವೇರಿ ದೇಗುಲದ ಅರ್ಚಕರ ಇಬ್ಬರು ಪುತ್ರಿಯರು ಆಸ್ಟ್ರೇಲಿಯಾ ಮತ್ತು ನ್ಯೂಜಿ ಲೆಂಡ್ʼನಿಂದ ಮಡಿಕೇರಿಗೆ ಆಗಮಿಸಿದ್ದು, ಅವರನ್ನು ಕ್ವಾರೆಂಟೈನ್‌ಗೆ ಒಳಪಡಿಸಲಾಗಿದೆ." ಈ ಸುದ್ದಿಯ ಪ್ರಕಾರ ನಾಪತ್ತೆ ಆದವರಾರು? ಸರಿಯಾದ ಒಂದೇ ಉತ್ತರವನ್ನು ಆರಿಸಿ. ಅ)ಕೊಡಗು ಜಿಲ್ಲೆ ಆ)ತಲಕಾವೇರಿ ದೇಗುಲ ಇ)ಅರ್ಚಕರು ಈ)ಇಬ್ಬರು ಪುತ್ರಿಯರು. ಹೇಗಪ್ಪಾ ನಿರ್ಧರಿ ಸುವುದು? ‘ನಾಪತ್ತೆಯಾಗಿರುವ’ ಎಂಬ ವಿಶೇಷಣಕ್ಕೆ ತಾಗಿಕೊಂಡಿರುವ ನಾಮಪದ ‘ಕೊಡಗು ಜಿಲ್ಲೆ’. ಆದ್ದರಿಂದ ವ್ಯಾಕರಣಬದ್ಧವಾಗಿ ಹೇಳುವುದಾದರೆ ನಾಪತ್ತೆಯಾದದ್ದು ಕೊಡಗು ಜಿಲ್ಲೆ. ಆದರೆ, ಅದು ನಾಪತ್ತೆ ಆಗಿಲ್ಲ. ಮೊದಲ ಮೂರು ನಾಮಪದಗಳಿಗೆ ಷಷ್ಠೀ ವಿಭಕ್ತಿ ಪ್ರತ್ಯಯ ಇದೆಯಾದ್ದ ರಿಂದ ಅವು ಒಂದು ರೀತಿಯಲ್ಲಿ ಸರಪಳಿಯ ಕೊಂಡಿಗಳಂತೆ ಕಾರ್ಯವೆಸಗುತ್ತವೆ ಎಂದುಕೊಂಡರೆ, ನಾಲ್ಕನೆಯ ನಾಮಪದ ಪ್ರಥಮಾ ವಿಭಕ್ತಿಯಲ್ಲಿರುವ ‘ಇಬ್ಬರು ಪುತ್ರಿಯರು’.
ಆದ್ದರಿಂದ ಇಬ್ಬರು ಪುತ್ರಿಯರು ನಾಪತ್ತೆಯಾ ದದ್ದು ಎಂದಾಗುತ್ತದೆ. ಆದರೆ ಅವರು ಕೂಡ ನಾಪತ್ತೆ ಆಗಿಲ್ಲ. ಬಲ್ಲ ಮೂಲಗಳ ಪ್ರಕಾರ ನಿಜವಾಗಿ ನಾಪತ್ತೆಯಾಗಿದ್ದು ಅರ್ಚಕರು. ಅದನ್ನು ಸ್ಪಷ್ಟವಾಗಿ ತಿಳಿಸುವುದರಲ್ಲಿ ಈ ವಾಕ್ಯ ಏಕೆ ವಿಫಲವಾಗಿದೆ? ತಪ್ಪು ಷಷ್ಠೀ ವಿಭಕ್ತಿಯದಲ್ಲ, ಅದನ್ನು ತಪ್ಪಾಗಿ ಬಳಸಿರುವವರದು.
ಷಷ್ಠೀ ವಿಭಕ್ತಿ ಇದ್ದರೂ ಕಷ್ಟ ಇಲ್ಲದಿದ್ದರೂ ಕಷ್ಟ ಎಂದಾಗುವುದೂ ಇದೆ. “ಶ್ರೀರಾಮನ ಸಮರ್ಪಣೆ ಗೆ ಜಲ" - ಅಯೋಧ್ಯೆಯ ದೇಗುಲದಲ್ಲಿ ಶ್ರೀರಾಮನಿಗೆ ಸಮರ್ಪಿಸಲಿಕ್ಕೆ ದೇಶದ ವಿವಿಧೆಡೆಗಳಿಂದ ಪುಣ್ಯ ಜಲವನ್ನು ಸಂಗ್ರಹಿಸಿ ಒಯ್ಯಲಾಗಿತ್ತು. ‘ಶ್ರೀರಾಮನ’ ಎಂದು ಷಷ್ಠೀ ವಿಭಕ್ತಿ ಬಳಸಿದ್ದರಿಂದ ಶ್ರೀರಾಮನೇ ಜಲವನ್ನು ಸಮರ್ಪಿಸುತ್ತಿದ್ದಾನೆಯೇ? ಅಥವಾ ಶ್ರೀರಾಮನೇ ಸಮರ್ಪಿತನಾಗು ತ್ತಿದ್ದಾನೆಯೇ ಎಂಬ ಗೊಂದಲ.
“ಉಡುಪಿಯಲ್ಲಿ ರಾಮುಲು ಪಿಂಡ ಪ್ರದಾನ" ಇನ್ನೂ ಭೀಕರ. ರಾಮುಲು ಅವರಿಂದ ಎಂದು ಪಂಚಮೀ ವಿಭಕ್ತಿ ಯಾರ ತಲೆಗೂ ಹೊಳೆಯುವುದಿಲ್ಲ. ರಾಮುಲು ಅವರ... ಎಂದು ಷಷ್ಠೀ ವಿಭಕ್ತಿಯೇ ಠಳಾಯಿಸುತ್ತದೆ. “ಸಹಪಾಠಿ ತಂದೆಯಿಂದ ವಿದ್ಯಾರ್ಥಿಗೆ ಹಲ್ಲೆ" ಅಂತೆ. ತಂದೆ ಮತ್ತು ಮಗ ಒಂದೇ ತರಗತಿಯಲ್ಲಿ ಓದುತ್ತಿದ್ದರೇ? ನಿಜವಾಗಿ ಸಹಪಾಠಿಯ ತಂದೆ ಹಲ್ಲೆ ಮಾಡಿದ್ದು. ಷಷ್ಠೀ ವಿಭಕ್ತಿಯ ಗೈರುಹಾಜರಿಯಲ್ಲಿ ತಂದೆಯೇ ಸಹಪಾಠಿಯೂ ಆದರು, ಹಲ್ಲೆಯನ್ನೂ ಮಾಡಿದರು!
“ಪತಿ ಬದಲು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಅರ್ಹತೆ ಇಲ್ಲದ ಪತ್ನಿ" ಅಂತೆ. ‘ಪತಿಯ’ ಎಂದಿದ್ದರೂ, ಪತಿಯ ಬದಲು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದದ್ದು ಎಂದಾಗುತ್ತದೆ. ರೋಗಿಗಳಿಗೇ ಅಲ್ಲವೇ ಚಿಕಿತ್ಸೆ ನೀಡಬೇಕಾದ್ದು? “ಅಂಗವಿಕಲೆ ಗರ್ಭಕೋಶ ತೆಗೆಯಲು ಅನುಮತಿ" ಅಂತೆ. ‘ಅಂಗವಿಕಲೆಯ...’ ಎಂದಿರಬೇಕಿತ್ತು. ಗರ್ಭಕೋಶ ತೆಗೆಯುವ ಪ್ರಕ್ರಿಯೆಯನ್ನೂ ಅಂಗವಿಕಲೆ ಯಿಂದಲೇ ಮಾಡಿಸುವ ಹುನ್ನಾರವೇ? ಪತ್ರಿಕೆಗಳು ಕೆಲವೊಮ್ಮೆ ದ್ವಿತೀಯಾ ವಿಭಕ್ತಿಯ ಬದಲಿಗೆ ಷಷ್ಠೀ ವಿಭಕ್ತಿ ಬಳಸುವುದಿದೆ, ತಲೆಬರಹದಲ್ಲಿ ಒಂದಕ್ಷರ ಉಳಿತಾಯದ ಏಕೈಕ ದೃಷ್ಟಿಯಿಂದ.
“ಕುರುಬರ ಎಸ್ಟಿಗೆ ಸೇರಿಸಲು ಹೋರಾಟ" ಒಂದು ಉದಾಹರಣೆ. “ಕುರುಬರನ್ನು ಎಸ್ಟಿಗೆ ಸೇರಿಸಲು ಹೋರಾಟ" ಎಂದು ಇರಬೇಕಾದ್ದು. ಎಸ್ಟಿ ಅಂದರೆ ಷೆಡ್ಯೂಲ್ಡ್ ಟ್ರೈಬ್ ಅಥವಾ ಪರಿಶಿಷ್ಟ ಪಂಗಡ. ಕುರುಬರ ಎಸ್ಟಿ ಅಂದರೇನು? “ನಮಾಜ್ ಮಾಡುತ್ತಿದ್ದವನ ಕಾಲಿಂದ ಹೊಡೆದ ಪೊಲೀಸ್" ಅಂತೆ. ‘ನಮಾಜ್ ಮಾಡುತ್ತಿದ್ದವನನ್ನು...’ಎಂದಾಗಬೇಕಿತ್ತು. ಕಾಲಿಂದ ಹೊಡೆಯುವುದೇ ಆದರೆ ಆ ಪೊಲೀಸರಿಗೆ ತಮ್ಮದೇ ಕಾಲುಗಳು ಇರಲಿಲ್ಲವೇ? ನಮಾಜ್ ಮಾಡುತ್ತಿದ್ದವನ ಕಾಲುಗಳನ್ನು ಅವರು ಬಳಸಿದ್ದು ಯಾರಿಗೆ ಹೊಡೆಯುವುದಕ್ಕೆ? “ಕಡಲ್ಗಳ್ಳರ ಭಾರತಕ್ಕೆ ಕರೆತಂದ ನೌಕಾಪಡೆ" ಅಂತೆ.
ಛೇ ಛೇ! ನಮ್ಮ ದೇಶ ‘ಕಡಲ್ಗಳ್ಳರ ಭಾರತ’ವೇ? “ಕಡಲ್ಗಳ್ಳರನ್ನು ಭಾರತಕ್ಕೆ ಕರೆತಂದ ನೌಕಾಪಡೆ" ಎಂದು ಬರೆಯಲಿಕ್ಕೇನು ತೊಂದರೆ? ಜಾಗ ಸಾಲದಾದರೆ “ಕಡಲ್ಗಳ್ಳರನ್ನು ಕರೆತಂದ ನೌಕಾಪಡೆ" ಕೂಡ ಸಾಕು. “ಒಂದೂವರೆ ವರ್ಷದಿಂದ ಪತ್ನಿಯ ಶೌಚಾಲಯದಲ್ಲೇ ಕೂಡಿ ಇಟ್ಟ ಭೂಪ!" ಅಂತೆ. ಪತ್ನಿಯನ್ನು ಎಂದಾಗಬೇಕಿತ್ತು, ಈಗ ಪತ್ನಿಯ ಶೌಚಾಲಯದಲ್ಲಿ ಏನನ್ನು ಕೂಡಿಟ್ಟಿದ್ದನೆಂಬ ಪ್ರಶ್ನೆ! “ವೃದ್ಧೆಯ ತಿಂದ ಚಿರತೆ"ಯದೂ ಅದೇ ಕಥೆ. ಅದು ವೃದ್ಧೆಯ ತಲೆ ತಿಂದಿತೇ? ಕೈಕಾಲು ಗಳನ್ನಷ್ಟೇ ತಿಂದಿತೇ? ಷಷ್ಠೀ ವಿಭಕ್ತಿಯಿಂದಾಗುವ ಇಂತಹ ಭಾಷಾಮಾಲಿನ್ಯವನ್ನು ಗಮನಿಸಿದಾಗ ನೆನಪಾಗುವುದು “ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ"ಯ ಫಲಕವನ್ನು ಯಾರೋ ಕಿಡಿಗೇಡಿಗಳು “ಮಾಲಿನಿಯ ನಿಯಂತ್ರಣ ಮಂಡಳಿ" ಎಂದು ಫೋಟೊಶಾಪ್ ಬಳಸಿ ವಿಕಾರಗೊಳಿಸಿ ಸೋಷಿಯಲ್ ಮೀಡಿಯಾದಲ್ಲಿ ತೇಲಿಬಿಟ್ಟದ್ದು. ಅದನ್ನು ನೀವೂ ನೋಡಿಯೇ ಇರುತ್ತೀರಿ.
ಉತ್ತರಕರ್ನಾಟಕದ ಕೆಲವು ಹೆಸರುಗಳು, ಅಡ್ಡಹೆಸರುಗಳು ಷಷ್ಠೀ ವಿಭಕ್ತಿಯಂತೆ ಕಂಡು ಸ್ವಾರಸ್ಯ ಕರವೆನಿಸುತ್ತವೆ. ಉದಾ:‘ಕಾಶಪ್ಪನವರ ಬೆಂಗಳೂರಿನಲ್ಲಿ ದಿಢೀರ್ ಪ್ರತ್ಯಕ್ಷ’ ಎಂದು ಶೀರ್ಷಿಕೆಯಿದ್ದರೆ ಬೆಂಗಳೂರು ಯಾವಾಗ ಕಾಶಪ್ಪನವರದಾಯ್ತು ಎಂದು ಒಮ್ಮೆ ದಿಗಿಲಾಗಬಹು ದು. ಆದರೆ, ಆ ತಲೆಬರಹದಲ್ಲಿ ‘ಕಾಶಪ್ಪನವರ’ ಪ್ರಥಮಾ ವಿಭಕ್ತಿ. ಆ ಹೆಸರಿಗೆ ಬಹುವಚನ ಬಳಸಿ ಷಷ್ಠೀ ವಿಭಕ್ತಿ ಸೇರಿಸಿದರೆ ‘ಕಾಶಪ್ಪನವರ ನವರ’ ಎಂದಾಗುತ್ತದೆ. ಅವರ ವರಮಾನವೆಷ್ಟು ಎನ್ನುವಾಗ ಕಾಶಪ್ಪನ ವರನವರ ವರಮಾನ... ಎಂದು ಬರೆಯಬೇಕಾಗುತ್ತದೆ.
ನಾರದನ ದನದ ರೋದನ ಎಂದಂತೆ. ಖ್ಯಾತ ಕವಯಿತ್ರಿ ಸ್ತ್ರೀವಾದಿ ಚಿಂತಕಿ ಶಶಿಕಲಾ ವಸ್ತ್ರದ ಅವರೇನಾದರೂ ಬಟ್ಟೆಯ ಚರಿತ್ರೆಯನ್ನು ಬರೆದರೆ “ಶಶಿ ಕಲಾ ವಸ್ತ್ರದ ವಸ್ತ್ರದ ಬಗ್ಗೆ ಬರೆಯು ತ್ತಿದ್ದಾರೆ" ಎನ್ನಬೇಕಾಗುತ್ತದೆ. ಅರವಿಂದ ಬೆಲ್ಲದ ಅಥವಾ ಚಂದ್ರಕಾಂತ ಬೆಲ್ಲದ ಮುಂತಾದವರು ಬೆಲ್ಲದ ಪಾಯಸ ತಿಂದರೆ ಬೆಲ್ಲದ ಬೆಲ್ಲದ ಪಾಯಸ ತಿಂದರು ಎಂದು ಬರೆಯಬೇಕಾಗುತ್ತದೆ. ನೋಡಿ. ಇಷ್ಟೊಂದು ಸಿಹಿಯಿದೆ ಷಷ್ಠೀ ವಿಭಕ್ತಿಯ ಸೊಗಸು!